ಇದೇ ಮಾರ್ಚ್ 22 ರ ಭಾನುವಾರ ಸಂಜೆಯ 5.00 ಗಂಟೆಗೆ ಸರಿಯಾಗಿ ಈ ದೇಶದ ಪ್ರಧಾನಿ ನಮ್ಮದೊಂದು ಮೂರ್ಖರ ದೇಶವೆಂದು ನಮಗೆ ಮತ್ತು ಇಡೀ ಪ್ರಪಂಚಕ್ಕೆ ಸಾಬೀತುಪಡಿಸಿದರು. ಅಥವಾ ಜನಸಮುದಾಯದ ಉನ್ನತ ಆರ್ಥಿಕ ವರ್ಗದಲ್ಲಿ ದೊಡ್ಡ ಪ್ರಮಾಣದ ಅತಿಮೂರ್ಖರನ್ನು ಹೊಂದಿರುವ ದೇಶ ಎಂದೂ ಹೇಳಬಹುದು. ಭವಿಷ್ಯದಲ್ಲಿ ನರೇಂದ್ರ ಮೋದಿ ಯಾವುದಕ್ಕಾಗಿ ನೆನಪಿನಲ್ಲಿ ಉಳಿಯಬಹುದೋ ತಿಳಿಯದು. ಆದರೆ, ಒಂದು ವಿಷಯದಲ್ಲಿ ಮಾತ್ರ ಅಸಾಧಾರಣವಾದ ದಾಖಲೆಯನ್ನು ಉಳಿಸಿಹೋಗುತ್ತಾರೆ. ಕೇವಲ ಐದೂವರೆ ವರ್ಷಗಳ ಅಲ್ಪಾವಧಿಯಲ್ಲಿ ಅವರು ಉಳಿದ ದೇಶಗಳು ಸಾಮಾನ್ಯವಾಗಿ ಮುಚ್ಚಿಡಲು ಬಯಸಬಹುದಾದ ನಮ್ಮ ಸಮಾಜದ, ಅದರಲ್ಲೂ ಉತ್ತರ ಮತ್ತು ಪಶ್ಚಿಮ ಭಾರತದ ಜನರ ಗುಣಸ್ವಭಾವಗಳನ್ನು ಪ್ರಖರ ಬೆಳಕಿನಲ್ಲಿ ಅನಾವರಣಗೊಳಿಸಿದ್ದಾರೆ.
ನಾವು ಅತ್ಯಂತ ಧರ್ಮಾಂಧ, ಮುಗ್ಧ, ಸುಲಭವಾಗಿ ವಂಚಿಸಬಹುದಾದ ಪೆದ್ದರು ಮತ್ತು ನಮ್ಮ ಶ್ರೀಮಂತ ವರ್ಗಕ್ಕೆ ಸಮಾಜದ ದುರದೃಷ್ಟಶಾಲಿ ಜನರ ಕುರಿತು ಕಿಂಚಿತ್ತೂ ಕಾಳಜಿ ಇಲ್ಲ ಎಂದು ಒಂದರ ಹಿಂದೆ ಒಂದರಂತೆ ತ್ವರಿತಗತಿಯಲ್ಲಿ ಅವರು ತೋರಿಸಿಕೊಟ್ಟಿದ್ದಾರೆ. ನಮ್ಮ ತಥಾಕಥಿತ ಶಿಕ್ಷಿತ, ವಿದ್ಯಾವಂತ ವರ್ಗವು ವ್ಯಾಪಕವಾದ, ಸ್ವಯಂವಿನಾಶಕಾರಿಯಾದ, ಅತ್ಯಂತ ಕೆಟ್ಟದಾದ ಮೌಢ್ಯದ ಸೋಂಕಿಗೆ ಒಳಗಾಗಿದೆ ಎಂದೂ ಅವರು ತೋರಿಸಿಕೊಟ್ಟಿದ್ದಾರೆ.
ಮೋದಿ ಇದನ್ನು ಯಾವುದೇ ಪಶ್ಚಾತ್ತಾಪ ಭಾವದಿಂದ ಮಾಡಿಲ್ಲ. ಬದಲಾಗಿ ತದ್ವಿರುದ್ಧ ಉದ್ದೇಶದಿಂದ ಮಾಡಿದ್ದಾರೆ. ಅದನ್ನು ಪ್ರಚೋದಿಸಿ, ಪ್ರೋತ್ಸಾಹಿಸುವ ಮೂಲಕ ಈ ಗುಣಸ್ವಭಾವಗಳು ಕುದಿದು ಮೇಲಕ್ಕೆ ಬರುವಂತೆ ಮಾಡಿದ್ದಾರೆ. ಅವರು ನಮ್ಮ ಕರಾಳ ಮತ್ತು ಅನೈತಿಕ ಎಣ್ಣೆಯನ್ನು ಒಳಗೊಂಡ ಮಡಕೆಯ ಅಡಿಯಲ್ಲಿ ಬೆಂಕಿ ಉರಿಸಿದ್ದಾರೆ. ನಾವು ಈ ದೌರ್ಬಲ್ಯಗಳಿಂದ ತುಂಬಿಹೋಗಿರುವುದನ್ನು ಮಾತ್ರವಲ್ಲ, ಅವರು ಮತ್ತವರ ನಿಕಟ ಸಹವರ್ತಿಗಳು ತಮ್ಮ ದುಷ್ಟ ಉದ್ದೇಶಗಳಿಗಾಗಿ ಈ ದೌರ್ಬಲ್ಯಗಳನ್ನು ಮನಬಂದಂತೆ ಬಳಸಿಕೊಳ್ಳಬಹುದು ಎಂಬುದನ್ನೂ ಮೋದಿ ತೋರಿಸಿಕೊಟ್ಟಿದ್ದಾರೆ.
ಕೋವಿಡ್-19 ವೈರಸ್ ಜಗತ್ತಿನಾದ್ಯಂತ ಹರಡುತ್ತಿರುವಂತೆಯೇ ಹಲವಾರು ವಿಷಯಗಳನ್ನು ಬಹಿರಂಗಗೊಳಿಸುತ್ತಿದೆ. ಅದರ ಬೆದರಿಕೆ ಹೆಚ್ಚುತ್ತಿರುವಂತೆಯೇ ನಾವು ಈಗಾಗಲೇ ತಿಳಿದಿರುವ ಮತ್ತು ನಾವು ಈ ತನಕ ತಿಳಿಯದೇ ಇದ್ದ ಅನೇಕ ವಿಷಯಗಳು ಮೇಲ್ಮೈಗೆ ಬರುತ್ತಿವೆ. ಜಾಗತಿಕ ನಾಯಕತ್ವದ ಈ ಗುಣಸ್ವಭಾವಗಳನ್ನು ಅರಿಯಲು ಬುದ್ಧಿಗೇಡಿ ಡೊನಾಲ್ಡ್ ಟ್ರಂಪ್‌ರ ಅಡ್ಡಾದಿಡ್ಡಿ ಕ್ರಮಗಳನ್ನು ನೋಡಿ. ಮೊದಲಿಗೆ ಆತ ಹಣ ಉಳಿಸುವ ಸಲುವಾಗಿ ವೈರಸ್‌ಗಳನ್ನು ಮೊದಲೇ ಊಹಿಸಿ ಎದುರಿಸುವ ದೇಶದ ಸಾಮರ್ಥ್ಯವನ್ನೇ ಹಾಳುಗೆಡವಿದರು. ನಂತರ ಕೋವಿಡ್-19 ಹರಡುತ್ತಿದ್ದ ಅಮೂಲ್ಯ ಮತ್ತು ನಿರ್ಣಾಯಕ ಅವಧಿಯಲ್ಲಿ, ಇದು ತನ್ನ ಅಧ್ಯಕ್ಷತೆಯನ್ನು ಕೀಳುಗೆಳೆಯಲೆಂದೇ ಮಾಡಿದ ಡೆಮೋಕ್ರಾಟಿಕ್ ಪಕ್ಷದ ಕಟ್ಟುಕತೆ ಎಂದು ಸಾರಿದರು. ಕೊನೆಗೆ ತನ್ನ ಮುರಿದ ಬಾಗಿಲಿನ ಮನೆಯೆದುರು ತೋಳ ಬಂದು ನಿಂತ ಮೇಲೆ, ತಾನು ಈ ಅಪಾಯವನ್ನು ಮೊದಲೇ ಮನಗಂಡಿದ್ದೆ ಎಂದೂ, ಅದನ್ನು ನಿಭಾಯಿಸುವಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದೇನೆ ಎಂದೂ ಹೇಳಿಕೊಳ್ಳುತ್ತಿದ್ದಾರೆ.
ಇನ್ನು, ಲೇಖಕರೊಬ್ಬರು “ಛದ್ಮವೇಷಧಾರಿ ಪ್ರಧಾನಮಂತ್ರಿ” ಎಂದು ಕರೆದ ಬ್ರಿಟನ್‌ನ ಬೋರಿಸ್ ಜೋನ್ಸನ್‌ರಂತವರನ್ನು ಪರಿಶೀಲಿಸಿ. ಉಡಾಫೆ, ಬಡಾಯಿ, ಶಬ್ದಾಡಂಬರ, ಎದುರಾಳಿಯ ಕುರಿತು ಮತದಾರರರಿಗೆ ಇದ್ದ ಗಂಭೀರ ಸಂಶಯ (ಭಾರತ ನೆನಪಿಗೆ ಬರುತ್ತಿದೆಯೆ?) ಇತ್ಯಾದಿಗಳ ಮಿಶ್ರ ಕಷಾಯದ ಬಲದಿಂದ ಗೆದ್ದ ಈತನೊಬ್ಬ ಅತ್ಯಂತ ನಾಲಾಯಕ್ ಎಂಬುದು ದೇಶವೀಗ ಎದುರಿಸುತ್ತಿರುವ ಗಂಭೀರ ಕರೋನಾ ಬಿಕ್ಕಟ್ಟಿನಿಂದ ಬಹಿರಂಗವಾಗಿದೆ.
ಆತನ ಆಡಳಿತದ ಮೊದಲ ಪ್ರತಿಕ್ರಿಯೆಯೆಂದರೆ, ವೈರಸಿಗೆ ಜನರ ಮೇಲೆ ದಾಳಿ ಮಾಡಲು, ಮನಬಂದಂತೆ ಕೊಲ್ಲಲು ಬಿಡಬೇಕು, ಕ್ರಮೇಣ ಅವರು ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತಾರೆ ಎಂಬ ಅರ್ಥದಲ್ಲಿತ್ತು. ಈ ಕ್ರೂರ ಮತ್ತು ತಿರುಚಿದ ಡಾರ್ವಿನ್‌ವಾದ (survival of the fittest)ದ ಘೋರ ಪರಿಣಾಮವು ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಬ್ರಿಟನ್‌ನಲ್ಲಿ ಈಗ ಕಂಡುಬರುತ್ತಿದೆ. ಜೋನ್ಸನ್ ಬೊಗಳೆ ಬಿಡುತ್ತಾ ಒದ್ದಾಡುತ್ತಿರುವಾಗ, ಉಳಿದ ಇಡೀ ದೇಶ- ಅಂದರೆ, ಇನ್ನೂ ಸಶಕ್ತವಾಗಿರುವ ರಾಷ್ಟ್ರೀಯ ಆರೋಗ್ಯ ಸೇವೆ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸಂಘಸಂಸ್ಥೆಗಳು ಈತನ ಸರಕಾರದ ನಿರ್ಧಾರಗಳಿಗಾಗಿ ಕಾಯದೆ, ಮಾಡಬೇಕಾದುದನ್ನು ತಾವೇ ಮಾಡುತ್ತಿವೆ. ಜೋನ್ಸನ್ ಸರಕಾರದ ಮೂರ್ಖತನದ ನಿರ್ಧಾರಗಳು ಬ್ರಿಟಿಷರ ಮರಣ ಸಂಖ್ಯೆಯನ್ನು ಹೆಚ್ಚಿಸುತ್ತಿರುವಾಗ, ಇಂತಹಾ ಪ್ರಯತ್ನಗಳು ಜೀವ ಉಳಿಸುತ್ತಿವೆ. ಕೊನೆಗೂ ಬ್ರಿಟನ್ ಹೊಸ ಛಾನ್ಸಲರ್ (ಬ್ರಿಟಿಷ್ ಹಣಕಾಸು ಮಂತ್ರಿ) ಭಾರತೀಯ ಮೂಲದ ರಿಷಿ ಸುನಕ್ ಮೂಲಕ ಸ್ವಲ್ಪ ಮಟ್ಟಿನ ನಾಯಕತ್ವವನ್ನು ಕಂಡುಕೊಂಡಿದೆ.
ಇವರಿಬ್ಬರಿಗೆ ಸಂಪೂರ್ಣ ವ್ಯತಿರಿಕ್ತವಾಗಿ ಜರ್ಮನಿಯ ಛಾನ್ಸಲರ್ (ಜರ್ಮನ್ ಪ್ರಧಾನಿ) ಏಂಜೆಲಾ ಮಾರ್ಕೆಲ್ ಪ್ರತಿಕ್ರಿಯಿಸಿದ್ದಾರೆ. ಮಾರ್ಕೆಲ್ ಅವರ ಮಾತುಗಳು ನೇರ ಮತ್ತು ಸರಳವಾಗಿವೆ. ಅವು ಪರಿಸ್ಥಿತಿಯ ತಿಳುವಳಿಕೆ, ಸಂಕಷ್ಟದ ಕುರಿತು ಅನುಕಂಪ ಹೊಂದಿದ್ದು, ಈ ಬಿಕ್ಕಟ್ಟು ಒಡ್ಡಿರುವ ಸವಾಲುಗಳು ಮತ್ತು ಸರಕಾರ ಏನು ಮಾಡುತ್ತಿದೆ ಮತ್ತು ಜನರು ಏನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಆ ಮಾತುಗಳಲ್ಲಿ ಶಬ್ದಗಳ ಕಸರತ್ತು, ಆಧ್ಯಾತ್ಮಿಕ-ತಾತ್ವಿಕ ಸುಡುಮದ್ದಿನ ಪ್ರದರ್ಶನ, ಸ್ವಯಂ ಪ್ರಶಂಸೆ, ಬೊಗಳೆ, ಸುಳ್ಳು ಇತ್ಯಾದಿ ಇಲ್ಲ. (ಭಾರತವನ್ನು ಹೋಲಿಸಿ.) ಅವರು ಮೊದಲಿನಿಂದಲೂ ದೃಡ ಸಂಕಲ್ಪ ಮತ್ತು ಸಾಮೂಹಿಕ ಒಗ್ಗಟ್ಟಿಗೆ ಕರೆ ನೀಡುತ್ತಾ ಬಂದಿದ್ದಾರೆ.
ದೇಶವನ್ನುದ್ದೇಶಿಸಿ ಮಾಡಿದ 12 ನಿಮಿಪಗಳ ಭಾಷಣದಲ್ಲಿ ಅವರು, ಜರ್ಮನಿಯ ಆರೋಗ್ಯ ವ್ಯವಸ್ಥೆ ಬಹುಶಃ ಪ್ರಪಂಚದಲ್ಲಿಯೇ ಅತ್ಯುತ್ತಮ ಎಂದು ಹೇಳಿಕೊಂಡಿದ್ದಾರೆ (ಇದು ನಿಜವೂ ಹೌದು). ಆದರೆ, ವೈರಸ್ ಸೋಂಕಿತ ಜನರ ಸುನಾಮಿಯೆದ್ದರೆ ಈ ವ್ಯವಸ್ಥೆಯೂ ಸಾಕಾಗದು ಎಂದು ಎಚ್ಚರಿಸಿದ್ದಾರೆ. (ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿದ್ದು, ದುರ್ಬಲ ಆರೋಗ್ಯ ವ್ಯವಸ್ಥೆ ಹೊಂದಿರುವ ಭಾರತ ಗಮನಿಸಬೇಕು). ಅವರು ನೀಡಿರುವ ಮುಖ್ಯ ಸಂದೇಶವೆಂದರೆ, “ನಾವು ಒಂದು ವ್ಯಕ್ತಿ ಇನ್ನೊಂದು ವ್ಯಕ್ತಿಗೆ ಸೋಂಕು ದಾಟಿಸುವ ಅಪಾಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಮಿತಗೊಳಿಸಬೇಕು”.
ಇದೇ ಹೊತ್ತಿಗೆ ಭಾರತದ ಆರೋಗ್ಯ ವ್ಯವಸ್ಥೆಯು ಪ್ರಪಂಚದಲ್ಲಿಯೇ ಅತ್ಯಂತ ಕೆಟ್ಟ ಆರೋಗ್ಯ ವ್ಯವಸ್ಥೆಗಳಲ್ಲಿ ಒಂದು. 2014ರ ಮೊದಲ ಭಾಗದಲ್ಲಿ ಸಾರ್ವಜನಿಕ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಸರಕಾರೇತರ ಸಂಸ್ಥೆಗಳು ಸಾರ್ವಜನಿಕ ಆರೋಗ್ಯ ಸೇವೆಗೆ ಒದಗಿಸಲಾಗುತ್ತಿದ್ದ ಹಣವನ್ನು ಜಿಡಿಪಿಯ ಶೇಕಡಾ 2.5 ರಿಂದ ಕನಿಷ್ಟ ಶೇಕಡಾ ನಾಲ್ಕಕ್ಕಾದರೂ ಏರಿಸಬೇಕೆಂಬ ಬೇಡಿಕೆ ಸಲ್ಲಿಸಿದ್ದವು. ಆದರೆ, ಮೋದಿ ಅಧಿಕಾರಕ್ಕೆ ಬಂದ ಮೇಲೆ ” ಸಬ್ ಕಾ ಸಾತ್, ಸಬ್ ಕಾ ವಿಕಾಸ್” ಪರಿಣಾಮವೆಂದರೆ, ಆರೋಗ್ಯದ ಮೇಲಿನ ವೆಚ್ಚವೀಗ ಪಾತಾಳಕ್ಕೆ ಕುಸಿದಿದ್ದು, ಎರಡು ಶೇಕಡಾಕ್ಕಿಂತಲೂ ಕೆಳಮಟ್ಟದಲ್ಲಿದೆ. ಬಿಜೆಪಿ-ಆರೆಸ್ಸೆಸ್‌ನ ವಿಕಾಸ ಮಂತ್ರವು ಪರಿಸರ, ಆರ್ಥಿಕತೆ ಮತ್ತು ಸಾಮಾಜಿಕ ಸಾಮರಸ್ಯವನ್ನೇ ಹಾಳುಗೆಡವಿದ್ದು, ಕಳೆದ 20 ವರ್ಷಗಳಲ್ಲೇ ಜಾಗತಿಕವಾದ ಮಾರಣಾಂತಿಕ ರೋಗದ ದಾಳಿಗೆ ಭಾರತ ತುತ್ತಾಗಲು ಇದಕ್ಕಿಂತಲೂ ಕೆಟ್ಟ ಸಮಯ ಬೇರೆ ಇದ್ದಿರಲಾರದು. ಹಿಮಬಂಡೆ ಬಡಿದು ತೂತಾಗಿ ಹೇಗೋ ತೇಲುತ್ತಿರುವ ಟೈಟಾನಿಕ್ ಹಡಗಿಗೆ ಕ್ಷಿಪಣಿಯೊಂದು ಬಡಿದರೆ ಹೇಗಿರುತ್ತದೆ ಊಹಿಸಿ. ಅದರ ಕಪ್ತಾನ ಮೇಲೆ ಹೆಲಿಕಾಪ್ಟರ್‌ನಲ್ಲಿ ಹಾರಾಡುತ್ತಾ, ಹಡಗು ಮುಳುಗದಂತೆ ಮಾಡಲು ಗಂಟೆ, ಜಾಗಟೆ ಬಾರಿಸಿ, ಚಪ್ಪಾಳೆ ತಟ್ಟಿ ಎಂದು ಪ್ರಯಾಣಿಕರಿಗೆ ಹೇಳುವ ದೃಶ್ಯವನ್ನೂ ಊಹಿಸಿ.
ಪ್ರಧಾನಿಯ ಕರೆಯಂತೆ, ಮಾರ್ಚ್ 22 ರ ಭಾನುವಾರ ಸಂಜೆ ದೇಶದಾದ್ಯಂತ ಲಕ್ಷಾಂತರ ಭಾರತೀಯರು ಜಾಗಟೆ, ಬಟ್ಟಲು, ಡೋಲು ತಮ್ಮಟೆ ಬಡಿಯುತ್ತಾ, ಚಪ್ಪಾಳೆ ತಟ್ಟುತ್ತಾ, ಶಂಖ ಊದುತ್ತಾ, ರಾಷ್ಟ್ರಧ್ವಜ ಹಿಡಿದುಕೊಂಡು ಸಮೂಹ ಸನ್ನಿ ಹಿಡಿದವರಂತೆ ಗುಂಪುಗುಂಪಾಗಿ ಬೀದಿಗಿಳಿದು, ಕರೋನಾ ಸಂದರ್ಭದಲ್ಲಿ ಏನು ಮಾಡಬಾರದಾಗಿತ್ತೋ ಅದನ್ನೇ ಮಾಡಿದರು. ಕೋವಿಡ್-19 ಎಂದರೆ ಇಂಗ್ಲಿಷ್ ಮಾತನಾಡುವ ಜೀವಿ ಎಂದು ಮೊದಲೇ ಉಹಿಸಿದವರಂತೆ ಹಲವರು ಅವಿವೇಕಿ ಮಂತ್ರಿಯೊಬ್ಬನನ್ನು ಅನುಸರಿಸಿ, “”ಗೋ ಕೊರೊನಾ ಗೋ” ಎಂದು ಕಿರುಚಾಡಿದರು.
ಅಹಮದಾಬಾದ್‌ನಲ್ಲಂತೂ ಜನರು ನವರಾತ್ರಿಯ ಗರ್ಭಾ ಆಚರಣೆಯೋ ಎಂಬಂತೆ ಬೀದಿಗಿಳಿದು ಸಂಭ್ರಮಿಸಿದರು. ನಾವೇನು ವಿಶ್ವಕಪ್ ಗೆದ್ದಿದ್ದೇವೆಯೋ ಎಂಬಂತಿತ್ತು- ಹೌದು! ಮೂರ್ಖತನದ ವಿಶ್ವಕಪ್! ಒಂದು ವಿಷಯವೆಂದರೆ, ನೀವು ಮೋದಿಯನ್ನು ದಡ್ಡ, ಮೂರ್ಖ ಎಂದು ಕರೆಯುವಂತಿಲ್ಲ! ಆತ ಇನ್ನೊಬ್ಬರ, ಜನಸಮುದಾಯದ ಮೂರ್ಖತನವನ್ನು ನೋಡಿ ಸಂತಸಪಡುವ, ಅದರ ಪರಿಣಾಮಗಳನ್ನು ಚಪ್ಪರಿಸುವ ಮನುಷ್ಯ.
ಈ ಅಸಂಬದ್ಧ ಕರೆಯ ಕಾರಣದಿಂದ ಸೋಂಕು ಹರಡುವ ಸಾಧ್ಯತೆ ಹಲವಾರು ಪಟ್ಟು ಹೆಚ್ಚಿತೆಂಬುದು ದೊಡ್ಡ ವಿಷಯವಾಗಲಿಲ್ಲ; ಮೋದಿ ಬಯಸಿದ್ದು, ನಡೆಯಿತು. ಈ ಬಿಕ್ಕಟ್ಟಿನ ಅಪಾಯವನ್ನು ಎದುರಿಸಿಯೂ ತಾನು ಕರೆ ನೀಡಿದರೆ, ಈ ಮೂರ್ಖರು ತನ್ನ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆಯೇ ಎಂದು ಪರೀಕ್ಷಿಸಿದಂತಾಯಿತು. ಗಮನವನ್ನು ಬೇರೆಡೆ ಸೆಳೆಯುವವುದರಲ್ಲಿ ನಿಷ್ಣಾತನಾಗಿರುವ ಅವರ ತಂತ್ರವೂ ಯಶಸ್ವಿಯಾಯಿತು.
ಇರಾನ್ ಕೋವಿಡ್-19 ವೈರಸ್‌ನ ಪೂರ್ಣ ಪ್ರಮಾಣದ ಆಘಾತಕ್ಕೆ ಒಳಗಾಗುವ ಮೊದಲು ಕೋಮ್ ಪ್ರಾಂತ್ಯದ ಮುಲ್ಲಾ ಒಬ್ಬಗುದದ್ವಾರಕ್ಕೆ ಲ್ಯಾವೆಂಡರ್ ಹೂವಿನ ಎಣ್ಣೆ ಹಚ್ಚಿದರೆ ಕೋವಿಡ್-19 ಸೋಂಕು ತಗಲುವುದಿಲ್ಲ ಎಂದು ಹೇಳಿದ್ದ.(ಭಾರತದಲ್ಲಿಯೂ ಗೋಮೂತ್ರ, ಮಂತ್ರಗಳ ಮೂರ್ಖ ಸಲಹೆಗಳು ಬರುತ್ತಿವೆ). ಈಗ ಉಪಗ್ರಹ ಚಿತ್ರಗಳು ಈಪ್ರಾಂತ್ಯದಲ್ಲಿ ಕೊರೊನಾಬಲಿಪಶುಗಳನ್ನು ಹೂತ ಎಕರೆಗಟ್ಟಲೆ ಸಾಮೂಹಿಕ ಸಮಾಧಿಗಳನ್ನು ತೋರಿಸುತ್ತಿವೆ.
ಕೃಪೆ: ದಿ ಟೆಲಿಗ್ರಾಫ್
ಮೂಲ ಲೇಖಕರು: ರುಚಿರ್ ಜೋಷಿ