ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಪೂರ್ಣಗೊಳಿಸಿದರೆ ಅವರನ್ನು ಬಿಡುಗಡೆಗೊಳಿಸಿ, ಹೋಂ ಕ್ವಾರೆಂಟೈನ್ಗೆ ಕಳುಹಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.
ಇದುವರೆಗೆ ಹೊರ ರಾಜ್ಯಗಳಿಂದ ಬಂದವರಿಗೆ 14 ದಿನಗಳ ಸಾಂಸ್ಥಿಕ ಕ್ವಾರೆಂಟೈನ್ಗೆ ಒಳಪಡಿಸಲಾಗುತ್ತಿತ್ತು. ಆದರೆ ಈಗ ಹೊಸ ಮಾರ್ಗಸೂಚಿ ಪ್ರಕಾರ ಸಾಂಸ್ಥಿಕ ಕ್ವಾರಂಟೈನ್ ಅವಧಿಯನ್ನು 7 ದಿನಗಳಿಗೆ ಇಳಿಸಲಾಗಿದೆ. ಪ್ರಸ್ತುತ ಜಿಲ್ಲೆಯ ವಿವಿಧ ಹಾಸ್ಟೆಲ್ಗಳಲ್ಲಿ 553 ಮಂದಿ ಕ್ವಾರೆಂಟೈನ್ನಲ್ಲಿದ್ದಾರೆ. ಪ್ರತಿ ಹಾಸ್ಟೆಲ್ಗಳಿಗೆ ಭೇಟಿ ನೀಡಿ 7 ದಿನಗಳ ಅವಧಿ ಪೂರ್ಣಗೊಳಿಸಿರುವವರ ಆರೋಗ್ಯ ತಪಾಸಣೆ ನಡೆಸಿ ಕೈಗೆ ಸೀಲು ಹಾಕಿ ಮನೆ ಕ್ವಾರೆಂಟೈನ್ಗೆ ಕಳುಹಿಸಲಾಗುವುದು. ಇದಕ್ಕಾಗಿ ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಹೋಂ ಕ್ವಾರೆಂಟೈನ್ಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಅಂಥವರ ಮೇಲೆ ನಿರಂತರ ನಿಗಾ ಇರಿಸಬೇಕು. ಅಂಥವರ ಪಟ್ಟಿಯನ್ನು ಸಂಬಂಧಪಟ್ಟ ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಳುಹಿಸಬೇಕು.

ಸೂಕ್ಷ್ಮ ರಾಜ್ಯಗಳೆಂದು ಗುರುತಿಸಲಾಗಿರುವ ರಾಜ್ಯಗಳಿಂದ ಆಗಮಿಸುವವರನ್ನು ಮಾತ್ರ ಇನ್ನುಮುಂದೆ 7ದಿನಗಳ ಸಾಂಸ್ಥಿಕ ಕ್ವಾರೆಂಟೈನ್ಗೆ ಒಳಪಡಿಸಲಾಗುವುದು. ಇನ್ನುಳಿದ ರಾಜ್ಯಗಳಿಂದ ಬರುವವರನ್ನು ನೇರವಾಗಿ ಮನೆಗೆ ಕ್ವಾರೆಂಟೈನ್ಗೆ ಕಳುಹಿಸಿ ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು. ಹೊಸ ಮಾರ್ಗಸೂಚಿ ಪ್ರಕಾರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಸಹ ಹೋಂ ಕ್ವಾರೆಂಟೈನ್ಗೆ ಒಳಪಡಿಸಬೇಕಾಗಿದೆ. ಕ್ವಾರೆಂಟೈನ್ ವಿಧಿಸುವ ಮೊದಲು ಕಡ್ಡಾಯವಾಗಿ ಕ್ವಾರೆಂಟೈನ್ ವಾಚ್ ಆಪ್ ಡೌನ್ಲೋಡ್ ಮಾಡಲು ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.