ಕರ್ನಾಟಕದಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹರಡಲು ಜುಬಿಲಿಯಂಟ್ ಮತ್ತು ತಬ್ಲಿಘಿ ಸಭೆ ಕಾರಣವಾಗಿವೆ. ಈಗ ಬಿಹಾರ ಮೂಲದವರಿಂದಲೂ ಹರಡಿದೆ ಎಂಬ ಮಾಹಿತಿಗಳು ಬರುತ್ತಿವೆ. ಇವುಗಳ ಪೈಕಿ ಬಿಹಾರಿ ಮೂಲದ ಬಗ್ಗೆ ಈಗಷ್ಟೇ ಸ್ಫೋಟಗೊಂಡಿದೆ. ತಬ್ಲಿಘಿ ಬಗ್ಗೆ ಸಂಪೂರ್ಣವಾದ ತಲಾಷ್ ಆಗಿದೆ. ರಾಜ್ಯದಿಂದ ದೆಹಲಿಯ ತಬ್ಲಿಘಿ ಸಭೆಗೆ ಹೋಗಿದ್ದವರು ಯಾರು? ಎಲ್ಲಿಯವರು? ಎಷ್ಟು ಮಂದಿ? ಇಲ್ಲಿ ಬಂದ ಮೇಲೆ ಯಾರನ್ನೆಲ್ಲಾ ಸಂಪರ್ಕಿಸಿದ್ದಾರೆ? ಎಂಬೆಲ್ಲಾ ಸಂಗತಿಗಳು ಬಯಲಾಗಿವೆ. ಆದರೆ ಈ ಮೂರು ಕಾರಣಗಳ ಪೈಕಿ ಅತಿ ಹೆಚ್ಚು ಜನರಿಗೆ ಸೋಂಕು ತಗುಲಿಸಿದ ಜುಬಿಲಿಯೆಂಟ್ ನ ಹಿನ್ನೆಲೆ, ಕಾರಣ, ಕಾರಣಕರ್ತರ ಬಗ್ಗೆ ಸಂಬಂಧಿಸಿದ ಮಾಹಿತಿಗಳು ಮಾತ್ರ ಇನ್ನೂ ನಿಗೂಢವಾಗಿವೆ.
ಜುಬಿಲಿಯೆಂಟ್ ಕಾರ್ಖಾನೆಗೆ ಚೀನಾದಿಂದ ಕಂಟೈನರ್ ಮೂಲಕ ಕಚ್ಚಾವಸ್ತುಗಳನ್ನು ತರಿಸಿಕೊಳ್ಳಲಾಗಿತ್ತು, ಅದರ ಮೂಲಕವೇ ಕರೋನಾ ಸೋಂಕು ಬಂದಿರಬಹುದೆಂಬ ಮಾತುಗಳು ಕೇಳಿಬಂದಿದ್ದವು. ಕಂಟೈನರ್ ಬಗ್ಗೆ ಪುಣೆಯಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ತನಿಖೆ ನಡೆಸಿ ವರದಿ ನೀಡಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ‘ಜುಬಿಲಿಯಂಟ್ ಆಮದು ಮಾಡಿಕೊಂಡಿರುವ ವಸ್ತುಗಳ ಮೇಲೆ ಸೋಂಕು ಇಲ್ಲ ಎಂಬ ವರದಿ ಬಂದಿದೆ’ ಎಂದು ತಿಳಿಸಿದ್ದಾರೆ. ಈ ಮೂಲಕ ಕಂಟೈನರ್ ಮೂಲಕ ಸೋಂಕು ಬಂದಿಲ್ಲ ಎಂಬುದನ್ನು ಸಾಬೀತುಪಡಿಸಲು ಕಾರ್ಖಾನೆಯವರಂತೆ ಯತ್ನಿಸಿದ್ದಾರೆ. ಆದರೆ ಇದೇ ಸುಧಾಕರ್ ಆಂಗ್ಲ ಮಾಧ್ಯಮವೊಂದಕ್ಕೆ ಮಾತನಾಡುತ್ತಾ ‘ಜುಬಿಲಿಯಂಟ್ ಕಾರ್ಖಾನೆಯ ನೌಕರ ಚೀನಾಕ್ಕೆ ಪ್ರವಾಸ ಮಾಡಿ ಅಲ್ಲಿನ ನಾಗರೀಕರನ್ನು ಭೇಟಿಯಾಗಿದ್ದಾನೆ’ ಎಂಬ ಹೇಳಿಕೆ ನೀಡಿದ್ದಾರೆ.
ಸುಧಾಕರ್ ಹೇಳಿಕೆಯ ಪ್ರಕಾರ ಕಂಟೈನರ್ ಮೂಲಕ ಕರೋನಾ ಸೋಂಕು ಬಂದಿಲ್ಲ ಎಂಬುದು ಸಾಬೀತಾಗಿದೆ ಎಂದುಕೊಂಡರೂ ಕಂಟೈನರ್ ಚೀನಾದಿಂದ ಜುಬಿಲಿಯೆಂಟ್ ಕಾರ್ಖಾನೆಗೆ ಬಂದ ಮಾರ್ಗ ಯಾವುದು? ಕಂಟೈನರ್ ಜೊತೆ ಮನುಷ್ಯರು ಬಂದಿದ್ದರೋ? ಇಲ್ಲವೋ? ಬಂದಿದ್ದರೆ ಅವರು ಯಾರು? ಅವರಿಗೆ ಕರೋನಾ ಪರೀಕ್ಷೆ ಮಾಡಲಾಗಿದೆಯಾ? ಫಲಿತಾಂಶ ಬಂದಿದೆಯಾ? ಏನು ಫಲಿತಾಂಶ ಬಂದಿದೆ? ಈಗ ಅವರು ಎಲ್ಲಿದ್ದಾರೆ? ಎಂಬ ಪ್ರಶ್ನೆಗಳು ಮೂಡುತ್ತವೆ. ಕಾರ್ಖಾನೆ ಮಾಲೀಕರು, ಜಿಲ್ಲಾಡಳಿತ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮುಂದಾದರೆ ಸತ್ಯವೂ ಗೊತ್ತಾಗಲಿದೆ. ಕಾರ್ಖಾನೆ ಮಾಲೀಕನಿಂದ ಕೇಂದ್ರ ಸರ್ಕಾರದವರೆಗೂ ಸಂಬಂಧ ಬೆಸೆದಿದ್ದಕ್ಕೆ ಸಕಾರಣವಿದೆ. ಜುಬಿಲಿಯೆಂಟ್ ಔಷದ ತಯಾರಿಸುವ ಕಾರ್ಖಾನೆ. ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಬರಲಿದೆ. ಕರೋನಾ ಕಷ್ಟ ಜಗತ್ತಿನ ಬೇರೆ ಬೇರೆ ದೇಶಗಳನ್ನು ಪರಿಪರಿಯಾಗಿ ಕಾಡುತ್ತಿದ್ದೂ ಇಲ್ಲಿಗೂ ಬರಬಹುದೆಂಬ ಸಾಧ್ಯತೆ ಇದ್ದೂ, ಅಂಥ ಚರ್ಚೆಗಳು ನಡೆಯುತ್ತಿದ್ದರೂ ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚೀನಾದಿಂದ ಕಂಟೈನರ್ ತರಸಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದ್ದೇಕೆ? ಅದರಲ್ಲೂ ಪರೀಕ್ಷೆಗೊಳಪಡದೆ ಅದು ದೇಶದೊಳಕ್ಕೆ ಬರಲು ಪರವಾನಗಿ ಕೊಟ್ಟಿದ್ದೇಕೆ ಎಂಬ ಇನ್ನೆರಡು ಕ್ಲಿಷ್ಟ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಸೋಂಕು ಬಂದಿದ್ದು ಹೇಗೆ?
ಜುಬಿಲಿಯೆಂಟ್ ಕರ್ಮಕಾಂಡದ ಸುತ್ತ ಹುಟ್ಟಿಕೊಳ್ಳುವ ಎಲ್ಲಾ ಪ್ರಶ್ನೆಗಳ ಕತ್ತು ಹಿಸುಕಲಾಗಿದೆ. ಪ್ರಶ್ನೆಗಳ ಹತ್ಯೆಯಲ್ಲಿ ಮುಖ್ಯ ವಾಹಿನಿಯ ಮಾಧ್ಯಮಗಳ ಕೈಗಳು ಕೂಡ ಇವೆ. ಇರಲಿ, ಕಂಟೈನರ್ ಹೊರತುಪಡಿಸಿದಂತೆ ಜುಬಿಲಿಯೆಂಟ್ ಕಾರ್ಖಾನೆಗೆ ದೆಹಲಿಯಿಂದ ಕಂಪನಿಯ ಆಡಿಟರ್ಸ್ ತಂಡವೊಂದು ಬಂದಿತ್ತು. ಅವರಲ್ಲಿ ಯಾರಾದರೊಬ್ಬರ ಮೂಲಕ ಸೋಂಕು ಹರಡಿರಬಹುದು, ಕಾರ್ಖಾನೆಗೆ ಆಸ್ಟ್ರೇಲಿಯಾದಿಂದ ಯುವತಿಯೋರ್ವಳು ಬಂದಿದ್ದಳು. ಆಕೆಗೆ ಜುಬಿಲಿಯೆಂಟ್ ಕಾರ್ಖಾನೆಯ ದೆಹಲಿ ಮೂಲದ ಉನ್ನತಾಧಿಕಾರಿ ಜೊತೆ ಸಂಬಂಧ ಇತ್ತು. ಅವರಿಬ್ಬರು ಕೇರಳಕ್ಕೆ ಪ್ರವಾಸ ಕೈಗೊಂಡಿದ್ದರು. ಕೇರಳದ ಮೂಲಕ ಸೋಂಕು ಬಂದಿರಬಹುದು. ಅವರು ಮೈಸೂರಿನಲ್ಲೂ ಸುತ್ತಾಡಿದ್ದರು. ಆಗ ಅವರಿಗೆ ಸ್ಥಳೀಯ ಸಿಬ್ಬಂದಿ ನೆರವು ನೀಡಿದ್ದರು. ಆ ವೇಳೆ ಸೋಂಕು ಸ್ಥಳೀಯ ಸಿಬ್ಬಂದಿಗೂ ಸೋಂಕು ತಗುಲಿರಬಹುದು ಎಂಬಿತ್ಯಾದಿ ವದಂತಿಗಳಿವೆ.
ದೆಹಲಿಯ ಆಡಿಟರ್ಸ್, ಆಸ್ಟ್ರೇಲಿಯಾದ ಯುವತಿ, ಅವರ ಸಂಬಂಧ, ಪ್ರವಾಸಗಳೆಲ್ಲವೂ ಅವರವರ ವೈಯಕ್ತಿಕ ವಿಷಯಗಳು. ಆದರೆ ಸೋಂಕು ಹರಡಿದ್ದು ಯಾರಿಂದ? ಮತ್ತು ಹೇಗೆ? ಎಂಬ ಬಗ್ಗೆ ತನಿಖೆ ಆಗಬೇಕು. ಆದರೆ ಜುಬಿಲಿಯೆಂಟ್ ಕಂಪನಿಯ ಅಷ್ಟೂ ನಿರ್ದೇಶಕರು ಉತ್ತರ ಭಾರತೀಯರು. ವಿಶೇಷವಾಗಿ ಮಾರ್ವಾಡಿಗಳು, ಬನಿಯಾಗಳು. ದೆಹಲಿಯ ಬಿಜೆಪಿ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿರುವವರು. ನೇರವಾಗಿ ಅಮಿತ್ ಶಾ ಸಂಪರ್ಕ ಇರುವವರು. ಅದೇ ಕಾರಣಕ್ಕೆ ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಲು ಮುಂದಾಗಿಲ್ಲ. ಕಂಪನಿ ಲಾಕ್‌ಡೌನ್ ಆಗಿರುವುದರಿಂದ ಸಿ.ಸಿ ಟಿವಿ ದೃಶ್ಯಗಳು ಹಾಗೂ ಕಂಪನಿಗೆ ಸಂಬಂಧಿಸಿದ ದಾಖಲೆಗಳು ಕೈಗೆ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ತನಿಖಾಧಿಕಾರಿಗಳು. ಆದರೆ ಕಾರ್ಖಾನೆಯ ಆಡಳಿತ ಮಂಡಳಿ ‘ಎಲ್ಲವನ್ನೂ ಕೊಡಲಾಗಿದೆ’ ಎಂದಿದೆ. ಇದರಿಂದ ತನಿಖೆ ಹೇಗೆ ನಡೆಯಬಹುದು ಎಂಬುದನ್ನು ತಿಳಿಯಬಹುದಾಗಿದೆ.

ದಿಲ್ಲಿ ನಾಯಕರ ಕೈವಾಡ
ದಿಲ್ಲಿಯಲ್ಲಿ ಕುಳಿತಿರುವ ದೊಡ್ಡವರ ಕೈವಾಡವಿದೆ ಎನ್ನುವುದನ್ನು ನಮ್ಮ ಸ್ಥಳೀಯ ನಾಯಕರ ವರ್ತನೆಯೇ ಸಾಬೀತುಪಡಿಸಿದೆ. ಜುಬಿಲಿಯೆಂಟ್ ಘಟನೆಯಿಂದ ತನ್ನ ಕ್ಷೇತ್ರ ನಂಜನಗೂಡಿಗೆ ಕೆಟ್ಟ ಹೆಸರು ಬರುತ್ತಿದೆ. ಕೂಡಲೇ ಕಾರ್ಖಾನೆಯನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳೀಯ ಶಾಸಕ ಹರ್ಷವರ್ಧನ್ ಕಿಡಿಕಾರಿದ್ದರು. ಮೊದಲು ಟಿವಿ ಮೈಕ್ ಗಳ ಮುಂದೆ ಕಾರ್ಖಾನೆ ತಪ್ಪೆಸಗಿದೆ ಎಂದು ಹೇಳಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ, ಬಳಿಕ ನಂಜನಗೂಡು ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರದೇ ಇದ್ದರೂ ಮಧ್ಯಪ್ರವೇಶಿಸಿ ಕಾರ್ಖಾನೆ ಮತ್ತು ಅಧಿಕಾರಿಗಳ ಜೊತೆ ರಾಜಿ ಮಾಡಿಸಲು ಮುಂದಾದರು. ಮುಖಪುಟದಲ್ಲಿ ಲೈವ್ ಬಂದು ‘ಸಂಪೂರ್ಣವಾಗಿ ಜುಬಿಲಿಯಂಟ್ ಕಾರ್ಖಾನೆಯದ್ದೇ ತಪ್ಪು ಎನ್ನಲು ಸಾಧ್ಯವಿಲ್ಲ’ ಎಂಬ ರೀತಿಯಲ್ಲಿ ಮಾತನಾಡಿದರು. ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ ನೆಪಮಾತ್ರಕ್ಕೆ ಕಾರ್ಖಾನೆಗೆ ಭೇಟಿಕೊಟ್ಟು ‘ತಿಪ್ಪೆ ಸಾರಿಸಲು’ ಮುಂದಾದರು. ಮುಖ್ಯಮಂತ್ರಿ ಇದೇ ಅವಕಾಶ ಬಳಸಿಕೊಂಡು ಸೋಮಣ್ಣ ಅವರನ್ನು ಎತ್ತಂಗಡಿ ಮಾಡಿ ಕೈತೊಳೆದುಕೊಂಡರು.
ಉಗ್ರಪ್ರತಾಪಿ, ದ್ವಿಮುಖಿ ಸಿಂಹ
ರಾಜಕೀಯ ನಾಯಕರ ವಿಷಯಕ್ಕೆ ಸಂಬಂಧಿಸಿದಂತೆ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿರುವುದರ ಜೊತೆಜೊತೆಗೆ ಜುಬಿಲಿಯೆಂಟ್ ಕಾರ್ಖಾನೆಯ ಕರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಾ ಸಾಗಿತ್ತು. ಆದರೂ ಪ್ರತಾಪ್ ಸಿಂಹ ಅವರಿಂದ ಹಿಡಿದು ಸಿಎಂ ಯಡಿಯೂರಪ್ಪವರೆಗೆ ಯಾರೂ ಕೂಡ ‘ಜುಬಿಲಿಯೆಂಟ್ ತಪ್ಪೆಸಗಿದೆ, ತನಿಖೆ ಮಾಡುತ್ತೇವೆ’ ಎಂದು ಖಡಕ್ ಆಗಿ ಹೇಳುವ ಧೈರ್ಯ ತೋರಲಿಲ್ಲ. ಅಮಿತ್ ಶಾ ಅವರನ್ನು ಮೆಚ್ಚಿಸಲು ಮಾತ್ರ ಸೀಮಿತರಾದರು. ಮೊದಲಿಗೆ ಮರೆತುಹೋಗಿದ್ದ ಕ್ಷೇತ್ರದ ಗಡಿ ಪ್ರತಾಪ್ ಸಿಂಹಗೆ ಆಮೇಲೆ ನೆನಪಾಗಿರಬೇಕು. ಬೈಟ್ (ಪ್ರತಿಕ್ರಿಯೆ) ಕೇಳಲು ಹೋದ ಮೈಸೂರು ಟಿವಿ ಪತ್ರಕರ್ತರ ಎದುರು ‘ಅದು ನನ್ನ ಕ್ಷೇತ್ರ ಅಲ್ಲ ಬಿಡಿ’ ಎಂದು ಹಲ್ಲು ಕಿರಿದರು. ಜೊತೆಗೆ ಆಫ್ ದಿ ರೆಕಾರ್ಡ್ ಮಾತನಾಡಿ ‘ದೆಹಲಿಯಿಂದ ಬಂದಿದ್ದವರ ಪೈಕಿ ಯಾರೋ ಒಬ್ಬ ಮೆಕ್ಕಾಕ್ಕೆ ಹೋಗಿ ಬಂದಿದ್ದನಂತೆ ಎಂದು ಅಲ್ಲೂ ಕೋಮು ಕಿಡಿ ಬಿತ್ತಲು ಯತ್ನಿಸಿದ್ದರು. ಆದರೆ ಪ್ರತಾಪ್ ಅವರ ಪ್ಲಾಂಟಿಂಗ್ ಪ್ಲಾನ್ ಬಗ್ಗೆ ಚೆನ್ನಾಗಿ ತಿಳಿದಿರುವ ಮೈಸೂರು ಪತ್ರಕರ್ತರು ಅದನ್ನು ಸುದ್ದಿ ಮಾಡಲಿಲ್ಲ. ಆದರೆ ಇದೇ ಪ್ರತಾಪ್ ಸಿಂಹಗೆ ಬೆಂಗಳೂರಿನ ಪಾದಾರಾಯನ ಪುರದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಕ್ಷೇತ್ರ ವ್ಯಾಪ್ತಿಯೂ ಅಡ್ಡ ಬರಲಿಲ್ಲ. ಪ್ರಕರಣ ಶುರುವಾಗುತ್ತಿದ್ದಂತೆ ಬೆಂಗಳೂರಿನ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಬಂಧನಕ್ಕೆ ಆಗ್ರಹಿಸಿದರು.
ಜುಬಿಲಿಯೆಂಟ್ ಅಹಂಕಾರ
ದೆಹಲಿ ಬಿಜೆಪಿ ಮುಖಂಡರ ಬೆಂಬಲ ಮತ್ತು ಸ್ಥಳೀಯ ನಾಯಕರ ಶಿಖಂಡಿತನವನ್ನೇ ಬಂಡವಾಳ ಮಾಡಿಕೊಂಡಿರುವ ಜುಬಿಲಿಯೆಂಟ್ ಕಾರ್ಖಾನೆಯ ಆಡಳಿತ ಮಂಡಳಿಗೆ ‘ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ತಮ್ಮಿಂದ ತಪ್ಪಾಗಿದೆ. ನಮ್ಮ ಕಾರ್ಮಿಕರು ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ. ಕಾರ್ಖಾನೆಗೆ ಜಮೀನು ನೀಡಿರುವ ಮೈಸೂರು ಮತ್ತು ನಂಜನಗೂಡಿನ ಜನ ಘಟನೆಯಿಂದ ನಲುಗಿ ಹೋಗಿದ್ದಾರೆ. ನಂಜನಗೂಡಿನವರು ಎಂಬ ಕಾರಣಕ್ಕೆ ಗರ್ಭಿಣಿಯನ್ನು ಆಸ್ಪತ್ರೆಯೊಳಗಡೆಗೆ ಬಿಟ್ಟುಕೊಂಡಿಲ್ಲ’ ಎನ್ನುವ ಕನಿಷ್ಠ ಪಾಪಪ್ರಜ್ಞೆಯೂ ಇಲ್ಲ. ಬದಲಿಗೆ ಉದ್ಧಟತನ ತೋರುತ್ತಿದೆ. ‘ನಮ್ಮ ಕಾರ್ಖಾನೆಯಲ್ಲಿ ಕ್ವಾರಂಟೈನ್‌ನಲ್ಲಿರುವ ಯಾವ ಕಾರ್ಮಿಕನೂ ಕಳೆದ ಆರು ತಿಂಗಳಿಂದ ವಿದೇಶ ಪ್ರಯಾಣ ಮಾಡಿಲ್ಲ‘ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುತ್ತದೆ. ಹಾಗಿದ್ದರೆ ಈಗಾಗಲೇ ತಿಳಿಸಿದಂತೆ ವೈದ್ಯಕೀಯ ಸಚಿವ ಸುಧಾಕರ್ ಆಂಗ್ಲ ಮಾಧ್ಯಮಕ್ಕೆ ನೀಡಿರುವ ‘ಜುಬಿಲಿಯಂಟ್ ಕಾರ್ಖಾನೆ ನೌಕರ ಚೀನಾಕ್ಕೆ ಪ್ರವಾಸ ಕೈಗೊಂಡು ಅಲ್ಲಿನ ನಾಗರೀಕರನ್ನು ಭೇಟಿಯಾಗಿದ್ದಾನೆ’ ಎಂಬ ಹೇಳಿಕೆ ಸುಳ್ಳೇ? ಸುಧಾಕರ್ ಸುಳ್ಳು ಹೇಳಿದರಾ ಅಥವಾ ಕಾರ್ಖಾನೆ ಸುಳ್ಳು ಹೇಳುತ್ತಿದೆಯಾ ಎಂಬುದಾದರೂ ತನಿಖೆ ಆಗಬೇಕಲ್ಲವೇ?
ಬಲಿ ಕಾ ಬಕ್ರಾ
ಪೆಷೇಂಟ್ ಸಂಖ್ಯೆ 52 (ಹೆಸರು ಬೇಡ) ರಿಂದಾಗಿ ಕರೋನಾ ಸೋಂಕು ಹರಡಿದೆ ಎಂಬುದು ಕೂಡ ಮಿಥ್ಯೆ ಎನ್ನುವುದು ಮೈಸೂರಿನ ಅಷ್ಟೂ ಪತ್ರಕರ್ತರಿಗೆ ತಿಳಿದಿದೆ. ‘ಆತನನ್ನು ಸೆಂಟರ್ ಫೋಕಸ್ ಮಾಡಿ ಉಳಿದ ವಿಷಯಗಳ ಬಗ್ಗೆ ಮತ್ತು ಉಳಿದವರ ಬಗ್ಗೆ ಮುಚ್ಚಿಹಾಕುವ’ ಕೆಲಸ ವ್ಯವಸ್ಥಿತವಾಗಿ ಆಗಿದೆ. ಕಾರ್ಖಾನೆಯವರು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪತ್ರಕರ್ತರೆಲ್ಲರ ಪಾತ್ರ ಇದರಲ್ಲಿದೆ. ಇನ್ನಾದರೂ ಜುಬಿಲಿಯೆಂಟ್ ಪ್ರಕರಣದ ಪ್ರಾಮಾಣಿಕ ತನಿಖೆ ಆಗಬೇಕಿದೆ.