ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಮೊಯ್ದೀನ್ ಬಾವಾರಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದಕ್ಕೆ ಹಿಂದೂ ಮೂಲಭೂತವಾದಿಯೊಬ್ಬ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ನವರಾತ್ರಿ ಹಿನ್ನೆಲೆಯಲ್ಲಿ ಮಂಗಳೂರಿನ ಬಜ್ಪೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇಗುಲದ ಆಡಳಿತ ಸಮಿತಿಯ ಆಹ್ವಾನ ಮೇರೆಗೆ ಮೊಯ್ದಿನ್ ಬಾವಾ ದೇಗುಲಕ್ಕೆ ತೆರಳಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಗುಲಕ್ಕೆ ತೆರಳಿದ ಮಾಜಿ ಶಾಸಕ ಅಲ್ಲಿನ ಸಂಸ್ಕೃತಿಯಂತೆ ಕೊಪ್ಪರಿಗೆ ಸಲ್ಲಿಸಿದ್ದರು. ಇದು ಹಿಂದೂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೊಯ್ದೀನ್ ಬಾವಾರಿಗೆ ಕರೆ ಮಾಡಿ ಬೆದರಿಕೆಯನ್ನೂ ಹಾಕಿದ್ದಾರೆ.
ಮುಂಬೈ ಮೂಲದ ಅನಿಲ್ ಎಂದು ಪರಿಚಯಿಸಿ ತುಳುವಿನಲ್ಲಿ ಸಂಭಾಷಣೆ ಆರಂಭಿಸಿದ ವ್ಯಕ್ತಿ, ಮೊಯ್ದೀನ್ ಬಾವಾರಲ್ಲಿ ದೇವಸ್ಥಾನಕ್ಕೆ ಯಾಕೆ ಹೋಗಿದ್ದೀರೆಂದು ಪ್ರಶ್ನಿಸಿದ್ದಾರೆ. ಆಹ್ವಾನಿಸದಕ್ಕೆ ಹೋಗಿದ್ದೀನೆಂದು ತಿಳಿಸಿದ ಮೊಯ್ದೀನ್ ಬಾವಾ, ಆಹ್ವಾನಿಸಿದ ಸ್ವಾಮೀಜಿಯವರಲ್ಲಿ ಮಾತನಾಡಿ ಎಂದು ಕರೆ ಮಾಡಿದಾತನಿಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಏರುದನಿಯಲ್ಲಿ ಮಾತನಾಡಿದ ಅನಿಲ್, ಇದು ನೆಹರೂ ದೇಶವಲ್ಲ, ಇದು ನರೇಂದ್ರ ಮೋದಿ ದೇಶ, ನೀವು ದೇವಸ್ಥಾನಕ್ಕೆ ಹೋಗಬಾರದು, ನಮಗೆ ಮರ್ಯಾದೆ ಕೊಟ್ಟು ದೇವಸ್ಥಾನಕ್ಕೆ ಹೋಗಬಾರದು ಎಂದು ಬೆದರಿಕೆ ಒಡ್ಡಿದ್ದಾನೆ.

ಬೆದರಿಕೆ ಕರೆ ಆಡಿಯೋ ಸಂಭಾಷಣೆ
ಅನಿಲ್ : ಹಲೋ.. ಮೊಯ್ದಿನ್ ಬಾವಾ ಅವರಲ್ವ?
ಮೊಯ್ದಿನ್ ಬಾವಾ: ಹೌದು.. ಹೇಳಿ..
ಅನಿಲ್: ನೀವು ಅಲ್ಲಿ ಕೊಪ್ಪರಿಗೆ ಇಡಲು ದೇವಸ್ಥಾನಕ್ಕೆ ಹೋಗಿದ್ದೀರಲ್ವೇ..?
ಮೊಯ್ದಿನ್ ಬಾವಾ: ಹಾ… ಹೌದೌದು…
ಅನಿಲ್: ಅದು ನಿಮಗೆ ತಪ್ಪು ಅಂತಾ ತೋರೋದಿಲ್ವೇ..? ಹಿಂದೂ ದೇವಸ್ಥಾನಕ್ಕೆ ಹೋಗಿ ನೀವು ಕೊಪ್ಪರಿಗೆ ಇಡುವುದೇ…?
ಅನಿಲ್: ಓಕೆ.. ನಿಮಗೆ ಮರ್ಯಾದೆ ಕೊಡಲು ಕರೆದಿರಬಹುದು. ಆದರೆ ಅದೇ ಮರ್ಯಾದೆಯಲ್ಲಿ ನಾನು ಬರೋದಿಲ್ಲ ಅಂತಾ ಹೇಳಬಹುದಿತ್ತಲ್ಲ..? ನೀವು ಯಾಕೆ ಹೋಗಿದ್ದೀರಿ?
ಮೊಯ್ದಿನ್ ಬಾವಾ: ಹಲೋ, ನೀವು ಸ್ವಾಮೀಜಿಯವರಲ್ಲಿಯೇ ಮಾತಾಡಿ..
ಅನಿಲ್: ಸ್ವಾಮೀಜಿ ಅವರ ಬಳಿ ಮಾತಾಡಿದ್ದೇನೆ, ನೀವು ನಮಗೆ ಮರ್ಯಾದೆ ಕೊಡಬೇಕೋ, ಬೇಡವೋ…?
ಇದು ನೆಹರೂ ದೇಶವಲ್ಲ, ಇದು ನರೇಂದ್ರ ಮೋದಿಯ ದೇಶ.. ಗೊತ್ತಾಯ್ತಲ್ವ?
ಮೊಯ್ದಿನ್ ಬಾವಾ: ಮೋದಿಯ ದೇಶವಾಗಿರಬಹುದು.. ಆದರೆ ಅವರೇನು ಕ್ರಯಕ್ಕೆ ತೆಗೆದುಕೊಂಡಿಲ್ಲ.. ಫೋನ್ ಇಡಿ..
ಅನಿಲ್: ಕ್ರಯಕ್ಕೆ ತೆಗೆದುಕೊಳ್ಳಲು ಇದು ನಮ್ಮದೇ ದೇಶ..
ಮೊಯ್ದಿನ್ ಬಾವಾ: ಫೋನ್ ಇಡೋ…
ಅನಿಲ್: ನನಗೆ ಫೋನ್ ಇಡಲು ಹೇಳಲು ನೀನು ಯಾರೋ..? ಇನ್ಮುಂದೆ ಏನಾದ್ರೂ ಗೋಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ…. ಹಲೋ..
ಇಷ್ಟಾಗುವಾಗ ಮೊಯ್ದೀನ್ ಬಾವಾ ಕರೆ ಕಟ್ ಮಾಡಿದ್ದಾರೆ. ಬೆದರಿಕೆ ಕರೆ ಮಾಡಿದ ಎನ್ನಲಾದ ಅನಿಲ್ ಮುಂಬೈ ವಿರುದ್ಧ ಸುರತ್ಕಲ್ ಠಾಣೆಗೆ ದೂರನ್ನೂ ನೀಡಿದ್ದಾರೆ. ಈ ಹಿಂದೆ ದೇವಸ್ಥಾನಕ್ಕೆ ಹೋದ ಮೊಯ್ದೀನ್ ಬಾವಾರಿಗೆ ಮುಸ್ಲಿಂ ಮೂಲಭೂತವಾದಿಗಳೂ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.

ನವರಾತ್ರಿಯಲ್ಲಿ ಸರ್ವಧರ್ಮದ ಸಂದೇಶವನ್ನು ಸಾರೋಣ.
Posted by Mohiuddin Bava on Wednesday, October 21, 2020