
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಮಹತ್ವದ ಸಭೆ ಇಂದು ನಡೆಯಲಿದೆ. ಕೇಂದ್ರ ಸರ್ಕಾರ ಕೊಡಮಾಡುವ ಜಿಎಸ್‌ಟಿ ಪರಿಹಾರ ಹಣದ ಮೊತ್ತವನ್ನು ಹೆಚ್ಚಿಸುವ ವಿಷಯವೇ ಇಂದಿನ ಸಭೆಯ ಮುಖ್ಯ ಅಜೆಂಡಾ. ಕರೋನಾ ಮತ್ತು ಲಾಕ್‌ಡೌನ್ ಕಾರಣಕ್ಕೆ ರಾಜ್ಯಗಳ ಆದಾಯಕ್ಕೆ ಭಾರೀ ಪ್ರಮಾಣದ ಪೆಟ್ಟು ಬಿದ್ದಿರುವುದರಿಂದ ರಾಜ್ಯಗಳಿಗೆ ನೀಡಲಾಗುತ್ತಿರುವ ಜಿಎಸ್‌ಟಿ ಪರಿಹಾರದ ಹಣವನ್ನು ಹೆಚ್ಚಾಗಿ ಕೊಡಬೇಕು ಎನ್ನುವುದು ರಾಜ್ಯಗಳ ವಾದವಾಗಿದೆ. ಕಾಂಗ್ರೆಸ್ ಪಕ್ಷ ಆಡಳಿತ ಇರುವ ರಾಜ್ಯಗಳು ಕರೋನಾ ಮತ್ತು ಲಾಕ್‌ಡೌನ್ ಆರಂಭವಾದಾಗಿನಿಂದಲೂ ಇದೇ ನಿಲುವನ್ನು ಪ್ರತಿಪಾದಿಸುತ್ತಿವೆ. ಕ್ರಮೇಣ ಇತರೆ ಬಿಜೆಪಿಯೇತರ ರಾಜ್ಯಗಳು ಕೂಡ ದನಿಗೂಡಿಸಿವೆ. ಅಂತಿಮವಾಗಿ ಈಗ ಬಿಜೆಪಿ ಪಕ್ಷವೇ ಆಡಳಿತ ಇರುವ ರಾಜ್ಯಗಳು ಕೂಡ ಕೇಂದ್ರ ಸರ್ಕಾರ ಹೆಚ್ಚಿನ ಹಣ ನೀಡಬೇಕು ಎಂದು ಆಗ್ರಹಿಸತೊಡಗಿವೆ.
Also Read: ಜಿಎಸ್‌ಟಿ ಅನ್ಯಾಯ; ಪ್ರಶ್ನೆ ಮಾಡುವ ತಾಕತ್ತು 25 ಬಿಜೆಪಿ ಸಂಸದರ ಪೈಕಿ ಒಬ್ಬರಿಗೂ ಇಲ್ಲವೇ?
ಕೇಂದ್ರ ಸರ್ಕಾರ ಮೊದಲು ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳು ಕೇಳಿದಾಗ ಉಪೇಕ್ಷೆ ಮಾಡಿತ್ತು. ಆದರೀಗ ಬಿಜೆಪಿ ಆಡಳಿತರೂಢ ರಾಜ್ಯಗಳಿಂದಲೇ ಹೆಚ್ಚಿನ ಪ್ರಮಾಣದ ಜಿಎಸ್‌ಟಿ ಪರಿಹಾರಕ್ಕೆ ಆಗ್ರಹಿಸುತ್ತಿರುವುದರಿಂದ ಇಕ್ಕಟ್ಟಿಗೆ ಸಿಲುಕಿದೆ. ಹಾಗಾಗಿಯೇ ಇಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ ಬಹಳ ಮಹತ್ವದ್ದಾಗಿದೆ ಮತ್ತು ನಿರ್ಣಾಯಕವಾದುದಾಗಿದೆ. ಈ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆಗ ಸರಕು ಮತ್ತು ಸೇವಾ ತೆರಿಗೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಪಾಲು ಸಿಗುತ್ತದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.
Also Read: GST ಬಾಕಿ ಉಳಿಸಿಕೊಂಡ ಕೇಂದ್ರ; ಸ್ಥಗಿತವಾದ ದಕ್ಷಿಣ ರಾಜ್ಯಗಳ ಅಭಿವೃದ್ಧಿ ಇಂಜಿನ್
ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಈಗಾಗಲೇ ರಾಜ್ಯಕ್ಕೆ ನೀಡಲಾಗುತ್ತಿರುವ ಜಿಎಸ್‌ಟಿ ಪರಿಹಾರ ಮೊತ್ತದ ಪ್ರಮಾಣವನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಆಗಸ್ಟ್ 26ರಂದು (ಬುಧವಾರ) ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಮತ್ತು ಕಾಂಗ್ರೆಸೇತರ ಆಡಳಿತ ಇರುವ ಕೆಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ಘಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹಾಗೂ ಪುದುಚೇರಿ ಮುಖ್ಯಮಂತ್ರಿ ನಾರಯಣಸ್ವಾಮಿ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯಗಳ ಪಾಲು ಹೆಚ್ಚಿಸುವ ಬಗ್ಗೆ ಒತ್ತಾಯಿಸುವಂತೆ ತಿಳಿಸಿದ್ದಾರೆ.

ಕುತೂಹಲಕಾರಿ ಸಂಗತಿ ಎಂದರೆ ಸೋನಿಯಾ ಗಾಂಧಿ ಅವರ ನಿಲುವಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ದನಿಗೂಡಿಸಿದ್ದಾರೆ. ಅವರು ಕೂಡ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜ್ಯಗಳ ಪಾಲಿನ ಹೆಚ್ಚಳಕ್ಕೆ ಆಗ್ರಹಿಸಲಿದ್ದಾರೆ. ಇದಲ್ಲದೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಜಾರ್ಖಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕೂಡ ಕೇಂದ್ರದ ಮೇಲೆ ಒತ್ತಡ ಹೇರಲಿದ್ದಾರೆ. ಇದಲ್ಲದೆ ಜಿಎಸ್‌ಟಿ ಪರಿಹಾರದ ರಾಜ್ಯದ ಪಾಲು ಸೇರಿದಂತೆ ಇತರೆ ಅನುದಾನಗಳನ್ನು ನೀಡಲು ತಡಮಾಡುತ್ತಿರುವ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಆಂಧ್ರ, ತೆಲಂಗಾಣ, ಒರಿಸ್ಸಾ ರಾಜ್ಯಗಳು ಕೂಡ ಜಿಎಸ್‌ಟಿ ಪರಿಹಾರ ನಿಧಿ ಹೆಚ್ಚಳಕ್ಕೆ ಪಟ್ಟು ಹಿಡಿಯಲಿವೆ. ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ತಡವಾಗುತ್ತಿದೆ ಎಂದು ಪತ್ರ ಬರೆದು ಆಕ್ಷೇಪಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಕೂಡ ರಾಜ್ಯದ ಪಾಲು ಹೆಚ್ಚಾಗಲೇಬೇಕು ಎಂದು ಪ್ರತಿಪಾದಿಸುತ್ತಾರೆ.
Also Read: ಸಣ್ಣ ಕೈಗಾರಿಕೆಗಳ ಬಲಿ ಪಡೆದ GST, ಕಾರ್ ಮಾರಾಟ ಕುಸಿತ
ಹೀಗೆ ಕಾಂಗ್ರೆಸ್, ಕಾಂಗ್ರೆಸೇತರ ಮತ್ತು ಬಿಜೆಪಿ ಆಡಳಿತ ಇರುವ ಎಲ್ಲಾ ರಾಜ್ಯಗಳು ಒಟ್ಟಿಗೆ ಜಿಎಸ್‌ಟಿ ಪರಿಹಾರದ ಪ್ರಮಾಣವನ್ನು ಹೆಚ್ಚಿಸಲೇಬೇಕೆಂದು ಪಟ್ಟು ಹಿಡಿಯುತ್ತಿರುವುದರಿಂದ ಕೇಂದ್ರ ಸರ್ಕಾರ ಈಗ ಅನಿವಾರ್ಯವಾಗಿ ಹೆಚ್ಚಳ ಮಾಡಬಹುದು. ಅಥವಾ ಇದೇ ಕರೋನಾ ಮತ್ತು ಲಾಕ್‌ಡೌನ್ ಕಾರಣಗಳನ್ನು ನೀಡಿ, ಕೇಂದ್ರ ಸರ್ಕಾರದ ಆದಾಯದಲ್ಲೂ ಕೊರತೆ ಉಂಟಾಗಿದೆ ಎಂಬ ನೆಪ ಹೇಳಿಕೊಂಡು ಜವಾಬ್ದಾರಿಯಿಂದ ಪಲಾಯನ ಮಾಡಲೂಬಹುದು.
ಕರ್ನಾಟಕದ ವಿಷಯಕ್ಕೆ ಬಂದರೆ 2020-21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಜ್ಯಕ್ಕೆ ಬರಬೇಕಾದ ಹಣವೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಜ್ಯ ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ರಾಜ್ಯಕ್ಕೆ ಮೊದಲ ತ್ರೈಮಾಸಿಕದ ಪಾಲಿನಲ್ಲಿ ಸುಮಾರು 4,800 ಕೋಟಿ ರೂಪಾಯಿ ಬಾಕಿ ಇದೆ. ಉಳಿದಂತೆ 28,591 ಕೋಟಿ ರೂಪಾಯಿ ರಾಜ್ಯಕ್ಕೆ ಬಾಕಿ ಬರಬೇಕಿದೆ. ವಾಸ್ತವವಾಗಿ 2020-21ನೇ ಹಣಕಾಸಿನಲ್ಲಿ 39,806 ಕೋಟಿ ರೂಪಾಯಿ ಜಿಎಸ್‌ಟಿ ಪರಿಹಾರದ ಹಣ ಬರಬೇಕಿತ್ತು. ಅದರಲ್ಲಿ ಈಗಾಗಲೇ 11,200 ಕೋಟಿ ರೂಪಾಯಿಗಳನ್ನು ಕಡಿತಮಾಡಲಾಗಿದೆ. ಸದ್ಯ ಉಳಿದ 28,591 ಕೋಟಿ ರೂಪಾಯಿಗಳಾದರೂ ಸಮಯಕ್ಕೆ ಸರಿಯಾಗಿ ಬಿಡುಗಡೆ ಆಗುತ್ತದೆಯೇ ಎಂಬುದನ್ನು ಕಾದುನೋಡಬೇಕು. ಅದರ ಜೊತೆಗೆ ಎಲ್ಲಾ ರಾಜ್ಯಗಳು ಏಕಕಾಲಕ್ಕೆ ಒತ್ತಡ ಹೇರುತ್ತಿರುವುದರಿಂದ ರಾಜ್ಯಗಳಿಗೆ ನೀಡುವ ಜಿಎಸ್‌ಟಿ ಪಾಲಿನ ಪ್ರಮಾಣವನ್ನು ಹೆಚ್ಚಳ ಮಾಡಲಾಗುತ್ತದೆಯೇ ಎಂಬುದನ್ನು ಕೂಡ ಕಾದುನೋಡಬೇಕು.
Also Read: ಕೇಂದ್ರದಿಂದ ತೆರಿಗೆ ಹಂಚಿಕೆ ಕಡಿತ; ಕೊರತೆ ನೀಗಿಸಲು ಸಾಲ ಪಡೆಯಬೇಕಿದೆ ರಾಜ್ಯ ಸರ್ಕಾರ
ಇದಲ್ಲದೆ ರಾಜ್ಯಗಳಿಗೆ ಬೇರೆ ಬೇರೆ ಬಾಬ್ತುಗಳಿಗೂ ಕೇಂದ್ರ ಸರ್ಕಾರ ಹಣ ನೀಡಬೇಕು. ನೆರೆ, ಬರದಂತಹ ವಿಪ್ಪತ್ತುಗಳಿಗೆ ಅನುದಾನ ನೀಡಬೇಕು. ಅವುಗಳು ಕೂಡ ತಡವಾಗುತ್ತಿವೆ. ಇತ್ತೀಚೆಗೆ ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಹ ಕಾಣಿಸಿಕೊಂಡು ಸುಮಾರು 10 ಸಾವಿರ ಕೋಟಿ ರೂಪಾಯಿ ಪ್ರಮಾಣದ ಆಸ್ತಿ ಮತ್ತು ಬೆಳೆ ನಷ್ಟವಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 450 ಕೋಟಿ ರೂಪಾಯಿಗಳಿಗೆ ಮಾತ್ರ ಮನವಿ ಮಾಡಿದೆ. ಅಷ್ಟು ಚಿಕ್ಕ ಮೊತ್ತವನ್ನೂ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಕಳೆದ ವರ್ಷ ರಾಜ್ಯದಲ್ಲಿ ಪ್ರವಾಹ ಕಂಡುಬಂದಾಗಲು ಕೇಂದ್ರ ಸರ್ಕಾರ ಇದೇ ರೀತಿಯ ತಾರತಮ್ಯ ಮಾಡಲಾಗಿತ್ತು. ಇದೇ ರೀತಿ ಪ್ರವಾಹ ಬಂದಿರುವ ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ಸುಮಾರು 2,500 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ.
