ಕಳೆದ ಡಿಸೆಂಬರ್ ಅಂತ್ಯಕ್ಕೆ ಕೇಂದ್ರ ಅರಣ್ಯ ಇಲಾಖೆ ತನ್ನ ದ್ವೈವಾರ್ಷಿಕ ವರದಿ ಬಿಡುಗಡೆ ಮಾಡಿ, ದೇಶದಲ್ಲಿ ಅರಣ್ಯ ವಿಸ್ತಾರಗೊಳ್ಳುತ್ತಿದೆ ಎಂದು ವಿವರಿಸಿ ತನ್ನ ಬೆನ್ನು ತಾನೇ ತಟ್ಟಿಕೊಂಡಿತ್ತು. ವರದಿ ಬಂದ ಬೆನ್ನಲ್ಲೇ ಎಲ್ಲಾ ಪತ್ರಿಕೆಗಳು, ಡಿಜಿಟಲ್ ಮಾಧ್ಯಮಗಳು ಹೊಗಳಿದ್ದೇ ಹೊಗಳಿದ್ದು, ಆದರೆ ಪರಿಸರವಾದಿಗಳಿಗೆ ಮಾತ್ರ ಈ ಸುಳ್ಳನ್ನ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವರದಿ ವೈಜ್ಞಾನಿಕವಾಗಿಯೂ ಹಸಿ ಸುಳ್ಳು ಎಂಬುದು ವರದಿಯಿಂದಲೇ ಸಾಬೀತಾಗಿದೆ.
ಕೇಂದ್ರ ಅರಣ್ಯ ಇಲಾಖೆಯ ವಿಸ್ತೃತ ವರದಿಯಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಚತ್ತೀಸ್‌ಗಢ, ಕೇರಳ, ಉತ್ತರ ಪ್ರದೇಶ, ಜಾರ್ಖಾಂಡ್ ರಾಜ್ಯಗಳಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿ ವಿಸ್ತಾರಗೊಂಡಿದೆ, ಅಂದರೆ ಕಾಡು ವೃದ್ಧಿಯಾಗಿದೆ. ಇದೇ ವರದಿಯ ಪ್ರಕಾರ ಈ ಎಲ್ಲಾ ರಾಜ್ಯಗಳಲ್ಲಿ ಇಂಗಾಲದ ದಾಸ್ತಾನು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜೀವರಾಶಿ ಸಮೃದ್ಧವಾಗಿರಲು ಇಂಗಾಲದ ಪ್ರಮಾಣ ಹೆಚ್ಚಿರಲೇ ಬೇಕು, ಇಂಗಾಲದ ಚಕ್ರ ಇಡೀ ಜಗತ್ತನ್ನ ಬಂಧದಲ್ಲಿಟ್ಟಿದೆ. ಇಂಗಾಲದ ಚಕ್ರದಲ್ಲಿ ಭೂಮಿಯ ಮೇಲಿನ ಅರಣ್ಯ ಹಾಗೂ ಸಸ್ಯವರ್ಗ, ಸಮುದ್ರದ ಮೇಲಿನ ತೇಲುವ ಸಸ್ಯವರ್ಗವೆಲ್ಲಾ ಸೇರಿಕೊಂಡಿದೆ. ದ್ಯುತಿ ಸಂಶ್ಲೇಷಣ ಕ್ರೀಯೆ ಮುಖಾಂತರ ಸಸ್ಯಗಳು ಅಹಾರ ತಯಾರಿಸುತ್ತವೆ. ಜೈವಿಕ ವಲಯದ ಪರಾವಲಂಬಿಗಳಲ್ಲಿ, ಕೊಳೆತ ಪದಾರ್ಥಗಳಲ್ಲಿಯೂ ಸಹ ಇಂಗಾಲದ ಪ್ರಮಾಣ ಇರುತ್ತದೆ, ಇಂತಹ ಅದ್ಭುತ ಬಂಧಕ್ಕೆ ಸಾಕಷ್ಟು ಹಾನಿಯಾಗಿದೆ. ಇಂಗಾಲದ ದಾಸ್ತಾನು ಗಣನೀಯವಾಗಿ ಕಡಿಮೆಯಾಗುತ್ತಿದೆ, ಇದರ ಅರ್ಥ ಕಾಡು ವಿಪರೀತ ನಾಶವಾಗಿರಲೇ ಬೇಕಲ್ಲ!
ಅರಣ್ಯ ಇಲಾಖೆ ನೀಡಿದ ಮಾಹಿತಿಯಲ್ಲಿ ನಮ್ಮ ರಾಜ್ಯವನ್ನೇ ತೆಗೆದುಕೊಂಡರೆ ಎರಡು ವರ್ಷದಲ್ಲಿ 1,025 ಸ್ಕ್ವೇರ್ ಕಿಲೋಮೀಟರ್ ಅರಣ್ಯ ವೃದ್ಧಿಯಾಗಿದೆ, ಆದರೆ ಪ್ರತಿಶತ ಇಪ್ಪತ್ತರಷ್ಟು ಇಂಗಾಲದ ಪ್ರಮಾಣ ಕಡಿಮೆಯಾಗಿದೆ. ಅದೇ ಅರುಣಾಚಲಪ್ರದೇಶದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗಿದ್ದರೂ ಕೂಡ 276 ಸ್ಕ್ವೇರ್ ಕಿಲೋಮೀಟರ್ ಅರಣ್ಯ ನಾಶವಾಗಿದೆ. ಇಲಾಖೆ ನೀಡಿದ ವರದಿಯಲ್ಲೇ ಲೋಪವಿದ್ದರೂ ಉತ್ತರ ಸಿಕ್ಕಿಲ್ಲ. ಮುಂಬೈ ಮೂಲದ ಪರಿಸರ ಹೋರಾಟಗಾರರ ತಂಡ ವನಶಕ್ತಿ ಕೇಂದ್ರ ಸರ್ಕಾರದ ಅರಣ್ಯ ವೃದ್ಧಿ ವರದಿಯನ್ನ ಅವೈಜ್ಞಾನಿಕ ಎಂದು ಟೀಕಿಸಿದೆ. ಈ ವರದಿಯಲ್ಲೇ ಲೋಪವಿದೆ, ಉಪಗ್ರಹಗಳ ಮೂಲಕ ಅರಣ್ಯಗಳ ವಿಸ್ತಾರ ಅಳೆಯುತ್ತಾರೆ, ಕೆಲವೊಮ್ಮೆ ತೋಟಗಳೂ ಸಹ ಅರಣ್ಯ ಎಂದೇ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವನಶಕ್ತಿ ಸಂಘಟನೆಯ ಕಾರ್ಯಕರ್ತರು.
ಅರಣ್ಯ ಸಚಿವ ಪ್ರಕಾಶ್ ಜಾವ್ಡೇಕರ್ ನೀಡಿರುವ ವರದಿಯ ಏಳನೇ ಚಾಪ್ಟರ್ ಈ ಇಂಗಾಲದ ಮಹತ್ವ ಹಾಗೂ ಏರಿಳಿತಗಳ ಬಗ್ಗೆ ಬೆಳಕು ಚೆಲ್ಲುತ್ತೆ, ವೈಜ್ಞಾನಿಕವಾಗಿಯೇ ಈ ವರದಿ ಸುಳ್ಳು ಮಾಹಿತಿ ನೀಡುತ್ತಿರುವುದರ ಬಗ್ಗೆ ಪರಿಸರ ಪ್ರೇಮಿಗಳೂ ಗರಂ ಆಗಿದ್ದಾರೆ. ಶಿವಮೊಗ್ಗ ಮೂಲದ ಪರಿಸರವಾದಿ ಅಜಯ್ ಕುಮಾರ್ ಶರ್ಮಾ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅರಣ್ಯ ಹೆಚ್ಚಾಗಿದೆ ಎಂದಾದರೆ ಇಂಗಾಲದ ದಾಸ್ತಾನೂ ಹೆಚ್ಚಾಗಿರಬೇಕು. ಆದರೆ, ಇದು ವಿರುದ್ಧವಾಗಿ ದಾಖಲಾಗಿದೆ. ನಿಜವಾಗಿಯೂ ವರದಿ ನೀಡುವವರು ಮೂಲ ನಕ್ಷೆ ಹಿಡಿದುಕೊಂಡು ಓಡಾಡಬೇಕು. ಉದಾಹರಣೆ ಶಿವಮೊಗ್ಗದ ಶೆಟ್ಟಿಹಳ್ಳಿ, ನಗರಕ್ಕೆ ಹೊಂದಿಕೊಂಡಂತಿದೆ, ಕಳೆದ ದಶಕದಲ್ಲಿ ಸಾಕಷ್ಟು ಮರಗಳನ್ನ ಕಳೆದುಕೊಂಡಿದೆ, ಈ ತಂಡ ಗೂಗಲ್ ಮ್ಯಾಪ್, ಇಸ್ರೋದ ಭುವನ್ ಉಪಗ್ರಹ ಆಧಾರವಾಗಿಟ್ಟುಕೊಂಡೂ ಸಹ ಅಳೆಯುತ್ತಾರೆ. ಸಾಮಾನ್ಯವಾಗಿ ಕಾಡಿನ ಮಧ್ಯೆ ಯಾರೂ ಹೋಗಿ ಒತ್ತುವರಿ ಮಾಡಿ ಬರುವುದಿಲ್ಲ. ತೋಟದ ಪಕ್ಕದಲ್ಲಿರುವ ಮರವನ್ನೇ ಕಡಿದು ಉರುಳಿಸಿಕೊಂಡರೂ ಇವರ ಮಾಪನಗಳಲ್ಲಿ ದಾಖಲಾಗುವುದಿಲ್ಲ. ಉಪಗ್ರಹಗಳ ದತ್ತಾಂಶದಿಂದ ತಪ್ಪು ವರದಿಯೇ ಹೆಚ್ಚು, ಚಿಕ್ಕಮಗಳೂರಿನಲ್ಲಿರುವ ಕಾಫಿ ತೋಟಗಳು, ಶಿವಮೊಗ್ಗದ ಅಡಕೆ ತೋಟಗಳೂ ಸಹ ಕಾಡಿನಂತೆ ಕಂಡರೆ ಆಶ್ಚರ್ಯವೇನಿಲ್ಲ ಎನ್ನುತ್ತಾರೆ.
ಕಾರ್ಬನ್ ಸ್ಟಾಕ್ ಅಥವಾ ಇಂಗಾಲದ ದಾಸ್ತಾನು ವೈಜ್ಞಾನಿಕವಾಗಿಯೇ ದಾಖಲು ಮಾಡಿರುತ್ತಾರೆ, ಆದರೆ ವನವೃದ್ಧಿ ಹಾಗೂ ನಾಶವನ್ನ ನಕ್ಷೆ ಹಿಡಿದುಕೊಂಡು ಸ್ಥಳಕ್ಕೆ ಹೋಗಿ ದಾಖಲು ಮಾಡುವುದಿಲ್ಲ, ಎಲ್ಲೋ ಒತ್ತುವರಿ ತೆರವು ಮಾಡಿದಾಕ್ಷಣ ರಾತ್ರೋರಾತ್ರಿ ಕಾಡು ಬೆಳೆಯುವುದಿಲ್ಲ, ವರ್ಷದಿಂದ ವರ್ಷಕ್ಕೆ ಅರಣ್ಯ ಭೂಮಿ ನಾನಾ ಕಾರಣಗಳಿಂದ ನಾಶವಾಗುತ್ತಲೇ ಇದೆ, ಎರಡು ವರ್ಷದಲ್ಲಿ ಅರಣ್ಯ ಪ್ರದೇಶ ವಿಸ್ತಾರವಾಗಿದೆ ಎಂದು ವರದಿ ನೀಡುವ ಮೂಲಕ ಕೇಂದ್ರ ಸರ್ಕಾರ ಮಂಕುಬೂದಿ ಎರಚಿದೆ.