ಕೋವಿಡ್ ಸೋಂಕಿನ ಕಾರಣದಿಂದಾಗಿ ಅತೀ ಹೆಚ್ಚು ಬಾಧಿಸಲ್ಪಟ್ಟ ಕ್ಷೇತ್ರಗಳಲ್ಲಿ ಕ್ರೀಡಾ ಕ್ಷೇತ್ರವೂ ಒಂದು. ಐಪಿಎಲ್ ಪ್ರಿಯರಿಗೆ ಬಿಸಿಸಿಐ ಒಂದು ವಾರದ ಹಿಂದೆ ಸಿಹಿ ಸುದ್ದಿ ನೀಡಿತ್ತು. ಅರಬ್ ರಾಷ್ಟ್ರಗಳಲ್ಲಿ ಐಪಿಎಲ್ ಆಯೋಜಿಸಿಯೇ ಸಿದ್ದ ಎಂಬ ಹಠವನ್ನೂ ಸಾಧಿಸಿ ತೋರಿಸಿತ್ತು. ಆದರೆ, ಈಗ ಐಪಿಎಲ್ ಒಂದು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಲ್ಲಿದೆ.
ಐಪಿಎಲ್‌ಗೆ ಪ್ರಯೋಜಕತ್ವ ವಹಿಸಿಕೊಂಡಿದ್ದ ಕಾರ್ಪೊರೇಟ್ ಕಂಪೆನಿಗಳಲ್ಲಿ ಚೀನಾ ಕಂಪೆನಿಗಳನ್ನು ಕೈಬಿಡಬೇಕೆಂಬ ಕೂಗು, ಭಾರತ ಚೀನಾ ಗಡಿ ವಿವಾದ ತಾರಕಕ್ಕೇರಿದ ಸಂದರ್ಭದಲ್ಲೇ ಕೇಳಿ ಬಂದಿತ್ತು. ಚೀನಾದ 59 ಆ್ಯಪ್‌ಗಳನ್ನು ಭಾರತದಲ್ಲಿ ನಿಷೇಧಿಸಿ ಚೀನಾಗೆ ಖಡಕ್ ಸಂದೇಶ ರವಾನಿಸಿದ ರೀತಿಯಲ್ಲಿ ಐಪಿಎಲ್‌ನಿಂದ ಕೂಡಾ ಚೀನಾದ ಕಂಪೆನಿಗಳನ್ನು ಬಹಿಷ್ಕರಿಸುವ ಭರವಸೆಯನ್ನು ದೇಶದ ಜನತೆ ಹೊಂದಿದ್ದರು. ಆದರೆ, ಈಗ ಆ ಎಲ್ಲಾ ಭರವಸೆಗಳು ಹುಸಿಯಾಗಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಐಪಿಎಲ್‌ನಲ್ಲಿ ಪ್ರಾಯೋಜಕತ್ವ ವಹಿಸುವ ಯಾವುದೇ ಚೀನಾ ಮೂಲದ ಕಂಪೆನಿಗಳನ್ನು ಬಹಿಷ್ಕರಿಸಲಾಗುವುದಿಲ್ಲ ಎಂಬ ಸುದ್ದಿ ಎಲ್ಲಡೆ ಸಂಚಲನ ಮೂಡಿಸಿದೆ. ಮುಖ್ಯವಾಗಿ ಐಪಿಎಲ್‌ನ ಪ್ರಮುಖ ಪ್ರಯೋಜಕತ್ವವನ್ನು ವಹಿಸಿದ ಕಂಪೆನಿ ʼವಿವೋʼ. ಸಂಪೂರ್ಣ ಚೀನಾ ಮೂಲದ ಕಂಪೆನಿ ಇದಾಗಿದ್ದು, ಐಪಿಎಲ್‌ನ Title sponsor ಆಗಿದೆ.
ಈ ಸುದ್ದಿ ಹೊರಬೀಳುತ್ತಿದ್ದಂತೆಯೇ, ಐಪಿಎಲ್ ವಿರದ್ದ ಜನರು ತೀವ್ರವಾದ ಅಸಮಾಧಾನವನ್ನು ಹೊರಹಾಕಿದ್ದಾರೆ. ಐಪಿಎಲ್ ಅನ್ನೇ ಬಹಿಷ್ಕರಿಸಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.
ಬ್ರಿಜೇಶ್ ಪಟೇಲ್ ಅವರ ನೇತೃತ್ವದಲ್ಲಿರುವ ಐಪಿಎಲ್‌ನ ಮೇಲ್ವಿಚಾರಣ ಸಮಿತಿಯಲ್ಲಿ ದೇಶದ ಗೃಹ ಮಂತ್ರಿ ಅಮಿತ್ ಶಾ ಅವರ ಮಗ ಜಯ್ ಶಾ ಕೂಡಾ ಇದ್ದಾರೆ. ಚೀನಾದ ಆಪ್‌ಗಳ ಮೇಲೆ ಭಾರತ ಸರ್ಕಾರ ನಿಷೇಧ ಹೇರಿದಾಗ ಇದ್ದಂತಹ ದೇಶಪ್ರೇಮ ಈಗ ಎಲ್ಲಿ ಹೋಯಿತು ಎಂಬ ಪ್ರಶ್ನೆಗಳು ಎದ್ದಿವೆ.
ಕೇವಲ ಸಾಮಾನ್ಯ ಜನರಿಗಾಗಿ ಅಷ್ಟೇ ʼಆತ್ಮನಿರ್ಭರ್ ಭಾರತ್ʼ ಎಂಬಿತ್ಯಾದಿ ಘೋಷಣೆಗಳು ಮೊಳಗುತ್ತವೆ, ಸಿರಿವಂತರು ಆಯೋಜಿಸುವ ಕೂಟಗಳಿಗೆ ಈ ಘೋಷಣೆ ಅನ್ವಯವಾಗುವುದಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಇನ್ನು RSSನ ಸಹ ಸಂಘಟನೆಯಾದ ಸ್ವದೇಶೀ ಜಾಗರಣ್ ಮಂಚ್, ಬಿಸಿಸಿಐಗೆ ಚಾಟಿ ಬೀಸಿದ್ದು ತನ್ನ ನಿರ್ಧಾರವನ್ನು ವಾಪಾಸ್ ಪಡೆಯಲು ಆಗ್ರಹಿಸಿದೆ. ಒಂದು ವೇಳೆ ಈ ರೀತಿ ಆಗದಿದ್ದಲ್ಲಿ, ಐಪಿಎಲ್ ಅನ್ನೇ ಬಹಿಷ್ಕರಿಸಲು ಭಾರತೀಯರಿಗೆ ಕರೆ ನೀಡಿದೆ.
ವಿವೋ ಕಂಪೆನಿಯೊಂದಿಗೆ ಐಪಿಎಲ್ 5 ವರ್ಷಗಳ ಮಟ್ಟಿಗೆ 2018ರಿಂದ ಸುಮಾರು 2,199 ಕೋಟಿಗಳ ಕರಾರು ಮಾಡಿಕೊಂಡಿದೆ. ಒಂದು ವೇಳೆ ಈಗ ಚೀನಾ ಕಂಪೆನಿಯನ್ನು ನಿಷೇಧಿಸಿದಲ್ಲಿ ಬಿಸಿಸಿಐಗೆ ಸಾವಿರಾರು ಕೋಟಿಗಳ ನಷ್ಟ ಉಂಟಾಗಲಿದೆ. ಈ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಚೀನಾ ಕಂಪೆನಿಗಳನ್ನು ಬಹಿಷ್ಕರಿಸಲು ಮನಸ್ಸು ಮಾಡುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಇನ್ನು ಈ ಕುರಿತಾಗಿ ಹೇಳಿಕೆ ನೀಡಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಐಪಿಎಲ್‌ಗೆ ಚೀನಾ ಕಂಪೆನಿಗಳಿಂದ ಪ್ರಾಯೋಜಕತ್ವ ಪಡೆಯುವುದರಿಂದ ಭಾರತದ ಆರ್ಥಿಕ ಪರಿಸ್ಥಿತಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.
“ಚೀನಾದ ಪ್ರಯೋಜನಕ್ಕಾಗಿ ಚೀನಾ ಕಂಪೆನಿಯನ್ನು ಬೆಂಬಲಿಸುವುದಕ್ಕೂ, ಭಾರತದ ಪ್ರಯೋಜನಕ್ಕಾಗಿ ಚೀನಾ ಕಂಪೆನಿಯನ್ನು ಬೆಂಬಲಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಜನರು ಭಾವುಕರಾಗಿ ಚಿಂತಿಸುವ ಬದಲು ವಿವೇಚನೆಯಿಂದ ಚಿಂತಿಸಬೇಕು,” ಎಂದು ಅರುಣ್ ಹೇಳಿದ್ದಾರೆ.
ಒಟ್ಟಿನಲ್ಲಿ, ಭಾರತದಲ್ಲಿ ಚೀನಾ ವಿರುದ್ದದ ಭಾವನೆ ಇನ್ನೂ ಬಿಸಿಯಾಗಿರುವ ಹಂತದಲ್ಲೇ ಬಿಸಿಸಿಐ ಇಂತಹ ಪರಿಸ್ಥಿತಿಯನ್ನು ಮೈಮೇಲೆ ಎಳೆದುಕೊಂಡಿರುವುದು ನಿಜಕ್ಕೂ ದುರದೃಷ್ಟಕರ. ಆದರೂ, ದೇಶಪ್ರೇಮ ಕೇವಲ ಚೀನಾ ನಿರ್ಮಿತ ಆ್ಯಪ್‌ಗಳಿಗಷ್ಟೇ ಸೀಮಿತವಾಯಿತು ಎಂಬುದು ದೇಶದ ಜನರನ್ನು ರೊಚ್ಚಿಗೆಬ್ಬಿಸಿದಂತೂ ಸತ್ಯ.