ಕರೋನಾ ಸೋಂಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಮಾಹಿತಿ ಸಂಗ್ರಹಿಸಲು ಬಂದಿದ್ದ ಆಶಾ ಕಾರ್ಯಕರ್ತೆಯರನ್ನು NRC ಮಾಹಿತಿ ಪಡೆಯಲು ಬಂದವರೆಂದು ತಪ್ಪಾಗಿ ಅರ್ಥೈಸಿ ಬೆಂಗಳೂರಿನ ಸಾದಿಕ್ ಲೇಔಟ್ ನಲ್ಲಿ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.
ಕರೋನಾ ನಿಯಂತ್ರಣದ ಕುರಿತು ಮಾಹಿತಿ ಸಂಗ್ರಹಿಸುವುದನ್ನೇ NRC_NPR ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದುಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಹರಡಿದ್ದೇ ಹಲ್ಲೆಗೆ ಕಾರಣವೆಂದು ಆಶಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ.
ಹಲ್ಲೆಗೊಳಗಾದ ಆಶಾಕಾರ್ಯಕರ್ತೆಯರನ್ನು ಭೇಟಿಮಾಡಿದ ಡಿಸಿಎಂ ಅಶ್ವಥ್ ನಾರಾಯಣ್ ಹಲ್ಲೆಗೊಳಗಾದವರನ್ನು ಸಾಂತ್ವನಿಸಿ ಹಲ್ಲೆಯನ್ನು ಖಂಡಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
NRC – CAA ಕುರಿತಾದ ಪ್ರತಿಭಟನೆಗಳು ಕೊರೊನಾ ಸೋಂಕಿನ ದೆಸೆಯಿಂದಾಗಿ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ ಹೊರತು ಅದರ ಕುರಿತು ಜನರಲ್ಲಿರುವ ಸಂಶಯಗಳು ಇನ್ನೂ ಮಾಸಿಲ್ಲ. ಈ ಕಾಯ್ದೆಯ ಕುರಿತಾಗಿ ಜನರು ಇನ್ನೂ ಗೊಂದಲದಲ್ಲಿದ್ದಾರೆ ಹಾಗೂ ಪ್ರತಿಭಟನಕಾರರು ಯಾವುದೇ ದಾಖಲೆ ನೀಡುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದ್ದಾರೆ. ವಿಷಯ ಇಷ್ಟು ಸೂಕ್ಷ್ಮವಾಗಿರುವಾಗ ಜನರಿಗೆ ಯಾವುದೇ ಮಾಹಿತಿ ನೀಡದೆ ಆಶಾ ಕಾರ್ಯಕರ್ತರನ್ನು ಮಾಹಿತಿ ಸಂಗ್ರಹಕ್ಕೆ ಕಳಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದ್ದಿದೆ. CAA – NRC ಕುರಿತಾಗಿ ಮೊದಲೇ ಉದ್ರಿಕ್ತವಾಗಿರುವ ಜನರ ಬಳಿಗೆ ಮಾಹಿತಿ ಸಂಗ್ರಹಕ್ಕೆಂದು ಆಶಾ ಕಾರ್ಯಕರ್ತರನ್ನು ಕಳುಹಿಸುವಾಗ ಸರಕಾರ ಸಾರ್ವಜನಿಕರಿಗೆ ಮಾಹಿತಿ ಸಂಗ್ರಹಣೆಯ ಉದ್ದೇಶದ ಬಗ್ಗೆ ಸಾಕಷ್ಟು ಮಾಹಿತಿ ನೀಡಬೇಕಿತ್ತು, ಕನಿಷ್ಟ ಪಕ್ಷ ಆಶಾ ಕಾರ್ಯಕರ್ತರ ಭದ್ರತೆಗಾಗಿ ಪೋಲಿಸರನ್ನು ನಿಯೋಜಿಸಬೇಕಾಗಿತ್ತು.
ಇದ್ಯಾವುದನ್ನು ಮಾಡದೆ ಏಕಾಏಕಿ ಮಾಹಿತಿ ಸಂಗ್ರಹಕ್ಕೆ ಆಶಾ ಕಾರ್ಯಕರ್ತರನ್ನು ಕಳುಹಿಸಿರುವುದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಆರೋಗ್ಯ ವಿಮೆ, ಪ್ರೋತ್ಸಾಹ ಧನ ಮುಂತಾದ ಅಗತ್ಯ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಲೇ ಬಂದಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಣನೆಗೆ ತೆಗದುಕೊಳ್ಳುತ್ತಿಲ್ಲ.
ಕರೋನಾ ಸೋಂಕಿನಿಂದ ಇಡೀ ದೇಶ ತತ್ತರಿಸುತ್ತಿರುವಾಗ ಈ ಸೋಂಕಿನ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತರು, ಶುಶ್ರೂಕರ ಪಾಲು ಬಹಳ ದೊಡ್ಡದು. ಇಂತಹಾ ಸಂಧರ್ಭಗಳಲ್ಲಿ ತಳಮಟ್ಟದಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಶುಶ್ರೂಕರು ಕರೋನಾ ಸೋಂಕಿನ ವಿರುದ್ಧದ ಹೋರಾಟದ ಕಾಲಾಳುಗಳು. ಇಂತಹ ಆಶಾ ಕಾರ್ಯಕರ್ತರ ಕುರಿತು ಸರ್ಕಾರ ಅಥವಾ ಸಂಬಂಧಿಸಿದ ಆರೋಗ್ಯ ಇಲಾಖೆ ಕಾಳಜಿ ವಹಿಸದಿದ್ದರೆ ದೇಶದ ಮುಂದಿರುವ ಇಷ್ಟು ದೊಡ್ಡ ಸವಾಲನ್ನು ಎದುರಿಸುವುದಾದರೂ ಹೇಗೆ?