ನಷ್ಟದಿಂದ ಸಾಗುತ್ತಿರುವ ಸಾರ್ವಜನಿಕ ಸಾರಿಗೆ ಸಂಸ್ಥೆ ಬಿಎಂಟಿಸಿ ಇದೀಗ ಬಸು, ಕಟ್ಟಡಗಳನ್ನು ಸೇರಿದಂತೆ ತನಗೆ ಸೇರಿದ ಆಸ್ತಿಗಳನ್ನು ಅಡಮಾನ ಇಡುವ ಪರಿಸ್ಥಿತಿಗೆ ಬಂದು ತಲುಪಿದೆ. ಬಿಎಂಟಿಸಿ ದಿನದಿಂದ ದಿನಕ್ಕೆ ನಷ್ಟದಲ್ಲಿ ಮುಳುಗುತ್ತಿದ್ದು ರಾಜ್ಯ ಸರ್ಕಾರದ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ನಿರ್ಲಕ್ಷ್ಯವೇ ಈ ಪರಿ ನಷ್ಟಕ್ಕೆ ಕಾರಣ ಎಂದು ಆರೋಪಿಸಲಾಗುತ್ತಿದೆ.
ಸಂಸ್ಥೆಯಲ್ಲಿ ನೌಕರರಿಗೆ ವೇತನ ನೀಡಲು ಹಣದ ಅಭಾವ ಉಂಟಾಗಿದ್ದು, ಸಾರಿಗೆ ಸಂಸ್ಥೆಯ ನೌಕರರು ಕೆಲ ದಿನಗಳ ಹಿಂದೆಯಷ್ಟೇ ಮುಷ್ಕರ ನಡೆಸಿದ್ದರು. ನೌಕರರಿಗೆ ವೇತನ ನೀಡಲು ಮಾತ್ರವಲ್ಲದೆ, ಸಂಸ್ಥೆಗೆ ಸೇರಿದ ವಾಹನಗಳ ಬ್ಯಾಟರಿ ಸೇರಿದಂತೆ ಇತರೆ ಬಿಡಿಭಾಗಗಳನ್ನು ಖರೀದಿಸಲು ಹಾಗೂ ಇಂಧನ ಖರೀದಿಸಲೂ ಸಂಸ್ಥೆಯ ಬಳಿ ಸಾಕಷ್ಟು ಹಣವಿಲ್ಲದೆ ಸಂಸ್ಥೆ ಮುಗ್ಗರಿಸುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರ ಸಾಲ ಪಡೆಯಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ಪಡೆಯಲು ಸಂಸ್ಥೆ ತೀರ್ಮಾನಿಸಿದೆ. ಈ ಸಂಬಂಧ ಕೆಲ ಷರತ್ತು ವಿಧಿಸಿ ಆಸಕ್ತ ಬ್ಯಾಂಕ್‌ಗಳನ್ನು ಟೆಂಡರ್‌ಗೆ ಆಹ್ವಾನಿಸಿದೆ. ಒಂದೇ ಕಂತಿನಲ್ಲಿ 230 ಕೋಟಿ ಸಾಲ ನೀಡಬೇಕು. ಸಾಲದ ಮರುಪಾವತಿ ಅವಧಿ ಏಳು ವರ್ಷ ಇರಬೇಕು. ಸಾಲ ಮರುಪಾವತಿ ಆರು ತಿಂಗಳ ನಂತರ ಪ್ರಾರಂಭವಾಗುತ್ತದೆ ಎಂದು ಸಂಸ್ಥೆಯು ಷರತ್ತು ವಿಧಿಸಿದೆ.
ಆರ್ಥಿಕ ಸಂಕಷ್ಟದಿಂದ ಪಾರಾಗಲು 230 ಕೋಟಿ ರುಪಾಯಿಗಳ ಸಾಲದ ನಿರೀಕ್ಷೆಯಲ್ಲಿದ್ದು, ಕಡಿಮೆ ಬಡ್ಡಿದರಲ್ಲಿ ಸಾಲ ನೀಡುವ ಬ್ಯಾಂಕ್ಗಳ ಬಾಗಿಲು ತಟ್ಟಲು ಸಂಸ್ಥೆ ಮುಂದಾದೆ. ನಮ್ಮ ಷರತ್ತುಗಳ ಅನ್ವಯ ಆಸಕ್ತ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ಗಳು ಟೆಂಡರ್ನಲ್ಲಿ ಭಾಗವಹಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವಂತೆ BMTC ಮನವಿ ಮಾಡಿದೆ.
ಕೋಟ್ಯಾಂತರ ರೂ ನಷ್ಟದಲ್ಲಿ ಮುಳಗಿದ ಬಿಎಂಟಿಸಿ…!
ಬಿಎಂಟಿಸಿಯು ಕಳೆದ ಆರೇಳು ವರ್ಷದಿಂದ ನಷ್ಟದಿಂದಲೇ ಕಾರ್ಯಾಚರಿಸುತ್ತಿದ್ದು, ನಷ್ಟದ ಪ್ರಮಾಣ ಕುಗ್ಗಿಸಲು ಜನದಟ್ಟಣೆ ಇಲ್ಲದ ಮಾರ್ಗಗಳಲ್ಲಿ ಸಂಚಾರವನ್ನು ಕಡಿತಗೊಳಿಸಿ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆಗೊಳಿಸಲು ಪ್ರಯತ್ನಿಸಿತ್ತು. ಅದಾಗ್ಯೂ ನಷ್ಟದ ಪ್ರಮಾಣ ಏರುತ್ತಲೇ ಇದೆ ಎನ್ನಲಾಗಿದೆ.
2012-13 : 147 ಕೋಟಿ ನಷ್ಟ
2013-14 : 147 ಕೋಟಿ ನಷ್ಟ
2014-15 : 64 ಕೋಟಿ ನಷ್ಟ
2015-16 : 13 ಕೋಟಿ ನಷ್ಟ
2016-17 : 260 ಕೋಟಿ ನಷ್ಟ
2017-18 : 216 ಕೋಟಿ ನಷ್ಟ
2018-19 : 300 ಕೋಟಿ ನಷ್ಟ
2019-20 : 500 ಕೋಟಿ ನಷ್ಟ
ಕೇಂದ್ರದ ವಿರುದ್ಧ ಅಸಮಾಧಾನ
ರಾಜ್ಯದ ಸಾರ್ವಜನಿಕ ಸಂಸ್ಥೆಗಳು ನಷ್ಟದ ಹಾದಿಯಲ್ಲಿದ್ದರೂ ಕೇಂದ್ರ ರಾಜ್ಯದ ಕಡಗೆ ಸಾಕಷ್ಟು ಗಮನ ಹರಿಸುತ್ತಿಲ್ಲ ಎಂದು ರಾಜ್ಯದ ಜನತೆ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈಗಾಗಲೇ ಜಿಎಸ್‌ಟಿ ಮೊತ್ತ ಬಾಕಿ ಇರಿಸಿಕೊಂಡ ಕೇಂದ್ರದ ವಿರುದ್ಧ ಅಸಹನೆ ಇದ್ದಂತೆಯೇ, ನೆರೆ ಪರಿಹಾರದ ಮೊತ್ತದಲ್ಲಿಯೂ ಕೇಂದ್ರ ಸಾಕಷ್ಟು ಅನುದಾನ ಮಾಡದಿರುವುದು ಅಸಹನೆ ಹೆಚ್ಚಾಗಲು ಕಾರಣವಾಗಿತ್ತು. ಈ ನಡುವೆ ಸಾರ್ವಜನಿಕ ಸಂಸ್ಥೆಗಳು ನಷ್ಟದಿಂದ ಮುಗ್ಗರಿಸುತ್ತಿದ್ದರೂ 13 ಸಾವಿರ ಕೋಟಿ ವೆಚ್ಚದಲ್ಲಿ ಪ್ರಧಾನಿ ನಿವಾಸ ಸಂಕೀರ್ಣ ಮರುನಿರ್ಮಿಸಲು ಹೊರಟಿದ್ದು ಜನತೆ ಕೆಂಗಣ್ಣಿಗೆ ಗುರಿಯಾಗಿದೆ.