ದೇಶದ ಆರ್ಥಿಕ ಸ್ಥಿತಿಗತಿ ಹದಗೆಟ್ಟಿದೆ. ಲಾಕ್ ಡೌನ್ ನಂತರವಂತೂ ದೇಶದ ಪಾಡು ಹೇಗಿರಲಿದೆ ಅನ್ನೋ ಯಕ್ಷ ಪ್ರಶ್ನೆ ದೇಶದ ಮುಂದಿದೆ. ಮೋದಿ ಸರ್ಕಾರ ಆರ್ಥಿಕವಾಗಿ ಮುಂದಿಡುತ್ತಿರುವ ಒಂದೊಂದು ಹೆಜ್ಜೆ ಕೂಡ ಎಡವುತ್ತಿದೆ ಅನ್ನೋದು ಈ ಲಾಕ್ ಡೌನ್ ಅವಧಿಯಲ್ಲಿ ಅರಿವಾಗಿದೆ. ಎಷ್ಟರ ಮಟ್ಟಿಗೆ ಎಂದರೆ ವಲಸೆ ಕಾರ್ಮಿಕರಿಗೆ ಇಂಥಾ ದುರಿತ ಕಾಲದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗದಷ್ಟರ ಮಟ್ಟಿಗೆ ಕೇಂದ್ರ ಸರ್ಕಾರ ದಿವಾಳಿಯಾಗಿ ಕೂತಿದೆ. ಜತಗೆ ಕರೋನಾದಿಂದಾಗಿ ವಿದೇಶದಲ್ಲಿ ಅತಂತ್ರವಾಗಿ ಕೂತಿರುವ ಅನಿವಾಸಿ ಭಾರತೀಯರನ್ನು ವಾಪಾಸು ಕರೆಸಿಕೊಳ್ಳುವಲ್ಲಿಯೂ ಎಡವಿದೆ. ಕರೋನಾದಿಂದಾಗಿ ವಿದೇಶದಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ವಾಪಾಸ್ ತವರಿಗೆ ಕರೆತರಲು ವಿಮಾನಯಾನ ಸಂಸ್ಥೆಗಳು ದುಡ್ಡಿನ ಬೇಡಿಕೆ ಇಟ್ಟಿತು. ಇಂಥಾ ಸಂಧಿಗ್ಧ ಪರಿಸ್ಥಿತಿಯಲ್ಲೂ ಮೋದಿ ಸರ್ಕಾರದ ಈ ನಡೆ ಇತಿಹಾಸವನ್ನೊಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದೆ.
ಅದು 1990ರ ಸಮಯ. ವಿ ಪಿ ಸಿಂಗ್ ದೇಶದ ಪ್ರಧಾನಿಯಾಗಿದ್ದರು. ಈ ವೇಳೆ ಇರಾಕ್ ಆಕ್ರಮಣದಿಂದ ಕುವೈತ್ ನಲ್ಲಿ ಸಿಲುಕಿಕೊಂಡಿದ್ದ ಒಂದು ಲಕ್ಷದ 11 ಸಾವಿರ ಅನಿವಾಸಿ ಭಾರತೀಯರನ್ನು ತವರಿಗೆ ಕರೆಸಿಕೊಂಡ ಪರಿಯನ್ನು ನಾವು ಈ ಹೊತ್ತಲ್ಲಿ ನೆನಪಿಸಿಕೊಳ್ಳಲೇ ಬೇಕು. ಅಂದಿನ ಪ್ರಧಾನಿ ವಿ ಪಿ ಸಿಂಗ್ ಮಾಧ್ಯಮ ಸಲಹೆಗಾರರಾಗಿದ್ದ ಪ್ರೇಮ್ ಶಂಕರ್ ಜಾ಼ ಅವರು ಇತ್ತೀಚೆಗೆ ಈ ಬಗ್ಗೆ ಒಂದು ಕಡೆ ಮಾತನಾಡಿದ್ದರು,
“ನಾನು ವಿ ಪಿ ಸಿಂಗ್ ಪ್ರಧಾನ ಮಂತ್ರಿಯಾಗಿದ್ದ ವೇಳೆಯಲ್ಲಿ ಅವರು ತೆಗೆದುಕೊಂಡಿದ್ದ ಮಹತ್ವದ ನಿರ್ಧಾರವೊಂದಕ್ಕೆ ಸಾಕ್ಷಿಯಾಗಿದ್ದೆ. ಅಂದು ಕುವೈತ್ ನಲ್ಲಿ ಕೆಲಸ ಮಾಡುತ್ತಿದ್ದ ಲಕ್ಷದ 70 ಸಾವಿರ ಅನಿವಾಸಿಗಳನ್ನು ಮರಳಿ ತವರಿಗೆ ತರುವುದು ಸವಾಲಿನ ಕೆಲಸವಾಗಿತ್ತು. ಸದ್ದಾಮ್ ಹುಸೈನ್ ನಡೆಸಿದ ದಾಳಿಯಿಂದಾಗಿ ಭೀತಿ ಹೆಚ್ಚಿತ್ತು. ಹೀಗಾಗಿ ವಾಯುಮಾರ್ಗ ಅಷ್ಟೊಂದು ಸುಲಭವಾಗಿರಲಿಲ್ಲ. ತಕ್ಷಣವೇ ಕುವೈಟ್ ಸರ್ಕಾರವನ್ನು ಸಂಪರ್ಕಿಸಿದ ಸಿಂಗ್ ಅವರು ಮಾತುಕತೆ ನಡೆಸಿ ಭಾರತೀಯರನ್ನು ಮರಳಿ ಕರೆಸಿಕೊಳ್ಳಲು ಅಸಾಧಾರಣ ಯೋಜನೆಯೊಂದನ್ನು ರೂಪಿಸಿದರು. ಕುವೈಟ್ ನಿಂದ 1120 ಕಿಲೋ ಮೀಟರ್ ದೂರ ಭೂಮಾರ್ಗದ ಮೂಲಕವೇ ಸಂಚರಿಸಿ ಅಮನ್ ಎಂಬ ಏರ್ಪೋಟಿನಿಂದ ಭಾರತಕ್ಕೆ ಹಾರುವ ವ್ಯವಸ್ಥೆ ಮಾಡಿದ್ದರು. ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ ಲೈನ್ಸ್ ಅಂದು 488 ಭಾರಿ ಹಾರಾಟ ನಡೆಸಿ ಲಕ್ಷದ 11 ಸಾವಿರಕ್ಕಿಂತಲೂ ಹೆಚ್ಚಿನ ಅನಿವಾಸಿ ಭಾರತೀಯರನ್ನು ಮರಳಿ ತಾಯ್ನಾಡು ಸೇರುವಂತೆ ಮಾಡಿತ್ತು. ಇಂದಿನವರೆಗೂ ಇದು ಜಗತ್ತುಕಂಡ ಅತಿದೊಡ್ಡ ಪಾರುಗಾಣಿಕಾ ವಿಮಾನಯಾನವಾಗಿದೆ.”
ಆದರೆ ಇಲ್ಲಿನ ಗಮನಾರ್ಹ ವಿಷಯವೆಂದರೆ ಅಂದು ವಿ ಪಿ ಸಿಂಗ್ ನಡೆಸಿದ ಪಾರುಗಾಣಿಕೆಗೆ ಖರ್ಚಾಗಿದ್ದು ಬರೋಬ್ಬರಿ ಒಂದು ಶತಕೋಟಿ ಡಾಲರ್ ಗಳಷ್ಟು. ಇಷ್ಟು ದೊಡ್ಡ ಮೊತ್ತದ ಹಣ ಅಂದು ವಿನಿಯೋಗ ಆಗಿರೋದರ ಹಿಂದೆ ಒಂದೇ ಒಂದು ಚರ್ಚೆಯಾಗಿರಲಿಲ್ಲ. ಯಾವ ಸಂಸದೀಯ ಪಟು ಕೂಡ ತಗಾದೆ ಎತ್ತಿರಲಿಲ್ಲ. ವಿ ಪಿ ಸಿಎಂಗ್ ಹಾಗೂ ಅಂದಿನ ವಿದೇಶಾಂಗ ಸಚಿವ ಇಂದರ್ ಗುಜ್ರಾಲ್ ಅನಿವಾಸಿ ಭಾರತೀಯರ ಕೈಯಿಂದ ನಯಾಪೈಸನ್ನೂ ಪಡೆದುಕೊಳ್ಳಲಿಲ್ಲ.
ಅಂದು ವಿ ಪಿ ಸಿಂಗ್ ತೆಗೆದುಕೊಂಡ ತೀರ್ಮಾನ ಹಾಗೂ ಇಂದು ಮೋದಿ ತೆಗೆದುಕೊಳ್ಳುತ್ತಿರುವ ತೀರ್ಮಾನದ ನಡುವೆ ಅಜಗಜಾಂತರ ವ್ಯತ್ಯಾಸ ಇದೆ. ಮೋದಿಯವರು ಯಾವುದೇ ಪ್ರಾಯೋಗಿಕ ಲೆಕ್ಕಾಚರವನ್ನು ಹಾಕಿಕೊಳ್ಳದೆ ದೇಶವನ್ನು ದಿವಾಳಿಯತ್ತ ಕೊಂಡೊಯ್ಯತ್ತಿದ್ದಾರೆ ಎಂಬುವುದು ಇಲ್ಲಿ ಸ್ಪಷ್ಟವಾಗುತ್ತಿದೆ. ಎಲ್ಲಿಯವರೆಗೆ ಎಂದರೆ ರಿಸರ್ವ್ ಬ್ಯಾಂಕ್‌ನಲ್ಲಿದ್ದ 55 ಟನ್ ಚಿನ್ನವನ್ನೂ ಹೆಚ್ಚುವರಿಯಾಗಿ ಪಡೆದುಕೊಂಡು ಕೈಖಾಲಿ ಮಾಡಿ ಕೂತಿದೆ.
ಅಷ್ಟಕ್ಕೂ ಮೋದಿ ಸರ್ಕಾರ ಹೃದಯಹೀನ ಸರ್ಕಾರವೇ.? ಅಥವಾ ಮೂರ್ಖ ಸರ್ಕಾರವೇ.? ಎಂಬ ಗೊಂದಲದಲ್ಲಿ ಸಿಲುಕಿಕೊಂಡಿದೆ ಇಡೀ ದೇಶ. ಮೊದಲು ಮೋದಿ ಸರ್ಕಾರ ಮೂರ್ಖ ಸರ್ಕಾರ ಎಂದು ಭಾವಿಸಲಾಗಿತ್ತಾದರೂ, ದಿನ ಕಳೆದಂತೆ, ವಾರ ಕಳೆದಂತೆ ದೇಶದ ಬಡಜನರ ದುಃಖ, ಆತಂಕ ಮತ್ತು ನಿರ್ಗತಿಕತೆಯನ್ನು ನಿಯಂತ್ರಸುವ ಸಲುವಾಗಿ ಯಾವುದೇ ಕ್ರಮ ಜರುಗಿಸದೆ ಸುಮ್ಮನೆ ಕೈಕಟ್ಟಿ ಕೂತಿರುವ ಮೋದಿ ಸರ್ಕಾರವನ್ನು ಕಂಡ ಈ ದೇಶವಾಸಿಗಳು ಈ ಸರ್ಕಾರಕ್ಕೆ ಹೃದಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಅನ್ನೋ ಮಾತು ಸೂರ್ಯ-ಚಂದಿರರಷ್ಟೇ ಸತ್ಯ.
ಮೋದಿ ಸರ್ಕಾರ ಹೇಗೆ ನಡೆದುಕೊಳ್ಳಬೇಕಿತ್ತು ಎಂಬ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ. ಈ ವೇಳೆ ಹುಟ್ಟಿಕೊಳ್ಳುವ ಎರಡು ಪ್ರಮುಖ ಪ್ರಶ್ನೆಗಳಿವು. ಮೊದಲನೇಯದ್ದು, ಲಕ್ಷಾಂತರ ವಲಸೆ ಕಾರ್ಮಿಕರಿಗೆ ಕೆಲಸವಿಲ್ಲದ ಅವಧಿಯಲ್ಲಿ ಅವರನ್ನು ಹೇಗೆ ರಕ್ಷಿಸಬೇಕು..? ಮತ್ತು ಎರಡನೇಯದ್ದಾಗಿ, ದೇಶದ ಆರ್ಥಿಕತೆಯ ಯಂತ್ರ ಹೇಗೆ ಕಾರ್ಯಾಚರಿಸಿಬೇಕಿತ್ತು..? ಎಂಬುವುದನ್ನು ಮೋದಿ ಮೊದಲು ಮನಗಾಣಬೇಕಿತ್ತು. ದೇಶದ ಕೈಗಾರಿಕೋದ್ಯಮ, ವಾಯುಸಾರಿಗೆ, ಭೂ ಸಾರಿಗೆ ವ್ಯವಸ್ಥೆಗಳನ್ನ ಹೇಗೆ ರಕ್ಷಿಸಿಕೊಳ್ಳಬೇಕು ಎಂಬುವುದನ್ನು ಅರ್ಥಮಾಡಿಕೊಳ್ಳಬೇಕಿತ್ತು. ಇದರಿಂದಾಗಿ ಈ ಕರೋನಾ ಬಿಕ್ಕಟ್ಟು ಮುಗಿದ ತಕ್ಷಣವೇ ದೇಶ ಮತ್ತೆ ಜೀವಂತವಾಗಿರುತ್ತವೆ. ಈ ಎರಡು ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ಎಚ್ಚರಗೊಳ್ಳಬೇಕಿತ್ತು. ಆದರೆ ಇವೆಲ್ಲವನ್ನೂ ಪಕ್ಕಕ್ಕೆ ತಳ್ಳಿದ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಮಾಡಲು ನಾಲ್ಕು ಗಂಟೆ ಮುಂಚಿತವಾಗಿ ನೋಟಿಸ್ ಕೊಟ್ಟು ಇಡೀ ದೇಶವನ್ನು ಸ್ತಬ್ಧಮಾಡಿದರು. ವಾಸ್ತವದಲ್ಲಿ ಈ ಎರಡು ಅಂಶಗಳು ಮೋದಿ ಸರ್ಕಾರದ ಮನಸ್ಸಿಗೆ ನಾಟಬೇಕಿತ್ತು.
ನಮ್ಮ ಸರ್ಕಾರದ ಬಗ್ಗೆ ಕೆಟ್ಟದ್ದನ್ನು ಯೋಚಿಸಲು ಮನಸ್ಸು ಮಾಡದ ದೇಶವಾಸಿಗಳು, ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಇದನ್ನು ಮಾಡಿದ್ದಾರೆ ಎಂದು ತಮ್ಮನ್ನು ತಾವೇ ನಂಬಿಸಿಬಿಟ್ಟರು. ಆದರೆ ದಿನಗಳು ಉರುಳಿದಂತೆ ಬಡವರ ಯಾತನೆ ಹೆಚ್ಚಾಯ್ತು, ರಾಜ್ಯಗಳಿಗೆ ಆರ್ಥಿಕ ನೆರವು ಕೋರಿ ಬರುವ ಕರೆಗಳು ಹೆಚ್ಚಾದವು. ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತಲೇ ಹೋಯ್ತು. ಇವೆಲ್ಲವನ್ನು ನೋಡುತ್ತಿದ್ದ ಮಾನ್ಯ ಪ್ರಧಾನಿಗಳು ಕಲ್ಲುಬಂಡೆಯಂತೆ ಕೂತು ಬಿಟ್ಟರು. ಇದ್ಯಾವುದನ್ನೂ ಲೆಕ್ಕಿಸದೆ, ಹೆಲಿಕಾಪ್ಟರ್ ಮೂಲಕ ಹೂವಿನ ಮಳೆ ಸುರಿಸಿ ತಾನೊಬ್ಬ ಅಸಮರ್ಥ ಪ್ರಧಾನಿ ಎಂದು ಮಗದೊಮ್ಮೆ ತೋರಿಸಿಕೊಟ್ಟರು.
ಮೋದಿಯ ಚುಕ್ಕಾಣಿಯಲ್ಲಿ ನಡೆಯಬೇಕಿದ್ದ ಸೇವೆಗಳು ಈಗ ಹಲವು ಸಂಘ ಸಂಸ್ಥೆಗಳು ಮುಂದೆ ನಿಂತು ಮಾಡುತ್ತಿದ್ದೆ. ದೇಶದ ಉದ್ದಗಲಕ್ಕೂ ಕಾರ್ಮಿಕರ ಬವಣೆ ಹೇಳಿ ತೀರದ್ದಾಗಿದೆ. ಕಣ್ಣಂಚು ಕಂಪಿಸಿ ಸೋತಕಾಲುಗಳನ್ನು ಬಲವಂತವಾಗಿ ಎಳೆದುಕೊಂಡು ಕಾರ್ಮಿಕರು ತವರ ದಾರಿಗೆ ಮುಖ ಮಾಡಿ ನಿಂತಿದ್ದಾರೆ. ಕಾರ್ಮಿಕರು ಇಲ್ಲದೆ ಹೋದರೆ ದೇಶಕ್ಕೊಂದು ಪ್ರತಿಮೆಯೂ ಹುಟ್ಟುತ್ತಿರಲಿಲ್ಲ. ಬಾನೆತ್ತರದ ಕಟ್ಟಡಗಳೂ ಜೀವ ಪಡೆಯುತ್ತಿರಲಿಲ್ಲ. ಯಾವ ಕಾರ್ಖಾನಗೆಳೂ ಬಾಗಿಲು ತೆರೆಯುತ್ತಿರಲಿಲ್ಲ. ಆದರೆ ಇದ್ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದ ಮಾನ್ಯ ಪ್ರಧಾನಿಗಳು ತಮ್ಮದೇ ಆದ ಲೋಕದಲ್ಲಿ ತೇಲುತ್ತಿದ್ದಾರೆ. ಪ್ರಜ್ಞಾ ಹೀನರಂತೆ ವರ್ತಿಸುತ್ತಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ಮುಂದೇನು ಅನ್ನೋ ಮತ್ತೊಂದು ಮಹಾ ಪ್ರಶ್ನೆ ದೇಶದ ಮುಂದಿದೆ. ಇದಕ್ಕಾದರೂ ಪ್ರಧಾನಿ ಮೋದಿ ಉತ್ತರ ಕಂಡುಕೊಳ್ಳಬೇಕಿದೆ. ಇಲ್ಲದೆ ಹೋದರೆ ಸದ್ಯದ ಸ್ಥಿತಿಗಿಂತ ಭಯಾನಕವಾಗಿರಲಿದೆ ಮುಂದಿನ ದಿನಗಳು.