ನರಗುಂದದ ಹತ್ತಿರ ರೆಡ್ಡೇರ್ ನಾಗನೂರ ಎಂಬ ಗ್ರಾಮದ ಮಹಿಳೆ, ತಮ್ಮ ಮಕ್ಕಳ ಪಾಠಕ್ಕಾಗಿ ಮಾಂಗಲ್ಯವನ್ನು ಅಡವಿಟ್ಟಿದ್ದ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡಿತ್ತು. ಪ್ರತಿಧ್ವನಿ ಕೂಡ ಈ ಸುದ್ದಿಯನ್ನು ಪ್ರಕಟಿಸಿತ್ತು. ಗದಗ್ ನ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲರು 20 ಸಾವಿರ ಗಳ ಚೆಕ್ ನೀಡಿದ್ದಾರೆ. ಶಾಸಕ ಜಮೀರ್ ಕೂಡ 50 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಹಲವು ಸಂಘ ಸಂಸ್ಥೆಗಳು ಈ ಕುಟುಂಬದ ಸಹಾಯಕ್ಕೆ ಬಂದಿದ್ದು, ಹೆಸರು ಹೇಳಲು ಇಚ್ಛಿಸದ ಸಂಘವೊಂದು ಇಬ್ಬರ ಮಕ್ಕಳ ವಿದ್ಯಾಭ್ಯಾಸಕ್ಕೆ 3 ವರ್ಷಗಳ ವರೆಗೆ ಪ್ರತಿ ತಿಂಗಳೂ 1 ಸಾವಿರ ಅಂತೆ ಸಹಾಯ ಮಾಡಿದೆ. ಇವರೆಲ್ಲರಿಗೂ ಪ್ರತಿದ್ವನಿ ತಂಡದಿಂದ ಅಭಿನಂದನೆಗಳು.
Also Read: ಮಕ್ಕಳ ಆನ್‌ಲೈನ್ ಪಾಠಕ್ಕಾಗಿ ಮಾಂಗಲ್ಯ ಅಡವಿಟ್ಟ ತಾಯಿ
ಬೇರೆಯವರಂತೆ ತಮ್ಮ ಮಕ್ಕಳೂ ಆನ್ ಲೈನ್ ಶಿಕ್ಷಣ ಪಡೆಯಲಿ ಎಂದು ಕಸ್ತೂರಿ ಚಲವಾದಿ ಎಂಬ ಮಹಿಳೆ ಟಿವಿ ಕೊಂಡುಕೊಳ್ಳಲು ಮಾಂಗಲ್ಯವನ್ನು ಅಡವಿಟ್ಟರು. ಮಾಂಗಲ್ಯ ಅಡವಿಟ್ಟಿದ್ದಕ್ಕೆ 20 ಸಾವಿರ ರೂಪಾಯಿ ಸಿಕ್ಕಿತು, 14 ಸಾವಿರ ರೂಪಾಯಿಯ 32 ಇಂಚಿನ ಟಿವಿ ಖರೀದಿಸಿದರು. ಮಹಿಳೆಯ ಈ ಕಾರ್ಯಕ್ಕೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜೊತೆಗೆ ಮಾಂಗಲ್ಯ ಅಡವಿಡುವಂತಹ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದರು.
ಮಾಂಗಲ್ಯ ಸಿಕ್ಕಿದ್ದಕ್ಕೆ ಖುಷಿ ಆಗಿದ್ದ ಕಸ್ತೂರಿ ಅವರು ಖುಷಿಯಿಂದ ಪ್ರತಿಧ್ವನಿಗೆ ಪ್ರತಿಕ್ರಿಯಿಸಿದ್ದು ಹೀಗೆ, “ಅಡವಿಟ್ಟ ಮಾಂಗಲ್ಯ ವಾಪಸ್ ಸಿಕ್ಕಿದ ಕೂಡಲೇ ಕಣ್ಣಾಲಿಗಳು ತೇವವಾಗಿದ್ದವು. ಖುಷಿಯಿಂದ ಕಣ್ಣಿಗೆ ಒತ್ತಿಕೊಂಡು ಆ ಭಗವಂತನನ್ನು ನೆನೆಪಿಸಿಕೊಂಡು ತಾಳಿಯನ್ನು ಮತ್ತೆ ಹಾಕಿಕೊಂಡಿದ್ದೇನೆ. ನಮಗೆ ಸಹಾಯ ಮಾಡಿದ ಎಲ್ಲರಿಗೂ ನಾವೆಲ್ಲ ಚಿರಋಣಿ. ನಮಗೆ ಜನಪ್ರತಿನಿಧಿಗಳು ಸಹಾಯ ಮಾಡುತ್ತಾರೆ ಎಂದು ಊಹಿಸಿರಿಲಿಲ್ಲ. ಜನರು ನಮ್ಮ ಕಷ್ಟಕ್ಕೆ ಮುಂದೆ ಬಂದರು. ನಮ್ಮಂತೆ ಎಷ್ಟೋ ಜನರು ಇಂದು ಕೊರೊನಾದ ಲಾಕ್ ಡೌನ್ ಆದ ಮೇಲೆ ಕೆಲಸವಿಲ್ಲದೆ ಒದ್ದಾಡುತ್ತಿದ್ದಾರೆ. ಅವರೆಲ್ಲರಿಗೂ ದೇವರೂ ಒಂದಲ್ಲ ಇನ್ನೊಂದು ರೀತಿಯಲ್ಲಿ ಸಹಾಯ ಮಾಡಲಿ ಎಂದು ಬೇಡಿಕೊಳ್ಳುತ್ತೇನೆ”.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಗ್ರಾಮಸ್ಥರೆಲ್ಲರು ಈ ಮಹಿಳೆಗೆ ತಾಳಿ ವಾಪಸ್ ಸಿಕ್ಕಿದಕ್ಕೆ ಖುಷಿ ವ್ಯಕ್ತ ಪಡಿಸಿದರು. ಈ ಬಗ್ಗೆ ಪರಶುರಾಮ ಎಂಬುವರು “ತಾಳಿ ಒಬ್ಬ ಮಹಿಳೆಗೆ ಎಷ್ಟು ಅಮೂಲ್ಯ ಅನ್ನುವುದು ಎಲ್ಲರಿಗೂ ಗೊತ್ತು. ಅಂತಹ ತಾಳಿಯನ್ನೇ ಅಡವಿಟ್ಟರಲ್ಲ ಎಂದು ಬಹಳ ನೊಂದು ಕೊಂಡಿದ್ದೇವು. ನಾವ್ಯಾರೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿಲ್ಲ. ಇತ್ತ ದುಡಿಮೆಯೂ ಇಲ್ಲ, ಅತ್ತ ಕೂಡಿಟ್ಟ ಹಣವೂ ಲಾಕ್ ಡೌನ್ ಸಮಯದಲ್ಲಿ ಬಳಸಿದ್ದೆವು. ಮಹಿಳೆಗೆ ತಾಳಿ ಸಿಕ್ಕಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ”, ಎಂದು ಹೇಳಿದರು.