ರಾಜಕಾರಣಿಗಳು ಅಂದರೆ ಪ್ರಚಾರ ಪ್ರಿಯರೆಂದು ಹೇಳಬಹುದು. ಯಾವುದೇ ರಾಜಕಾರಣಿ ಒಂದು ಕೆಲಸ ಮಾಡುತ್ತಿದ್ದಾರೆ ಎಂದರೆ ಅದರಿಂದ ತನಗಾಗುವ ಲಾಭ ಎಷ್ಟು..? ನಷ್ಟ ಏನು..? ಎನ್ನುವುದನ್ನು ಲೆಕ್ಕಾಚಾರ ಮಾಡಿಯೇ ಮಾಡಿರುತ್ತಾರೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಕರೋನಾ ಸೋಂಕು ಹರಡುವುದಕ್ಕೆ ಶುರುವಾದ ಕೂಡಲೇ ಸಾಕಷ್ಟು ಮಂದಿ ರಾಜಕೀಯ ಮುಖಂಡರು ಅಖಾಡಕ್ಕೆ ಇಳಿದು ಜನರಿಗೆ ಆಹಾರ ಕಿಟ್ ಹಂಚಲು ಶುರು ಮಾಡಿದರು. ದೊಡ್ಡ ದೊಡ್ಡ ಬ್ಯಾನರ್ ಹಾಕಿಕೊಂಡು ಆಹಾರ ಹಂಚಿಕೆ ಮಾಡಿದರು, ಶಾಸಕರು, ರಾಜಕಾರಣಿಗಳು ಜನರಿಗಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ದೃಶ್ಯ ಮಾಧ್ಯಮಗಳಲ್ಲಿ ಒಳ್ಳೆಯ ಪ್ರಚಾರವೂ ಸಿಕ್ಕಿತ್ತು. ಕೆಲವರು ಒಳ್ಳೆಯ ಉದ್ದೇಶದಿಂದಲೇ ಕೊಟ್ಟಿರಬಹುದು, ಆದರೆ ಕೊಡುವ ಉದ್ದೇಶ ಒಳ್ಳೆಯದಿದ್ದರೂ ಆಡಂಬರದ ಪ್ರದರ್ಶನ ಮಾಡಿದ್ದು ಕೂಡ ಸತ್ಯ. ಇದೇ ರೀತಿ ಆಡಂಬರ ಪ್ರದರ್ಶನ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆ ನಡೆದಿದೆ.
ತಮಿಳುನಾಡಿನ ಡಿಎಂಕೆ ಶಾಸಕ ಜೆ ಅನ್ಬಳಗನ್ ತನ್ನ ಮತ ಕ್ಷೇತ್ರದಲ್ಲಿ ಆಹಾರ ಕಿಟ್ ಹಂಚಿಕೆ ಮಾಡಿದ್ದರು. ಸಾವಿರಾರು ಜನರಿಗೆ ಆಹಾರದ ಕಿಟ್ ಹಂಚಿಕೆ ಮಾಡಿ ಜನಮೆಚ್ಚುಗೆಯನ್ನೂ ಗಳಿಸಿದ್ದರು. ಆದರೆ 61 ವರ್ಷದ ಅನ್ಬಳಗನ್ ಅವರಿಗೆ ಜೂನ್ 01ರಂದು ಕರೋನಾ ಸೋಂಕು ಇರುವುದು ಖಚಿತವಾಗಿ ಜೂನ್ 02ರಂದು ಡಾ. ರೇಲಾ ಇನ್ಸ್‌ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್‌ಗೆ ದಾಖಲಾಗಿದ್ದರು. ಉಸಿರಾಟದಲ್ಲಿ ಏರುಪೇರು ಆಗಿದ್ರಿಂದ ಜೂನ್ 03ರಂದು ವೆಂಟಿಲೇಟರ್ ಅಳವಡಿಕೆ ಮಾಡಲಾಯ್ತು. ಆದರೆ ವೆಂಟಿಲೇಟರ್‌ನಲ್ಲಿದ್ದರೂ ಆಕ್ಸಿಜನ್ ಪಡೆಯುವುನ್ನು ನಿಲ್ಲಿಸಿದ ಆನ್ಬಳಗನ್ ದೇಹ ಇಂದು ಬೆಳಗ್ಗೆ 8 ಗಂಟೆಗೆ ಶ್ವಾಸ ನಿಲ್ಲಿಸಿದೆ. ಕರೋನಾ ಸೋಂಕಿಗೆ ಬಲಿಯಾದ ದೇಶದ ಮೊದಲ ಜನಪ್ರತಿನಿಧಿ ಎಂಬ ಹೊಸ ಪಟ್ಟಿ ತೆರೆದುಕೊಂಡಿದೆ. ಮತ್ತಷ್ಟು ರಾಜಕಾರಣಿಗಳು ಈ ಪಟ್ಟಿಯನ್ನು ಮುಂದುವರಿಸಿಕೊಂಡು ಹೋಗ್ತಾರಾ ಎನ್ನುವ ಆತಂಕ ಎದುರಾಗಿದೆ.
ಕರ್ನಾಟಕ ರಾಜಕಾರಣಿಗಳಿಗೆ ಇಲ್ಲ ಜವಾಬ್ದಾರಿ..!
ಕರ್ನಾಟಕದಲ್ಲಿ ಲಾಕ್‌ಡೌನ್ ಇದ್ದಾಗ ಬಹುತೇಕ ರಾಜಕಾರಣಿಗಳು ಮನೆಯಲ್ಲಿ ಉಳಿದಿದ್ದರು. ಆ ಬಳಿಕ ಲಾಕ್‌ಡೌನ್ ವಿನಾಯ್ತಿ ಸಿಕ್ಕ ಬಳಿಕ ಎಲ್ಲರೂ ಊರೂರು ತಿರುಗುತ್ತಿದ್ದಾರೆ. ಅನಿವಾರ್ಯ ಇದ್ದಾಗ ಹೋಗಬಾರದು ಎನ್ನಲು ಸಾಧ್ಯವಿಲ್ಲ. ಆದರೆ ಉದ್ಘಾಟನೆ ಶಂಕು ಸ್ಥಾಪನೆ ಕಾರ್ಯಕ್ರಮಗಳನ್ನು ನೂರಾರು ಜುನರನ್ನು ಸೇರಿ ಈ ಹಿಂದೆ ಮಾಡುತ್ತಿದ್ದ ಹಾಗೆ ಮಾಡಿದರೆ ಸಾಮಾಜಿಕ ಅಂತರಕ್ಕೆ ಬೆಲೆ ಇರುವುದಿಲ್ಲ.
ಯಾರೆಲ್ಲಾ ಏನೇನು ಮಾಡಿದ್ದಾರೆ?
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೆಲವು ದಿನಗಳ ಹಿಂದೆ ಸ್ವಕ್ಷೇತ್ರ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಕರೋನಾ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಜನರನ್ನು ಭೇಟಿ ಮಾಡಿದ್ರು. NH 275 ಹೆದ್ದಾರಿ ಎಕ್ಸಿಟ್ ರಸ್ತೆ ಸಂಬಂಧ ಗ್ರಾಮದ ಜನರ ಜೊತೆಗೆ ಮಾತುಕತೆ ನಡೆಸಿದ್ರು. ಈ ವೇಳೆ ಸಾಮಾಜಿಕ ಅಂತರ ಎನ್ನುವುದು ಮರಿಚಿಕೆ ಆಗಿತ್ತು. ಅದಕ್ಕೂ ಮೊದಲು ಒಂದು ವಾರದ ಹಿಂದೆ ಸುಣ್ಣಘಟ್ಟ ಗ್ರಾಮದಲ್ಲಿ ಕೃಷಿ ಯಂತ್ರಧಾರೆ ಕಚೇರಿ ಉದ್ಘಾಟನೆ ನಡೆಸಿದ ಬಳಿಕ ತಾವೇ ಸ್ವತಃ ಟ್ರ್ಯಾಕ್ಟರ್ ಓಡಿಸಿ ಗಮನ ಸೆಳೆದಿದ್ದರು. ಆ ವೇಳೆಯೂ ಜನರು ಕುಮಾರಸ್ವಾಮಿ ಸುತ್ತಮುತ್ತ ಇರುವೆ ರೀತಿ ಮುತ್ತಿಕೊಂಡಿದ್ದರು.
ಮತ್ತೋರ್ವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದರು. ಅಲ್ಲಿನ ಜನರು ಸಿದ್ದರಾಮಯ್ಯ ಬಳಿ ಸಮಸ್ಯೆ ಹೇಳಿಕೊಳ್ಳುವ ಸಲುವಾಗಿ ತುಂಬಿಕೊಂಡಿದ್ದರು. ಸ್ವತಃ ಸಿದ್ದರಾಮಯ್ಯ ದೂರ ಇರುವಂತೆ ಸೂಚಿಸಿದರೂ ಸಾಮಾಜಿಕ ಅಂತರ ಇರಲಿಲ್ಲ. ಇಂದು ಸಹ ಸಿದ್ದರಾಮಯ್ಯ ಮೈಸೂರು ಜಿಲ್ಲೆ ಟಿ ನರಸೀಪುರ ಗ್ರಾಮದ ವರಕೊಡು ಗ್ರಾಮಕ್ಕೆ ಭೇಟಿ ನೀಡಿದ್ದು, ಬೀರೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮ ಚಾಲನೆ ನೀಡದರು. ಸಿದ್ದರಾಮಯ್ಯ ಆಗಮನದಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಹಾರ ಹಾಕಲು ಮುಗಿಬಿದ್ದ ಘಟನೆ ನಡೆದಿದೆ. ಎಲ್ಲರೂ ಸಾಮಾಜಿಕ ಅಂತರ ಪಾಲನೆ ಮಾಡಿ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಆದರೂ 500ಕ್ಕೂ ಹೆಚ್ಚು ಜನ ಯಾವುದೇ ಮುಂಜಾಗ್ರತೆ ಇಲ್ಲದೆ ಭಾಗಿಯಾಗಿದ್ದರು. ಆ ಬಳಿಕ ಮಾತನಾಡಿದ ಸಿದ್ದರಾಮಯ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ ಎಂಬ ಮಾಹಿತಿ ಗೊತ್ತಿದ್ದರೆ ಕಾರ್ಯಕ್ರಮಕ್ಕೆ ಬರ್ತಿರಲಿಲ್ಲ ಎಂದಿದ್ದಾರೆ.

ಮೇ 29ರಂದು ಚಾಮರಾಜನಗರ ಪ್ರವಾಸ ಕೈಗೊಂಡಿದ್ದ ಜಲಸಂಪನ್ಮೂಲ ಖಾತೆ ಸಚಿವ ಸಚಿವ ರಮೇಶ್ ಜಾರಕಿಹೊಳಿ ಕೊಳ್ಳೆಗಾಲಕ್ಕೆ ತೆರಳಿದ್ದರು. ಈ ವೇಳೆ ಬೆಳಗಾವಿ ಸಾಹುಕಾರ್‌ಗೆ ಹಾರ ತುರಾಯಿ ಹಾಕಲು ಜನರು ಮುಗಿದ್ದಿದ್ದರು. ಈ ವೇಳೆಯಲ್ಲೂ ಸಾಮಾಜಿಕ ಅಂತರಕ್ಕೆ ಬ್ರೇಕ್ ಹಾಕಲಾಗಿತ್ತು. ಇದಕ್ಕೂ ಮೊದಲು ಮೇ 27ರಂದು ದಾವಣಗೆರೆ ಡಿಸಿಎಂ ಲಕ್ಷ್ಮಣ ಸವದಿ ಬೇಟಿ ನೀಡಿದ್ದರು. ಈ ವೇಳೆ ಲಕ್ಷ್ಮಣ ಸವದಿ ಸ್ವಾಗತಕ್ಕೆ ಜನ ಮುಗಿ ಬಿದ್ದಿದ್ದರು. ಅದೇ ಮೇ 26ರಂದು ಸಚಿವ ಭೈರತಿ ಬಸವರಾಜು, ಮಾಜಿ ಸಚಿವ ಶ್ಯಾಮನೂರು ಶಿವಶಂಖರಪ್ಪ, ಸಂಸದ ಸಿದ್ದೇಶ್ವರ್ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲೂ ಜನಸಂದಣಿ ಜೋರಾಗಿತ್ತು. ಯಾವುದೇ ಸಾಮಾಜಿಕ ಅಂತರ ಇರಲಿಲ್ಲ. ಸಚಿವ ಭೈರತಿ ಬಸವರಾಜು ಸ್ವಕ್ಷೇತ್ರ ಬೆಂಗಳೂರಿನ ಕೆ ಆರ್ ಪುರದಲ್ಲೂ ಇದೇ ರೀತಿ ಹಲವಾರು ಕಾರ್ಯಕ್ರಮ ನಡೆಸಿದ್ದು, ಸಾಮಾಜಿಕ ಅಂತರವೇ ಇಲ್ಲದ ಆಹಾರದ ಕಿಟ್ ಹಂಚಿಕೆ ಮಾಡಿದ್ದಾರೆ.
ಜೂನ್ 02ರಂದು ಕರೋನಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಧಾರವಾಡ ಪ್ರವಾಸದಲ್ಲಿದ್ದರು. ಈ ವೇಳೆ ಜನರು ಸುರೇಶ್ ಕುಮಾರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಧಾರವಾಡ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಶಿಕ್ಷಣ ಇಲಾಖೆ ಸಭೆ ನಡೆಸಿದ ಬಳಿಕ ಈ ಘಟನೆ ನಡೀತು. ಸಾಮಾಜಿಕ ಅಂತರವೂ ಇರಲಿಲ್ಲ, ಮುಖದ ಮೇಲೆ ಮಾಸ್ಕ್ ಸಹ ಇರಲಿಲ್ಲ. ಇದೇ ದಿನ ದಾವಣಗೆರೆಯಲ್ಲಿ ಶಾಸಕ ಎಸ್ ವಿ ರಾಮಚಂದ್ರಪ್ಪ ಹಾಗೂ ಸಂಸದ ಸಿದ್ದೇಶ್ವರ್ ಜಗಳೂರಿನಲ್ಲಿ ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಜನರು ಆಹಾರ ಕಿಟ್ ಪಡೆಯಲು ಒಬ್ಬರ ಮೇಲೆ ಒಬ್ಬರು ಬೀಳುವಂತಾಯ್ತು. ಕಲ್ಯಾಣಮಂಟಪದ ಹೊರಗೆ ಒಳಗೆ ಜನರು ಕುರಿ ಹಿಂಡಿನಂತೆ ನಿಂತು ಆಹಾರದ ಕಿಟ್ ಪಡೆದುಕೊಂಡರು.
ಜೂನ್ 02ರಂದೇ ಆರೋಗ್ಯ ಸಚಿವ ಶ್ರೀರಾಮುಲು ಚಿತ್ರದುರ್ಗದ ಚಳ್ಳಕೆರೆ ತಾಲೂಕಿನಲ್ಲಿ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪರಶುರಾಂಪುರದಲ್ಲಿ ನಡೆದು ಹೈಡ್ರಾಮಾ ಎಲ್ಲಾ ದೃಶ್ಯ ಮಾಧ್ಯಮಗಳಲ್ಲೂ ಬಂದಿದ್ದು ನಿಮ್ಮ ನೆನಪಿನಿಂದ ಹೋಗಿರುವುದಿಲ್ಲ. ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇರಲಿಲ್ಲ.
ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉಡುಪಿಯಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ ಮೇ 25ರಂದು ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಾಮಾಜಿಕ ಅಂತರ ಕಣ್ಮರೆಯಾಗಿತ್ತು. ಇದೇ ರೀತಿ ಸಚಿವ ಕೆ.ಎಸ್ ಈಶ್ವರಪ್ಪ ರಾಯಚೂರಿನಲ್ಲಿ ಜನಜಂಗುಳಿ ಮಾಡಿಕೊಂಡಿದ್ದರು.
ಜನಪ್ರತಿನಿಧಿಗಳು ಜನರ ಜೊತೆ ಇದ್ದರೆ ಭಯವೇನು ..?
ತಮಿಳುನಾಡಿನಲ್ಲಿ ತನ್ನ ಹುಟ್ಟುಹಬ್ಬದ ದಿನದಂದೇ ಕರೋನಾದಿಂದ ಸಾವನ್ನಪ್ಪಿರುವ ಡಿಎಂಕೆ ಶಾಸಕ ಅನ್ಬಳಗನ್ ಸಾವಿಗೆ ಕರೋನಾ ಅಷ್ಟೇ ಕಾರಣವಲ್ಲ. ಯಾವುದಾದರೂ ಕಾಯಿಲೆಯಿಂದಲೇ ಈಗಾಗಲೇ ಬಳಲುತ್ತಿದ್ದವರನ್ನು ಮರಣಶಯ್ಯೆಗೆ ಕಳುಹಿಸುವುದು ಕರೋನಾ ವೈರಾಣುವಿನ ಮೊದಲ ಶಕ್ತಿ. ಅದೇ ರೀತಿ ಅನ್ಬಳಗನ್ ಕೂಡ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಯಾವಾಗ ಕರೋನಾ ಸೋಂಕು ಬಂತೋ ಕಿಡ್ನಿ ಸಮಸ್ಯೆ ಉಲ್ಬಣವಾಯ್ತು. ಸಾವು ಕೆಲವೇ ದಿನಗಳಲ್ಲಿ ಎದುರಾಯ್ತು. ಭಾರತದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ ಸಾವಿನ ಸರಾಸರಿ ಇನ್ನೂ ಕೂಡ ಕಡಿಮೆ ಇದೆ. ಈಗ ನಿಧಾನವಾಗಿ ಸಮುದಾಯಕ್ಕೆ ಹರಡುತ್ತಿರುವ ಕಾರಣ ದಿನಕ್ಕೆ 250ರ ಆಸುಪಾಸಿನಲ್ಲಿ ಸಾವನ್ನಪ್ಪುತ್ತಿರುವ ವರದಿಯಾಗುತ್ತಿದೆ.
ನಮ್ಮ, ರಾಜ್ಯದಲ್ಲೂ ಬಹುತೇಕ ಜನಪ್ರತಿನಿಧಿಗಳು ಈಗಾಗಲೇ ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೃಯಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ ಸೇರಿದಂತೆ ನಾನಾ ಕಾಯಿಲೆಗಳಿಗೆ ಒಳಗಾಗಿದ್ದಾರೆ. ಒಂದು ವೇಳೆ ಕರೋನಾ ಬಂದರೆ..! ಇಡೀ ರಾಜ್ಯವೇ ಓರ್ವ ನಾಯಕನ್ನನ್ನು ಕಳೆದುಕೊಳ್ಳಬೇಕಾಗುತ್ತದೆ, ಪ್ರಚಾರದ ಆಡಂಬರಕ್ಕೆ ಸಿಲುಕಿ ಅನೇಕ ಜನರು ಪ್ರಾಣವನ್ನೇ ತೆರಬೇಕಾದ ಪ್ರಸಂಗ ಎದುರಾದರೂ ಅಚ್ಚರಿಯಿಲ್ಲ. ಯಾವುದಕ್ಕೂ ತಮ್ಮ ನಿಯಂತ್ರಣದಲ್ಲಿ ತಾವಿದ್ದರೆ ಜೀವ ಉಳಿಸಿಕೊಳ್ಳಬಹುದು. ತಮಿಳುನಾಡಿನ ಡಿಎಂಕೆ ಶಾಸಕ ಆರಂಭ ಮಾಡಿರುವ ಪಟ್ಟಿಯಲ್ಲಿ ಬೇರಾವುದೇ ಹೆಸರು ಸೇರದೇ ಇರಲಿ ಎಂಬುದೇ ನಮ್ಮ ಆಶಯ.