ಆಂಧ್ರಪ್ರದೇಶದಲ್ಲಿ ಸಿನಿಮಾದವರು ರಾಜಕೀಯಕ್ಕೆ ಬರುವುದು ಸರ್ವೇ ಸಾಮಾನ್ಯ. ಸಹಜವಾಗಿ ಸಿನಿಮಾ ಹೊರತುಪಡಿಸಿ ಮತ್ತೇನಾದರೂ ಮಾಡಬೇಕೆಂದು ಹೊರಟ ಅನೇಕ ನಟ-ನಟಿಯರು ಆಯ್ದುಕೊಳ್ಳುವ ಇನ್ನೊಂದು ಕ್ಷೇತ್ರ ರಾಜಕೀಯ. ಇತ್ತೀಚೆಗೆ ತಮಿಳುನಾಡು ರಾಜಕೀಯಕ್ಕೆ ಕಮಲ್, ರಜನೀಕಾಂತ್ ಮತ್ತು ಆಂಧ್ರದ ರಾಜಕೀಯಕ್ಕೆ ಪವನ್ ಎಂಟ್ರಿ ಕೊಟ್ಟಿರುವುದು ಗೊತ್ತಿರುವ ವಿಚಾರ. ಈಗ ಟಾಲಿವುಡ್ನ ಅಕ್ಕಿನೇನಿ ಕುಟುಂಬದ ಸರದಿ. ಹೌದು, ಅಕ್ಕಿನೇನಿ ಕುಟುಂಬ ರಾಜಕೀಯಕ್ಕೆ ಕಾಲಿಡುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದುವರೆಗೂ ರಾಜಕೀಯ ಗೋಜಿಗೆ ಹೋಗದ ಅಕ್ಕಿನೇನಿ ಕುಟುಂಬದ ಕುಡಿ ಮೊದಲ ಬಾರಿಗೆ ಪಾಲಿಟಿಕ್ಸ್ಗೆ ಎಂಟ್ರಿ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ರಾಜಕಾರಣ ಎಂದ ಕೂಡಲೇ ಅಕ್ಕಿನೇನಿ ಕುಟುಂಬ ಎರಡು ಕಿ. ಮೀ ದೂರದಲ್ಲಿ ನಿಲ್ಲುತ್ತದೆ. ಅಕ್ಕಿನೇನಿ ಕುಟುಂಬವನ್ನು ರಾಜಕೀಯಕ್ಕೆ ಕರೆ ತರಲು ಯಾರು ಎಷ್ಟೇ ಪ್ರಯತ್ನಿಸಿದರು ಇಲ್ಲಿಯವರೆಗೂ ರಾಜಕಾರಣಿಗಳ ಬಲೆಗೆ ನಾಗರ್ಜುನ ಬೀಳಲಿಲ್ಲ. ತೆಲುಗು ದೇಶಂ ಪಕ್ಷದ ಸ್ಥಾಪಕ, ಮಾಜಿ ಸಿಎಂ ಎನ್ಟಿಆರ್ ಕೂಡ ನಾಗೇಶ್ವರ್ ಅವರನ್ನು ರಾಜಕೀಯಕ್ಕೆ ಬರುವಂತೆ ಬಲವಂತ ಮಾಡಿದ್ದರು. ಆಗ ಅವರು ಆಸಕ್ತಿ ತೋರಲಿಲ್ಲ. ಇದರಿಂದ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಅಕ್ಕಿನೇನಿ ಕುಟುಂಬ ಬರೋಲ್ಲ ಎಂಬುದೇ ಜನರ ನಿಲುವಾಗಿತ್ತು. ಆದರೀಗ, ಕಾಲ ಬದಲಾಗಿದೆ. ಸದ್ಯ ಆಂಧ್ರ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಒತ್ತಾಯದ ಮೇರೆಗೆ ನಾಗರ್ಜುನ ವೈಎಸ್ಆರ್ ಕಾಂಗ್ರೆಸ್ಗೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಾಗರ್ಜುನ ಸಿಎಂ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಆಂಧ್ರಪ್ರದೇಶ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ವೈಎಸ್ಆರ್ ಕಾಂಗ್ರೆಸ್ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿ ಕರೆಗೆ ಓಗೊಟ್ಟು ನಾಗರ್ಜುನ ಸಕ್ರಿಯ ರಾಜಕೀಯಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ. ನಾಗರ್ಜುನ ವೈಎಸ್ಆರ್ ಕಾಂಗ್ರೆಸ್ಗೆ ಸೇರುವ ನಿರ್ಧಾರ ತೆಗೆದುಕೊಳ್ಳಲು ಸಿಎಂ ಜಗನ್ ಜತೆಗಿನ ಸಂಬಂಧವೇ ಕಾರಣ ಎಂಬ ಚರ್ಚೆ ನಡೆಯುತ್ತಿದೆ.
ಇನ್ನು, ಮೂರು ವರ್ಷಗಳಲ್ಲಿ ಮತ್ತೆ ಆಂಧ್ರಪ್ರದೇಶದಲ್ಲಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಎದುರಾಗಲಿದೆ. ಇಲ್ಲಿ ಆಡಳಿತರೂಢ ವೈಎಸ್‌ಆರ್ ಕಾಂಗ್ರೆಸ್ ಅನ್ನು ಸೋಲಿ ಪುನಃ ಅಧಿಕಾರಕ್ಕೇರಲು ಟಿಡಿಪಿ ಭಾರೀ ಸರ್ಕಸ್ ನಡೆಸುತ್ತಿದೆ. ಹಾಗೆಯೇ ಜನರನ್ನು ಶತಾಯಗತಾಯ ತಲುಪಲು ಇನ್ನೊಂದೆಡೆ ಜನಸೇನಾ ಕೆಲಸ ಮಾಡುತ್ತಿದೆ. ಇದರ ನಡುವೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ವೈಎಸ್ಆರ್ ಕಾಂಗ್ರೆಸ್ ವರಿಷ್ಠ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ‘ಪ್ರಜಾ ಸಂಕಲ್ಪ ಪಾದಯಾತ್ರೆʼ ನಡೆಸುವ ಯೋಜನೆ ಇದೆ.
ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಉತ್ತಮ ಕಾರ್ಯ ಮಾಡುತ್ತಿದೆ. ರಾಜಕೀಯ ಯುವ ನೇತಾರ ಜಗನ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪ್ರತೀನಿತ್ಯ ಜಗನ್‌ಗೆ ಜೈಕಾರ ಕೂಗುತ್ತ, ಮೆರವಣಿಗೆ ಮಾಡುತ್ತಿದ್ದಾರೆ. ಹೀಗಾಗಿ ತೆಲುಗು ಚಿತ್ರರಂಗದ ನಾಯಕರು ಕೂಡ ಜಗನ್ ಪಾರ್ಟಿ ಸೇರಲು ಒಲವು ಹೊಂದಿದ್ದಾರೆ.
ಇನ್ನು ನಿರೀಕ್ಷೆಯಂತೆ ನಾಗಾರ್ಜುನ ಪಕ್ಷಕ್ಕೆ ಬಂದರೆ ಅಕ್ಕಿನೇನಿ ಕುಟುಂಬದ ಅಭಿಮಾನಗಳ ಪ್ರೀತಿಯನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಜಗನ್ ಯಶಸ್ವಿಯಾಗಬಹುದು. ವೈಎಸ್ಆರ್ ಪಕ್ಷದತ್ತ ಜನರನ್ನು ಸೆಳೆಯಲು ಜಗನ್ ಎಲ್ಲಾ ರೀತಿಯಲ್ಲೂ ರಣತಂತ್ರ ರೂಪಿಸಿದ್ದಾರೆ. ಈ ಭಾಗವಾಗಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ಧಾರೆ.
ಜಗನ್ ನೇತೃತ್ವದ ಸರ್ಕಾರದ ಕಾರ್ಯಗಳಿಗೆ ಅದ್ಭುತವಾದ ಸ್ಪಂದನೆ ಸಿಗುತ್ತಿದ್ದಂತೆಯೇ ಇತರೆ ಪಕ್ಷಗಳಿಗೆ ನಡುಕ ಶುರುವಾಗಿದೆ. ಮುಂದೆ ಎದುರುಗೊಳ್ಳುತ್ತಿರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಗೆಲ್ಲಲು ಎಲ್ಲಾ ಪಕ್ಷಗಳು ಸರ್ಕಸ್ ನಡೆಸುತ್ತಿವೆ. ಈ ಮಧ್ಯೆ ವೈಎಸ್ಆರ್ ಕಾಂಗ್ರೆಸ್ ನಿರಂತರ ಕಾರ್ಯಕ್ರಮಗಳಿಗೆ ಇತರೆ ಪಕ್ಷಗಳು ಭಯಭೀತಿಗೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.