ಕಳೆದೊಂದು ತಿಂಗಳಿನಿಂದ ಅಸ್ಸಾಮ್ ತೀವ್ರ ಸಂಕಷ್ಟದಲ್ಲಿದೆ. ಪ್ರವಾಹದ ಹರಿವು ಹೆಚ್ಚಾಗುತ್ತಿದೆ. ಗುರುವಾರ ಇನ್ನೂ ನಾಲ್ಕು ಸಾವುಗಳು ವರದಿಯಾಗಿದ್ದು, ಅಸ್ಸಾಮಿನಲ್ಲಿ ಒಟ್ಟು 28.32 ಲಕ್ಷ ಜನರು ಪ್ರವಾಹದಿಂದ ಬಳಲುತ್ತಿದ್ದಾರೆ ಎಂದು ಸರ್ಕಾರದ ವರದಿ ತಿಳಿಸಿದೆ.
ರಾಜ್ಯಪಾಲ ಜಗದೀಶ್ ಮುಖಿ ಅವರು ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯದಲ್ಲಿ ಪ್ರವಾಹ ಮತ್ತು ಭೂ ಸವೆತದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರವನ್ನು ಕೋರುತವುದಾಗಿ ಹೇಳಿದ್ದಾರೆ. ಇದನ್ನು ವರ್ಷ ವರ್ಷ ನಿಭಾಯಿಸುವುದು ಸಾಕಾಗುವುದಿಲ್ಲ, ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವ ಅಗತ್ಯವಿದೆ ಎಂದು ರಾಜ್ಯಪಾಲರು ಒತ್ತಿ ಹೇಳಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೊಂಗೈಗಾಂವ್, ಕೊಕ್ರಜಾರ್, ಮೊರಿಗಾಂವ್ ಮತ್ತು ಗೋಲಾಘಾಟ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬುಲೆಟಿನ್ ನಲ್ಲಿ ತಿಳಿಸಿದೆ. ಈ ವರ್ಷ ಈಶಾನ್ಯ ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 119 ಕ್ಕೆ ಏರಿದೆ. ಅವರಲ್ಲಿ 93 ಮಂದಿ ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದರೆ, 26 ಮಂದಿ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ.
ಜಿಲ್ಲಾಡಳಿತಗಳು 20 ಜಿಲ್ಲೆಗಳಲ್ಲಿ 456 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಅಲ್ಲಿ 47,213 ಜನರು ಆಶ್ರಯ ಪಡೆದಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ. ಅಸ್ಸಾಂನಾದ್ಯಂತ ಸುಮಾರು 1.19 ಲಕ್ಷ ಹೆಕ್ಟೇರ್ ಬೆಳೆ ಪ್ರದೇಶ ಹಾನಿಯಾಗಿದೆ ಎಂದೂ ವರದಿಯಾಗಿದೆ.
“ಪ್ರತಿವರ್ಷ ಪ್ರವಾಹ ಮತ್ತು ಅದರ ಪರಿಣಾಮವಾಗಿ ಭೂಮಿಯ ಮೇಲೆ ವ್ಯಾಪಕ ಸವೆತಕ್ಕೆ ಕಾರಣವಾಗುತ್ತದೆ, ಇದರಿಂದ ರಾಜ್ಯದ ಸಾಮಾಜಿಕ-ಆರ್ಥಿಕ ಸ್ಥಿತಿಗೆ ಹಾನಿಯಾಗುತ್ತದೆ. ಸಮಸ್ಯೆಗೆ ತಾತ್ಕಾಲಿಕವಾಗಿ ತೆಗೆದುಕೊಳ್ಳುವ ಪರಿಹಾರ ಸಾಕಾಗುವುದಿಲ್ಲ ಆದ್ದರಿಂದ, ಈ ದೀರ್ಘಕಾಲಿಕ ಸಮಸ್ಯೆಗೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರವನ್ನು ಕಂಡುಹಿಡಿಯಲು ಕೇಂದ್ರದ ಸಹಾಯಕ್ಕಾಗಿ ನಾನು ಶಿಫಾರಸು ಮಾಡುತ್ತೇನೆ” ಎಂದು ರಾಜ್ಯಪಾಲರು ಹೇಳಿದ್ದಾರೆ.