ಕಳೆದ ಫೆಬ್ರವರಿ ತಿಂಗಳಲ್ಲಷ್ಟೇ ʼಟ್ರಾನ್ಸ್ʼ (TRANCE) ಹೆಸರಿನ ಮಲಯಾಳಂ ಸಿನೆಮಾ ಬಿಡುಗಡೆಯಾಗಿತ್ತು. ಅನ್ವರ್ ರಶೀದ್ ನಿರ್ದೇಶನದ ಆ ಸಿನೆಮಾದಲ್ಲಿ ಫಹಾದ್ ಫಾಸಿಲ್ ಅವರದ್ದು ಲೀಡ್ ರೋಲ್. ಸಿನೆಮಾ ಕಥೆ ಹೀಗೆ ಸಾಗುತ್ತೆ.. ಬಾಲ್ಯದಿಂದ ಅನಾಥನಾಗಿ ಬೆಳೆಯುವ ನಾಯಕ ಅಪ್ಪಟ ನಾಸ್ತಿಕ. ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಆತ ಪಾಸ್ಟರ್ ಆಗಿ ಬದಲಾಗುತ್ತಾನೆ. ಮುಂದೆ ಈತನ ಸಾಮೂಹಿಕ ಪ್ರಾರ್ಥನೆಗೆ ಬರೋ ಮಂದಿ ಪಾಸ್ಟರ್ ಪ್ರಾರ್ಥಿಸಿದರೆ ಏಸು ಕ್ರಿಸ್ತ ಎಲ್ಲವೂ ಸರಿಪಡಿಸುತ್ತಾನೆ ಅನ್ನೋ ಭ್ರಮೆಗೆ ಒಳಗಾಗುತ್ತಾರೆ. ಅಂತೆಯೇ ಅದರಲ್ಲೊಬ್ಬ ಭಕ್ತ ಇದೇ ಪಾಸ್ಟರ್ ಹೇಳೋ ಎಣ್ಣೆ ಖರೀದಿಸಿ ಎಲ್ಲವನ್ನೂ ಏಸುವೇ ಸರಿಪಡಿಸುತ್ತಾನೆ ಅಂತಾ ಅತೀವ ಜ್ವರದಿಂದ ಬಳಲುವ ತನ್ನ ಮಗುವಿಗೆ ಹಚ್ಚುತ್ತಾನೆ. ಆದರೆ ದಿನಗಳು ಕಳೆದರೂ ಏಸು ಗುಣಪಡಿಸುತ್ತಾನೆ ಅನ್ನೋ ಪಾಸ್ಟರ್ ಮಾತಿಗೆ ಜೋತು ಬೀಳುತ್ತಾನೆ. ಯಾರೇ ಹೇಳಿದರೂ ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸುತ್ತಾನೆ. ಏಸು ಇದ್ದಾನೆ, ಅವನೇ ಗುಣಪಡಿಸುತ್ತಾನೆ ಅನ್ನೋದಾಗಿ ಬಲವಾಗಿ ನಂಬಿ ಕೂರುತ್ತಾನೆ. ಕೊನೆಗೊಂದು ದಿನ ಮಗು ಪ್ರಾಣ ಕಳೆದುಕೊಂಡರೂ, ಪಾಸ್ಟರ್ ಬಳಿಗೆ ಕೊಂಡೊಯ್ದು ಪ್ರಾಣ ಉಳಿಸಿ ಕೊಡುವಂತೆ ಕೇಳಿಕೊಳ್ಳುತ್ತಾನೆ. ಆತನ ಅತೀವ ಭಕ್ತಿ ಕಂಡು ಪಾಸ್ಟರ್ ಆಘಾತಕ್ಕೊಳಗಾಗುತ್ತಾನೆ. ಸತ್ಯ ಹೇಳಲೇಬೇಕಾದ ಒತ್ತಡಕ್ಕೆ ಒಳಗಾಗುತ್ತಾನೆ. ಆ ಸಿನೆಮಾದಲ್ಲಿ ಒಂದಿಷ್ಟು ಹೆಚ್ಚುವರಿ ಕಥೆಗಳಿದ್ದರೂ ಸಿನೆಮಾಂತ್ಯಕ್ಕೆ ಮಗುವಿನ ಸಾವು ಅನ್ನೋದು ಟ್ವಿಸ್ಟ್ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತೆ. ಒಟ್ಟಾರೆಯಾಗಿ ಜನರ ಭಾವನೆ ಜೊತೆ ಚೆಲ್ಲಾಟ ಆಡುವ ಶ್ರೀಮಂತರು, ಧರ್ಮದ ಹೆಸರಲ್ಲಿ ಮರಳು ಮಾಡುವ ಕಥೆ ಒಂದೆಡೆಯಾದರೆ, ಅದೇ ಇನ್ನೊಂದೆಡೆ ಏಸುಕ್ರಿಸ್ತನೇ ಬಂದು ಗುಣಪಡಿಸುತ್ತಾರೆ ಅನ್ನೋ ಆ ಹುಚ್ಚು ನಂಬಿಕೆಯೇ ಭಕ್ತನೊಬ್ಬನ ಕರುಳಕುಡಿಯ ಪ್ರಾಣ ತೆಗೆಯುತ್ತೆ.
ಸದ್ಯ ಭಾರತದಲ್ಲಿ ಇಂತಹ ಪ್ರಶ್ನೆ ಮುಸ್ಲಿಮ್ ಸಮುದಾಯ ಎದುರಿಸುವಂತಾಗಿದೆ. ದೆಹಲಿಯಲ್ಲಿ ಕ್ವಾರೆಂಟೈನ್‌ನಲ್ಲಿರುವ ತಬ್ಲೀಗ್ ಜಮಾಅತ್ ಮುಖಂಡರೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ವೈದ್ಯಕೀಯ ಸಿಬ್ಬಂದಿಗಳ ಮೇಲೆಯೇ ಉಗುಳಿ ಬಿಟ್ಟರು, ಅಶ್ಲೀಲವಾಗಿ ವರ್ತಿಸಿದರು, ಜೊತೆಗೆ ತಬ್ಲೀಗ್ ಮುಖಂಡರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ವೀಡಿಯೋ ಕೂಡಾ ವೈರಲ್ ಆಗಿತ್ತು. ಈ ಬಗ್ಗೆ ದೂರುಗಳೂ ದಾಖಲಾಗಿವೆ. ಇದರ ಜೊತೆಗೆ ತೆಲಂಗಾಣದ ಆಸ್ಪತ್ರೆಯಲ್ಲಿ ಕ್ವಾರೆಂಟೈನ್‌ನಲ್ಲಿರುವ ಶಂಕಿತ ಕರೋನಾ ಸೋಂಕಿತರು ಸಾಮೂಹಿಕ ನಮಾಝ್ ಮಾಡಿರುವ ಫೋಟೋಗಳು ಕೂಡಾ ಹೊರಪ್ರಪಂಚದ ಕಣ್ಣಿಗೆ ಬಿದ್ದಿವೆ. ಇಷ್ಟಾಗುತ್ತಲೇ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಅನಗತ್ಯ ಚರ್ಚೆಗಳು ಆರಂಭವಾಗಿದೆ. ಅದೆಲ್ಲಕ್ಕೂ ಜಾಸ್ತಿಯಾಗಿ ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಇಲ್ಲೆಲ್ಲ ಸಾಮೂಹಿಕ ನಮಾಝ್‌ಗೆ ಹೋಗಿ ಮುಸ್ಲಿಮರು ಲಾಕ್‌ಡೌನ್ ಉಲ್ಲಂಘಿಸಿದ ಕೇಸು ಜಡಿಸಿಕೊಂಡಿದ್ದಾರೆ. ದೇಶದ ಪರಿಸ್ಥಿತಿ ಸಂದಿಗ್ಧತೆಯಲ್ಲಿದ್ದರೂ ʼಇವರು ಮಾತ್ರ ಯಾಕೆ ಹೀಗೆ?ʼ ಅನ್ನೋದಾಗಿ ಮಾಧ್ಯಮಗಳು ಪ್ರಶ್ನಿಸತೊಡಗಿದ್ದಾವೆ. ಮೊದಲೇ ʼಇಸ್ಲಾಮೋಫೋಬಿಯಾʼ ಹರಡುವ ಮಾಧ್ಯಮಗಳು ಇದನ್ನೇ ಮುಂದಿಟ್ಟುಕೊಂಡು, ದೇಶದಲ್ಲಿ ರೋಗ ಹೆಚ್ಚಾಗಲು ಇವರೇ ಕಾರಣ ಅನ್ನೋದಾಗಿ ಗೂಬೆ ಕೂರಿಸುತ್ತಿದೆ.
Also Read: ಉದ್ದನೆ ದಾಡಿ, ಪೈಜಾಮ ಮತ್ತು ಮಾಧ್ಯಮಗಳ ʼಇಸ್ಲಾಮೋಫೋಬಿಯಾʼ!
ಅದಕ್ಕೂ ಜಾಸ್ತಿಯಾಗಿ ಲಾಕ್‌ಡೌನ್ ನಿಯಮವಿದ್ದರೂ ನಮಾಝ್ ಮಾಡುವ ಇವರ ಉದ್ಧಟತನ ಪ್ರಶ್ನಿಸಲೇಬೇಕು. ಎಲ್ಲಕ್ಕೂ ಅಲ್ಲಾಹನೇ ಪರಿಹಾರ ನೀಡುತ್ತಾನೆ ಅನ್ನೋದಾಗಿ ಇವರೇನಾದರೂ ಅಂದ್ಕೊಂಡಿದ್ದರೆ ಇವರ ಮೂರ್ಖತನಕ್ಕೆ ಜಿಗುಪ್ಸೆ ಪಟ್ಟುಕೊಳ್ಳಲೇಬೇಕು. ಜಾಲತಾಣಗಳಲ್ಲಿ ಕಾಣಸಿಗುವ ಕೆಲವೊಂದು ಸತ್ಯವೋ, ಅಸತ್ಯವೋ ತಿಳಿಯದ ಪೋಸ್ಟ್‌ಗಳಲ್ಲಿ ಇಸ್ಲಾಮ್‌ನಲ್ಲಿ ವೈದ್ಯಕೀಯ ಪರೀಕ್ಷೆ ಇಲ್ಲ, ಶುಕ್ರವಾರದ ಜುಮಾ ನಮಾಝ್ ಬಿಡುವಂತಿಲ್ಲ ಅನ್ನೋ ಗೊಂದಲಕಾರಿ ಹೇಳಿಕೆಗಳು ಸಮಾಜದ ನಡುವೆ ಇನ್ನಷ್ಟು ವಿಷಬೀಜ ಬಿತ್ತಿದೆ.
ಅಷ್ಟಕ್ಕೂ ಇಸ್ಲಾಮ್ ಅನುಯಾಯಿಗಳು ಅಲ್ಲಾಹನೇ ಖುದ್ದು ಸಹಾಯಕ್ಕೆ ಬರುತ್ತಾನೆ ಅನ್ನೋ ಭ್ರಮೆಯಲ್ಲಿದೆಯಾ? ಅನ್ನೋ ಪ್ರಶ್ನೆ ಸಹಜವಾದುದು. ಅದರಲ್ಲೂ ತಬ್ಲೀಗ್, ಸಲಫಿ ಪಂಥಗಳಂತೂ ಅತಿಯಾದ ಮೂಲಭೂತವಾದ ತುಂಬಿಕೊಂಡಿದ್ದು, ಅಲ್ಲಾಹನಲ್ಲದೇ ಇನ್ನೊಬ್ಬ ಆರಾಧಕನಿಲ್ಲ ಅನ್ನೋ ಕಲ್ಪನೆಗೆ ಸೀಮಿತವಾದ ಪಂಥ. ಇಂತಹ ಪಂಥದ ಅನುಯಾಯಿಗಳು ಅಲ್ಲಾಹನೇ ಬಂದು ಗುಣಪಡಿಸುತ್ತಾನೆ, ಸರಿಪಡಿಸುತ್ತಾನೆ ಅನ್ನೋ ಹುಚ್ಚು ಭ್ರಮೆಗೆ ಇಳಿದಿದೆಯಾ? ಅನ್ನೋ ಈ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇಡೀ ಭಾರತೀಯ ಮುಸ್ಲಿಂ ಸಮುದಾಯ ಇದನ್ನ ಎದುರು ನೋಡುತ್ತಿದೆ. ಮಾಧ್ಯಮಗಳ ಅನಗತ್ಯ ಪ್ರಶ್ನೆಗಳು ಮುಸ್ಲಿಂ ಸಮುದಾಯದ ನಡುವೆ ಹೊಸ ಬಗೆಯ ಚರ್ಚೆ ಹುಟ್ಟು ಹಾಕಿದೆ. ಪ್ರಗತಿಪರ ಮುಸ್ಲಿಮರಂತೂ ಭಾರತೀಯ ಮುಸ್ಲಿಮರಿಗೆ ಇದು ಬದಲಾವಣೆಗೆ ಸಕಾಲ ಅಂತ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಪ್ರೇರಿತ ʼಕರೋನಾ ಜಿಹಾದ್ʼ ಇಂತಹ ಸಂದಿಗ್ಧ ಸ್ಥಿತಿಯಲ್ಲೂ ಇಡೀ ಭಾರತೀಯ ಮುಸ್ಲಿಂ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಏನೆಂದೂ ಉತ್ತರಿಸಬೇಕು ಅನ್ನೋ ಗೊಂದಲದಲ್ಲಿದೆ.
ಹಾಗಿದ್ರೆ ಇಸ್ಲಾಮ್ ಧರ್ಮ ನಿಜಕ್ಕೂ ವೈದ್ಯಲೋಕ, ಸರಕಾರ ಆಜ್ಞೆಗಳನ್ನು ಪಾಲಿಸುವಂತೆ ತಿಳಿಸುತ್ತಿಲ್ಲವೇ ಅನ್ನೋದರ ಕುರಿತು ಹೆಚ್ಚೆಚ್ಚು ಕುತೂಹಲಗಳು ಹುಟ್ಟು ಹಾಕಿವೆ. ಈ ಕುರಿತು ʼಪ್ರತಿಧ್ವನಿʼ ಹಿರಿಯ ಪತ್ರಕರ್ತ ಎಕೆ ಕುಕ್ಕಿಲ ಅವರನ್ನು ಸಂಪರ್ಕಿಸಿದಾಗ ಅವರು ಮುಂದಿಟ್ಟ ವಿಚಾರಧಾರೆ ಇದು. “ ಅಲ್ಲಾಹನ ಆರಾಧನೆ ಜೊತೆಗೆ ತನ್ನ ರಕ್ಷಣೆಗೆ ಬೇಕಾಗಿ ಏನೆಲ್ಲ ಮಾಡಬೇಕು ಅದನ್ನ ಮುಸ್ಲಿಮನೊಬ್ಬ ಮಾಡಲೇಬೇಕು. ಪ್ರವಾದಿ ಮುಹಮ್ಮದರ ಕಾಲದಲ್ಲಿ ಒಂಟೆಯಲ್ಲಿ ಬಂದ ಯಾತ್ರಿಕನೊಬ್ಬ ನಮಾಝ್‌ಗೆಂದು ನೇರವಾಗಿ ಮಸೀದಿ ಒಳಗಡೆ ನುಗ್ಗುತ್ತಾನೆ. ಅವರನ್ನು ತಡೆದು ಪ್ರವಾದಿ ಮುಹಮ್ಮದರು, ʼಮೊದಲು ನಿನ್ನ ಒಂಟೆಯನ್ನು ಕಟ್ಟಿ ಹಾಕುʼ ಎನ್ನುತ್ತಾರೆ. ಅದಕ್ಕೆ ಆತ ʼಅದನ್ನು ಅಲ್ಲಾಹನು ನೋಡಿಕೊಳ್ಳುತ್ತಾನೆʼ ಅನ್ನೋದಾಗಿ ಪ್ರವಾದಿಯವರಿಗೆ ಉತ್ತರಿಸುತ್ತಾನೆ. ಆತನಿಗೆ ಉತ್ತರ ನೀಡುವ ಪ್ರವಾದಿಯವರು, ಅಲ್ಲಾಹನು ರಕ್ಷಿಸೋದು ಬೇರೆ ವಿಚಾರ, ಅದರ ರಕ್ಷಣೆ ಈಗ ನಿನ್ನ ಮೇಲೂ ಇದೆ. ನಿನ್ನಿಂದಾದಷ್ಟು ರಕ್ಷಣೆಯ ಜವಾಬ್ದಾರಿಯನ್ನ ನೀನೇ ನಿರ್ವಹಿಸಬೇಕು, ಹೊರತಾಗಿ ಅಲ್ಲಾಹನು ಮಾಡುತ್ತಾನೆ ಅನ್ನೋ ಭ್ರಮೆಗೊಳಗಾಗಬಾರದು” ಅನ್ನೋ ಸಂದೇಶ ನೀಡುತ್ತಾರೆ. ಈ ಪುಟ್ಟ ಚರಿತ್ರೆಯನ್ನು ಉಲ್ಲೇಖಿಸುವ ಎಕೆ ಕುಕ್ಕಿಲ, “ಒಂದು ವೇಳೆ ಮುಸ್ಲಿಂ ಸಮುದಾಯ ಏನೇ ರೋಗ ಬಂದರೂ, ಅಲ್ಲಾಹನು ರಕ್ಷಿಸುತ್ತಾನೆ ಅನ್ನೋ ಭ್ರಮೆಯಲ್ಲಿದ್ದರೆ ಅದರಿಂದ ಹೊರಬರಬೇಕಿದೆ ಎನ್ನುತ್ತಾರೆ”.
ಅಲ್ಲದೇ ಮಕ್ಕಾ, ಮದೀನಾದ ಮಸೀದಿಗಳೇ ಬಂದ್ ಆಗಿರಬೇಕಾದರೆ ಊರಿನ ಮಸೀದಿಗಳಲ್ಲಿ ನಮಾಝ್ ಬಂದ್ ಮಾಡದೇ ಇರುವುದರಲ್ಲಿ ಅರ್ಥವಿಲ್ಲ. ನಮಾಝ್ ಅನ್ನೋದು ಕಡ್ಡಾಯ, ಆದರೆ ಮಸೀದಿಯಲ್ಲಿಯೇ ಮಾಡಿ ಮುಗಿಸಬೇಕು ಅನ್ನೋ ಕಡ್ಡಾಯವಿಲ್ಲ ಎನ್ನುತ್ತಾರೆ. ಇನ್ನು ಹಿಜಾಮಾ ಅನ್ನೋ ಚಿಕಿತ್ಸೆ ಪ್ರವಾದಿ ಮುಹಮ್ಮದರ ಕಾಲಕ್ಕಿಂತಲೂ ಮುಂಚಿತವಾಗಿಯೇ ಇತ್ತು. ಅದನ್ನು ಎಲ್ಲೂ ಇಸ್ಲಾಮ್ ನಿಷೇಧಿಸಿಲ್ಲ ಎಂದು ತಮ್ಮ ಅಭಿಪ್ರಾಯ ಮುಂದಿಟ್ಟರು.
ಇನ್ನು ರಾಜ್ಯ ಸರಕಾರ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸುತ್ತಲೇ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯಿಂದ ಮಾರ್ಚ್ 31 ರವರೆಗೆ ಸಾಮೂಹಿಕ ಪ್ರಾರ್ಥನೆ ನಿಲ್ಲಿಸುವಂತೆ ಎಲ್ಲಾ ಮಸೀದಿಗಳಿಗೆ ಸುತ್ತೋಲೆ ಹೊರಡಿಸಿತ್ತು. ಮರುಕ್ಷಣದಲ್ಲೇ ಬಹುತೇಕ ಮಸೀದಿಗಳು ಕಾರ್ಯ ಸ್ಥಗಿತಗೊಳಿಸಿದ್ದವು. ಮುಂದುವರಿದ ಏಪ್ರಿಲ್ 14 ನೇ ತಾರೀಕಿನವರೆಗೆ ಲಾಕ್‌ಡೌನ್ ಮುಂದುವರೆದಾಗ ರಾಜ್ಯ ಸರಕಾರದ ಮಕ್ಫ್ ಮಂಡಳಿ ಮತ್ತೊಂದು ಸುತ್ತೋಲೆ ಹೊರಡಿಸಿದೆ. ಆದರೆ ಕೆಲವೆಡೆ ಸಾಮೂಹಿಕ ನಮಾಝ್ ಹಾಗೂ ಕಾನೂನು, ಸುವ್ಯವಸ್ಥೆ ಸಮಸ್ಯೆ ಎದುರಾಗಿದೆ. ಈ ಕುರಿತು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿರುವ ಎಬಿ ಇಬ್ರಾಹಿಂ ʼಪ್ರತಿಧ್ವನಿʼ ಜೊತೆ ಮಾತನಾಡಿ, ರಾಜ್ಯದಲ್ಲಿ 20 ಸಾವಿರ ಮಸೀದಿಗಳಿವೆ. ಅದರಲ್ಲಿ ಶೇಕಡಾ 99.99 ರಷ್ಟು ಮಸೀದಿಗಳು ನಿಯಮವನ್ನು ಪಾಲಿಸಿದೆ. ಲಾಕ್‌ಡೌನ್ ನಿಯಮ ಮೀರಿ ಯಾರಾದರೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರೆ ಆಯಾಯ ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ. ಈ ಬಗ್ಗೆ ಅನಗತ್ಯ ಗೊಂದಲ ಬೇಡವೆಂದು ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ವಕ್ಫ್ ಬೋರ್ಡ್ ಮಂಡಳಿ ಸದಸ್ಯ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಅವರನ್ನು ʼಪ್ರತಿಧ್ವನಿʼ ಮಾತನಾಡಿಸಿದಾಗ , “ಈ ರೀತಿಯ ಗೊಂದಲಕ್ಕೆ ಮುಸ್ಲಿಂ ಸಮುದಾಯದಲ್ಲಿ ಇರುವ ನಾಯಕತ್ವದ ಕೊರತೆಯೇ ಕಾರಣ. ಕೇರಳ ಮಾದರಿಯ ನಾಯಕತ್ವ ಕರ್ನಾಟಕದಲ್ಲಿಲ್ಲ. ಫತ್ವಾಗಳನ್ನು ಎಲ್ಲರೂ ಒಪ್ಪುವ ಮನೋಸ್ಥಿತಿಯೂ ಹೊಂದಿಲ್ಲ. ಆದರೆ ಕೆಲವೊಂದು ಮಸೀದಿಗಳಲ್ಲಿ ನಡೆದಿರುವ ಕಾನೂನು&ಸುವ್ಯವಸ್ಥೆ ಸಮಸ್ಯೆ ಅಲ್ಲಿನ ಸ್ಥಳೀಯ ವಿಷಯಗಳೂ ಕಾರಣವಾಗಿದೆ ಅನ್ನೋ ಮಾಹಿತಿಯಿದೆ. ಈ ಬಗ್ಗೆ ಸಮರ್ಪಕ ತನಿಖೆಯಾದ ಬಳಿಕವಷ್ಟೇ ಮಾಹಿತಿ ಸಿಗಲಿದೆ” ಎಂದರು. ಇನ್ನು ತಬ್ಲೀಗ್ ಜಮಾಅತ್ ಸದಸ್ಯರು ಅತಿರೇಕದ ವರ್ತನೆ ನಡೆಸಿದ್ದರೆ ತಪ್ಪು. ಆದರೆ ಪ್ರವಾದಿ ಮುಹಮ್ಮದರ ನೈಜ ಅನುಯಾಯಿಗಳು ಯಾವತ್ತೂ ಉಗುಳುವವರಲ್ಲ, ಯಾವುದೇ ಸಮುದಾಯದವರನ್ನು ಕಂಡರೂ ಮುಗುಳುನಗು ನೀಡುವವರಾಗಿರಬೇಕೆನ್ನವುದೇ ಪ್ರವಾದಿ ಆಶಯ. ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ಪರಾಮರ್ಶೆ ಆಗಬೇಕೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಅಡ್ವಕೇಟ್ ಪಿಎ ಹಮೀದ್ ಪಡುಬಿದ್ರಿ ಅವರು ಈ ವಿಚಾರದಲ್ಲಿ ಇನ್ನಷ್ಟು ಭಿನ್ನವಾಗಿ ತಮ್ಮ ವಾದ ಮುಂದಿಡುತ್ತಾರೆ. “ ಒಂದು ವೇಳೆ ತಬ್ಲೀಗ್ ಜಮಾಅತ್ ನವರು ಉಗುಳಿದ್ದಾಗಲೀ, ಅಸಭ್ಯವಾಗಿ ವರ್ತಿಸಿದ್ದಾಗಲೀ ನಡೆದಿದ್ದರೆ ಅದು ಅಕ್ಷಮ್ಯ. ಆದರೆ ಇಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಹಾಗೂ ಭಾರತದ ಮಾಧ್ಯಮಗಳು ಮುಸ್ಲಿಂ ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ. ಕರೋನಾ ತಡೆಗಟ್ಟಲು ವಿಫಲವಾಗಿರುವ ಸರಕಾರ ಇಂತಹ ಪ್ರಯತ್ನಕ್ಕೆ ಕೈ ಹಾಕಿದೆ. ಎಲ್ಲೂ ಕಾಣಿಸಿಕೊಳ್ಳದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದರ ಹಿಂದೆ ಇದ್ದು ಗೇಮ್ ಪ್ಲ್ಯಾನ್ ರಚಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದಾಗಲೇ ಅಮರಿಕಾದಲ್ಲಿ ಅದಾಗಲೇ 20 ಕ್ಕೂ ಅಧಿಕ ಕೋವಿಡ್-19 ಕೇಸುಗಳು ದೃಢಪಟ್ಟಿದ್ದವು. ಆಗಿದ್ದ ಮೇಲೆ ಅವರಿಂದಾಗಿಯೇ ಕರೋನಾ ಬಂದಿದೆ ಅನ್ನೋದನ್ನು ಹೇಳಲು ಸಾಧ್ಯವಿಲ್ಲ ಏಕೆ? ಎಂದು ಪ್ರಶ್ನಿಸುವ ಅವರು, ದೇಶದಲ್ಲಿ ಕರೋನಾ ವೈರಸ್‌ಗಿಂತಲೂ ಭಯಾನಕವಾಗಿ ಕಮ್ಯುನಲ್ ವೈರಸ್ ಅತೀ ವೇಗದಲ್ಲಿ ಹರಡುತ್ತಿದ್ದು ಇದು ಅತ್ಯಂಕ ಆತಂಕಕಾರಿ ವಿಚಾರ. ಇನ್ನು ಸರಕಾರದ ಆದೇಶ ಅನ್ನೋದು ಅದು ಮೋದಿ ಅಥವಾ ಬಿಜೆಪಿ ಆದೇಶ ಎಂದು ಪಾಲಿಸದೇ ತಮ್ಮ ಅಸ್ತಿತ್ವಕ್ಕೆ ತೊಡಕಾಗದಿದ್ದಲ್ಲಿ ಎಲ್ಲರೂ ಪಾಲಿಸಬೇಕು. ಸರಕಾರ ನಿಯಮ ಮೀರಿ ಸಾಮೂಹಿಕ ಪ್ರಾರ್ಥನೆಗೆ ಇಸ್ಲಾಮ್ ಸಮ್ಮತಿಸುವುದಿಲ್ಲ. ಆದರೆ ಸರಕಾರ ತಮ್ಮ ತಪ್ಪು ಮುಚ್ಚಿ ಹಾಕಲು ತಬ್ಲೀಗ್ ಜಮಾಅತ್ ಸದಸ್ಯರನ್ನು ಎತ್ತಿಕಟ್ಟುತ್ತಿದೆ ಎಂದರು.
ಒಟ್ಟಿನಲ್ಲಿ ಭಾರತೀಯ ಬಹುತೇಕ ಮುಸ್ಲಿಂ ಸಮುದಾಯ ಸರಕಾರ ಆದೇಶ ಪಾಲಿಸುತ್ತಿದ್ದರೂ, ಅದರ ಮಧ್ಯೆ ನಡೆಯುತ್ತಿರುವ ಕೆಲವೊಂದು ಘಟನೆಗಳು ಮುಸ್ಲಿಂ ಸಮುದಾಯದ ಮೂಲಭೂತವಾದದವನ್ನು ಪ್ರಶ್ನೆ ಮಾಡುತ್ತಲೇ ಇದೆ. ಆದರೆ ಅಲ್ಲಾಹನೇ ಬಂದು ರಕ್ಷಿಸುತ್ತಾನೆ, ಸರಕಾರದ ನಿಯಮ ಮೀರಬಹುದು ಅನ್ನೋದಾಗಿ ಯಾವೊಬ್ಬ ವಿದ್ವಾಂಸನು ಅಭಿಪ್ರಾಯ ಪಡುತ್ತಿಲ್ಲ. ಅಷ್ಟಾಗಿಯೂ ಮುಸ್ಲಿಂ ಸಮುದಾಯ ಇಂತಹ ಭ್ರಮೆಯಲ್ಲಿದ್ದರೆ ಹೊರಬರಬೇಕಾದ ಅನಿವಾರ್ಯತೆಯಿದೆ ಅನ್ನೋದು ಸ್ಪಷ್ಟ.