ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಾಸಗಿ ಸುದ್ದಿ ವಾಹಿನಿ ಸಂದರ್ಶನದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಆಡಿದ ಮಾತುಗಳು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಧರ್ಮವನ್ನು ಮತ್ತು ಕೋಮುವಾದವನ್ನು ರಾಜಕೀಕರಣಗೊಳಿಸಿ ಅದರಿಂದ ಲಾಭ ಪಡೆಯುವ ಪಕ್ಷ ಎಂಬ ಹಣೆಪಟ್ಟಿ ಹೊತ್ತ ಪಕ್ಷದ ಮುಖ್ಯಮಂತ್ರಿ ಅವರು ಹೇಳಿದ ಮಾತು ಸಹಜವಾಗಿ ಆ ಪಕ್ಷದ ನಾಯಕರಲ್ಲಿ ಮತ್ತು ಜನರಲ್ಲಿ ಕುತೂಹಲ ಕೆರಳಿಸಿರುವುದು ಸತ್ಯ. ಹಾಗಾದರೆ ಅವರು ಹೇಳಿರುವ “ಒಂದೆರಡು ಘಟನೆಗಳನ್ನು ಉಲ್ಲೇಖಿಸಿ ಮುಸ್ಲಿಮರ ವಿರುದ್ದ ಆರೋಪ ಮಾಡುವವರ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುವುದು” ಎಂಬುದರ ಹಿಂದಿನ ಮರ್ಮವೇನು?
ಅಷ್ಟು ಸುಲಭವಾಗಿ ಇದನ್ನು ಒಂದೇ ವಾಕ್ಯದಲ್ಲಿ ವಿಶ್ಲೇಷಿಸಿ ಬಿಡಲು ಸಾಧ್ಯವಿಲ್ಲ. ಕಾರಣ ಲಿಂಗಾಯಿತ ಸಮುದಾಯದ ಬಿಎಸ್ ಯಡಿಯೂರಪ್ಪ ಬಿಜೆಪಿಗೆ ರಾಜ್ಯದಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲಿಯೇ ಭದ್ರ ಬುನಾದಿ ಹಾಕಿಕೊಟ್ಟವರು. ಪಕ್ಷ ಸಂಘಟನೆಗಾಗಿ ಹಗಲಿರುಳು ಶ್ರಮಿಸಿದವರು. ಒಂದೊಂದು ಸೀಟಿಗಾಗಿ ಪರದಾಡುತ್ತಿದ್ದ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದ ಕೀರ್ತಿ ಅದೇನಿದ್ದರೂ ಬಿಎಸ್ವೈಗೆ ಹೊರತು ಅದ್ಯಾವ ಅಮಿತ್ ಶಾ ಗೂ, ನರೇಂದ್ರ ಮೋದಿಗೂ ಸಲ್ಲದು.
ಬಿಎಸ್ವೈ ಸಂಘಪರಿವಾರದಿಂದ ಬಂದವರಾದರೂ ಎಲ್ಲೂ ಕೋಮು ರಾಜಕಾರಣ ನಡೆಸಿದವರಲ್ಲ, ಸ್ವಾಭಿಮಾನ ಬಿಟ್ಟುಕೊಟ್ಟವರಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪಕ್ಷವನ್ನೇ ತೊರೆದು ಹೋದವರು ಕೂಡಾ. ಆದರೆ ಅವರು ಆಡಿರುವ ಮಾತು ಈಗ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಂಘ ಪರಿವಾರವೇ ಬಿಎಸ್ವೈ ಬೆನ್ನಿಗೆ ನಿಂತಿದ್ದು ನೋಡಿ ಬಿಜೆಪಿ ಕಾರ್ಯಕರ್ತರಲ್ಲಿ ಇನ್ನಷ್ಟು ಆಕ್ರೋಶ ವ್ಯಕ್ತವಾಗಿದೆ. ಮುಸ್ಲಿಮರ ಪರ ಧೋರಣೆ ತಳೆದಿದ್ದಾರೆ ಅನ್ನೋ ಅವರೆಲ್ಲ ಬಿಎಸ್ವೈ ಆಡಿರುವ ಮಾತಿನ ಹಿಂದಿರುವ ಒಂದಿಷ್ಟು ಒಳಾರ್ಥಗಳನ್ನ ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
Also Read: ಉದ್ದನೆ ದಾಡಿ, ಪೈಜಾಮ ಮತ್ತು ಮಾಧ್ಯಮಗಳ ʼಇಸ್ಲಾಮೋಫೋಬಿಯಾʼ!
ಹಾಗಾದರೆ ಬಿಎಸ್ ಯಡಿಯೂರಪ್ಪನವರು ಆಡಿರುವ ಮಾತಿನ ಹಿಂದಿರುವ ಆ ಉದ್ದೇಶವಾದರೂ ಏನು ಅನ್ನೋದನ್ನು ಒಂದೊಂದಾಗಿ ನೋಡೋದಾದರೆ..
ಪ್ರಾಯಶಃ ಬಿಎಸ್ ಯಡಿಯೂರಪ್ಪನವರು ರಾಜಕೀಯ ಜೀವನದ ಕೊನೆಗಾಲದಲ್ಲಿದ್ದಾರೆ. ಇದುವರೆಗೂ ಧರ್ಮ, ಜಾತಿ ಹೆಸರಲ್ಲಿ ಅಷ್ಟಾಗಿ ಕಳಂಕ ಅಂಟಿಸಿಕೊಂಡವರಲ್ಲ. ಸದಾ ಅಭಿವೃದ್ಧಿ ಮಂತ್ರವನ್ನೇ ಹೇಳುತ್ತಾ ಬಂದ ನಾಯಕರವರು. ಹಾಗಾಗಿ ರಾಜಕೀಯ ನಿವೃತ್ತಿ(?) ಘೋಷಿಸಬಹುದಾದ ಈ ಕಾಲಘಟ್ಟದಲ್ಲಿ ಸದಾ ಜನಮಾನಸದಲ್ಲಿ ತಾನೋರ್ವ ಜನನಾಯಕನಾಗಿರಬೇಕೆನ್ನುವ ಅಪೇಕ್ಷೆ ಇರಬಹುದು.
ಜನನಾಯಕನಾಗಿ ನಿವೃತ್ತಿ ಜೀವನದಲ್ಲಿ ಅವರಿಗೆ ಏನಾಗ್ಬೇಕು ಅಂಥಾ ನೀವು ಪ್ರಶ್ನೆ ಮಾಡೋದಾದರೆ, ಸಹಜವಾಗಿಯೇ ಅದು ಅವರ ಪುತ್ರ ಬಿವೈ ವಿಜಯೇಂದ್ರರತ್ತ ಕಣ್ಣು ಹೊರಳುವಂತೆ ಮಾಡುತ್ತವೆ. ಯಾಕೆಂದರೆ ತಂದೆ ಸ್ಥಾನ ತುಂಬಲು ಪುತ್ರ ವಿಜಯೇಂದ್ರ ಕಣಕ್ಕಳಿಯುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದೆ. ಇದಕ್ಕಾಗಿ ಈಗಲೇ ಒಂದು ವೇದಿಕೆ ನಿರ್ಮಿಸತೊಡಗಿದ್ದಾರೆ. ಜಾತಿ, ಮತ ಮರೆತು ಎಲ್ಲರೂ ತನ್ನ ಪುತ್ರನನ್ನು ಬೆಂಬಲಿಸಬೇಕೆನ್ನುವ ಮಹಾತ್ವಾಕಾಂಕ್ಷೆಯ ಯೋಚನೆಯೂ ಬಿಎಸ್ವೈ ಹೇಳಿಕೆ ಹಿಂದೆ ಅಡಗಿದೆ ಅನ್ನೋದು ಸ್ಪಷ್ಟ.
Also Read: ಅಲ್ಲಾಹನೇ ಬಂದು ಗುಣಪಡಿಸುತ್ತಾನೆ ಅನ್ನೋ ಭ್ರಮೆಯಲ್ಲಿದೆಯೇ ʼಮುಸ್ಲಿಂ ಸಮುದಾಯʼ!?
ಬಿಜೆಪಿ ಪಕ್ಷದ ನಡುವೆಯೇ ಬಿವೈ ವಿಜಯೇಂದ್ರ ಸೂಪರ್ ಸಿಎಂ ಅನ್ನೋ ಮಾತಿದ್ದರೂ, ಅದೆಲ್ಲವನ್ನು ಮೀರಿ ಒಬ್ಬ ನಾಯಕನಾಗಿ ಗುರುತಿಸಿಕೊಳ್ಳಲು ವಿಜಯೇಂದ್ರನಿಗೆ ಸದ್ಯದ ಮಟ್ಟಿಗೆ ಸಾಧ್ಯವಾಗಿಲ್ಲ. ಆದ್ದರಿಂದ ತಂದೆಯ ವರ್ಚಸ್ಸಿನಿಂದಲೇ ವಿಜಯೇಂದ್ರ ಕೂಡಾ ಬೆಳೆಯಬೇಕಿದೆ, ಓರ್ವ ನಾಯಕನಾಗಿ ರಾಜಕೀಯದಲ್ಲಿ ಗುರುತಿಸಿಕೊಳ್ಳಬೇಕಿದೆ. ಆದ್ದರಿಂದ ಬಿಎಸ್ವೈ ತಾನು ರಾಜಕೀಯದಿಂದ ನಿವೃತ್ತಿಗೊಳ್ಳುವ ಮುಂಚೆನೇ ವಿಜಯೇಂದ್ರನಿಗೊಂದು ಪ್ಲ್ಯಾಟ್ ಫಾರಂ ರಚಿಸಿಟ್ಟಿದ್ದಾರೆ.
ಇನ್ನು ಕೇಂದ್ರ ಸರಕಾರದಿಂದ ಹೆಚ್ಚಿನ ಸಹಾಯಹಸ್ತದ ನಿರೀಕ್ಷೆ ಸ್ವತಃ ಬಿಎಸ್ವೈ ಅವರಿಗೂ ಇಲ್ಲ. ಆದ್ದರಿಂದ ಕೇಂದ್ರ ಸರಕಾರದ ಬೆಂಕಿ ಉಗುಳುವ ನಾಯಕರ ಮಧ್ಯೆ ಬಿಎಸ್ವೈ ತಾನೊಬ್ಬ ಡಿಫರೆಂಟ್ ಅನ್ನೋದು ತೋರಿಸಿಕೊಟ್ಟಿದ್ದಾರೆ. ಪ್ರಧಾನಿ ಮೋದಿ ನೀಡಬೇಕಾಗಿದ್ದ ಅಭಯವನ್ನ ಅಲ್ಪಸಂಖ್ಯಾತರಿಗೆ ಬಿಎಸ್ವೈ ನೀಡುವ ಮೂಲಕ ಅಲ್ಪಸಂಖ್ಯಾತ ಸಮುದಾಯದ ಪ್ರೀತಿಗಳಿಸುವ ಪ್ರಯತ್ನ ನಡೆಸಿದ್ದಾರೆ. ಯಾಕೆಂದರೆ ಸದ್ಯದ ಸ್ಥಿತಿಯಲ್ಲಿ ರಾಜ್ಯ ಸರಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೋಮು ಉದ್ವಿಗ್ನ ಸ್ಥಿತಿ ಉಂಟಾದರೆ ದೊಡ್ಡ ಬೆಲೆ ತೆರಬೇಕಾದೀತು ಅನ್ನೋದು ಸ್ಪಷ್ಟವಾಗಿ ಬಿಎಸ್ವೈ ಗೆ ತಿಳಿದಿದೆ. ಆದ್ದರಿಂದ ಅಲ್ಪಸಂಖ್ಯಾತರ ಪ್ರೀತಿಯ ಮೂಲಕ ಸಮಾಜದಲ್ಲಿ ಶಾಂತಿ ಹಾಗೂ ಕೋಮುವಾದಿಗಳಿಗೆ ಕಡಿವಾಣ ಹಾಕುವ ಉದ್ದೇಶವನ್ನ ರಾಜ್ಯ ಸರಕಾರ ಹೊಂದಿದೆ.
Also Read: ಕರೋನಾ ಸೋಂಕನ್ನೂ ಕೋಮುವಾದಿ ಅಜೆಂಡಾದ ಅಸ್ತ್ರ ಮಾಡಿಕೊಂಡ ಮಾಧ್ಯಮ!
ಇನ್ನು ಪ್ರಮುಖವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಸಿಎಂ ಸೀಟಿನ ಮೇಲೆ ಕಣ್ಣಿಟ್ಟಿರುವ ರಾಜ್ಯದವರೇ ಆದ ಬಿ ಎಲ್ ಸಂತೋಷ್ ಅವರಿಗೂ ಈ ಮೂಲಕ ಟಾಂಗ್ ನೀಡಿದ್ದಾರೆ. ಹೈಕಮಾಂಡ್ ಹಾಗೂ ಸಂಘಪರಿವಾರದ ವರಿಷ್ಠರ ಜೊತೆ ನಿಕಟ ಸಂಪರ್ಕ ಹೊಂದಿರುವ ಬಿಎಲ್ ಸಂತೋಷ್ ಬಿಎಸ್ವೈ ಬಲ ಕುಗ್ಗಿಸಲು ಷಡ್ಯಂತ್ರ ಹೆಣೆಯುತ್ತಲೇ ಇದ್ದಾರೆ. ಅದಕ್ಕಾಗಿ ಅವರು ವಿಧ ವಿಧದ ರೂಟ್ಗಳನ್ನೂ ಹುಡುಕುತ್ತಿದ್ದಾರೆ. ಅದೇಗಾದರೂ ಮಾಡಿ ರಾಜ್ಯದಲ್ಲಿ ಬಿಎಸ್ವೈ ಕೆಳಗಿಳಿಸುವ ಅವರ ಷಡ್ಯಂತ್ರಕ್ಕೂ ಈ ಮೂಲಕ ಟಾಂಗ್ ನೀಡಿದ್ದಾರೆ. ಕೋಮು ಧ್ರುವೀಕರಣ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ಮೂಲಕ ತಾನೋರ್ವ ಸಮರ್ಥ ನಾಯಕನೇ ಹೊರತು ಕೈಲಾಗದವನು ಅಲ್ಲ ಅನ್ನೋದನ್ನು ತೋರಿಸಿಕೊಡುವ ಪ್ರಯತ್ನ ಪಟ್ಟಿದ್ದಾರೆ. ಇದು ತನ್ನ ರಾಜಕೀಯ ನಿಲುವು ಅನ್ನೋದನ್ನ ಸಂತೋಷ್ ಆಂಡ್ ಟೀಂ ಗೆ ಮನವರಿಕೆ ಮಾಡುವ ಪ್ರಯತ್ನ ಪಟ್ಟಿದ್ದಾರೆ.
ಇನ್ನೂ ಒಂದು ಪ್ರಮುಖ ವಿಚಾರವೆಂದರೆ, ಹಿಂದುತ್ವದ ಪಕ್ಷ, ಹಿಂದೂ ಪರ ಎಂದೆನಿಸಿಕೊಂಡ ಬಿಜೆಪಿ ರಾಜ್ಯದಲ್ಲಿ ಅಹಿಂದ ವರ್ಗದ ಮತಗಳಿಸಲು ಪರದಾಡುತ್ತಲೇ ಇದೆ. ಇದು ಸಹಜವಾಗಿಯೇ ಕಾಂಗ್ರೆಸ್, ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಕಮಲ ಪಕ್ಷಕ್ಕೆ ಹಿನ್ನಡೆ ತಂದಿಟ್ಟಿದೆ. ಸಿದ್ದರಾಮಯ್ಯನವರ ಅಹಿಂದ ಮಂತ್ರ ಅವರಿಗೆ ಒಂದು ಕಡೆ ಮೈನಸ್ ಅನ್ನೋದಾದರೂ, ಅದುವೇ ಅವರ ಪ್ಲಸ್ ಪಾಯಿಂಟ್ ಅನ್ನೋದು ಸತ್ಯ. ಆದ್ದರಿಂದ ಸಿದ್ದರಾಮಯ್ಯನವರ ಅಹಿಂದ ಮಂತ್ರ ಜಪಿಸುವ ಪ್ರಯತ್ನವನ್ನ ಬಿಎಸ್ವೈ ಮಾಡಿದ್ದಾರೆ. ಆ ಮೂಲಕ ಅಲ್ಪಸಂಖ್ಯಾತ ಪರ ಎಂದೆನಿಸಿಕೊಳ್ಳುತ್ತಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಪರೋಕ್ಷವಾಗಿಯೇ ಎದಿರೇಟು ನೀಡಿದ್ದಾರೆ. ಸಹಜವಾಗಿಯೇ ಬಿಎಸ್ವೈ ಅಲ್ಪಸಂಖ್ಯಾತ ಪರ ತೋರಿದ ನಿಲುವಿಗೆ ಮುಸ್ಲಿಂ ಸಂಘಟನೆಗಳಿಂದ ಅಪಾರವಾದ ಮೆಚ್ಚುಗೆ ವ್ಯಕ್ತವಾಗಿದೆ. ಬಹಿರಂಗ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಇದನ್ನು ಕಂಡು ಅತ್ತ ಕೈ ಹಾಗೂ ತೆನೆ ಹೊತ್ತ ಪಕ್ಷದ ಮುಖಂಡರು ಕಸಿವಿಸಿಗೊಂಡಿರುವುದು ಸತ್ಯ.
ಒಟ್ಟಿನಲ್ಲಿ ಈ ಹಿಂದೆ ಅಧಿಕಾರಕ್ಕೆ ಬಂದ ಅವಧಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಭರಪೂರ ಕೊಡುಗೆಯನ್ನ ಬಜೆಟ್ನಲ್ಲಿ ಇಡುವ ಮೂಲಕ ಬಿಎಸ್ವೈ ಹುಬ್ಬೇರಿಸುವಂತೆ ಮಾಡಿದ್ದರು. ಶೋಭಾ ಕರಂದ್ಲಾಜೆಯಂತಹ ಕೋಮು ದ್ವೇಷ ಬಿತ್ತುವ ಹೇಳಿಕೆ ನೀಡುವ ನಾಯಕಿಯನ್ನು ಪಕ್ಕದಲ್ಲಿಟ್ಟುಕೊಂಡರೂ ಬಿಎಸ್ವೈ ತಾನು ಯಾವತ್ತೂ ಕೋಮು ರಾಜಕೀಯಕ್ಕೆ ಇಳಿದವರೇ ಅಲ್ಲ. ಈ ಮೂಲಕ ʼಕರೋನಾ ಜಿಹಾದ್ʼ ಹೇಳಿಕೆಯ ಶೋಭ ಕರಂದ್ಲಾಜೆ ಕೂಡಾ ತಣ್ಣಗಿರುವಂತೆ ಮಾಡಿದ್ದಾರೆ. ಮಾತ್ರವಲ್ಲದೇ ʼರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿʼ ಅನ್ನೋದಾಗಿ ಈ ಹಿಂದೆಯೂ ಹಲವು ವಿಪಕ್ಷ ನಾಯಕರು, ಅಲ್ಪಸಂಖ್ಯಾತ ನಾಯಕರು ಯಡಿಯೂರಪ್ಪನವರನ್ನು ಉದ್ದೇಶಿಸಿ ಹೇಳುತ್ತಲೇ ಬಂದಿದ್ದಾರೆ. ಅದಕ್ಕೆ ತಕ್ಕಂತೆ ಬಿಎಸ್ವೈ ಸದ್ಯದ ನಡೆ ಕುತೂಹಲಕ್ಕೂ ಕಾರಣವಾಗಿದೆ. ಅದಕ್ಕೂ ಮಿಗಿಲಾಗಿ ಕಳೆದ ವಾರ ನಡೆದಿದ್ದ ಮುಸ್ಲಿಂ ಮುಖಂಡರ ಜೊತೆಗಿನ ಸಭೆಯಲ್ಲಿ ಹಲವು ಮುಸ್ಲಿಂ ನಾಯಕರೂ ಭಾಗವಹಿಸಿದ್ದು, ಅವರೆಲ್ಲರ ಪ್ರೀತಿ ಗಳಿಸುವ ಮೂಲಕ ರಾಜ್ಯದಲ್ಲಿ ನಿರ್ಣಾಯಕ ಮತದಾರರಾಗಿರುವ ಮುಸ್ಲಿಂ ಸಮುದಾಯದ ಮತದ ಮೇಲೆ ಬಿಎಸ್ವೈ ನೇರವಾಗಿ ಕಣ್ಣಿಟ್ಟಿದ್ದಾರೆ ಎಂದರೂ ತಪ್ಪಾಗದು. ಇದೆಲ್ಲವೂ ರಾಜಕೀಯದಲ್ಲಿ ಮಾಮೂಲು ಅನ್ನೋದಾದರೂ ಬಿಎಸ್ವೈ ಹೇಳಿಕೆ ಮಾತ್ರ ರಾಜಕೀಯದಲ್ಲಿ ಹೊಸ ಸಂಚಲವನ್ನೇ ಸೃಷ್ಟಿಸಿದೆ. ಅಲ್ಲದೇ ಈ ಹೇಳಿಕೆ ಸಂಘ ಪರಿವಾರ ಸಾಥ್ ನೀಡಿದ್ದು, ಪಕ್ಷದೊಳಗಿನ ಶತ್ರುಗಳಿಗೂ ಎಡತಾಕುವಂತೆ ಮಾಡಿದೆ.