ನವೆಂಬರ್ 3 ರಂದು ಅಮೆರಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಡೆಮಾಕ್ರಟಿಕ್ ಪಾರ್ಟಿಯಿಂದ ಅಧ್ಯಕ್ಷ ಸ್ಥಾನಕ್ಕೆ ಜೋ ಬಿಡನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ದೇವಿ ಹ್ಯಾರಿಸ್ ಸ್ಪರ್ಧೆ ಮಾಡಿದ್ದಾರೆ. 2ನೇ ಬಾರಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡೊನಾಲ್ಡ್ ಟ್ರಂಪ್‌ಗೆ ಕಮಲಾ ದೆವಿ ಹ್ಯಾರಿಸ್ ಸ್ಪರ್ಧೆ ಕಣ್ಣು ಕೆಂಪಾಗುವಂತೆ. ಅದಕ್ಕೆ ಆಕೆಯ ಮೂಲ ಭಾರತ ಎನ್ನುವುದು. ವೃತ್ತಿಯಲ್ಲಿ ವಕೀಲಿಕೆ ಮಾಡುತ್ತಿರುವ ಕಮಲಾ ದೇವಿ ಹ್ಯಾರಿಸ್, 1998 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಅಟಾರ್ನಿಯಾಗಿ ನೇಮಕವಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದಾರೆ. ಇದೀಗ ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಂಗಾಲಾಗುವಂತೆ ಮಾಡಿದ್ದಾರೆ.
ಮೋದಿ ಜೊತೆ ಸ್ನೇಹ ಹಸ್ತ ಚಾಚಿದ್ದ ಟ್ರಂಪ್..!
ಅಮೆರಿಕದ ಹಲವಾರು ನಗರದಲ್ಲಿ ಭಾರತೀಯರೇ ಹೆಚ್ಚಾಗಿ ವಾಸ ಮಾಡುತ್ತಿದ್ದು, ಮತದಾನದ ಹಕ್ಕು ಹೊಂದಿದ್ದಾರೆ. ಇದೆ ಕಾರಣಕ್ಕೆ ಕಳೆದ ವರ್ಷ ಡೊನಾಲ್ಡ್ ಟ್ರಂಪ್ ಹಾಗೂ ನರೇಂದ್ರ ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ನರೇಂದ್ರ ಮೋದಿ ಹಾಡಿ ಹೊಗಳಿದ ಬಳಿಕ ಡೊನಾಲ್ಡ್ ಟ್ರಂಪ್ ಕೂಡ ಫೆಬ್ರವರಿಯಲ್ಲಿ ಭಾರತಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಬೃಹತ್ ಕಾರ್ಯಕ್ರಮ ಮಾಡಿದ್ದರು. ಇಷ್ಟೆಲ್ಲಾ ಆದ ಬಳಿಕ ಮೈ ಫ್ರೆಂಡ್ ಎಂದು ಹಲವಾರು ಬಾರಿ ಡೊನಾಲ್ಡ್ ಟ್ರಂಪ್ ಟ್ವೀಟ್ ಕೂಡ ಮಾಡಿದ್ದರು. ಇದರ ಹಿಂದಿನ ಉದ್ದೇಶ ಚುನಾವಣೆಯಲ್ಲಿ ಭಾರೀಯ ಮತಗಳಿಸುವ ಉದ್ದೇಶವೇ ಆಗಿತ್ತು ಎನ್ನುವುದನ್ನು ಹೇಳಲೇಬೇಕಿಲ್ಲ.
ಭಾರತೀಯ ಮೂಲಕದ ಕಮಲಾ ದೇವಿಯಿಂದ ಕಂಗಾಲು..!
ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಅಖಾಡಕ್ಕಿಳಿದ ಮೊದಲ ಕಪ್ಪು ಮಹಿಳೆ ಎನ್ನುವ ಹೆಗ್ಗಳಿಕೆಗೆ ಕಮಲಾ ದೇವಿ ಹ್ಯಾರಿಸ್ ಪಾತ್ರವಾಗಿದ್ದಾರೆ. ಜೊತೆಗೆ ಮೊದಲ ಮಹಿಳಾ ಉಪಾಧ್ಯಕ್ಷ ಅಭ್ಯರ್ಥಿ, ಮೊದಲ ಏಷ್ಯನ್ ಅಮೇರಿಕನ್ ಉಪಾಧ್ಯಕ್ಷ ಅಭ್ಯರ್ಥಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಕ್ಯಾಲಿಫೋರ್ನಿಯಾದಿಂದ ಸೆನೆಟರ್ ಆಗಿರುವ ಕಮಲಾ ದೇವಿ ಹ್ಯಾರಿಸ್ ತಾಯಿ ಭಾರತೀಯರಾಗಿದ್ದು, ಅದರಲ್ಲೂ ದಕ್ಷಿಣ ಭಾರತ ಮೂಲದವರಾಗಿದ್ದಾರೆ. ಅವರ ತಂದೆ ಜಮೈಕಾ ಮೂಲದವರಾಗಿದ್ದಾರೆ. ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ ಪ್ರೀತಿಸಿ ಮದುವೆಯಾದ ಜೋಡಿಗೆ ಕಮಲಾ ದೇವಿ ಹ್ಯಾರಿಸ್ ಜನಿಸಿದ್ದಾರೆ.
ಭಾರತೀಯ ಮೂಲದ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಘೋಷಣೆಯಾಗುತ್ತಿದ್ದ ಹಾಗೆ ಸಂಭ್ರಮ ಮುಗಿಲು ಮುಟ್ಟಿದೆ. ಕಪ್ಪು ಮಹಿಳೆ ಎನ್ನುವ ಕಾರಣಕ್ಕೆ ಅಮೆರಿಕದಲ್ಲಿ ಒಂದು ವರ್ಗದ ಮನಸ್ಸು ಗೆದ್ದಿರುವ ಕಮಲಾ ದೇವಿ ಹ್ಯಾರಿಸ್, ಭಾರತೀಯ ಮೂಲದವಳು ಎನ್ನುವ ಕಾರಣಕ್ಕೆ ಇಡೀ ಅಮೆರಿಕದ ಭಾರತೀಯರ ಮನಸ್ಸು ಡೆಮಾಕ್ರಟಿಕ್ ಪಾರ್ಟಿ ಕಡೆಗೆ ತಿರುಗುವಂತೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಕಮಲಾ ದೇವಿ ಹ್ಯಾರಿಸ್ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಭಾರತೀಯ ಮೂಲದ ಮಹಿಳೆ ಎನ್ನವ ಕಾರಣಕ್ಕೆ ಅಮೆರಿಕನ್ ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ. ಇದರ ನಡುವೆ ಚೆನ್ನೈನ ಬೀಚ್‌ನಲ್ಲಿ ಓಡಾಡಿದ ಫೋಟೋಗಳು, ಸಂಬಂಧಿಗಳ ಮನೆಗೆ ಭೇಟಿ ಕೊಟ್ಟಾಗ ತೆಗೆಸಿಕೊಂಡ ಫೋಟೋಗಳೂ ವೈರಲ್ ಆಗಿವೆ.
ಕಳೆದ ವರ್ಷ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಅಮೆರಿಕದ ಭಾರತೀಯರನ್ನು ಒಂದೆಡೆಗೆ ಸೇರಿಸಿ ಮೋದಿ ಸ್ನೇಹಿತ ನಾನು ಎಂದು ಬಿಂಬಿಸಿಕೊಳ್ಳುವ ಮೂಲಕ ಮತಗಳನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿದ್ದ ರಿಪಬ್ಲಿನ್ ಪಾರ್ಟಿಯ ಡೊನಾಲ್ಡ್ ಟ್ರಂಪ್ ನಿದ್ರೆಗೆಡಿಸಿದ್ದು, ಕಮಲಾ ದೇವಿ ಹ್ಯಾರಿಸ್ ಜನ್ಮದ ಬಗ್ಗೆ ವಿವಾದ ಎಬ್ಬಿಸುವ ಕೆಲಸ ಶುರುವಾಗಿದೆ. ಆಕೆ ಅಮೆರಿಕದಲ್ಲಿ ಜನಿಸಿಲ್ಲ, ಆಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿಲ್ಲ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಇದೇ ರೀತಿಯ ವಿವಾದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಸ್ಪರ್ಧೆ ಮಾಡಿದಾಗಲೂ ಸೃಷ್ಟಿಯಾಗಿತ್ತು. ಆಗ ಬರಾಕ್ ಒಬಾಮಾ ಗೆದ್ದು ಬೀಗಿದ್ದರು.
ಕಮಲಾ ಹ್ಯಾರಿಸ್ ಬೆಂಬಲಿಸ್ತಾರಾ ಪ್ರಧಾನಿ ಮೋದಿ..?
ಕಳೆದ ವರ್ಷ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷರನ್ನು ಕೊಂಡಾಡುವ ಮೂಲಕ ಪರೋಕ್ಷವಾಗಿ ಬೆಂಬಲಿಸಿದ್ದ ಪ್ರಧಾನಿ ಮೋದಿ, ಈಗ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ. ಕಾರಣ ಏನೆಂದರೆ, ಕಮಲಾ ದೇವಿ ಹ್ಯಾರಿಸ್ ಭಾರತದ ಬಗ್ಗೆ ಹೆಮ್ಮೆ ಹೊಂದಿದ್ದು, ನಾನೇನು ಆಗಿದ್ದೀನೋ ಅದಕ್ಕೆ ಭಾರತೀಯ ಹಿನ್ನೆಲೆ ಕಾರಣ ಎಂದಿದ್ದಾರೆ. ಆದರೆ ಭಾರತ ಸರ್ಕಾರ ತೆಗೆದುಕೊಳ್ತಿರೋ ಕೆಲವೊಂದು ನಿರ್ಧಾರಗಳನ್ನು ಕಮಲಾದೇವಿ ಹ್ಯಾರಿಸ್ ನೇರವಾಗಿ ಟೀಕಿಸಿದ್ದಾರೆ. ಅದು ಭಾರತೀಯ ಸರ್ಕಾರದೊಂದಿಗೆ ಘರ್ಷಣೆಗೆ ಒಳಗಾಗಬಹುದು ಎನ್ನಲಾಗ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ವಾಷಿಂಗ್ಟನ್‌ಗೆ ಭೇಟಿ ನೀಡಿದಾಗ, ಭಾರತದ ಕಾಶ್ಮೀರ ನೀತಿಯನ್ನು ಟೀಕಿಸಿದ್ದ ಕಮಲಾ ದೇವಿ ಹ್ಯಾರಿಸ್, ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರನ್ನು ಭೇಟಿ ಮಾಡಲು ನಿರಾಕರಿಸಿದರು. 2019 ರ ಅಕ್ಟೋಬರ್, ಭಾರತ ಸರ್ಕಾರ ಕಾಶ್ಮೀರ ಸ್ವಾಯತ್ತತೆಯನ್ನು ಭಾರತ ರದ್ದುಪಡಿಸಿದ ಬಳಿಕ ನಾವು ನೋಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದರು. ಒಟ್ಟಾರೆ, ನೇರಾನೇರ ಮಾತಿಮ ಕಮಲಾ ಹ್ಯಾರಿಸ್‌ಗೆ ಮೋದಿ ಬೆಂಬಲಿಸುವರೇ ಎನ್ನುವುದು ಕೌತುಕದ ವಿಚಾರವಾಗಿದೆ.