ಪ್ರತಿ ವರ್ಷ ಮುಂಗಾರು ಆರಂಭವಾಗುತ್ತಿದ್ದ ಹಾಗೆ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಕೃಷಿ ಚಟುವಟಿಕೆಗಳಲ್ಲಿ ರೈತಾಪಿ ವರ್ಗ ಪಾಲ್ಗೊಂಡು ಬಿತ್ತನೆ ಕಾರ್ಯ ಮಾಡುತ್ತಿತ್ತು. ಮಳೆ ಬಿದ್ದಷ್ಟೂ ರಾಜ್ಯ ಹಾಗೂ ದೇಶದಲ್ಲಿ ಕೃಷಿ ಚಟುವಟಿಕೆ ಚೆನ್ನಾಗಿ ಆಗುತ್ತಿತ್ತು. ಆಹಾರ ಪದಾರ್ಥಗಳ ಉತ್ಪಾದನೆ ನಿರೀಕ್ಷೆ ಮಟ್ಟ ಮೀರಿ ಆಗುತ್ತದೆ ಎನ್ನುವ ಮಾತುಗಳು ತಜ್ಞರಿಂದ ಕೇಳಿ ಬರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಮುಂಗಾರು ಶುರುವಾಗುತ್ತಿದ್ದ ಹಾಗೆ ಬಿತ್ತನೆ ಕಾರ್ಯ ಶುರುವಾಗುತ್ತದೆ, ಆ ಬಳಿಕ ಹೆಚ್ಚು ಮಳೆಯಾದರೆ ಬೆಳೆ ಹಾನಿ ಬಗ್ಗೆ ವರದಿಯಾಗುತ್ತದೆ. ಮನುಷ್ಯರೇ ಕೊಚ್ಚಿಕೊಂಡು ಹೋದರು ಎನ್ನುವ ಮಾಹಿತಿ ಬರುತ್ತದೆ. ಒಟ್ಟಾರೆ ಮನುಷ್ಯನೇ ಸೃಷ್ಟಿ ಮಾಡಿಕೊಂಡಿರುವ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಕೃತಿ ಸೌಂದರ್ಯವನ್ನು ತನ್ನ ಒಡಲಿನಲ್ಲಿಟ್ಟುಕೊಂಡಿರುವ ಕೊಡಗು. ಚಿಕ್ಕಮಗಳೂರು ಭಾಗದಲ್ಲಿ ವರುಣನ ಅವಾಂತರ ಹೆಚ್ಚಾಗುತ್ತಿದೆ. ದಟ್ಟ ಕಾಡುಗಳಿಂದ ಕೂಡಿರುವ ಪ್ರದೇಶ ಆಗಿರುವ ಕಾರಣಕ್ಕೆ ಹೆಚ್ಚೆಚ್ಚು ಮಳೆ ಬೀಳುವುದು ಸಾಮಾನ್ಯ. ಆದರೆ, ಮಾನವ ಮಾಡಿಕೊಂಡ ಸ್ವಯಂ ಕೃತ ಅಪರಾಧವೇ ಅವಘಡಕ್ಕೆ ಕಾರಣ ಎನ್ನುವ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತವೆ. ಜನರು ದುರಾಸೆಯ ಅಂಕಕ್ಕೆ ಸಿಲುಕಿ ಕಾಡನ್ನು ಕಡಿದು ಐಶಾರಾಮಿ ರೆಸಾರ್ಟ್‌ಗಳನ್ನು ನಿರ್ಮಿಸುತ್ತಾರೆ. ಕಾಡಿನ ಮಧ್ಯಭಾಗದಲ್ಲಿ ಹೋಂ ಸ್ಟೇಗಳು ತಲೆ ಎತ್ತುತ್ತವೆ. ಗಣಿಗಾರಿಕೆ ಸದ್ದಿದಲ್ಲದೆ ನಡೆಯುತ್ತದೆ. ಸ್ವತಃ ಸರ್ಕಾರ ಪ್ರವಾಸೋದ್ಯಮ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯದ ಹೆಸರಲ್ಲಿ ಕಾಡಿನ ಮಧ್ಯೆ ನಾಡನ್ನು ಸೃಷ್ಟಿಸಲು ಅವಣಿಸುತ್ತದೆ. ಬೆಟ್ಟದ ಅಂಗಾಂಗಗಳನ್ನು ಮಾನವ ಕಡಿಯುತ್ತಾ ಸಾಗಿದರೆ ದೇಹ ಕುಸಿದು ಬೀಳದೆ ಇರಲು ಸಾಧ್ಯವೇ ಎನ್ನುವಂತಾಗಿದೆ.
ಕೊಡಗಿನಲ್ಲಿ ಭೂ ಕುಸಿತ..! ಹೆಚ್ಚಿದ ಆತಂಕ!
ಕೊಡಗಿನ ತಲಕಾವೇರಿಯಲ್ಲಿ ಭಾರೀ ಪ್ರಮಾಣದ ಭೂಕುಸಿತವಾಗಿ ಪ್ರಧಾನ ಅರ್ಚಕರ ಕುಟುಂಬ ಸೇರಿ 2 ಕುಟುಂಬಗಳು ನಾಪತ್ತೆಯಾಗಿವೆ. ಮನೆ ಇದ್ದ ಜಾಗದಲ್ಲಿ ಮನೆ ಇತ್ತು ಎನ್ನುವ ಕುರುಹುಗಳೇ ಇಲ್ಲದಂತೆ ಆಗಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಕೊಡಗಿನ ಕುಶಾಲನಗರಕ್ಕೆ ಭೇಟಿ ನೀಡಿದ್ದಾರೆ. ಗುಡ್ಡ ಕುಸಿತದಿಂದ 5 ಮಂದಿ ನಾಪತ್ತೆಯಾಗಿದ್ದಾರೆ. ನಾರಾಯಣ ಆಚಾರ್, ಶಾಂತ ಆಚಾರ್, ಆನಂದ ತೀರ್ಥಶ್ರೀ, ಶ್ರೀನಿವಾಸ್ ಮತ್ತು ರವಿಕಿರಣ್ ಎಂದು ಸ್ಪಷ್ಟಪಡಿಸಿದ್ದಾರೆ.
ಕೊಡಗಿನಲ್ಲಿ ಅಪಾಯ ಸ್ಥಿತಿಯಲ್ಲಿರುವ 20 ಕುಟುಂಬಗಳನ್ನು ಸ್ಥಳಾಂತರ ಮಾಡಿದ್ದೇವೆ. ತ್ರಿವೇಣಿ ಸಂಗಮ ಸಂಪೂರ್ಣ ಮುಳುಗಡೆ ಆಗಿದೆ. ಹಲವಾರು ಕಡೆ ಗಂಜಿ ಕೇಂದ್ರ ತೆರೆದಿದ್ದಿದ್ದೇವೆ. ಅಯ್ಯಪ್ಪ ಬೆಟ್ಟ, ಕರಡಿಗೂಡು ಗುಡ್ಡದ ಜನರನ್ನ ನಾಳೆ ಸ್ಥಳಾಂತರ ಮಾಡ್ತಿವಿ. ಗಂಜಿ ಕೇಂದ್ರಕ್ಕೆ ಬರುವ ಎಲ್ಲರನ್ನು ಕರೋನಾ ಟೆಸ್ಟ್‌ಗೆ ಒಳಪಡಿಸಿದ ಬಳಿಕ ಪ್ರವೇಶ ನೀಡಲಾಗುತ್ತದೆ ಎಂದಿದ್ದಾರೆ.

ಸರ್ಕಾರ ನಾವು ಎಷ್ಟೇ ಮುಂಜಾಗ್ರತಾ ಕ್ರಮದಿಂದ ಎಲ್ಲವನ್ನೂ ಎದುರಿಸಿ ನಿಲ್ತೇವೆ ಎಂದು ಭರವಸೆ ನೀಡಿದರೂ ಅಲ್ಲಿ ಸ್ಥಳೀಯವಾಗಿ ನಡೆಯುವ ಘಟನೆಗಳನ್ನು ಹತೋಟಿಗೆ ತಂದುಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ ಕೊಡಗಿನಲ್ಲಿ ಮತ್ತಷ್ಟು ಕರೋನಾ ಸೋಂಕು ಉಲ್ಬಣ ಆಗುತ್ತಾ ಎನ್ನುವ ಆತಂಕವನ್ನು ಸೃಷ್ಟಿಸಿದೆ. ಕೇವಲ ಕೊಡಗಿನಲ್ಲಿ ಮಾತ್ರವಲ್ಲ ರಾಜ್ಯದ ಇತರೆ ಕಡೆಗಳಲ್ಲೂ ಪ್ರವಾಹದ ಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ಸಿಕ್ಕಿದ್ದು, ಎಲ್ಲಾ ಕಡೆಗಳಲ್ಲೂ ಗಂಜಿ ಕೇಂದ್ರ ಆರಂಭವಾದರೆ ಸಾಮಾಜಿಕ ಅಂತರ ಅಂತ್ಯವಾಗಿ ಕರೋನಾ ಸೋಂಕನ್ನು ಸ್ವಾಗತಿಸುವ ಸಾಧ್ಯತೆ ಹೆಚ್ಚಾಗಿದೆ.
ಮೇ ಅಂತ್ಯದಲ್ಲಿ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುತ್ತು. ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಭಾರೀ ಪ್ರವಾಹ, ಭೂಕುಸಿತವನ್ನು ಸೃಷ್ಟಿಸಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ವೇಳೆ ಪಶ್ಚಿಮ ಬಂಗಾಳದಲ್ಲಿ ಕಾರ್ಯ ನಿರ್ವಹಿಸಲು ತೆರಳಿದ್ದ 50ಕ್ಕೂ ಹೆಚ್ಚು National Disaster Response Force (NDRF) ಸಿಬ್ಬಂದಿಗೆ ಕರೋನಾ ಸೋಂಕು ತಗುಲಿತ್ತು. ಇದೀಗ ಕೊಡಗಿನಲ್ಲಿ ಭೂಕುಸಿತ ಉಂಟಾಗುತ್ತಿರುವ ಈ ಸಮಯದಲ್ಲಿ 40 ಮಂದಿ ಎನ್‌ಡಿಆರ್‌ಎಫ್ ಸಿಬ್ಬಂದಿ ಆಗಮಿಸುತ್ತಿದ್ದಾರೆ. ಹೆಚ್ಚು ಸಮಸ್ಯೆ ಉಂಟಾದರೆ ಮತ್ತಷ್ಟು ಜನರು ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಕರೋನಾ ಸೋಂಕು ವ್ಯಾಪಿಸುವ ಸಾಧ್ಯತೆ ದಟ್ಟವಾಗಿದೆ.
ಸರ್ಕಾರ ಈಗಲೇ ಎಚ್ಚೆತ್ತುಕೊಂಡು ವಿಶಾಲವಾದ ಜಾಗಗಳಲ್ಲಿ ಗಂಜಿ ಕೇಂದ್ರ ತೆರೆಯುವ ಕೆಲಸ ಮಾಡಬೇಕಿದೆ. ಅಕ್ರಮವಾಗಿ ಕಾಡು, ಬೆಟ್ಟಗಳ ನಡುವೆ ನಿರ್ಮಾಣ ಮಾಡಿರುವ ರೆಸಾರ್ಟ್, ಹೋಂಸ್ಟೇಗಳನ್ನು ಖಾಲಿ ಮಾಡಿಸುವ ಕೆಲಸ ಮಾಡಿದ್ರೆ ಮುಂದಿನ ವರ್ಷ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆಯನ್ನು ತಪ್ಪಿಸಬಹುದು ಎನ್ನುತ್ತಾರೆ ಪರಿಸರ ಪ್ರೇಮಿಗಳು.










