ಕೇಂದ್ರ ಬಿಜೆಪಿ ಸರ್ಕಾರದ ಮೂರು ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಐತಿಹಾಸಿಕ ನಿರಂತರ ಹೋರಾಟ ತೀವ್ರಗೊಂಡಿದೆ. ರೈತ ಹೋರಾಟಕ್ಕೆ ಚಂದ್ರಶೇಖರ ಆಜಾದ್ ಅವರ ಭೀಮ್ ಆರ್ಮಿ, ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ದೇಶದ ಮೂಲೆಮೂಲೆಯಲ್ಲಿ ಪ್ರತಿಭಟನೆಗಳು ಪ್ರತಿಧ್ವನಿಸಿವೆ.
ಈ ನಡುವೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳ ನಾಯಕ ಪ್ರಕಾಶ್ ಸಿಂಗ್ ಬಾದಲ್, ಶಿರೋಮಣಿ ಅಕಾಲಿದಳ(ಡೆಮೋಕ್ರಟಿಕ್) ನಾಯಕ, ರಾಜ್ಯಸಭಾ ಸದಸ್ಯ ಸುಖದೇವ್ ಸಿಂಗ್ ದಿಂಡ್ಸಾ ಅವರುಗಳು ರೈತ ಹೋರಾಟವನ್ನು ಬೆಂಬಲಿಸಿ ತಮ್ಮ ಪದ್ಮ ಪ್ರಶಸ್ತಿಗಳನ್ನು ವಾಪಸು ಮಾಡುವುದಾಗಿ ಘೋಷಿಸಿದ್ದಾರೆ. ದೆಹಲಿಯ ಹರ್ಯಾಣ ಮತ್ತು ಉತ್ತರಪ್ರದೇಶ ಗಡಿಯಲ್ಲಿ ಹೆದ್ದಾರಿಯಲ್ಲಿ ಕಂದಕ ತೋಡಿ, ಬೃಹತ್ ಬ್ಯಾರಿಕೇಡ್, ಸೇನಾ ಜಮಾವಣೆ ಮಾಡಿ ರೈತರ ಪ್ರತಿಭಟನಾ ಮೆರವಣಿಗೆಯನ್ನು ತಡೆದು ಕೊರೆವ ಚಳಿ ನಡುವೆ ಅನ್ನದಾತರು ಬೀದಿಯಲ್ಲೇ ವಾರಗಟ್ಟಲೆ ಕಳೆಯುವಂತಾಗಿದೆ. ಹೋರಾಟಗಾರರ ಪೈಕಿ ಈಗಾಗಲೇ ಏಳು ಮಂದಿ ರೈತರು ಬೀದಿಯಲ್ಲೇ ಪ್ರಾಣ ಬಿಟ್ಟಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಶ ಕಂಡ ಅತಿ ದೊಡ್ಡ ರೈತ ಹೋರಾಟಗಳಲ್ಲಿ ಒಂದಾಗಿರುವ ಮತ್ತು ಸ್ವತಃ ಕೃಷಿಕರ ತೀವ್ರ ವಿರೋಧದ ಹೊರತಾಗಿಯೂ ತಾನು ಜಾರಿಗೆ ತಂದಿರುವ ಮೂರು ಕೃಷಿ ಸಂಬಂಧಿತ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳಲು, ಹೋರಾಟನಿರತ ರೈತರನ್ನು ಹತ್ತಿಕ್ಕಲು ಹಿಂದೆಂದೂ ಕಂಡುಕೇಳರಿಯದ ಪ್ರಮಾಣದ ದಮನ ಕ್ರಮಗಳನ್ನು ಪ್ರಧಾನಿ ಮೋದಿಯವರು ಕೈಗೊಂಡಿದ್ದಾರೆ. ಆ ಮೂಲಕ ತಾವು ದೇಶದ ಬಡವರು, ರೈತರು, ಜನಸಾಮಾನ್ಯರ ಪರವೇ ಅಥವಾ ಕಾರ್ಪೊರೇಟ್ ಕಂಪನಿಗಳು ಮತ್ತು ರೈತ ಶೋಷಕರ ಪರವೇ ಎಂಬುದನ್ನು ಸಾಬೀತು ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ರೈತರ ಈ ಹೋರಾಟ ಕೇವಲ ರೈತರದ್ದಲ್ಲ; ಮತ್ತು ರೈತರ ಮೇಲೆ ಬಲಪ್ರಯೋಗಿಸಿ ಅವರ ಸರಣಿ ಸಾವುಗಳಿಗೆ ಕಾರಣವಾಗಿರುವ ಸರ್ಕಾರದ ದಮನ ನೀತಿ ಕೇವಲ ರೈತರನ್ನು ಗುರಿಮಾಡಿದ್ದಲ್ಲ; ಬದಲಾಗಿ ಇದು ದೇಶದ ಎಲ್ಲರ ಹಕ್ಕುಗಳ ದಮನದ ಕ್ರಮ. ಹಾಗಾಗಿ ಎಲ್ಲರೂ ಅನ್ನದಾತರ ಪರ ದನಿ ಎತ್ತಬೇಕು. ತಿನ್ನುವ ಅನ್ನದ ಋಣವನ್ನು ಅವರ ಪರ ದನಿ ಎತ್ತಿ ಹೋರಾಟಕ್ಕೆ ಬೆಂಬಲಿಸುವ ಮೂಲಕವಾದರೂ ತೀರಿಸಬೇಕು ಎಂದು ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿವೆ.
ಖ್ಯಾತ ಪತ್ರಕರ್ತ ಪಿ ಸಾಯಿನಾಥ್ ಕೂಡ ರೈತರ ಹೋರಾಟ ಎಂಬುದು ಕೇವಲ ರೈತ ಹೋರಾಟವಲ್ಲ; ದೇಶದ ಜನಸಾಮಾನ್ಯರ ಹಿತಾಸಕ್ತಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಬಲಿ ಕೊಡುತ್ತಿರುವ ಆಡಳಿತದ ವಿರುದ್ಧದ ಎಲ್ಲ ಜನರ ಹೋರಾಟ. ಎಲ್ಲ ಜನರ ಹಕ್ಕುಗಳ ಪ್ರಶ್ನೆ ಇದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ದೇಶದ ಜನತೆಗೆ ನೀಡಿರುವ ಬದುಕುವ ಹಕ್ಕಿಗೇ ಸಂಚಕಾರ ಬಂದಿರುವ ಹೊತ್ತಲ್ಲಿ; ರೈತ ಹೋರಾಟ ರೈತರಿಗೆ ಮಾತ್ರ ಸೀಮಿತ ಎಂದು ಕೈಕಟ್ಟಿಕೂರಲಾಗದು. ದೇಶದ ಭವಿಷ್ಯದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಅವರ ಪರ ದನಿ ಎತ್ತಬೇಕು, ಬೀದಿಗಿಳಿಯಬೇಕಾದ ಸಂದರ್ಭ ಬಂದಿದೆ ಎಂದು ಹೇಳಿದ್ದಾರೆ.
ಈ ನಡುವೆ, ತಮ್ಮ ನ್ಯಾಯಯುತ ಬೇಡಿಕೆಯನ್ನು ಮುಂದಿಟ್ಟುಕೊಂಡು ಶಾಂತಿಯುತ ಹೋರಾಟ ನಡೆಸುತ್ತಿರುವ ರೈತರ ಹೋರಾಟಕ್ಕೆ ದನಿಯಾಗಬೇಕಿದ್ದ ದೇಶದ ಮುಖ್ಯವಾಹಿನಿಯ ಮಾಧ್ಯಮಗಳು, ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದು, ಹೋರಾಟಗಾರರ ನೈತಿಕ ಬಲ ಕುಗ್ಗಿಸಲು ಅಪಪ್ರಚಾರ ಮತ್ತು ಸುಳ್ಳು ವದಂತಿಗಳನ್ನು ಹರಡುವುದರಲ್ಲಿ ನಿರತವಾಗಿವೆ. ಪ್ರಜಾಪ್ರಭುತ್ವದ ಕಾವಲು ನಾಯಿಯಾಗಬೇಕಿದ್ದ ಮಾಧ್ಯಮ, ಮೋದಿಯವರ ಸಾಕು ನಾಯಿಯಂತೆ ವರ್ತಿಸುತ್ತಿದ್ದು, ‘ಗೋದಿ ಮೀಡಿಯಾ’ ಆಗಿ ಬದಲಾಗಿದೆ ಎಂಬ ಆಕ್ರೋಶ ಹೋರಾಟದ ನಡುವಿನಿಂದಲೇ ವ್ಯಕ್ತವಾಗುತ್ತಿದೆ. ಹೋರಾಟಕ್ಕೆ ಮಸಿ ಬಳಿಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಬಿಜೆಪಿ ಐಟಿ ಸೆಲ್, ಹೋರಾಟದಲ್ಲಿ ಖಲೀಸ್ತಾನ್ ಶಕ್ತಿಗಳು ತೂರಿಕೊಂಡಿವೆ, ವಿದೇಶಿ ಶಕ್ತಿಗಳ ಕುಮ್ಮಕ್ಕಿದೆ ಎಂಬ ಹಸೀಸುಳ್ಳುಗಳನ್ನು ಹಬ್ಬಿಸುತ್ತಿವೆ. ಅಂತಹ ಸುಳ್ಳುಗಳನ್ನು ಹಬ್ಬಿಸಿದ್ದನ್ನು ಟ್ವಿಟರ್ ನಂತಹ ಸಾಮಾಜಿಕ ಜಾಲತಾಣ ಸಂಸ್ಥೆಗಳೇ ಪತ್ತೆ ಮಾಡಿ ಛೀಮಾರಿ ಹಾಕಿವೆ. ಆದರೆ, ಸತ್ಯಾಸತ್ಯತೆಯನ್ನು ಪರಿಶೀಲಿಸಿ ಜನರ ಮುಂದಿಡಬೇಕಾದ ಗುರುತರ ಹೊಣೆಗಾರಿಕೆಯ ಮಾಧ್ಯಮಗಳು ಬಿಜೆಪಿ ಮತ್ತು ಸರ್ಕಾರದ ಆಮಿಷ ಮತ್ತು ಬೆದರಿಕೆಗಳಿಗೆ ಬಲಿಯಾಗಿ ಬಿಜೆಪಿ ಐಟಿ ಸೆಲ್ ಹಬ್ಬಿಸುತ್ತಿರುವ ಸುಳ್ಳುಗಳನ್ನೇ ವಾಸ್ತವವೆಂದು ವರದಿ ಮಾಡುತ್ತಿವೆ.

ಮಾಧ್ಯಮಗಳ ಇಂತಹ ನಾಚಿಕೆಗೇಡಿನ ವರಸೆ ಸಹಜವಾಗೇ ಪ್ರತಿಭಟನಾನಿರತ ರೈತರನ್ನು ಕೆರಳಿಸಿದೆ. ಆ ಆಕ್ರೋಶದ ಪರಿಣಾಮವಾಗೇ “ಗೋದಿ ಮೀಡಿಯಾ, ಗೋ ಬ್ಯಾಕ್, ಗೋ ಬ್ಯಾಕ್” ಘೋಷಣೆ ದೆಹಲಿಯ ಗಡಿಗಳಲ್ಲಿ ಮೊಳಗಿದೆ. ಅದರಲ್ಲೂ ಮುಖ್ಯವಾಗಿ ಝೀ ನ್ಯೂಸ್, ರಿಪಬ್ಲಿಕ್ ಟಿವಿ ಮತ್ತು ಆಜ್ ತಕ್ ವಿರುದ್ಧ ರೈತರು ರೊಚ್ಚಿಗೆದ್ದು, ವರದಿಗಾರರನ್ನು ಹತ್ತಿರ ಸುಳಿಯದಂತೆ ಹೊರಗಟ್ಟಿದ್ದಾರೆ. ರೈತರ ಜೀನ್ಸ್ ಪ್ಯಾಂಟು, ಅವರ ಕಾರು, ಅವರ ಇಂಗ್ಲಿಷ್ ಭಾಷಣಗಳನ್ನೇ ಮುಂದಿಟ್ಟುಕೊಂಡು ಗೇಲಿ ಮಾಡುವ, ಇಡೀ ಹೋರಾಟವನ್ನೇ ಅಪಮಾನಿಸುವ ಕೆಲವು ಮಾಧ್ಯಮಗಳ ಕಿಡಿಗೇಡಿತನ ಸಹಜವಾಗೇ ರೈತರ ಸಹನೆ ಕೆಣಕಿದೆ.
ರೈತರು ಎಂದರೆ ಬರಿಗಾಲಿನಲ್ಲಿ ನಡೆಯಬೇಕು, ಕಾರು ಮತ್ತಿತರ ವಾಹನ ಬಳಸಬಾರದು, ಹರಿದ ಬಟ್ಟೆಯಲ್ಲಿರಬೇಕು, ಹಳ್ಳಿಯ ಭಾಷೆ ಮಾತನಾಡಬೇಕು, ಮಾಧ್ಯಮಗಳ ಮುಂದೆ ಕೈಮುಗಿದು ಕಾಪಾಡಿ ಎಂದು ಗೋಗರೆಯಬೇಕು ಎಂದು ಮಾಧ್ಯಮಗಳು ಬಯಸುತ್ತವೆ. ಆದರೆ, ಅಂತಹ ಅವರ ನಿರೀಕ್ಷೆಗೆ ತದ್ವಿರುದ್ಧವಾಗಿ ರೈತರು ಒಳ್ಳೆಯ ಬಟ್ಟೆ ಧರಿಸಿದ್ದರೆ, ಅವರ ಪ್ರಶ್ನೆಗಳಿಗೆ ಅವರೇ ನಿರೀಕ್ಷಿಸುವ ಉತ್ತರ ನೀಡದೆ, ಸರ್ಕಾರ ಮತ್ತು ಆಡಳಿತವನ್ನು ಪ್ರಶ್ನಿಸಿದರೆ ಅದನ್ನು ಮಾಧ್ಯಮಗಳು ಸಹಿಸಿಕೊಳ್ಳುವುದಿಲ್ಲ. ಯಾವಾಗ ನಾವು ಅವರ ಎಣಿಕೆಯಂತೆ ಇಲ್ಲ ಎನಿಸುತ್ತದೆಯೋ ಆಗ ನಮ್ಮ ವಿರುದ್ಧ ಅಪಪ್ರಚಾರ ಆರಂಭಿಸುತ್ತವೆ. ತಮ್ಮ ಟಿಆರ್ ಪಿಗಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂಬುದು ನಮ್ಮ ವಿಷಯದಲ್ಲಿ ಕೂಡ ನಿಜವಾಗಿದೆ ಎಂದು ಪ್ರತಿಭಟನೆನಿರತ ರೈತ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜನಸಾಮಾನ್ಯರು ಮತ್ತುಆಡಳಿತದ ನಡುವೆ ಇರಬೇಕಾದದ್ದು ನಂಬಿಕೆ. ಆದರೆ, ಮೋದಿಯವರ ಸರ್ಕಾರ ರೈತರ ನಂಬಿಕೆ ಕಳೆದುಕೊಂಡಿದೆ. ರೈತರನ್ನು ಶತ್ರುದೇಶದವರಂತೆ ನಡೆಸಿಕೊಳ್ಳುತ್ತಿದೆ. ದೇಶದ ಹಿತಕಾಯುವ ಮಾತನಾಡುವ ಚೌಕಿದಾರ ಮಾಲೀಕರಾದ ನಮ್ಮ ನಂಬಿಕೆ ಉಳಿಸಿಕೊಂಡಿಲ್ಲ. ಇಂತಹ ಹೊತ್ತಲ್ಲಿ ನಮ್ಮ ಪರ ನಿಲ್ಲಬೇಕಾದುದು ಯಾವುದೇ ಮಾಧ್ಯಮದ ಹೊಣೆ. ಆದರೆ, ಕೆಲವು ಮಾಧ್ಯಮಗಳನ್ನು ಹೊರತುಪಡಿಸಿ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಗೋದಿ ಮೀಡಿಯಾಗಳಾಗಿವೆ. ಅವುಗಳು ನಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದಷ್ಟೇ ಅಲ್ಲ; ನಮ್ಮ ಹೋರಾಟಕ್ಕೆ ಮಸಿ ಬಳಿಯುವ ಯತ್ನ ಮಾಡುವ ಮೂಲಕ ನಮ್ಮ ಬೆನ್ನಿಗೆ ಇರಿದಿವೆ. ಇಂತಹ ಮಾಧ್ಯಮಗಳನ್ನು ನಾವು ಮಾಧ್ಯಮ ಎಂದು ಕರೆಯುವುದು ಹೇಗೆ” ಎಂಬುದು ರೈತ ನಾಯಕರ ಪ್ರಶ್ನೆ.
ಒಟ್ಟಾರೆ, ಕಳೆದ ಕೆಲವು ವರ್ಷಗಳಿಂದ ಜನಸಾಮಾನ್ಯರ ವಿಶ್ವಾಸ ಕಳೆದುಕೊಂಡು ‘ಆಳುವ ಮಂದಿಯ ಸಾಕು ನಾಯಿ’ಗಳಾಗಿವೆ ಎಂಬ ಕುಹಕಕ್ಕೆ ಗುರಿಯಾಗಿರುವ ಬಹುತೇಕ ಮಾಧ್ಯಮಗಳು, ಇದೀಗ ಐತಿಹಾಸಿಕ ರೈತ ಹೋರಾಟದ ವಿಷಯದಲ್ಲಿ ಕೂಡ ಜನದ್ರೋಹ ಎಸಗಿವೆ. ತಮ್ಮ ನಿಜ ಬಣ್ಣ ಬಯಲಾಗಿ ಬೆತ್ತಲಾಗಿವೆ.













