ನಾಗರೀಕ ಸಮಾಜ ಹಾಗೂ ಕುಟುಂಬದಿಂದ ದೂರತಳಲ್ಪಟ್ಟ ತೃತೀಯ ಲಿಂಗಿಗಳ ಮೇಲೆ ಸಾಕಷ್ಟು ಹಿಂಸೆ ದೌರ್ಜನ್ಯ ಶೋಷಣೆಗಳು ನಡೆಯುತ್ತಲೇ ಇವೆ. ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡುವುದರಿಂದ ಹಿಡಿದು ನಾನಾ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದು, ಇವರಲ್ಲಿ ಅನೇಕರು ತಮಗಿದ್ದ ಕೀಳರಿಮೆಯನ್ನು ಹೊರಹಾಕಿ ಉನ್ನತ ಶಿಕ್ಷಣ ಪಡೆದು ಸಾಧನೆಯ ಪಟ್ಟಿಯಲ್ಲಿ ಹೆಸರೂ ಸೇರ್ಪಡೆಯಾದ ಉದಾಹರಣೆಗಳೂ ಸಾಕಷ್ಟಿವೆ. ಸಮಾಜದಿಂದ ಧೂಷಣೆಗೆ ಒಳಪಟ್ಟು ನಿರಂತರ ಶೋ಼ಷಣೆಗೆ ಒಳಪಟ್ಟಿರುವಂತಹ ಮಂಗಳಮುಖಿಯರು ಹಲವು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮವರನ್ನು ಒಂದುಗೂಡಿಸಿಕೊಂಡು ಬದುಕು ಸಾಗಿಸುವುದರ ಜೊತೆಗೆ ಸಮಾಜದ ಸಮಸ್ಯೆಯನ್ನು ಪರಿಗಂಡು ಸಮಾಜ ಸೇವೆಗೂ ಮುಂದಾಗಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರೋನಾ ಸೋಂಕು ಮಾನವ ಪ್ರಪಂಚಕ್ಕೆ ದಿಢೀರನೆ ಕಾಲಿಟ್ಟು ಜನಜೀವನವನ್ನ ಅಸ್ಥವ್ಯಸ್ಥಗೊಳಿಸಿದಲ್ಲದೆ ಸಮಾಜದಲ್ಲಿ ಸಮಸ್ಯೆಗಳು ತಾಂಡವಾಡಿದ್ದು, ಹಲವರಿಗೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ ನಾನಾ ಕಡೆ ದಾನಿಗಳು ರಾಜಕೀಯ ನಾಯಕರುಗಳು ದೊಡ್ಡ ದೊಡ್ಡ ಕಂಪನಿಗಳ ಮಾಲೀಕರು ಅನಾಥರಿಗೆ, ನಿರ್ಗತಿಕರಿಗೆ ಆಹಾರದ ಕಿಟ್ಗಳು ಹಂಚಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು ಆದರೆ ಈ ವೇಳೇ ಹಲವಾರು ಮಂಗಳಮುಖಿಯರ ಸಂಘಗಳು ಬಸ್ ಸ್ಯಾಂಡ್ಗಳಲ್ಲಿ ರೈಲ್ವೇ ಸ್ಟೇಷನ್ಗಳಲ್ಲಿ ಬೀಡುಬಿಟ್ಟ ನಿರ್ಗತಿಕರಿಗೆ ಆಹಾರವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದರು. ಆದರೆ ಈ ಬಗ್ಗೆ ಸುದ್ದಿಯಾಗಿರುವುದು ಕಡಿಮೆಯೇ,
ರಾಜ್ಯದಲ್ಲಿ ಸ್ಥಾಪನೆಯಾಗುತ್ತಿದೆ ಮೊದಲ ಅನಾಥಾಶ್ರಮ
ಜನರ ನಿಂದೆಗಳನ್ನು ಮರೆತು ಇದೀಗ ಬೆಂಗಳೂರಿನಲ್ಲಿನ ಮಂಗಳಮುಖಿಯರ ತಂಡ ಮತ್ತೊಂದು ಮಹತ್ ಕಾರ್ಯಕ್ಕೆ ಮುಂದಾಗಿದೆ. ಐವರು ಮಂಗಳಮುಖಿಯರನ್ನ ಒಳಗೊಂಡ “ನಮ್ಮನೆ ಸುಮ್ಮನೆ” ಎಂಬ ಸಂಘ ಈಗಾಗಲೇ ಹಲವು ಸಾಮಾಜಿಕ ಕಾರ್ಯ ಮಾಡಿದ್ದಲ್ಲದೆ, ಅನಾಥರಿಗೆ ನಿರ್ಗತಿಕರಿಗೆ ಈ ತಂಡ ಅನಾಥಾಶ್ರಮ ಸ್ಥಾಪಿಸಲು ಮುಂದಾಗಿದೆ. ನಗರದ ಗಂಗೊಂಡನ ಹಳ್ಳಿ ಸಮೀಪದಲ್ಲಿ ಬಾಡಿಗೆಗೆ ಕಟ್ಟಡವೊಂದನ್ನು ಪಡೆದು “ನಮ್ಮನೆ ಸುಮ್ಮನೆ” ಹೆಸರಿನ ಅನಾಥಾಶ್ರಮ ಸ್ಥಾಪಿಸಲು ಮುಂದಾಗಿದ್ದಾರೆ. ಇದು ರಾಜ್ಯದಲ್ಲಿ ಮಂಗಳಮುಖಿಯರಿಂದ ಸ್ಥಾಪನೆಯಾಗುತ್ತಿರುವ ಮೊದಲ ಅನಾಥಾಶ್ರಮ ಎಂಬ ಹೆಗ್ಗಳಿಕೆ ಪಡೆಯುತ್ತಿದೆ.
ಈ ಸಂಘದಲ್ಲಿ ರೇಷ್ಮಾ ನಕ್ಷತ್ರ, ಮಿಲನಾ, ಸೌಂದರ್ಯ, ತನುಶ್ರೀ ಎಂಬ ಮಂಗಳಮುಖಿಯರು ಜೊತೆಗೂಡಿದ್ದು, ಈಗ 25 ನಿರ್ಗತಿಕರಿಗೆ ಆಶ್ರಯ ನೀಡಿದ್ದು, ಡಿ23 ರಂದು ಅಧಿಕೃತವಾಗಿ ಉದ್ಘಾಟನೆಗೊಳುತ್ತಿದೆ ಎಂದು ತಿಳಿಸಲಾಗಿದೆ. 40 ಜನಕ್ಕೆ ಆಶ್ರಯ ಕಲ್ಪಿಸಲು ಸ್ಥಳಾವಕಾಶವಿದ್ದು, ಈ ಹಿಂದೆ ರಸ್ತೆ, ಬಸ್ಸ್ಟ್ಯಾಂಡ್ಗಳಲ್ಲಿ ಸಿಕ್ಕ ಅನಾಥರನ್ನು ಸುರಕ್ಷಿತವಾಗಿ ಅನಾಥಾಶ್ರಮಗಳಿಗೆ ತಲುಪಿಸುತ್ತಿದ್ದೆವು. ಆದರೆ, ಈಗ ನಾವೇ ಅನಾಥಾಶ್ರಮ ಸ್ಥಾಪಿಸುತ್ತಿರುವುದು ಸಂತಸವಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆ ಬ್ಯೂಟಿಪಾರ್ಲರ್ ಸ್ಥಾಪಿಸುವ ಮುಖೇನ ಈ ಐವರು ಸುದ್ದಿಯಾಗಿದ್ದರು. ಇದೀಗ ಅನಾಥಾಶ್ರಮ ಸ್ಥಾಪಿಸುವ ಮೂಲಕ ಸುದ್ದಿಯಾಗಿದ್ದಾರೆ. ದಾನಿಗಳು ನೀಡಿದ ಆರ್ಥಿಕ ನೆರವಿನಿಂದ ಕೆಲವು ಅಗತ್ಯ ವಸ್ತುಗಳನ್ನು ಕೊಳ್ಳಲು ಸಹಾಯವಾಗುತ್ತೆ. ಈ ಹಣವನ್ನು ನಾವುಗಳು ದುರುಪಯೋಗ ಮಾಡಿಕೊಳ್ಳದೆ ನೊಂದವರ ಧ್ವನಿಯಾಗಿ ನಿಂತು ಅವರ ಬದುಕು ರೂಪಿಸಲು ಸಹಾಯವಾಗುತ್ತೆ ಎಂದು ಐವರು ಹೇಳಿಕೊಂಡಿದ್ದಾರೆ.