ರಾಜಸ್ಥಾನದ ರಾಜಕೀಯ ಗೊಂದಲಗಳು ಕುತೂಹಲಕಾರಿ ಘಟ್ಟದತ್ತ ಹೊರಳುತ್ತಿದೆ. ಹಲವು ಬಾರಿ ಅಧಿವೇಶನ ನಡೆಸಲು ಸಿಎಂ ಅಶೋಕ್ ಗೆಹ್ಲೋಟ್ ರಾಜ್ಯಪಾಲರಿಗೆ ಮನವಿ ಮಾಡಿ, ಕೊನೆಗೂ ಅಧಿವೇಶನಕ್ಕೆ ಸಮ್ಮತಿ ಸೂಚಿಸಿದ್ದಾರೆ. ಅಧಿವೇಶನ ಆರಂಭವಾದ ನಂತರ ವಿಶ್ವಾಸ ಮತ ಯಾಚನೆ ಮಾಡುವುದಾಗಿ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
“ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಮಾಡುವುದು ಖಚಿತ. ನಾವು ಅಧೀವೇಶನದಲ್ಲಿ ಖಂಡಿತಾ ಭಾಗವಹಿಸುತ್ತೇವೆ. ಇದರ ಹೊರತಾಗಿ, ಕರೋನಾ ಸಂಕಷ್ಟ ಹಾಗೂ ಕರೋನಾ ನಂತರದ ಆರ್ಥಿಕ ಸ್ಥಿತಿಗತಿಗಳ ಕುರಿತಾಗಿಯೂ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ರಾಜಸ್ಥಾನದಲ್ಲಿ ನಡೆಯುತ್ತಿರುವ ಕುದುರೆ ವ್ಯಾಪಾರದ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಅವರು, ಅಧಿವೇಶನ ಘೋಷಣೆಯಾದ ಬಳಿಕ ಕುದುರೆ ವ್ಯಾಪಾರದ ದರಗಳಲ್ಲಿ ಸಾಕಷ್ಟು ಏರಿಕೆ ಕಂಡಿದೆ. ಹೆಚ್ಚು ಹೆಚ್ಚು ಮೊತ್ತ ನೀಡಿ ನಮ್ಮ ಶಾಸಕರನ್ನು ಖರೀದಿಸುವ ಪ್ರಯತ್ನ ನಡೆಯುತ್ತಿದೆ. ಶಾಸಕರಿಗೆ ಕರೆಗಳ ಮೇಲೆ ಕರೆಗಳು ಬರುತ್ತಿವೆ. ಹಿಂದೆ 10 ಕೋಟಿ ಇದ್ದಂತಹ ಮೊತ್ತ15 ಕೋಟಿಗೇರಿತ್ತು. ಈಗ ನಿಮಗೆಷ್ಟು ಬೇಕೋ ಕೇಳಿ ಎನ್ನುವ ಮಟ್ಟಿಗೆ ಏರಿದೆ, ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಸಚಿನ್ ಪೈಲಟ್ ಅವರೊಂದಿಗೆ ಬಂಡಾಯ ಎದ್ದು ಕಾಂಗ್ರೆಸ್‌ನಿಂದ ಹೊರ ಹೋಗುವ ಹಂತದಲ್ಲಿರುವ ಶಾಸಕರನ್ನು ಉದ್ದೇಶಿಸಿ ಮಾತನಾಡಿರುವ ಗೆಹ್ಲೋಟ್, ಎಲ್ಲರೂ ಕುದುರೆ ವ್ಯಾಪಾರದಲ್ಲಿ ಮಾರಿ ಹೋಗಿದ್ದಾರೆಂದು ನಾನು ಅಂದುಕೊಳ್ಳುವುದಿಲ್ಲ. ಯಾರು ಹಣ ಪಡೆದುಕೊಂಡಿಲ್ಲವೋ ಅವರು ಕಾಂಗ್ರೆಸ್‌ಗೆ ವಾಪಾಸ್ ಬರಬೇಕು ಎಂಬುದು ನನ್ನ ಅಭಿಲಾಷೆ, ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕ್ಯಾಂಪ್ ಜೈಸಲ್ಮೇರ್‌ಗೆ ಶಿಫ್ಟ್:
ಇನ್ನು ಈವರೆಗೆ ಜೈಪುರ್-ದೆಹಲಿ ಹೆದ್ದಾರಿಯಲ್ಲಿದ್ದ ಹೊಟೇಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಗೆಹ್ಲೋಟ್ ಬಣದ ಶಾಸಕರನ್ನು ಜೈಸಲ್ಮೇರ್‌ಗೆ ಶಿಫ್ಟ್ ಮಾಡಲಾಗುತ್ತಿದೆ. ಜುಲೈ 13ರಿಂದ ಹೊಟೇಲ್‌ನಲ್ಲಿ ಖಾಯಂ ಮೊಕ್ಕಾಂ ಹೂಡಿರುವ ಕಾಂಗ್ರೆಸ್ ಶಾಸಕರನ್ನು ಶಾಸಕಾಂಗ ಪಕ್ಷದ ಸಭೆಯ ಬಳಿಕ ಗೆಹಲೋಟ್ ಮಾತನಾಡಿಸಲಿದ್ದಾರೆ ಎಂದು ತಿಳಿದು ಬಂದಿದೆ.