1994ರಿಂದ ಕರ್ನಾಟಕ ವಿಧಾನಮಂಡಲಗಳ ಅಧಿವೇಶನ ಕಲಾಪಗಳನ್ನು ಖಾಸಗಿ ಟಿವಿ ಚಾನಲುಗಳು ನೇರ ಪ್ರಸಾರ ಮಾಡುತ್ತಿದ್ದವು. ಇದೀಗ ಕರ್ನಾಟಕ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿವೇಶನದ ಸಮಯದಲ್ಲಿ ಖಾಸಗಿ ಟಿವಿ ಕ್ಯಾಮೆರಾಗಳನ್ನು ಸದನ ಒಳಗೆ ತರಲು ನಿಷೇಧ ಹೇರಿರುವುದು ಚರ್ಚೆಗೆ ಕಾರಣವಾಗಿದೆ. ಅಕ್ಟೋಬರ್ 10 ರಿಂದ ಮೂರು ದಿನಗಳ ಕಾಲ ಅಧಿವೇಶನ ನಡೆಯುವ ಕಲಾಪದ ವರದಿ ಮಾಡಲು ಖಾಸಗಿ ಟಿವಿಗಳಿಗೆ ನಿರ್ಬಂಧ ಹೇರಿರುವುದಕ್ಕೆ ಕಾರಣ ಏನು ಎಂಬುದನ್ನು ಸ್ಪೀಕರ್ ಸ್ಪಷ್ಟಪಡಿಸಿಲ್ಲ.
ಖಾಸಗಿ ವಾಹಿನಿಗಳಿಗೆ ವಿಡಿಯೊ ಫೀಡ್ ಅನ್ನು ಸರಕಾರಿ ಸ್ವಾಮ್ಯದ ದೂರದರ್ಶನ (ಚಂದನ) ಮೂಲಕ ಪಡೆಯಬಹುದು. ದೂರದರ್ಶನ ಚಾನಲಿನ ಕ್ಯಾಮೆರಾಗಳಿಗೆ ಮಾತ್ರವೇ ಅಧಿವೇಶನದ ವಿಡಿಯೋ ಚಿತ್ರೀಕರಣ ಮಾಡಲು ಅವಕಾಶ ನೀಡಲಾಗಿದೆ. ಖಾಸಗಿ ಟಿವಿ ಚಾನಲುಗಳಿಗೆ ಮಾತ್ರವಲ್ಲದೆ, ಪ್ರಿಂಟ್ ಮಿಡಿಯಾಗಳ ಸ್ಟೀಲ್ ಕ್ಯಾಮರಾಗಳಿಗೆ ಕೂಡ ನಿಷೇಧ ಹೇರಲಾಗಿದೆ. ವಾರ್ತಾ ಇಲಾಖೆಯವರು ನೀಡುವ ಫೋಟೊಗಳನ್ನು ಪತ್ರಿಕೆಗಳು ಬಳಸಿಕೊಳ್ಳಬೇಕು. ಅಕ್ಟೋಬರ್ 11ರ ಪ್ರಜಾವಾಣಿ ಪತ್ರಿಕೆ ಫೋಟೋ ಬದಲು ಚಿತ್ರವೊಂದನ್ನು ಬಳಸಿಕೊಂಡಿದೆ.
ಸ್ಪೀಕರ್ ಕ್ರಮವನ್ನು ಪ್ರತಿಪಕ್ಷ ಮುಖಂಡ ಸಿದ್ದರಾಮಯ್ಯ ಖಂಡಿಸಿದ್ದಾರೆ. ಮೊದಲ ದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸ್ಪೀಕರ್ ತಮ್ಮ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದರು. ನೇರ ಪ್ರಸಾರ ಇಲ್ಲದಿರುವ ಬಗ್ಗೆ ಸದನದ ಕಲಿಯೂ ಆಗಿರುವ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಟಿವಿ ಚಾನಲುಗಳ ವರದಿಗಾರರು. ಟಿವಿ ಚಾನಲುಗಳ ರಾಜಕೀಯ ವರದಿಗಾರರ ಪ್ರಕಾರ ಪ್ರತಿಪಕ್ಷಗಳು ಅಧಿವೇಶನ ಬಹಿಷ್ಕರಿಸುವ ದೃಶ್ಯಾವಳಿಗಳನ್ನು ತಮಗೆ ನೀಡಿಲ್ಲ ಎಂದು ಆಪಾದಿಸಿದ್ದಾರೆ.
ಮಾಧ್ಯಮಗಳ ಮೇಲೆ ನೇರ ನಿಯಂತ್ರಣ ಹೇರಬಾರದು, ಮಾಧ್ಯಮಗಳೇ ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು ಎಂಬುದು ಹಿಂದಿನಿಂದಲೂ ಕೇಳಿ ಬಂದಿರುವ ಮಾತು. ಎಷ್ಟರ ಮಟ್ಟಿಗೆ ಸ್ವಯಂ ನಿಯಂತ್ರಣ ಹೇರಿಕೊಂಡಿವೆ ಎಂಬುದು ಚರ್ಚಾಸ್ಪದ. ಮಾಧ್ಯಮಗಳು ಜನ ಹಿತಾಸತಕ್ತಿಗೆ ಅನುಗುಣವಾಗಿ ಕೆಲಸ ಮಾಡಬೇಕಾಗುತ್ತದೆ. ಜನಪರವಾದ ಕೆಲಸ ಮಾಡುವಾಗ ಮಾಧ್ಯಮಗಳು ಯಾವ ಸರ್ಕಸ್ ಮಾಡಿದರೂ ಅದಕ್ಕೊಂದು ಸಮ್ಮತಿ ಇರುತ್ತದೆ. ಸದನದಲ್ಲಿ ಜನಪ್ರತಿನಿಧಿಗಳು ಮೊಬೈಲ್ ಫೋನಿನಲ್ಲಿ ಏನೇನೊ ವೀಕ್ಷಣೆ ಮಾಡುತ್ತಿರುವುದನ್ನು ಖಾಸಗಿ ಟಿವಿ ಚಾನಲುಗಳು ಸೆರೆ ಹಿಡಿದಾಗ ಜನರು ಮಾಧ್ಯಮಗಳ ಕೆಲಸವನ್ನು ಶ್ಲಾಘಿಸಿದ್ದರು. ಇಂತಹ ಪ್ರಜಾಪ್ರಭುತ್ವಪರ, ಜನಪರ ಕೆಲಸ ಮಾಡಿದಾಗ ಜನರು ಮಾಧ್ಯಮಗಳ ಪರವಾಗಿ ನಿಂತಿದ್ದಾರೆ.
ರಾಜಕೀಯದವರಿಗೆ ಟಿವಿ ಚಾನಲುಗಳು ಮತ್ತದರಲ್ಲೂ ಟಿವಿ ಕ್ಯಾಮರಾಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಇತ್ತೀಚಿಗಿನ ದಿನಗಳಲ್ಲಿ ರಾಜಕೀಯದವರಿಗೂ ಕೂಡ ಟಿವಿ ಚಾನಲುಗಳ ಮೇಲಿನ ಪ್ರೀತಿ ಕಡಿಮೆ ಆಗುತ್ತಿದೆ. ಖಾಸಗಿ ಟಿವಿ ಚಾನಲುಗಳು ಟಿ ಆರ್ ಪಿ ಮತ್ತು ಆದಾಯದ ಹಿಂದೆ ಬಿದ್ದಿರುವುದರಿಂದ ಕೆಲವೊಮ್ಮೆ ಮಾಧ್ಯಮದ ಘನತೆ ಮತ್ತು ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಿದೆಯೇ ಎಂಬ ಆತಂಕ ಇದೆ.
ಎನ್ ಡಿ ಟಿ ವಿ ಇಂಡಿಯ (NDTV India) ಪತ್ರಕರ್ತ ರವೀಶ್ ಕುಮಾರ್ ಅಭಿಪ್ರಾಯ ಪ್ರಕಾರ ಈಗ ಖಾಸಗಿ ವಾಹಿನಿಗಳು ಪ್ರಜಾಪ್ರಭುತ್ವ ವಿರೋಧಿಯಾಗಿವೆ ಎಂಬುದನ್ನು ಕೂಡ ಗಮನಿಸಬೇಕಾಗುತ್ತದೆ. ನ್ಯಾಯಾಲಯಗಳು ಕೋರ್ಟ್ ಕಲಾಪಗಳನ್ನು ನೇರ ಪ್ರಸಾರ ಮಾಡಲು ಮುಂದಾಗಿರುವ ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವದ ದೇವಾಲಯ ಎಂದು ಕರೆಯಲಾಗುವ ಸದನದ ಕಲಾಪಗಳನ್ನು ನೇರ ಪ್ರಸಾರ ಮಾಡುವುದು ಅತೀ ಅಗತ್ಯವಾಗಿದೆ.
ಖಾಸಗಿ ಟಿವಿ ಚಾನಲುಗಳು ಹೆಚ್ಚು ಸಂಖ್ಯೆಯಲ್ಲಿ ಇಲ್ಲದ ಕಾಲದಲ್ಲಿ ದೇಶದ ಸ್ಪೀಕರುಗಳು, ಸಭಾಧ್ಯಕ್ಷರ ಅಧಿವೇಶನದಲ್ಲಿ ಕಲಾಪಗಳ ವರದಿ ಮಾಡಲು ಟಿವಿ ಚಾನಲುಗಳಿಗೆ ಅವಕಾಶ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಕೆ. ಆರ್. ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿದ್ದಾಗ 1994ರಲ್ಲಿ ಕರ್ನಾಟಕ ವಿಧಾನಸಭೆಯ ಕಲಾಪವನ್ನು ವರದಿ ಮಾಡಲು ಖಾಸಗಿ ಟಿವಿ ಚಾನಲುಗಳಿಗೆ ಅವಕಾಶ ನೀಡಲಾಗಿತ್ತು. ಕಲಾಪಗಳು ಪಾರದರ್ಶಕವಾಗಿರಲಿ ಎಂಬ ಕಾರಣಕ್ಕಾಗಿ ಟಿವಿ ಚಾನಲುಗಳಿಗೆ ಅವಕಾಶ ನೀಡಲಾಗಿದೆ ಎನ್ನುತ್ತಾರೆ ರಮೇಶ್ ಕುಮಾರ್. ಹಾಗಾದರೆ, ಹೊಸ ಸ್ಪೀಕರ್ ಕಾಗೇರಿ ಅವರು ಅಡಗಿಸಿಡಲು ಬಯಸಿರುವುದಾದರೂ ಏನು ಎಂಬುದು ಕುತೂಹಲ ಉಂಟು ಮಾಡಿದೆ.
ಇದೇನು ಮೊದಲಲ್ಲ:
ನಿಷೇಧ ಹೇರಿರುವುದು ಇದೇ ಮೊದಲಲ್ಲ. 2012ರಲ್ಲಿ ಲಕ್ಷ್ಮಣ ಸವದಿ ಮತ್ತಿತರರು ನೀಲಿ ಚಿತ್ರ ವೀಕ್ಷಣೆ ಮಾಡಿದ ಪ್ರಕರಣದ ಅನಂತರ ತಾತ್ಕಾಲಿಕವಾಗಿ ಟಿವಿ ಕ್ಯಾಮರಾಗಳನ್ನು ನಿರ್ಬಂಧಿಸಲಾಗಿತ್ತು. 2014ರಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಕಾಗೋಡು ತಿಮ್ಮಪ್ಪ ಸ್ಪೀಕರ್ ಆಗಿದ್ದಾಗ ಈ ರೀತಿಯ ನಿರ್ಬಂಧ ಹೇರುವ ಪ್ರಸ್ತಾಪ ಮಾಡಿದ್ದರು. ಆದರೆ, ಅದು ಕಾರ್ಯಗತ ಆಗಿರಲಿಲ್ಲ.
ಇದಕ್ಕೂ ಮೊದಲು ರಾಜ್ಯಸಭಾ ಟಿವಿ ಮಾದರಿಯಲ್ಲಿ ವಿಧಾನಮಂಡಲದ ಟಿವಿ ಆರಂಭಿಸುವ ಪ್ರಸ್ತಾವ ಇತ್ತು. ಇಂತಹ ಯೋಜನೆಯನ್ನು ಕಾರ್ಯಗತ ಮಾಡಲು ಮಾಧ್ಯಮ ಮಂದಿಯ ಲಾಬಿ ಹೆಚ್ಚಾದ ಪರಿಣಾಮ ಸರಕಾರ ಅಂತಹ ಪ್ರಸ್ತಾವನ್ನು ವಿಳಂಬ ಮಾಡಿತ್ತು. ರಾಜ್ಯಸಭಾ ಟಿ.ವಿ.ಯ ಮಾದರಿಯಲ್ಲೇ ದೂರದರ್ಶನ ಮೂಲಕ ಫೀಡ್ ನೀಡುತ್ತೇವೆ ಎನ್ನುತ್ತಾರೆ ಸ್ಪೀಕರ್. ಆದರೆ, ಫೀಡ್ ನೀಡುವಾಗ ಕತ್ತರಿ ಆಡಿಸಲಾಗುತ್ತಿದೆ ಎಂಬ ಆರೋಪವೂ ಇದೆ. ಇದೀಗ ಪ್ರಾಯೋಗಿಕವಾಗಿ ಆರಂಭ ಆಗಿರುವ ಹೊಸ ವ್ಯವಸ್ಥೆಯಲ್ಲಿ ಗುಣಾತ್ಮಕ ಅಂಶಗಳು ಇವೆ, ಪ್ರಜಾಪ್ರಭುತ್ವ ವಿರೋಧ ಅಂಶಗಳು ಇವೆ.
ಇಂತಹ ಪರಿಸ್ಥಿತಿಯಲ್ಲಿ ಸರಕಾರ ಕನಿಷ್ಟ ಎರಡು ಅಥವಾ ಮೂರು ಏಜೆನ್ಸಿಗಳಿಗೆ ಕಲಾಪಗಳ ಚಿತ್ರೀಕರಣ, ಪ್ರಸಾರ ಮತ್ತು ಫೀಡ್ ವಿತರಿಸುವ ಅವಕಾಶ ನೀಡಬೇಕು. ದೂರದರ್ಶನ ಅಲ್ಲದೆ, ಒಂದು ಅಥವ ಎರಡು ವಿಡಿಯೋ ನ್ಯೂಸ್ ಏಜೆನ್ಸಿಗಳಿಗೆ ಅವಕಾಶ ನೀಡಲಿ. ಸಾಧ್ಯವಾದರೆ, ವಿಧಾನಮಂಡಲವೇ ಒಂದು ಟಿವಿ ಚಾನಲ್ ಆರಂಭಿಸಲಿ.