ಬಿಹಾರ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೂರು ದಿನಗಳಲ್ಲಿ ಜೆಡಿಯು ಶಾಸಕ ಮೇವಲಾಲ್ ಚೌಧರಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನವೆಂಬರ್ 16 ರಂದು ನಿತೀಶ್ ಕುಮಾರ್ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಅಧಿಕಾರ ಸ್ವೀಕರಿಸಿಕೊಂಡ ಮೂರೇ ದಿನಗಳಲ್ಲಿ ಸಚಿವರೊಬ್ಬರ ರಾಜಿನಾಮೆಯೊಂದಿಗೆ ತನ್ನ ಆಡಳಿತಕ್ಕೆ ನಿತೀಶ್ ಮುನ್ನುಡಿಯಿಟ್ಟಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೇವ ಲಾಲ್ ಚೌಧರಿ ವಿರುದ್ಧ ಮೂರು ವರ್ಷಗಳ ಹಿಂದಿನ ಭ್ರಷ್ಟಾಚಾರ ಪ್ರಕರಣವೊಂದು ಬಾಕಿಯಿದ್ದು, ಚೌಧರಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ನೂತನ ಸರ್ಕಾರವನ್ನು ಪ್ರತಿಪಕ್ಷಗಳು ಟೀಕೆಗೆ ಗುರಿಯಾಗಿಸಿದ್ದವು. ಈ ಹಿನ್ನೆಲೆಯಲ್ಲಿ ಚೌಧರಿ ರಾಜಿನಾಮೆ ಸಲ್ಲಿಸಿದ್ದಾರೆ.
ಭಾಗಲ್ಪುರ್ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸಹಾಯಕ ಪ್ರಾಧ್ಯಾಪಕ ಮತ್ತು ಕಿರಿಯ ವಿಜ್ಞಾನಿಗಳ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಾರಾಪುರದ ಜೆಡಿಯು ಶಾಸಕ ಮೇವಲಾಲ್ ಚೌಧರಿ ವಿರುದ್ಧ 2017 ರಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿತ್ತು.
Also Read: ಬಿಹಾರ: ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ
ಬಿಹಾರದ ಆಗಿನ ರಾಜ್ಯಪಾಲರಾಗಿದ್ದ ರಾಮನಾಥ್ ಕೋವಿಂದ್ ಅವರ ಅನುಮೋದನೆಯೊಂದಿಗೆ ಮೇವಲಾಲ್ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ಶುರು ಮಾಡಿತ್ತು. ಅದಾಗ್ಯೂ, ಇದುವರೆಗೆ ಅವರ ವಿರುದ್ಧ ಈ ಪ್ರಕರಣದಲ್ಲಿ ಯಾವುದೇ ರೀತಿಯ ಚಾರ್ಜ್ ಶೀಟ್ ಸಲ್ಲಿಸಿರಲಿಲ್ಲ.
ಅಷ್ಟೇ ಅಲ್ಲದೆ, ಮೇವಲಾಲ್ ಚೌಧರಿಗೆ ರಾಷ್ಟ್ರ ಗಾನ ಹಾಡಲು ಬರುವುದಿಲ್ಲವೆಂಬ ವಿಡಿಯೋ ಒಂದನ್ನು ಆರ್‌ಜೆಡಿ ದಿನದ ಹಿಂದೆ ಹಂಚಿಕೊಂಡಿತ್ತು. ಇದು ಸಾಕಷ್ಟು ವೈರಲ್ ಆಗಿದ್ದು, ಮೇವಲಾಲ್ ವಿರುದ್ಧ ಟೀಕೆಗೂ ಗುರಿಯಾಗಿತ್ತು.