“ಅಟ್ಟ ಹೇರಿದ ಮೇಲೆ ಏಣಿ ಒದೆಯುವುದು” ಎಂಬ ನಾಣ್ಣುಡಿ ಗ್ರಾಮೀಣ ಭಾಗದಲ್ಲಿ ಜನಜನಿತವಾಗಿದೆ. ಈ ಮಾತು ಅಕ್ಷರಶಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಅವರು ಪ್ರತಿನಿಧಿಸುವ ಬಿಜೆಪಿಗೆ ಅನ್ವಯಿಸುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಜನ ಸಂಘಟನೆಗಳನ್ನು ದೇಶ ವಿರೋಧಿ ಎಂದು ಬಿಂಬಿಸುವ ಕೆಲಸವನ್ನು ಪ್ರಜ್ಙಾಪೂರ್ವಕವಾಗಿ ಮಾಡುತ್ತಿರುವ ಬಿಜೆಪಿಯು 1973ರಲ್ಲಿ ಗುಜರಾತ್‌ನಲ್ಲಿ ನಡೆದ ಅತ್ಯಂತ ಯಶಸ್ವಿ ನವನಿರ್ಮಾಣ ಆಂದೋಲವನ್ನು ಅವಮಾನಿಸುವ ಪ್ರಯತ್ನ ಮಾಡುತ್ತಿದೆ.
ಗುಜರಾತಿನ ಅಹಮದಾಬಾದ್ ನ ಎಲ್ ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 1972ರಲ್ಲಿ ಹಾಸ್ಟೆಲ್ ಹಾಗೂ ಊಟದ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳಿಂದ ಆರಂಭವಾದ ಹೋರಾಟವು ದೇಶಾದ್ಯಂತ ವ್ಯಾಪಿಸಿತ್ತು. ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ದುರಾಡಳಿತ ಹಾಗೂ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸರ್ವಾಧಿಕಾರದಿಂದ ಇಡೀ ವ್ಯವಸ್ಥೆ ನಲುಗಿತ್ತು. ಆ ಸಂದರ್ಭದಲ್ಲಿ ಗುಜರಾತಿನ ನವನಿರ್ಮಾಣ ಆಂದೋಲನದ ಯಶಸ್ಸಿನಿಂದ ಪ್ರೇರಿತರಾದ ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅಧಿಕಾರದಿಂದ ಕಿತ್ತೊಗೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರಲ್ಲದೇ ಭಾರತದ ರಾಜಕೀಯ ದಿಕ್ಕು-ದಿಸೆಯನ್ನೇ ಬದಲಿಸಿದ್ದರು.
ಈ ನವನಿರ್ಮಾಣ ಹೋರಾಟವು ಗುಜರಾತ್ ನಲ್ಲಿ ಯಶಸ್ವಿಯಾಗುವಲ್ಲಿ ಅಂದಿನ ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಗಮನಾರ್ಹವಾಗಿತ್ತು. ಭಾರತೀಯ ಜನ ಸಂಘ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಹೋರಾಟ ಸಂಘಟಿಸುವಲ್ಲಿ 24 ವರ್ಷದ ನರೇಂದ್ರ ಮೋದಿ ಯಶಸ್ವಿಯಾಗಿದ್ದರು. ಇದು ಮೋದಿಯವರಿಗೆ ಸಾಮಾಜಿಕ ಬದುಕಿನಲ್ಲಿ ದೊರೆತ ಮೊದಲ ಜಯ ಎಂದು ಅವರ ವೆಬ್ ಸೈಟ್ (www.narendramodi.in) ನಲ್ಲಿ ಉಲ್ಲೇಖಿಸಲಾಗಿದೆ. ಈಗ ಅದೇ ನರೇಂದ್ರ ಮೋದಿಯವರು “ಸಿಎಎ ವಿರೋಧಿಸುತ್ತಿರುವವರನ್ನು ಅವರ ದಿರಿಸಿನಿಂದ ಪತ್ತೆಹಚ್ಚಬಹುದು” ಎನ್ನುವ ಮೂಲಕ ತಾನೊಬ್ಬ ಅಧಿಕಾರದಾಹಿ ಹಾಗೂ ಕಪಟ ರಾಜಕಾರಣಿ ಎಂಬುದನ್ನು ಸಾಬೀತುಪಡಿಸಿದ್ದಾರೆ.
1972ರಲ್ಲಿ ತೀವ್ರ ಬರದ ಹಿನ್ನೆಲೆಯಲ್ಲಿ ದೇಶದಲ್ಲೆಡೆ ಬಡತನ ಹಾಗೂ ನಿರುದ್ಯೋಗ ವ್ಯಾಪಕವಾಗಿತ್ತು. ಇಂಥ ವಿಷಮ ಪರಿಸ್ಥಿತಿಯಲ್ಲಿ ಚಿಮನ್ ಭಾಯ್ ಪಟೇಲ್ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರವು ಗುಜರಾತಿನಲ್ಲಿ ಹಾಸ್ಟೆಲ್ ಹಾಗೂ ಆಹಾರದ ಶುಲ್ಕ ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದನ್ನು ವಿರೋಧಿಸಿ ಬೀದಿಗಿಳಿದ ವಿದ್ಯಾರ್ಥಿಗಳಿಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಆರ್ ಎಸ್ ಎಸ್ ಬೆಂಬಲ ನೀಡಿದ್ದವು. ವಿರೋಧ ಪಕ್ಷಗಳು ಹೋರಾಟದಲ್ಲಿ ಭಾಗಿಯಾಗಿದ್ದರಿಂದ ಆಂದೋಲನ ರಾಜ್ಯಾದ್ಯಾಂತ ವ್ಯಾಪಿಸಿತ್ತು. ಹೋರಾಟಕ್ಕೆ ಮಣಿದ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವು ಗುಜರಾತಿನಲ್ಲಿ ರಾಷ್ಟ್ರಪತಿ ಆಡಳಿತ ಹೇರಿತ್ತು. ಬಳಿಕ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ನಿರ್ಧಾರ ಪ್ರಕಟಿಸಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಹೋಗಿತ್ತು. 1975ರಲ್ಲಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು.
ಇಂದಿರಾ ಕಾಲದಲ್ಲಿ ಆದಂತೆ ಈಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಜನ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಉತ್ತರ ಪ್ರದೇಶ, ಕರ್ನಾಟಕ ಹಾಗೂ ಅಸ್ಸಾಂನಲ್ಲಿ ಹೋರಾಟ ನಿರತ 30 ಜನರನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ಜಾಮೀಯಾ ಮಿಲಿಯಾ, ಅಲಿಘಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಿರ್ದಯವಾಗಿ ದಾಳಿ ನಡೆಸಿದ್ದಾರೆ. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ನಡೆಸಿದ ದಾಳಿಗೆ ಪೊಲೀಸರೇ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಪ್ರಬಲವಾಗಿ ಕೇಳಿಬಂದಿದೆ.
ಹೋರಾಟದಲ್ಲಿ ಭಾಗಿಯಾದ ಕಾರಣಕ್ಕೆ ಹಲವು ಅಮಾಯಕರ ವಿರುದ್ಧ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಅಸ್ಸಾಂನ ರೈತ ನಾಯಕ ಅಖಿಲ್ ಗೊಗೊಯ್ ಅವರನ್ನು ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್ ಐಎ) ಬಂಧಿಸಿದೆ. ಭೀಮ ಸೇನೆ ಮುಖಂಡ ಚಂದ್ರಶೇಖರ್ ಆಜಾದ್ ಅವರನ್ನು ಬಂಧಿಸಿ, ಜೈಲಿಗಟ್ಟಲಾಗಿತ್ತು. ಆಜಾದ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೆಹಲಿಯ ಶಹೀನ್ ಬಾಗ್ ನಲ್ಲಿ ಕಳೆದ 40 ದಿನಗಳಿಂದ ಮಹಿಳೆಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ದೆಹಲಿಯ ಕೊರೆಯುವ ಚಳಿಯಲ್ಲಿ ಪುಟಾಣಿ ಮಕ್ಕಳನ್ನು ಹೊತ್ತು ಮಹಿಳೆಯರು ನಡೆಸುತ್ತಿರುವ ಧರಣಿಯ ಸ್ಥಳಕ್ಕೆ ಮೋದಿ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಭೇಟಿ ನೀಡಿಲ್ಲ. ಬದಲಾಗಿ ಶಹೀನ್ ಬಾಗ್ ನಲ್ಲಿ ಪ್ರತಿಭಟನಾ ನಿರತ ಮಹಿಳೆಯರಿಗೆ ತಲಾ 500 ರುಪಾಯಿ ಹಣ ಪಾವತಿಸಲಾಗುತ್ತಿದೆ. ಆ ಕಾರಣದಿಂದ ಅವರು ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ದೇಶ ವಿರೋಧಿ ಘೋಷಣೆ ಕೂಗುತ್ತಿದ್ದಾರೆ ಎನ್ನುವುದರ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನಾಕಾರರಿಗೆ ಮಸಿ ಬಳಿಯುವ ಕೆಲಸವನ್ನು ಮೋದಿಯವರ ಬಿಜೆಪಿ ಮಾಡುತ್ತಿದೆ. ಮಹಿಳೆಯರು ಹಣ ಪಡೆದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಹೀನ್ ಬಾಗ್ ಹೋರಾಟಗಾರರು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹಾಗೂ ಆಯ್ದ ಸುದ್ದಿ ವಾಹಿನಿಗಳ ಸಂಪಾದಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಹೀಗೆ ಆಡಳಿತ ಪಕ್ಷವು ನಾನಾ ಥರದಲ್ಲಿ ಹೋರಾಟಗಾರರನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ನಿರತವಾಗಿದೆ.
1973ರ ನವ ನಿರ್ಮಾಣ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ ಮೋದಿಯವರು ಇಂದಿನ ಹೋರಾಟವನ್ನು ಅವಮಾನಿಸುತ್ತಿರುವುದೇಕೆ? ಜನ ಹೋರಾಟದ ಮೂಲಕ ರಾಜಕೀಯ ಬದುಕು ಆರಂಭಿಸಿದ ಮೋದಿಯವರಿಗೆ ಜನರು ಹಾಗೂ ವಿದ್ಯಾರ್ಥಿಗಳ ಕೂಗು ಕೇಳುತ್ತಿಲ್ಲವೇಕೆ? ಜನ ಹೋರಾಟಗಳನ್ನು ನಿರ್ಲಕ್ಷಿಸಿದ ಯಾವ ಸರ್ಕಾರಗಳು ಜಗತ್ತಿನಲ್ಲಿ ನಿಂತಿಲ್ಲ. ಈ ಸತ್ಯವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಮಾತುಕತೆ ಹಾಗೂ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ತೋರಬೇಕಿದೆ, ಹೋರಾಟಗಳು ನಿರಂತರವಾಗಿ ನಡೆದರೆ ಅಲ್ಲಿನ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇರುವುದಿಲ್ಲ. ದೇಶದ ಆರ್ಥಿಕ ಸ್ಥಿತಿ ಕೆಟ್ಟಿರುವ ಸಂದರ್ಭದಲ್ಲಿ ಜನ ಹೋರಾಟಗಳನ್ನು ನಿರ್ಲಕ್ಷಿಸುವುದು ಸರ್ಕಾರಕ್ಕೆ ಹೊಡೆತ ನೀಡುವುದು ನಿಶ್ಚಿತ. ಈ ಸೂಕ್ಷ್ಮವನ್ನು ಮೋದಿ ಹಾಗೂ ಅವರ ಬೆಂಬಲಿಗರು ಅರಿಯಬೇಕಿದೆ.