ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕ ಮತ್ತಷ್ಟು ಬಡವಾಗುತ್ತಿರುವ ಜಾತ್ಯತೀತ ಜನತಾದಳದಲ್ಲಿ ಪರಿಸ್ಥಿತಿ ಸರಿಹೋಗಬಹುದು ಎಂಬ ನಿರೀಕ್ಷೆ ಸುಳ್ಳಾಗುವಂತೆ ಕಾಣುತ್ತಿದೆ. ಪಕ್ಷದ ಮುಖಂಡರ ನೇರ ಮಾತುಗಳನ್ನು ಒಪ್ಪಿಕೊಳ್ಳಲಾಗದ ವರಿಷ್ಠರು (ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ) ನೀಡುತ್ತಿರುವ ಪ್ರತಿಕ್ರಿಯೆಗಳು ಹೇಗೋ ಇದ್ದೇವೆ ಎಂದು ಹೊಂದಾಣಿಕೆ ಮಾಡಿಕೊಂಡು ಪಕ್ಷದಲ್ಲಿ ಉಳಿದುಕೊಂಡವರನ್ನೂ ಬೇಸರಗೊಳ್ಳುವಂತೆ ಮಾಡುತ್ತಿದೆ. ಇದರ ಮಧ್ಯೆಯೇ ಇರುವವರನ್ನು ಸಮಾಧಾನಪಡಿಸುವ ಬದಲು ಪಕ್ಷ ತೊರೆದು ಹೋಗುವವರೆಲ್ಲಾ ಹೋಗಲಿ ಎಂಬ ಧೋರಣೆಯನ್ನು ವರಿಷ್ಠರು ಹೊಂದಿರುವುದು ಅಸಮಾಧಾನವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ಹೌದು, ಜೆಡಿಎಸ್ ನಲ್ಲಿ ಕಳೆದ ಎರಡು-ಮೂರು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷವನ್ನು ಮತ್ತೆ ಆರಂಭದಿಂದಲೇ ಕಟ್ಟುವ ಪರಿಸ್ಥಿತಿಯನ್ನು ತಂದೊಂಡಿದ್ದರೂ ಆಶ್ಚರ್ಯವಲ್ಲ. ಪಕ್ಷದ ವರಿಷ್ಠರು ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಮಾಜಿ ಸಚಿವ, ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆ ಪಕ್ಷ ತೊರೆಯುವ ಅಲೋಚನೆಯಲ್ಲಿರುವ ಶಾಸಕರ ಆಲೋಚನೆಯನ್ನು ಪಕ್ಷದಿಂದ ದೂರ ಸರಿಯುವ ನಿಟ್ಟಿನಲ್ಲಿ ಇನ್ನಷ್ಟು ಗಟ್ಟಿಯಾಗಿ ಕೊಂಡೊಯ್ಯುತ್ತಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಶಾಸಕರೊಬ್ಬರು, ಪಕ್ಷದಲ್ಲಿ ನಮಗೇನೂ ಹೇಳಿಕೊಳ್ಳುವಂತಹ ಅಸಮಾಧಾನ ಇಲ್ಲ. ಅದೇ ರೀತಿ ಪೂರ್ಣ ಸಮಾಧಾನವೂ ಇಲ್ಲ. ಆದರೆ, ನಾಯಕರ ಹೇಳಿಕೆಗಳು ಬೇಸರ ತರಿಸುತ್ತಿವೆ. ಪಕ್ಷ ತೊರೆದರೂ ಇವರಿಗೆ ಬೇಸರವಿಲ್ಲವೇನೋ ಎಂಬ ಅನುಮಾನ ಮೂಡುವಂತೆ ಮಾಡುತ್ತಿದೆ ಎನ್ನುತ್ತಾರೆ.
ಬಸವರಾಜ ಹೊರಟ್ಟಿ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಬಹಿರಂಗಪಡಿಸುತ್ತಿರುವುದು ಇದು ಹೊಸದೇನೂ ಅಲ್ಲ. ಪಕ್ಷದಲ್ಲಿ ತಮಗೆ ಅನ್ಯಾಯವಾದಾಗಲೆಲ್ಲಾ ಅದನ್ನು ಬಹಿರಂಗವಾಗಿಯೇ ತೋರಿಸಿಕೊಂಡಿದ್ದಾರೆ ಮತ್ತು ನಾಯಕರ ವರ್ತನೆ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ. ಆದರೆ, ಯಾವತ್ತೂ ಪಕ್ಷ ತೊರೆಯಲಿಲ್ಲ. ಕಾಂಗ್ರೆಸ್, ಬಿಜೆಪಿಯಿಂದ ಆಹ್ವಾನ ಬಂದರೂ ಅದನ್ನು ನಯವಾಗಿಯೇ ನಿರಾಕರಿಸಿ ಜೆಡಿಎಸ್ ನಲ್ಲಿ ಮುಂದುವರಿದಿದ್ದಾರೆ. ಪಕ್ಷದ ನಾಯಕತ್ವದ ಬಗ್ಗೆ ಬೇಸರವಾದಾಗಲೆಲ್ಲಾ ತಮಗೆ ಅನ್ಯ ಪಕ್ಷಗಳಿಂದ ಬಂದ ಆಹ್ವಾನವನ್ನು ಹೇಳಿಕೊಂಡಿದ್ದಾರೆ. ಈಗಲೂ ಅವರು ಬರುವುದಾದರೆ ಸೇರಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧವಿದೆ ಎಂಬುದೂ ಸುಳ್ಳಲ್ಲ.
ಪಕ್ಷದ ನಾಯಕರ ತಪ್ಪುಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ ಎಂಬುದನ್ನು ಹೊರತುಪಡಿಸಿ ಹೊರಟ್ಟಿ ಅವರ ಪಕ್ಷ ನಿಷ್ಠೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಪಕ್ಷದ ವರಿಷ್ಠರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಅವರ ಹೇಳಿಕೆ ಸುಳ್ಳೂ ಅಲ್ಲ. ಏಕೆಂದರೆ, ಇತರೆ ಪಕ್ಷಗಳಂತೆ ಅಧಿಕಾರ ರಾಜಕಾರಣದ ಹಿಂದೆ ಬಿದ್ದಿರುವ ಜೆಡಿಎಸ್ ಹೊರಟ್ಟಿ ಅವರಂಥ ನಾಯಕರನ್ನು ನಿರ್ಲಕ್ಷ ಮಾಡಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ಸಿಗದಿರುವುದೇ ಇದಕ್ಕೆ ಉದಾಹರಣೆ.
ಪಕ್ಷದ ಹಿರಿಯ ನಾಯಕರಾಗಿ, ಸತತ ಎಂಟು ಬಾರಿ ವಿಧಾನ ಪರಿಷತ್ ಪ್ರವೇಶಿಸಿರುವ ಹೊರಟ್ಟಿ ಅವರಿಗೆ ಸಚಿವರಾಗಲು ಎಲ್ಲಾ ಅರ್ಹತೆಗಳೂ ಇವೆ. 2004-06 ಮತ್ತು 2006-07ರಲ್ಲಿ (ಕಾಂಗ್ರೆಸ್ ಮತ್ತು ಬಿಜೆಪಿ ಜತೆ ಸೇರಿ ಜೆಡಿಎಸ್ ಸರ್ಕಾರ ರಚಿಸಿದಾಗ) ಸಚಿವರಾಗಿ ಅವರು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಬಸವರಾಜ ಹೊರಟ್ಟಿ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಶಾಸಕರನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವಿಲ್ಲ ಎಂಬ ಒಂದೇ ಕಾರಣಕ್ಕೆ ಅವರಿಗೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿರಲಿಲ್ಲ. ಇದು ಕೇವಲ ಹೊರಟ್ಟಿ ಅವರಿಗೆ ಮಾತ್ರ ಅನ್ವಯಿಸುವುದಿಲ್ಲ. ಜೆಡಿಎಸ್ ನಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿದ ಅನೇಕರಿಗೆ ಈ ರೀತಿಯ ಅನುಭವಗಳಾಗಿವೆ. ಬೇರೆಯವರು ಅದನ್ನು ಮುಚ್ಚಿಟ್ಟಿದ್ದರೆ, ಹೊರಟ್ಟಿ ಬಹಿರಂಗವಾಗಿ ಹೇಳಿದ್ದರು ಎಂಬುದಷ್ಟೇ ಇರುವ ವ್ಯತ್ಯಾಸ.
ಉರಿಯೋ ಬೆಂಕಿಗೆ ತುಪ್ಪ ಸುರಿದ ಕುಮಾರಸ್ವಾಮಿ ಹೇಳಿಕೆ
ಪಕ್ಷದ ಕಾರಣಕ್ಕಾಗಿ ಎಚ್.ವಿಶ್ವನಾಥ್ ಅವರೊಂದಿಗೆ ವೈಯಕ್ತಿಕ ಜಗಳಕ್ಕೆ ಇಳಿದಿದ್ದ ಮಾಜಿ ಸಚಿವ, ಶಾಸಕ ಸಾ.ರಾ.ಮಹೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ, ಮಹೇಶ್ ನಿಷ್ಠಾವಂತ ಜೆಡಿಎಸ್ ಶಾಸಕ. ಅವರಂತಹ ಒಳ್ಳೆಯವರು ಪಕ್ಷದಲ್ಲಿ ಇರಬೇಕು. ಎಲ್ಲರೂ ಹೀಗೆ ಪಕ್ಷ ಬಿಟ್ಟು ಹೋದರೆ ಪಕ್ಷದ ಭವಿಷ್ಯ ಕರಾಳವಾಗುತ್ತದೆ ಎಂದು ಹೇಳಿದ್ದರು ಇದೇ ಬಸವರಾಜ ಹೊರಟ್ಟಿ. ಮುಂದುವರಿದು ಮಾತನಾಡಿ ಪಕ್ಷದಲ್ಲಿ ತಮಗಾಗುತ್ತಿರುವ ಅನ್ಯಾಯದ ಬಗ್ಗೆಯೂ ಅವರು ದನಿ ಎತ್ತಿದ್ದರು. ಪಕ್ಷದ ವರಿಷ್ಠರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ ಒಂದಿಲ್ಲಾ ಒಂದು ವಿವಾದ ಹೊಗೆಯಾಡುತ್ತಲೇ ಇದೆ. ಈ ಬಗ್ಗೆ ಶಾಸಕರು ನನ್ನ ಬಳಿ ಅಸಮಾಧಾನ ಹೇಳಿಕೊಂಡಿದ್ದಾರೆ. ಇದನ್ನು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮೂಲಕ ವರಿಷ್ಠರಿಗೆ ತಿಳಿಸಿದ್ದೇವೆ. ಅವರೇನು ತೀರ್ಮಾನ ಮಾಡುತ್ತಾರೋ ಕಾದು ನೋಡುತ್ತೇವೆ. ನನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ಆಹ್ವಾನವಿದೆ. ಆದರೆ, ಪಕ್ಷ ಬಿಡುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂದಿದ್ದರು.
ಆದರೆ, ಸಾ.ರಾ.ಮಹೇಶ್ ವಿಚಾರದಲ್ಲಿ ಪಕ್ಷದ ಬಗ್ಗೆ ಅವರು ತೋರಿದ ಕಾಳಜಿ ಮರೆತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವರಿಷ್ಠರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಮಾತನ್ನು ಮಾತ್ರ ಪರಿಗಣಿಸಿ, ನನ್ನ ನಾಯಕತ್ವದಲ್ಲಿ ಅವರಿಗೆ ವಿಶ್ವಾಸ ಇಲ್ಲ ಎಂದರೆ ನಾಯಕತ್ವ ತ್ಯಜಿಸಲು ಸಿದ್ಧ. ದೇವೇಗೌಡರೊಂದಿಗೆ ಚರ್ಚಿಸಿ ಹೊಸ ನಾಯಕರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದು ಬಸವರಾಜ ಹೊರಟ್ಟಿ ಮಾತ್ರವಲ್ಲ, ಇತರರಿಗೂ ಬೇಸರ ತರಿಸಿದೆ. ಮೊದಲೇ ಪಕ್ಷದ ವರಿಷ್ಠರ ನಡವಳಿಕೆ, ಕೆಲವರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವ ಧೋರಣೆ ಬಗ್ಗೆ ಮೊದಲೇ ಅಸಮಾಧಾನಗೊಂಡಿರುವ ಈ ಶಾಸಕರಲ್ಲಿ, ಕುಮಾರಸ್ವಾಮಿ ಅವರ ಪ್ರತಿಕ್ರಿಯೆ ಹೊರಟ್ಟಿಯವರ ಪಕ್ಷ ನಿಷ್ಠೆಯನ್ನೇ ಪ್ರಶ್ನಿಸುವಂತಿದೆ. ನಾಯಕರ ವರ್ತನೆ ಈ ರೀತಿ ಇದ್ದರೆ ಪಕ್ಷದಲ್ಲಿ ನಮ್ಮಂಥವರ ಗತಿಯೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದು ಪಕ್ಷದಿಂದ ದೂರವಾಗುವ ಅವರ ಆಲೋಚನೆಯನ್ನು ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತಿದೆ.
ದಾಳ ಉರುಳಿಸಲು ಸಿದ್ಧವಾಗಿರುವ ಕಾಂಗ್ರೆಸ್, ಬಿಜೆಪಿ
ಜೆಡಿಎಸ್ ವರಿಷ್ಠರ ಬಗ್ಗೆ ಬೇಸರಗೊಂಡಿರುವ ಆ ಪಕ್ಷದ ಶಾಸಕರಿಗೆ ಗಾಳ ಹಾಕಲು ಕಾಂಗ್ರೆಸ್ ಮತ್ತು ಬಿಜೆಪಿ ತುದಿಗಾಲಲ್ಲಿ ನಿಂತಿವೆ. ಈ ಎರಡೂ ಪಕ್ಷಗಳ ನಡುವೆ ಸರ್ಕಾರ ಉಳಿಸಿಕೊಳ್ಳುವ ಮತ್ತು ಉರುಳಿಸುವ ಹೋರಾಟ ನಡೆಯುತ್ತಿದ್ದು, ಅದಕ್ಕೆ ಬೆಂಬಲವಾಗಿ ಜೆಡಿಎಸ್ ಶಾಸಕರ ನೆರವು ಪಡೆಯಲು ಯರಡೂ ಪಕ್ಷಗಳು ಪ್ರಯತ್ನಿಸುತ್ತಿವೆ. ಈಗಾಗಲೇ ಜೆಡಿಎಸ್ ನಿಂದ ಒಂದು ಹೆಜ್ಜೆ ಹೊರಗಿಟ್ಟಂತೆ ವರ್ತಿಸುತ್ತಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಯಾವುದೇ ಸಂದರ್ಭದಲ್ಲೂ ಬಿಜೆಪಿಗೆ ಸೇರಬಹುದು. ಅದೇ ರೀತಿ ಮತ್ತೊಬ್ಬ ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್ ಕಡೆ ಮುಖ ಮಾಡಿ ಕುಳಿತಿದ್ದಾರೆ. ವಿಜಯಪುರ ಜಿಲ್ಲೆಯ ಜೆಡಿಎಸ್ ಶಾಸಕರಾದ ಎಂ.ಸಿ.ಮನಗೂಳಿ, ದೇವಾನಂದ ಚೌಹಾಣ್ ಕೂಡ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜತೆ ಮೈಸೂರಿನಲ್ಲಿ ಏಕೆ ಭೇಟಿಯಾಗಬೇಕು ಎಂಬ ಪ್ರಶ್ನೆ ಎದುರಾಗುತ್ತದೆ.
ವಿಧಾನಸಭೆಯ 15 ಕ್ಷೇತ್ರಗಳಿಗೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಒಂದೊಮ್ಮೆ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳು ಬಾರದೇ ಇದ್ದಲ್ಲಿ ಸರ್ಕಾರ ಉರುಳುವ ಭೀತಿ ಎದುರಾಗುತ್ತದೆ. ಆಗ ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕುವುದು ನಿಶ್ಚಿತ. ಹೀಗಿರುವಾಗ ಜೆಡಿಎಸ್ ವರಿಷ್ಠರು ಪಕ್ಷ ಉಳಿಸಿಕೊಂಡು ಬೆಳೆಸುವ ಉದ್ದೇಶ ಹೊಂದಿದ್ದರೆ ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನಪಡಿಸಬೇಕು. ಇಲ್ಲವಾದಲ್ಲಿ ಪಕ್ಷದ ಕೆಲ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಲು ಮುಂದಾಗಬಹುದು. ಆಗ ಮತ್ತೆ ಜೆಡಿಎಸ್ ಹಿನ್ನಡೆ ಅನುಭವಿಸಬೇಕಾಗುತ್ತದೆ.