ಕರೋನಾ ವೈರಸ್ ಸೋಂಕು ಹರಡುವ ಭೀತಿಯಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ರಜೆ ಕೊಟ್ಟು ತಿಂಗಳುಗಳೇ ಕಳೆದು ಹೋಗಿವೆ. ಆದರೆ ಮಕ್ಕಳಿಗೆ ಪಠ್ಯಕ್ರಮ ನಿಲ್ಲಬಾರದು ಎನ್ನುವ ಕಾರಣಕ್ಕೆ ಆನ್ಲೈನ್‌ನಲ್ಲೇ ಬೋಧನೆ ನಡೆಸಲಾಗುತ್ತಾ ಇತ್ತು. ರಾಜ್ಯದ ಬಹುತೇಕ ಕಾಲೇಜುಗಳ ಆಡಳಿತ ಮಂಡಳಿಗಳು ಮಕ್ಕಳು ಮನೆಯಲ್ಲೇ ಇದ್ದರೂ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಂಡಿದ್ದವು. ಶಿಕ್ಷಣ ಸಂಸ್ಥೆಗಳ ಕಾಳಜಿ ಬಗ್ಗೆ ಪ್ರತಿಧ್ವನಿ ಕೂಡ ಲಾಕ್ಡೌನ್ ಎಫೆಕ್ಟ್: ಮನೆಯಲ್ಲೇ ಮಕ್ಕಳಿಗೆ ಶಿಕ್ಷಣ! ಆನ್ಲೈನ್ ತರಗತಿಗಳ ಸವಾಲು ಏನು? ಎನ್ನುವ ಬಗ್ಗೆ ವರದಿ ಮಾಡಿತ್ತು. ಆ ಸವಾಲು ಏನು ಎನ್ನುವುದು ಇದೀಗ ಗೊತ್ತಾಗಿದೆ. ಪ್ರಮುಖ ಸವಾಲು ಎಂದರೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಆನ್ಲೈನ್ ತರಗತಿಗಾಗಿ ಬಳಸುತ್ತಿರುವ ಮೊಬೈಲ್ ಆ್ಯಪ್ ಸೇಫ್ ಅಲ್ಲ ಎನ್ನುವುದು. ಹೌದು ಕೇಂದ್ರ ಸರ್ಕಾರವೇ ಇಂತಹದ್ದೊಂದು ಎಚ್ಚರಿಕೆಯನ್ನು ರವಾನಿಸಿದೆ.
Also Read: ಲಾಕ್‌ಡೌನ್‌ಎಫೆಕ್ಟ್: ಮನೆಯಲ್ಲೇ ಮಕ್ಕಳಿಗೆ ಶಿಕ್ಷಣ..! ಆನ್ಲೈನ್ ತರಗತಿಗಳ ಸವಾಲುಗಳೇನು..?
ದೇಶದಲ್ಲಿ ಲಕ್ಷಾಂತರ ಕಾಲೇಜುಗಳಲ್ಲಿ ಕೋಟ್ಯಂತರ ಮಂದಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆ ಮಕ್ಕಳೆಲ್ಲಾ ಈಗ ಕರೋನಾ ವೈರಸ್ ಸೋಂಕಿನ ಭೀತಿಗೆ ಸಿಲುಕಿ ಮನೆ ಸೇರಿಕೊಂಡಿದ್ದಾರೆ. ಅವರೆಲ್ಲರೂ ಮನೆಯಲ್ಲೇ ಉಳಿದು ಕೊಂಡಿದ್ದಾರೆ ವಿದ್ಯಾಭ್ಯಾಸಕ್ಕೆ ತೊಂದರೆ ಆಯಿತು ಎಂದು ಬೇಸರ ಮಾಡಿಕೊಂಡಿದ್ದ ಪೋಷಕರಿಗೆ ಆಶಾಕಿರಣವಾಗಿ ಕಾಣಿಸಿದ್ದು, ಆನ್ಲೈನ್ ಶಿಕ್ಷಣ. ಆದರೆ ಇದೀಗ ಅದೇ ಆನ್ಲೈನ್ ತರಗತಿ ಅಭ್ಯಾಸ ಪೋಷಕರ ನಿದ್ದೆಗೆಡಿಸಿದೆ. ಯಾಕೆಂದರೆ ಕಾಲೇಜುಗಳ ಆಡಳಿತ ಮಂಡಳಿ ಉಪನ್ಯಾಸಕರಿಗೆ ಸೂಚಿಸಿದ್ದ ಝೂಮ್ ಆ್ಯಪ್ ಸೇಫ್ ಅಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ಕೊಟ್ಟಿದೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಝೂಮ್ ಆ್ಯಪ್ ಖಾಸಗಿ ವ್ಯಕ್ತಿಗಳದ್ದಾಗಿದ್ದು, ಸೇಫ್ ಅಲ್ಲ ಎನ್ನಲಾಗಿದೆ. ರಾಷ್ಟ್ರೀಯ ಸೈಬರ್ ಸೆಕ್ಯೂರಿಟಿ ಏಜೆನ್ಸಿ ಹಾಗೂ ಕಂಪ್ಯೂಟರ್ ಎಮೆರ್ಜೆನ್ಸಿ ರೆಸ್ಪಾನ್ಸ್ ಟೀಂ ಎಚ್ಚರಿಸಿದ ಕೂಡಲೇ ಕೇಂದ್ರ ಸರ್ಕಾರ ಈ ಹೇಳಿಕೆ ಬಿಡುಗಡೆ ಮಾಡಿದೆ.

ಜಗತ್ತಿನಲ್ಲಿ ಭಾರೀ ಪ್ರಸಿದ್ಧಿ ಪಡೆದಿರುವ ZOOM ಆ್ಯಪ್ ಅನ್ನು ಕೇವಲ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಾಗಿ ಮಾತ್ರವೇ ಬಳಸುತ್ತಿಲ್ಲ. ಮನೆಯಿಂದ ಕೆಲಸ ಮಾಡುವ ಲಕ್ಷಾಂತರ ನೌಕರರು ಬಳಸುತ್ತಿದ್ದಾರೆ. ರಾಷ್ಟ್ರೀಯ ಮಾಹಿತಿ ಕೇಂದ್ರ (National Informatics Centre) ಕೂಡ ಸರ್ಕಾರಿ ವಿಡಿಯೋ ಕಾನ್ಫರೆನ್ಸ್‌ಗಳನ್ನೂ ಈ ಆ್ಯಪ್ ಮೂಲಕವೇ ಆಯೋಜಿಸಲಾಗ್ತಿತ್ತು. ಇದೀಗ ಹಿರಿಯ ಅಧಿಕಾರಿಗಳು ZOOM ಆ್ಯಪ್ ಬಳಸದಂತೆ ಸೂಚನೆ ರವಾನಿಸಿದ್ದಾರೆ. ನೂರಾರು ದೊಡ್ಡ ದೊಡ್ಡ ಕಂಪನಿಗಳು ಮನೆಯಿಂದಲೇ ಮೀಟಿಂಗ್ ಮಾಡಲು ಈ ಆ್ಯಪ್ ಬಳಸಿರುವ ಸಾಧ್ಯತೆಗಳು ಹೆಚ್ಚಾಗಿದ್ದು, ಗೌಪ್ಯ ಮಾಹಿತಿ ಸೋರಿಕೆಯಾಗಿರುವ ಅನುಮಾನಗಳು ಮೂಡಿವೆ. ಕಳೆದ ವಾರ ಸಂದರ್ಶನ ಕೊಟ್ಟಿದ್ದ ZOOM ಆ್ಯಪ್ ಸಿಇಒ ಎರ್ರಿಕ್ ಎಸ್ ಯೌನ್ “ನಾವು ಭದ್ರತೆ ಮತ್ತು ಗೌಪ್ಯತೆ ವಿಚಾರವಾಗಿ ಸಾಕಷ್ಟು ತಪ್ಪು ಹೆಜ್ಜೆಗಳನ್ನು ಇಟ್ಟಿದ್ದೇವೆ. ಇದರಿಂದ ಸಾಕಷ್ಟು ಪಾಠ ಕಲಿಯುವುದು ಇದೆ. ಈಗಾಗಲೇ ಹಲವಾರು ವಿಷಯಗಳ ಬಗ್ಗೆ ಗಮನ ಹರಿಸಿದ್ದೇವೆ ” ಎಂದಿದ್ದರು.
ZOOM ಆ್ಯಪ್‌ನ ಅಪಾಯವೇನು?
ಒಂದು ವೇಳೆ ZOOM ಆ್ಯಪ್ ಬಳಕೆದಾರರ ಮಾಹಿತಿಯನ್ನು ಎಲ್ಲೋ ಕುಳಿತ ಸೈಬರ್ ಕ್ರಿಮಿನಲ್ ಓರ್ವ ಕಳ್ಳತನ ಮಾಡಬಹುದು. ಯಾಕಂದ್ರೆ ಈ ಆ್ಯಪ್ ಖದೀಮರನ್ನು ವಂಚಿಸುವ ಭದ್ರತೆ ಹೊಂದಿಲ್ಲ. ಭಾರತದಲ್ಲಿ ಕೋಟ್ಯಂತರ ಜನರು ಬಳಸುವ ZOOM ಆ್ಯಪ್ ಆನ್ನು ಬೇರಾವುದೋ ದೇಶದಲ್ಲಿ ಕುಳಿತು ಕದಿಯಬಹುದು. ಕಂಪನಿಗಳ ಡಾಟಾ ಕಳ್ಳತನ ಆಗಬಹುದು. ವೀಡಿಯೋ ಸಮೇತ ಕಂಪನಿಗಳ ಗೌಪ್ಯ ಮಾಹಿತಿಗೆ ಕನ್ನ ಹಾಕಬಹುದು. ಸರ್ಕಾರಿ ಅಧಿಕಾರಿಗಳ ಸಭೆಯನ್ನು ಹ್ಯಾಕ್ ಮಾಡಿದರೆ ಅಧಿಕೃತ ಮಾಹಿತಿಗಳು ಖದೀಮರ ಕೈ ಸೇರುವ ಎಲ್ಲಾ ಸಾಧ್ಯತೆಗಳು ಇವೆ.

ವಿದ್ಯಾರ್ಥಿಗಳ ʼಡಾಟಾʼ(Data) ಕದ್ದರೆ ಏನು ಪ್ರಯೋಜನ?
ದೊಡ್ಡ ದೊಡ್ಡ ಸಂಸ್ಥೆಗಳು ಹಾಗೂ ಸರ್ಕಾರಿ ಅಧಿಕಾರಿಗಳ ಸೀಕ್ರೆಟ್ ಮಾಹಿತಿ ಕಳವು ಮಾಡಿದರೆ, ಹ್ಯಾಕರ್ಸ್‌ಗಳಿಗೆ ಅನುಕೂಲ ಆಗುತ್ತದೆ ಎನ್ನುವುದು ಸತ್ಯ. ಆದರೆ ವಿದ್ಯಾರ್ಥಿಗಳ ನಂಬರ್, ಫೋಟೋಗಳನ್ನು ಆ್ಯಪ್ ಕಂಪನಿಯೇ ಸ್ವಯಂ ಶೇಖರಣೆ ಮಾಡಬಹುದು. ಯಾಕಂದ್ರೆ ಆ್ಯಪ್ ಇನ್ಸ್ಟಾಲ್ ಮಾಡುತ್ತಿದ್ದ ಹಾಗೆ ಓಪನ್ ಆಗಲು ಸಾಕಷ್ಟು ಮಾಹಿತಿಗಳಿಗೆ ಓಕೆ (App permissions) ಮಾಡುವಂತೆ ಕೇಳುತ್ತದೆ. ಒಂದೇ ಒಂದು ಅವಕಾಶವನ್ನು ನೀವು ನಿರಾಕರಿಸಿದರೆ ಈ ಆ್ಯಪ್ ತೆರೆಯುವುದಕ್ಕೆ ಸಾಧ್ಯವಾಗಲ್ಲ. ಫೋಟೋ ಗ್ಯಾಲರಿ, ಫೋನ್ ಬುಕ್ ಸೇರಿದಂತೆ ನಿಮ್ಮ ಮೊಬೈಲ್‌ನ ಕೀಲಿಕೈ ಕೊಟ್ಟ ಬಳಿಕವಷ್ಟೇ ಆ ಆ್ಯಪ್ ನಿಮ್ಮ ಮೊಬೈಲ್‌ನಲ್ಲಿ ಕೆಲಸ ಮಾಡುತ್ತದೆ. ಈ ರೀತಿ ಎಲ್ಲಾ ಅವಕಾಶಗಳನ್ನು ಆ್ಯಪ್‌ನ ಮಾಲೀಕರೆ ಪಡೆದುಕೊಳ್ಳುತ್ತಾರೆ. ಈ ರೀತಿ ನಿಮ್ಮ ಮಾಹಿತಿಯನ್ನು ಕೇಳುವ ಎಲ್ಲಾ ಆ್ಯಪ್ ಕಂಪನಿಗಳು ನಿಮ್ಮ ಬೇಕು ಬೇಡಗಳ ಬಗ್ಗೆ ತಿಳಿದುಕೊಂಡು ಮಾರುಕಟ್ಟೆ ವಿಸ್ತರಣೆಯ ತಂತ್ರಗಾರಿಕೆ ಮಾಡಿರುತ್ತಾರೆ.
ಇಷ್ಟರ ನಡುವೆ ಭದ್ರತೆ ಇಲ್ಲದ ಆ್ಯಪ್‌ಗಳನ್ನು ಮೂರನೇ ವ್ಯಕ್ತಿ ಕೂಡ ಹ್ಯಾಕ್ ಮಾಡಿ ಮಾಹಿತಿಯನ್ನು ಕೊಳ್ಳೆ ಹೊಡೆಯಬಹುದು. ನಿಮ್ಮ ಮಾಹಿತಿ ಕಳ್ಳರ ಕೈಗೆ ಸಿಕ್ಕಿರಲೂ ಬಹುದು. ಸಿಗದೆ ಕೇವಲ ಆ್ಯಪ್ ಕಂಪನಿಯಲ್ಲೇ ಸಂಗ್ರಹ ಆಗಿರಲೂ ಬಹುದು. ಒಟ್ಟಾರೆಯಾಗಿ ZOOM ಆ್ಯಪ್ ಸೇಫ್ ಅಲ್ಲ ಅಂತಾ ಕೇಂದ್ರ ಸರ್ಕಾರ ಹೇಳಿದೆ.