“ಅಂಬಾನಿ ಅವರು 5ಜಿ ಆರಂಭಿಸುತ್ತಿದ್ದಾರೆ, ಬಹುಶಃ ಇದು ಬಹುದೊಡ್ಡ ಹಗರಣ” ಎಂದು ಕನ್ನಡ ಚಲನಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿರುವುದು ಸಾಕಷ್ಟು ಸುದ್ದಿಯಾಗುತ್ತಿದೆ.
ಭಾನುವಾರ ಫೇಸ್ಬುಕ್ ಲೈವ್ನಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ್ದ ದರ್ಶನ್ , ʼಈಗಾಗಲೇ ಮಾರುಕಟ್ಟೆ, ಕಲ್ಯಾಣ ಮಂಟಪ, ಶಾಲೆ ಹಾಗೂ ಕಾಲೇಜುಗಳು ಆರಂಭವಾಗಿದೆ. ಆದರೆ ಚಿತ್ರಮಂದಿರಗಳನ್ನು ಮಾತ್ರ ಪೂರ್ತಿ ತೆರೆಯುತ್ತಿಲ್ಲ. ನಮಗೆ ನೀವು ಸಿನಿಮಾ ಮಂದಿರದಲ್ಲಿ ಬಂದು ನೋಡಿದರೆ ಮಾತ್ರ ತೃಪ್ತಿ. ಆದರೆ ಈಗ ಸಿನಿಮಾ ಥಿಯೇಟರ್ ತೆರಯುತ್ತಿಲ್ಲ. ಇದಕ್ಕೆ 5ಜಿ ಕಾರಣ. ಬಹುಶಃ ಇದು ಬಹುದೊಡ್ಡ ಹಗರಣ ಎನಿಸುತ್ತಿದೆ ಈ ಕಾರಣದಿಂದಲೇ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಡುತ್ತಿಲ್ಲʼ ಎಂದು ಆರೋಪಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಅಂಬಾನಿ 5ಜಿ ಆರಂಭ ಮಾಡುತ್ತಿದ್ದಾರೆ. ಆದ್ದರಿಂದಲೇ ದೊಡ್ಡ ದೊಡ್ಡವರನ್ನು ಕೂರಿಸಿ ಥಿಯೇಟರ್ ಒಪನ್ ಮಾಡಲು ಅವಕಾಶ ನೀಡುತ್ತಿಲ್ಲ. ಇದು ಬಹುದೊಡ್ಡ ಹಗರಣ ಎನಿಸುತ್ತಿದೆ. ಏಕೆಂದರೆ ಮೊಬೈಲ್ನಲ್ಲಿ ಸಿನಿಮಾ ನೋಡಿದರೇ ಮಾತ್ರ ಅವರಿಗೆ ವರ್ಕ್ಔಟ್ ಆಗುತ್ತದೆ. ಅದಕ್ಕಾಗಿ ಈ ರೀತಿ ಮಾಡ್ತಿದ್ದಾರೆ ಅನಿಸುತ್ತಿದೆ. ಯಾವುದೇ ಕಾರಣಕ್ಕೂ ಒಟಿಟಿಗೆ ನಾವು ಕೊಡುವುದಿಲ್ಲ. ಈಗ ಥಿಯೇಟರ್ನಲ್ಲಿ ಶೇ. 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿದೆ. ಅದು ಶೇ. 25 ಆದರೂ ಸರಿಯೇ ಥಿಯೇಟರ್ನಲ್ಲೇ ನಾವು ಸಿನಿಮಾ ಬಿಡುಗಡೆ ಮಾಡುತ್ತೇವೆ” ಎಂದು ಸವಾಲಿನ ಧ್ವನಿಯಲ್ಲಿ ಹೇಳಿದ್ದಾರೆ.
ನಟ ದರ್ಶನ್ ಅವರ ಅಭಿಪ್ರಾಯ ಅಥವಾ ಆರೋಪ ನಿಜಕ್ಕೂ ಯೋಚನಾರ್ಹ. ಸಿನೆಮಾ ಮಂದಿರಗಳಿಗೆ ಎದುರಾಗುತ್ತಿರುವ ಗಂಭೀರ ಅಪಾಯದ ಮುನ್ಸೂಚನೆಯನ್ನು ಹಾಗೂ ಆ ಮೂಲಕ ಸಿನೆಮಾ ಮಂದಿರದ ನಷ್ಟವನ್ನು ಬಾಚಿಕೊಳ್ಳುವ ಬಂಡವಾಳಶಾಹಿತ್ವದ ಕರಿನೆರಳನ್ನು ದರ್ಶನ್ ಹೇಳಿಕೆಗಳು ಧ್ವನಿಸುತ್ತವೆ.
ಯಾಕೆಂದರೆ, ಅಂಬಾನಿ ಒಡೆತನದ ರಿಲಯನ್ಸ್ ಜಿಯೊದ ಜೀವಾಳವೇ ಡಿಜಿಟಲ್ ಮಾಧ್ಯಮಗಳು. ನೆಟ್ಫ್ಲಿಕ್ಸ್, ಅಮೆಝಾನ್, ಹಾಟ್ಸ್ಟಾರ್ ಸೇರಿದಂತೆ ಒಟಿಟಿ ಪ್ಲಾಟ್ಫಾರ್ಮ್ ಹಾಗೂ ಸಾಮಾಜಿಕ ಜಾಲತಾಣಗಳೇ ಜಿಯೋದ ಜೀವಾಳ. ಇದರ ಬಳಕೆದಾರರು ಹೆಚ್ಚಿದರೆ ಆನ್ಲೈನ್ ಬಳಕೆದಾರರು ಹೆಚ್ಚಿದಂತೆ! ಈ ಬಳಕೆದಾರರ ಸಿಂಹಪಾಲನ್ನು ಕಬಳಿಸುವುದು ಈಗಾಗಲೇ ಭಾರತ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೊ! ಇನ್ನು ಹೇಗೂ ಭಾರತಕ್ಕೆ ರಿಲಯನ್ಸ್ ಮೂಲಕ 5ಜಿಯನ್ನು ಪರಿಚಯಿಸಲಾಗುತ್ತಿದೆ. ಆ ಮೂಲಕ ಜಿಯೋದ ಬೆಳವಣಿಗೆ ಇನ್ನಷ್ಟು ವೇಗದಲ್ಲಿ ನಡೆಯಲಿದೆ.
ಭಾರತದ ಸಿನೆಮಾ ಮಂದಿರಗಳಿಂದ ಒಟಿಟಿ ಕಡೆಗೆ ಜನರನ್ನು ಸೆಳೆಯುವ ಹುನ್ನಾರವನ್ನು ದರ್ಶನ್ ಎಚ್ಚರಿಸಿದ್ದಾರೆ. ಒಂದುವೇಳೆ ಹೀಗೆ ಸತತವಾಗಿ ಅರ್ಧ ಥಿಯೇಟರಿನಲ್ಲಿ ಸಿನೆಮಾ ಪ್ರದರ್ಶನ ಮಾಡಿದರೆ, ನಿರ್ಮಾಪಕರ ಲಾಭದ ಪಾಲು ಕಡಿಮೆಯಾಗುತ್ತದೆ. ಸಿನೆಮಾ ಮಂದಿರ ಮಾಲಿಕರ ಪಾಲಿಗೂ ಇದು ನಷ್ಟವೇ. ಅಲ್ಲದೆ ಪ್ರೇಕ್ಷಕರ ಉತ್ಸಾಹವನ್ನು ಕೂಡ ಇದು ಕಡಿಮೆಗೊಳಿಸುತ್ತದೆ. ಉದಾಹರಣೆಗೆ, ಒಂದು ವಾರಾಂತ್ಯದಲ್ಲಿ ಸೀಮಿತ ಟಿಕೇಟ್ ದೊರೆಯುವುದರಿಂದ ಟಿಕೆಟ್ ದೊರೆಯದ ʼಅರ್ಧದಷ್ಟುʼ ಸಿನೆಮಾ ಪ್ರೇಮಿಗಳು ನಿರಾಶರಾಗಿ ಮರಳಬೇಕಾಗುತ್ತದೆ. ಅವರಲ್ಲಿ ಹಲವರು ಒಟಿಟಿ ಪ್ಲಾಟ್ಫಾರ್ಮ್ ಕಡೆಗೆ ವಾಲುವ ಸಾಧ್ಯತೆ ಹೆಚ್ಚೇ ಇದೆ. ಹೀಗೇ ಆದರೆ ಸಿನೆಮಾ ಮಂದಿರಗಳಿಂದ ವೀಕ್ಷಕರು ಸಂಪೂರ್ಣವಾಗಿ ದೂರವಾಗುವ ಸಾಧ್ಯತೆ ಇದೆ. ಇದು ಒಟಿಟಿ ಬಳಕೆದಾರರನ್ನು ಹೆಚ್ಚಿಸುತ್ತದೆ. ಅಂದರೆ ಪರೋಕ್ಷವಾಗಿ ಇಂಟರ್ನೆಟ್ ಬಳಕೆದಾರರನ್ನು, ಬಳಕೆಯನ್ನು, ಬಳಕೆಯ ಸಮಯವನ್ನು ಹೆಚ್ಚಿಸುತ್ತದೆ. ಇದರ ಲಾಭ ಮೊದಲೇ ಹೇಳಿದಂತೆ ಜಿಯೋ ಮಾಲೀಕ ಅಂಬಾನಿಯ ಕಿಸೆಗೆ ಸೇರುತ್ತವೆ.
ಇನ್ನು ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರದ ಬಗ್ಗೆ ಸುಳಿಹು ನೀಡುವಂತ ಸುದ್ದಿಗಳು ಕಳೆದ ವಾರ ಪ್ರಕಟವಾಗಿದ್ದವು. ತಮಿಳು ಚಿತ್ರನಟರ ಕೋರಿಕೆಯ ಮೇರೆಗೆ ತಮಿಳುನಾಡು ಸರ್ಕಾರ ಸಿನೆಮಾ ಮಂದಿರವನ್ನು 100% ತೆರೆಯಲು ಅವಕಾಶ ನೀಡಿತ್ತು. ಆದರೆ ದೇವರು ಕೊಟ್ಟರೂ ಪೂಜಾರಿ ಬಿಡಲ್ಲ ಅನ್ನುವಂಗೆ ಕೇಂದ್ರ ಸರ್ಕಾರ ಇದಕ್ಕೆ ತಡೆ ನೀಡಿ ಅಧಿಸೂಚನೆ ಹೊರಡಿಸಿತು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ತನ್ನ ಆದೇಶದಿಂದ ಹಿಂದೆ ಸರಿಯಿತು.
ಭಾರತದ ಆರ್ಥಿಕತೆ ಕುಸಿಯುತ್ತಿದ್ದರೂ ತನ್ನ ಸಂಪತ್ತನ್ನು ಹಿಗ್ಗಿಸಿಕೊಂಡಿರುವ, ಪ್ರಪಂಚದ ಶ್ರೀಮಂತರ ಮೊದಲ ಹತ್ತರ ಸಾಲಿನಲ್ಲಿ ನಿಂತಿರುವ ಮುಕೇಶ್ ಅಂಬಾನಿ ವ್ಯವಹಾರಗಳಿಗೆ ಪೂರಕವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾನೂನುಗಳನ್ನು ರಚಿಸುತ್ತಿದೆ, ಅವಕಾಶಗಳನ್ನು ಮಾಡಿಕೊಡುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನಟ ದರ್ಶನ್ ಅವರ ಆತಂಕಭರಿತ ದನಿಯನ್ನು ಆಲಿಸಿಕೊಳ್ಳಬೇಕು. ʼಕರೋನಾ ಅನ್ನುವುದು ಬಂಡವಾಳಶಾಹಿಗಳ ವ್ಯಾಪಾರ ವೃದ್ಧಿಸುವ ಸರಕಾಗಬಾರದು.ʼ