ದೇಶದಾದ್ಯಂತ ಕರೋನಾ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಈ ನಡುವೆ ಕರೋನಾ ಹರಡಲು ಕಾರಣವಾಗಬಹುದು ಎಂಬ ವಿಷಯವನ್ನಿಟ್ಟುಕೊಂಡು ಪಾನ್‌ಮಸಾಲ ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಾಗ, ಪಾನ್‌ಮಸಾಲ ಕಂಪೆನಿಯೊಂದು ನೀಡಿರುವ ಉತ್ತರ ನಿಜಕ್ಕೂ ಹುಬ್ಬೇರಿಸುವಂತೆ ಮಾಡಿದೆ.
ಪಾನ್‌ಮಸಾಲ ಜಗಿಯುವವರು ಅತೀ ಹೆಚ್ಚಾಗಿ ಉಗುಳುವುದರಿಂದ ಕರೋನಾ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ ಎಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ PIL ದಾಖಲಾಗಿತ್ತು. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಅಲಹಾಬಾದ್ ನ್ಯಾಯಪೀಠಕ್ಕೆ ಅಫಿಡವಿಟ್ ಸಲ್ಲಿಸಿರುವ ʼರಜನೀಗಂಧʼ ಪಾನ್ ಮಸಾಲೆಯನ್ನು ತಯಾರಿಸುವ ಕಂಪೆನಿಯಾದ ಧರ್ಮಪಾಲ್ ಸತ್ಯಪಾಲ್ “ನಾವು PM-CARES ನಿಧಿಗೆ 10 ಕೋಟಿ ರೂ.ಗಳನ್ನು ದೇನಿಗೆಯಾಗಿ ನೀಡಿದ್ದೇವೆ ಮತ್ತು ಇನ್ನೂ ಹತ್ತು ಕೋಟಿ ರೂ. ಗಳನ್ನು ಕರೋನಾ ವಿರುದ್ದ ಹೋರಾಟದಲ್ಲಿ ತೊಡಗಿರುವ ಸಂಸ್ಥೆಗಳಿಗೆ ದಾನವಾಗಿ ನೀಡಿದ್ದೇವೆ” ಎಂದು ಹೇಳಿದೆ.
“ನೋಯ್ಡಾದಲ್ಲಿ ವೈದ್ಯರಿಗೆ ಹೊಟೇಲ್ ಬೆಡ್‌ಗಳ ವ್ಯವಸ್ಥೆ, ಬಡವರಿಗೆ ಊಟ ಮತ್ತು ರೇಷನ್ ಕೂಡ ನಾವು ದಾನವಾಗಿ ನೀಡಿದ್ದೇವೆ,” ಎಂದು ಅಫಿಡವಿಟ್‌ನಲ್ಲಿ ಹೇಳಿಕೊಂಡಿದೆ.
ಈ ಅಫಿಡವಿಟ್ ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ಹುಟ್ಟಿಕೊಂಡಿರುವ ಪ್ರಶ್ನೆಯೇನೆಂದರೆ, PM-CARES ನಿಧಿಗೆ ದೇಣಿಗೆ ನೀಡಿದರೆ ಪಾನ್‌ಮಸಾಲ ಉಗುಳುವುದರಿಂದ ಕರೋನಾ ಹಬ್ಬುವುದಿಲ್ಲವೇ? ಈ ಪ್ರಶ್ನೆ ಈಗಾಗಲೇ ಬಹಳಷ್ಟು ಚರ್ಚೆ ಹುಟ್ಟುಹಾಕಿದೆ. ಯಾಕೆಂದರೆ, ದೇಶಾದ್ಯಂತ ಲಾಕ್‌ಡೌನ್ ಜಾರಿಯಾದ ಮರುದಿನವೇ, ಉತ್ತರ ಪ್ರದೇಶದ ಯೋಗ ಸರ್ಕಾರವು ʼಜನಹಿತದ ದೃಷ್ಟಿಯಿಂದʼ ಪಾನ್‌ಮಸಾಲ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಪಾನ್‌ಮಸಾಳ ತಿಂದು ಉಗುಳುವುದರಿಂದ ಕರೋನಾ ಹಬ್ಬುವ ವೇಗ ಮತ್ತು ಅಪಾಯ ಹೆಚ್ಚಾಗುತ್ತದೆ ಎಂದು ಉ.ಪ್ರ. ಸರ್ಕಾರ ತಿಳಿಸಿತ್ತು.
ಮೇ 6ರಂದು ತನ್ನ ಆದೇಶವನ್ನು ವಾಪಾಸ್ಸು ಪಡೆದ ಯೋಗಿ ಸರ್ಕಾರ ತಂಬಾಕು ಮತ್ತು ನಿಕೋಟಿನ್ ಇಲ್ಲದ ಪಾನ್ ಮಸಾಲವನ್ನು ಮಾರಲು ಅವಕಾಶ ಮಾಡಿಕೊಟ್ಟಿತು. ಸರ್ಕಾರದ ಈ ನಿರ್ಧಾರದ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದ ಪತ್ರಕರ್ತ ಸಂಜಯ್ ಶರ್ಮ, ತಜ್ಞರ ವರದಿಯನ್ನು ನ್ಯಾಯಾಲಯದ ಮುಂದಿಟ್ಟಿದ್ದರು. ಉಗುಳುವುದರಿಂದ ಕರೋನಾ ಸೋಂಕು ಹರಡುವ ಭೀತಿ ಹೆಚ್ಚಿದೆ ಎಂದು ವಾದ ಮಂಡಿಸಿದ್ದರು.
ಪರಿಸ್ಥಿತಿ ಹೀಗಿರುವಾಗ, ನಾವು PM-CARES ಗೆ ದೇಣಿಗೆ ನೀಡಿದ್ದೀವಿ ಹಾಗಾಗಿ ಪಾನ್‌ಮಸಾಲೆಯ ಮೇಲೆ ನಿಷೇಧ ಹೇರಬಾರದು ಎನ್ನುವ ವಾದ ಎಷ್ಟರಮಟ್ಟಿಗೆ ಸರಿ? ಇನ್ನು ಮೇ 21, 2020ರಂದು ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕರೋನಾ ಸೋಂಕು ಹರಡುವ ಅಪಾಯವನ್ನು ತಂದೊಡ್ಡುತ್ತದೆ ಎಂದು ಹೇಳಿದೆ.
ಇನ್ನು ಕರ್ನಾಟಕದಲ್ಲಿಯೂ ಈ ವಿಚಾರದ ಕುರಿತು ಬಹಳಷ್ಟು ಚರ್ಚೆಯಾಗಿದೆ. ಕರ್ನಾಟಕದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕಂಡು ಬಂದಲ್ಲಿ IPCಯ ಸೆಕ್ಷನ್ 188, 268, 269 ಮತ್ತು 270ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಕುರಿತು ಆದೇಶವನ್ನೂ ಹೊರಡಿಸಿತ್ತು.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಧರ್ಮಪಾಲ್ ಸತ್ಯಪಾಲ್ ಕಂಪೆನಿಯು ಅಫಿಡವಿಟ್‌ನಲ್ಲಿ ನೀಡಿದ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದವೆಂದು ಅನ್ನಿಸುತ್ತದೆ. ರಾಷ್ಟ್ರದಲ್ಲಿ ಕರೋನಾ ಸೋಂಕಿನ ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಸಂದರ್ಭದಲ್ಲಿ ಸರ್ಕಾರಗಳು ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ಕೇವಲ ಉಗುಳುವವರ ಮೇಲೆ ನಿರ್ಬಂಧ ಹೇರಿದರೆ ಸಾಕೇ? ಮಾರಾಟ ಮಾಡುವವರು ಇರುವವರೆಗೂ ಖರೀದಿಸುವವರು ಖಂಡಿತವಾಗಿಯೂ ಇರುತ್ತಾರೆ. ಹಾಗಾಗಿ, ಮಾರುಕಟ್ಟೆಯಲ್ಲಿ ಪಾನ್‌ಮಸಾಲಗಳು ದೊರೆಯದಿದ್ದರೆ ಉಗುಳುವ ಪ್ರಶ್ನೆ ಎಲ್ಲಿಂದ ಬರುತ್ತದೆ?