ಜಾಗತಿಕ ಸಿನಿಮಾ ಇತಿಹಾಸದಲ್ಲಿ ಬೆಂಗಾಲಿ ನಿರ್ದೇಶಕ ಸತ್ಯಜಿತ್ ರೇ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. `ರೇ ಸಿನಿಮಾ ವೀಕ್ಷಿಸದವರು, ಆಗಸದಲ್ಲಿ ಸೂರ್ಯ – ಚಂದ್ರರನ್ನು ನೋಡದೆ ಜೀವಿಸಿರುವಂಥವರು’ ಎಂದಿದ್ದರು ಖ್ಯಾತ ಜಪಾನಿ ನಿರ್ದೇಶಕ ಅಕಿರಾ ಕುರೊಸವಾ. ಇನ್ನು ಭಾರತದ ಸಿನಿಮಾ ಸಂದರ್ಭದಲ್ಲಿ ರೇ ಅವರನ್ನು ಬಿಟ್ಟು ಮಾತನಾಡಲು ಸಾಧ್ಯವೇ ಇಲ್ಲ. ಸಂಪ್ರದಾಯದಲ್ಲಿ ಬಂಧಿಯಾಗಿದ್ದ ಭಾರತೀಯ ಸ್ತ್ರೀಗೆ ತೆರೆ ಮೇಲೆ ದಿಟ್ಟ ಪಾತ್ರ ಸೃಷ್ಟಿಸಿ ಮೇಲ್ಪಂಕ್ತಿ ಹಾಕಿಕೊಟ್ಟವರು ರೇ. ವಾಸ್ತವದ ಚಿತ್ರಣದಲ್ಲೂ ಮಾನವೀಯ ಕಾಳಜಿ ಮರೆಯದ ಪ್ರೀತಿಪೂರ್ವಕ ಎಚ್ಚರಿಕೆ ಅವರದು. ಹಾಗಾಗಿ ರೇ ಹಾದಿಯನ್ನು ಯಾವುದೇ ನಿರ್ದಿಷ್ಟ ಮಾದರಿಗೆ ಸೀಮಿತಗೊಳಿಸಲಾಗದು.
ಸತ್ಯಜಿತ್ ರೇ ಸಿನಿಮಾ ಪ್ರವೇಶಿಸಿದ್ದೇ ಆಕಸ್ಮಿಕ. ಅವರ ಆಸಕ್ತಿ ಇದ್ದುದು ಚಿತ್ರಕಲೆಯೆಡೆಗೆ. ಗ್ರಾಫಿಕ್ ವಿನ್ಯಾಸಕಾರನಾಗಿ ವೃತ್ತಿ ಆರಂಭಿಸಿದ್ದರು. ಸಾಹಿತ್ಯಾಭಿರುಚಿ, ಸಾಹಿತಿಗಳ ಒಡನಾಟವಿತ್ತು. ಸಿನಿಮಾದತ್ತ ಕುತೂಹಲವಿದ್ದರೂ, ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳುವ ಸಂದರ್ಭ ಒದಗಿರಲಿಲ್ಲ. ಈ ಹಂತದಲ್ಲಿ ಇಟಾಲಿಯನ್ ಸಿನಿಮಾ `ಬೈಸಿಕಲ್ ಥೀವ್ಸ್’ (1948) ತೆರೆಕಂಡಿತ್ತು. ಸುಪ್ತವಾಗಿದ್ದ ರೇ ಸಿನಿಮಾಸಕ್ತಿಯನ್ನು ಜಾಗೃತಗೊಳಿಸಿದ ಚಿತ್ರವಿದು ಎನ್ನಲಾಗುತ್ತದೆ. `ಪಥೇರ್ ಪಾಂಚಾಲಿ’ (1955) ನಿರ್ದೇಶನದೊಂದಿಗೆ ರೇ ಅಧಿಕೃತವಾಗಿ ಸಿನಿಮಾಗೆ ಪದಾರ್ಪಣೆ ಮಾಡಿದರು. ಚೊಚ್ಚಲ ಚಿತ್ರದಲ್ಲೇ ಅವರು ಸಮಕಾಲೀನ ಭಾರತೀಯ ಸಿನಿಮಾದ ವಿಚಿತ್ರ ಪೂರ್ವಾಗ್ರಹಗಳನ್ನು ತೊಡೆದು ಹಾಕಿದರು. ಮುಂದೆ `ಅಪರಾಜಿತೋ’ (1956), `ಅಪೂರ್ ಸನ್ಸಾರ್’ (1959) ಚಿತ್ರಗಳು `ಸತ್ಯಜಿತ್ ರೇʼ ಹಾದಿ ಸ್ಪಷ್ಟಪಡಿಸಿದವು.


ರೇ ಸಿನಿಮಾ ಶೈಲಿಯನ್ನು `ಇಟಾಲಿಯನ್ ನಿಯೋ-ರಿಯಲಿಸ್ಟಿಕ್’ ಎಂದೂ ಹೇಳಲಾಗುತ್ತದೆ. ಈ ಅಭಿಪ್ರಾಯದ ಹಿಂದೆ ಸತ್ಯಜಿತ್ ಪ್ರಭಾವಿತರಾದ `ಬೈಸಿಕಲ್ ಥೀವ್ಸ್’ ಪ್ರೇರಣೆಯೂ ಇಲ್ಲದಿಲ್ಲ. ಕಡಿಮೆ ವೆಚ್ಚ, ಸರಳ ನಿರೂಪಣೆ, ಜನಪ್ರಿಯರಲ್ಲದ ಕಲಾವಿದರು.. ಈ ಮಾದರಿಯ ವೈಶಿಷ್ಠ್ಯತೆ. ಆದರೆ ಭಾರತದ ಹಿರಿಯ ನಿರ್ದೇಶಕರನೇಕರು ಇದನ್ನು ಒಪ್ಪುವುದಿಲ್ಲ. `ಸತ್ಯಜಿತ್, ನಿಯೋ – ರಿಯಲಿಸಂನಿಂದಲೂ ಪ್ರತ್ಯೇಕವಾಗಿ ಕಾಣಿಸುತ್ತಾರೆ. ಸಿನಿಮಾಗೊಂದು ಸುಂದರ ಭಾಷೆ, ಹಿಡಿತ ಕೊಟ್ಟವರು ರೇ. ಅಸಂಭಾವ್ಯ ಎನ್ನುವ ರೀತಿ ಕಥೆ ಕಟ್ಟುತ್ತಿದ್ದ ನಿರ್ದೇಶಕ, ತಮ್ಮ ಮಾನವೀಯ ಕಾಳಜಿಯಿಂದ ವಿಶಿಷ್ಟವಾಗಿ ನಿಲ್ಲುತ್ತಾರೆ. ಅವರ ಚಿತ್ರಗಳಲ್ಲಿ ವಾಸ್ತವಿಕತೆ ಮತ್ತು ಕಲಾತ್ಮಕತೆ ಎರಡೂ ಬೇರೆ ಬೇರೆಯಲ್ಲ’ ಎನ್ನುವುದು ಕನ್ನಡ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಗ್ರಹಿಕೆ.
ಸತ್ಯಜಿತ್ ರೇ ಸಿನಿಮಾಗಳ ನೈಜ ಹೂರಣ – ಸದೃಢ ಚಿತ್ರಕತೆ. ಉಳಿದಂತೆ ಸಿನಿಮಾದ ಪ್ರತೀ ವಿಭಾಗಗಳಲ್ಲೂ ಅವರ ಸಂಪೂರ್ಣ ಪಾಲ್ಗೊಳ್ಳುವಿಕೆ ಇರುತ್ತಿತ್ತು. `ಅಗತ್ಯ ತಯಾರಿ, ಸಂಶೋಧನೆ ಇಲ್ಲದೆ ಅವರು ಚಿತ್ರೀಕರಣ ಆರಂಭಿಸುತ್ತಿರಲಿಲ್ಲ. ಚಿತ್ರಕತೆಯೇ ಸಿನಿಮಾದ ಆತ್ಮ ಎಂದು ನಂಬಿದ್ದರು. ಬಹುಶಃ ಇದೇ ಕಾರಣಕ್ಕೆ ಅವರು ಮಾತೃಭಾಷೆ ಬೆಂಗಾಲಿ ಹೊರತಾದ ಭಾಷೆಗಳಲ್ಲಿ ಪ್ರಯೋಗ ಮಾಡಲಿಲ್ಲ. ಚಿತ್ರಕತೆ ಅದೆಷ್ಟು ಸ್ಪಷ್ಟವಾಗಿರುತ್ತಿತ್ತು ಎಂದರೆ, ಒಂದೇ ಟೇಕ್‍ಗೆ ನಾವು ಸನ್ನಿವೇಶ ಓಕೆ ಮಾಡುತ್ತಿದ್ದೆವು’ ಎಂದು ರೇ ಸಿನಿಮಾಗಳ ನಟಿಯರಾದ ಶರ್ಮಿಳಾ ಟ್ಯಾಗೂರ್, ಅಪರ್ಣಾ ಸೇನ್ ಹೇಳಿಕೊಳ್ಳುತ್ತಾರೆ.

ಭಾರತೀಯ ಸಿನಿಮಾಗಳನ್ನು ಗಂಭೀರವಾಗಿ ಪರಿಗಣಿಸದಿದ್ದ ಕಾಲವದು. ಜಾಗತಿಕ ಸಿನಿಮಾ ಲೇಖನ, ಪುಸ್ತಕಗಳ ಕೊನೆಯ ಪುಟಗಳಲ್ಲಷ್ಟೇ ಇಲ್ಲಿನ ಚಿತ್ರಗಳಿಗೆ ಸ್ಥಾನ. ಇಂಥ ಸಂದರ್ಭದಲ್ಲಿ ಎಲ್ಲರನ್ನೂ ತಮ್ಮ ಚಿತ್ರಗಳತ್ತ ಸೆಳೆದವರು ಸತ್ಯಜಿತ್ ರೇ. ಅಕಾಡೆಮಿ ಗೌರವ ಸೇರಿದಂತೆ ಅವರಿಗೆ ಸಂದ ರಾಷ್ಟ್ರ, ಅಂತರರಾಷ್ಟ್ರೀಯ ಪುರಸ್ಕಾರಗಳು ಅಸಂಖ್ಯ. ಕಿರುಚಿತ್ರಗಳೂ ಸೇರಿದಂತೆ ರೇ ನಿರ್ದೇಶಿಸಿದ ಚಿತ್ರಗಳ ಸಂಖ್ಯೆ 35 ದಾಟುತ್ತದೆ. ಸಣ್ಣಕಥೆ, ಪೇಟಿಂಗ್ ರಚನೆಯಲ್ಲೂ ಅವರ ಕ್ರಿಯಾಶೀಲತೆಯ ಹರವಿದೆ. ಅಪರೂಪದ ಬೆಂಗಾಲಿ ಚಿತ್ರಗಳೊಂದಿಗಷ್ಟೇ ರೇ ನೆನಪಾಗುವುದಿಲ್ಲ. ದೇಶ, ವಿದೇಶಗಳ ಹತ್ತಾರು ನಿರ್ದೇಶಕರಿಗೆ ಮಾದರಿಯಾದರು ಎನ್ನುವುದು ಬಹು ಮುಖ್ಯವಾಗುತ್ತದೆ.