ರಾಜಧಾನಿಯಲ್ಲಿ ಕುಳಿತ ಪ್ರಗತಿಪರರು, ಪತ್ರಕರ್ತರು ದಕ್ಷಿಣ ಕನ್ನಡ ಜಿಲ್ಲೆ ಸಂಘ ಪರಿವಾರದ ಪ್ರಯೋಗಾಲಯ, ಲ್ಯಾಬ್ ಎಂದೆಲ್ಲ ಹೇಳುವುದುಂಟು. ಕರೋನಾ ವೈರಸ್ ಸೋಂಕು ನಿಯಂತ್ರಿಸಲು ದೇಶದಲ್ಲಿ ಲಾಕ್ ಡೌನ್ ಆದಾಗ ಕೂಡ ಪರಿವಾರದ ಮಂದಿ ವಿನೂತನ ಪ್ರಯೋಗ ಆರಂಭಿಸಿ ಕೈ ಸುಟ್ಟುಕೊಂಡಿದ್ದಾರೆ. ಇವರ ಪ್ರಯೋಗದ ಉದ್ದೇಶವಾದರು ಏನಾಗಿತ್ತು ಎಂಬುದು ಈಗಲೂ ನಿಗೂಢವಾಗಿದೆ. ಸರ್ವಾಧಿಕಾರದ ಅನುಷ್ಠಾನದ ಪ್ರಯೋಗ ನಡೆಯುತ್ತಿರಬಹುದು ಎಂದು ಆರಂಭದಲ್ಲಿ ಪ್ರಗತಿಪರರು, ಜನಪರರು, ಪ್ರಜಾಪ್ರಭುತ್ವವಾದಿಗಳು ತಪ್ಪಾಗಿ ತಿಳಿದುಕೊಂಡಿದ್ದರು.
ದೇಶದ ಎಲ್ಲೆಡೆ ಲಾಕ್ ಡೌನ್ ಆಗಿದ್ದರೆ, ದಕ್ಷಿಣ ಕನ್ನಡದಲ್ಲಿ ಅದೊಂದು ಸಂಪೂರ್ಣ ಬಂದ್. ಭಾರತ್ ಬಂದ್ ಸಮಯಕ್ಕಿಂತಲೂ ಸ್ತಬ್ಧವಾದ ಬಂದ್ ಅದಾಗಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರಿಗೆ ಆವಶ್ಯ ಸಾಮಾಗ್ರಿಗಳ ವಿತರಣೆ ಮಾಡಬೇಕು, ಅತೀ ಅಗತ್ಯ ವಸ್ತುಗಳಾದ ಇಂಧನ, ಔಷಧ, ಹಾಲು, ಪತ್ರಿಕೆ ವಿತರಣೆಗೆ ಯಾವುದೇ ನಿರ್ಬಂಧ ಇಲ್ಲ ಎನ್ನುತ್ತವೆ. ಈ ಬಗ್ಗೆ ಸವಿವರವಾದ ಸುತ್ತೋಲೆಗಳನ್ನು, ತಿದ್ದೋಲೆಗಳನ್ನು ಕಳುಹಿಸಿವೆ. ಮುಂಬಯಿಯಂತಹ ಮಹಾನಗರದಲ್ಲಿ ರಾತ್ರಿ ತನಕ ದಿನಸಿ ಅಂಗಡಿ ಓಪನ್ ಇರುತ್ತದೆ. ಕೇರಳ ರಾಜ್ಯ ಸ್ವದೇಶಿ ನಿರ್ಮಿತ ವಿದೇಶಿ ಮದ್ಯ ಮಾರಾಟ ಮಾಡುವ ಮಾವೇಲಿ ಸ್ಟೋರುಗಳು ವೈದ್ಯರ ಸಲಹೆ ಮೇರೆಗೆ ಮದ್ಯ ವಿತರಣೆ ಮಾಡುತ್ತದೆ. ಕರ್ನಾಟಕ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಉಳಿದ ಬಹುತೇಕ ಜಿಲ್ಲೆಗಳಲ್ಲಿ ತರಕಾರಿ, ಹೂ ಹಣ್ಣು, ದಿನಸಿ ಅಂಗಡಿಗಳು ಪ್ರತಿದಿನ ಹಗಲು ಹೊತ್ತು ತೆರೆದಿಟ್ಟು ಜನರಿಗೆ ಆಹಾರ ಪೂರೈಸಿವೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರ್ಚ್ 29, 30, 31 ರಂದು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22ರಂದು ಭಾನುವಾರ ಕರೆ ನೀಡಿದ ಜನತಾ ಕರ್ಫ್ಯೂಗಿಂತಲೂ ಹೆಚ್ಚು ನಿರ್ಬಂಧಕಾರಿ ಬಂದ್ ಅನುಷ್ಠಾನ ಮಾಡಿದೆ.
ಈ ಮೂರು ದಿನಗಳಲ್ಲಿ ತರಕಾರಿ, ದಿನಸಿ ಮಾರಾಟವನ್ನು ಸಂಪೂರ್ಣ ಸ್ಥಗಿತ ಮಾಡಲಾಗಿತ್ತು. ಮೊದಲ ದಿನ ರಣೋತ್ಸಾಹಿ ಪೊಲೀಸರು ಹಾಲಿನ ವಾಹನ, ಹಾಲು ಮಾರಾಟ, ಪತ್ರಿಕೆ ಮಾರಾಟ, ಆಗತ್ಯ ವಸ್ತು ಮತ್ತು ತರಕಾರಿ ಸಾಗಾಟದ ವಾಹನಗಳನ್ನು ತಡೆದು ನಿಲ್ಲಿಸಿದ್ದಾರೆ. ರಸ್ತೆಯಲ್ಲಿ ಕಂಡ ಕಂಡವರಿಗೆ ಬೆತ್ತ ಎತ್ತಿದ್ದಾರೆ. ಪ್ರಧಾನಿಯವರ ಜನತಾ ಕರ್ಫ್ಯೂಗಿಂತಲೂ ಮೊದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಲಾಕ್ ಡೌನ್ ಇತ್ತು. ಜನತಾ ಕರ್ಫ್ಯೂ ಅನಂತರ ಪೊಲೀಸರ ರಾಜ್ಯಭಾರ ಹೆಚ್ಚಾಯಿತು. ಇದರಿಂದಾಗಿ ದಾವಣಗೆರೆ, ಶಿವಮೊಗ್ಗ, ಹಾಸನ ಸಹಿತ ಹೊರ ಜಿಲ್ಲೆಗಳಿಂದ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗೆ ಬರಬೇಕಿದ್ದ ಅಕ್ಕಿ ಸಹಿತ ದಿನಸಿ, ತರಕಾರಿ, ಜಾನುವಾರ ಆಹಾರ, ಪಶು ಆಹಾರದ ಕಚ್ಛಾ ವಸ್ತುಗಳು ಸ್ಥಗಿತ ಆಗತೊಡಗಿತು. ಪೊಲೀಸರು ಕ್ರಮದಿಂದ ಟ್ರಕ್ ಮಾಲೀಕರ ಮಂಗಳೂರಿಗೆ ಆಗಮಿಸಲು ಹಿಂದೇಟು ಹಾಕಿದರು.
ಜನತಾ ಕರ್ಫ್ಯೂ ಅನಂತರ ನಾಲ್ಕು ದಿನ ಬೆಳಗ್ಗಿನ ಹೊತ್ತು ಮಾತ್ರ ದಿನಸಿ ಮಾರಾಟಕ್ಕೆ ಅವಕಾಶ ಇತ್ತು. ಮಾರ್ಚ್ 26 ರ ಗುರುವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡಬೇಕೆಂಬ ಮಹಾದಾಸೆ ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಹುಟ್ಟಿಕೊಂಡಿತು. ಹಾಗೆಂದು, ಸ್ಥಳೀಯ ಜಾಲತಾಣಕ್ಕೂ ಹೇಳಿಕೆ ನೀಡಿದ್ದರು. ಆದರೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಈ ಬಂದ್ ಮಾಡುವ ಸಂಸದರ ಕೋರಿಕೆಗೆ ಸೊಪ್ಪು ಹಾಕಲಿಲ್ಲ.
ಈ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಅವರ ಪ್ರವೇಶ ಆಗುತ್ತದೆ. ಮನೆ ಮನೆಗೆ ದಿನಸಿ ಪೂರೈಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇವರಿಬ್ಬರನ್ನು ನಂಬಿಸಲಾಗುತ್ತದೆ. ಈ ಲೇಖನ ಸಿದ್ಧಪಡಿಸುವ ವೇಳೆಗೆ ಅಂದರೆ ಒಂದು ವಾರ ತನಕವೂ ಮನೆ ಮನೆಗೆ ದಿನಸಿ ಪೂರೈಸುವ ವ್ವವಸ್ಥೆ ಆಗುವುದಿಲ್ಲ. ಇದಕ್ಕಾಗಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಹಲವು ಸಭೆಗಳು ನಡೆಯುತ್ತವೆ. ಪೊಲೀಸರಿಂದ ಪೆಟ್ಟು ತಿಂದ ಬಹಳಷ್ಟು ಮಂದಿ ವ್ಯಾಪಾರಿಗಳು ಹೋಂ ಡೆಲಿವರಿಗೆ ಹಿಂದೇಟು ಹಾಕುತ್ತಾರೆ. ನಮ್ಮಲ್ಲಿ ಸಿಬ್ಬಂದಿ ಕೆಲಸಕ್ಕೆ ಸಿಗುವುದಿಲ್ಲ ಎಂಬುದು ಅವರ ಮಾತು. ಕೊನೆಗೆ ಸ್ವಯಂ ಸೇವಕರನ್ನು ಬಳಸುವ ಪ್ರಯತ್ನ ಕೂಡ ನಡೆಯುತ್ತದೆ. ಮಾತ್ರವಲ್ಲದೆ, ತಮಗೆ ಸ್ಟಾಕ್ ತರಿಸಿಕೊಡಿ ಎಂಬ ವ್ಯಾಪಾರಿಗಳ ಬೇಡಿಕೆ ಪೂರೈಸಲು ಈ ಮಂದಿಗೆ ಸಾಧ್ಯ ಆಗುವುದಿಲ್ಲ.
ಈ ಹೋಂ ಡೆಲಿವರಿ ವ್ಯವಸ್ಥೆಗೂ ಮುನ್ನವೇ ಉಸ್ತುವಾರಿ ಸಚಿವರು ತಾನು ಸ್ವಂತ ವಿವೇಚನೆ ಇಲ್ಲದೇ ಮಾರ್ಚ್ 28ರಂದು ದಕ್ಷಿಣ ಕನ್ನಡ ಬಂದ್ ಗೆ ಕರೆ ನೀಡುತ್ತಾರೆ. ಹೀಗೆ ಬಂದ್ ಒಂದೊಂದು ದಿನವಾಗಿ ಮೂರು ದಿನ ಸತತವಾಗಿ ನಡೆಯುತ್ತದೆ. ಜನರು ಹಾಲು, ಬ್ರೆಡ್, ತರಕಾರಿ ಸಿಗದೆ ಹೈರಾಣ ಆಗುತ್ತಾರೆ. ಹಾಲು ಉತ್ಪಾದಕರ ಸಂಘ ರೈತರಿಂದ ಹಾಲು ಖರೀದಿಯನ್ನೇ ನಿಲ್ಲಿಸುತ್ತದೆ.
ಈ ಮಧ್ಯೆ, ಜಿಲ್ಲಾಧಿಕಾರಿಯವರು ಸೆಕ್ಷನ್ 144ರ ಮುಂದುವರಿಕೆ ಬಗ್ಗೆ ಮರು ಆದೇಶ ನೀಡುತ್ತಾರೆ. ಆ ಆದೇಶದಲ್ಲಿ ಮಂಗಳವಾರ ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆ ತೆರೆದಿರುತ್ತದೆ ಎಂಬ ಮಾಹಿತಿ ಇರುತ್ತದೆ. ಅದರರ್ಥ ಅನಂತರ ದಿನಗಳಲ್ಲಿ ಮತ್ತೆ ದಿನಸಿ ಅಂಗಡಿ ಬಂದ್ ಆಗುತ್ತದೆ ಎಂದು ಜನ ಯೋಚಿಸುತ್ತಾರೆ. ಮಂಗಳವಾರ ಒಂದು ದಿನ ಮಾತ್ರ ಬೆಳಗ್ಗಿನಿಂದ ಮಧ್ಯಾಹ್ನ 3 ಗಂಟೆ ತನಕ ಮಾತ್ರ ಅವಶ್ಯ ಸಾಮಾಗ್ರಿಗಳ ಅಂಗಡಿ ತೆರೆಯಲು ಅವಕಾಶ ನೀಡಿ ಮತ್ತೆ ಮೂರು ದಿನ ನಿರಂತರ ಜಿಲ್ಲೆಯನ್ನು ಬಂದ್ ಮಾಡುವ ಏರ್ಪಾಡನ್ನು ಈ ಜನಪ್ರತಿನಿಧಿಗಳು ಎಂದು ಕರೆದುಕೊಳ್ಳುವವರು ನಿರ್ಧರಿಸಿದ್ದರು.
ಮೂರು ದಿನಗಳ ಬಂದ್ ಆದ ನಂತರ ಮಂಗಳವಾರ ಬೆಳಗ್ಗೆ ಐದೂವರೆಗೆ ಗಂಟೆಗೆ ಜನಸಾಗರ ಮಾರುಕಟ್ಟೆಗಳಿಗೆ ಲಗ್ಗೆ ಹಾಕಿತ್ತು. ಹಲವೆಡೆ ಟ್ರಾಫಿಕ್ ಜಾಮ್ ಕೂಡ ಆಯ್ತು. ಕೋಳಿ ಮಾಂಸ, ಮೊಟ್ಟೆ, ತರಕಾರಿ, ಹಣ್ಣು ಹಂಪಲು ಬೆಳಗ್ಗೆ 9 ಗಂಟೆಗೆ ಖಾಲಿ ಆಗಿತ್ತು. ದಿನಸಿ ಅಂಗಡಿಗಳ ಮುಂದೆ ಕ್ಯೂ ಹನುಮಂತನ ಬಾಲದಂತೆ ಬೆಳಗ್ಗೆಯಿಂದ ಮಧ್ಯಾಹ್ನ ತನಕ ಜನರು ಸುಡುಬಿಸಿಲಿನಲ್ಲಿ ನಿಂತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿದರು. ಮಧ್ಯಾಹ್ನ 3 ಗಂಟೆ ಆದಾಗ ಎಷ್ಟೋ ಮಂದಿಗೆ ಕನಿಷ್ಟ ಅಕ್ಕಿ ಕೂಡ ದೊರೆಯಲಿಲ್ಲ. ಸಾಮಾನು ಚೀಟಿಗಳನ್ನು ಅಂಗಡಿಗಳಿಗೆ ನೀಡಿದರೂ ದಿನಸಿ ಮಾತ್ರ ಮನೆಗೆ ತರಲು ಆಗಲಿಲ್ಲ.
ಬೇಕರಿ, ಡಿಪಾರ್ಟ್ ಮೆಂಟ್ ಸ್ಟೋರುಗಳಿಗೆ ನುಗ್ಗಿದ ಜನರು ಏನೇನು ದೊರೆಯುತ್ತದೆಯೊ ಅವೆಲ್ಲವನ್ನು ಇನ್ನೆಂದು ಸಿಗದು ಎಂಬಂತೆ ಹೊತ್ತೊಯ್ದರು. ಮೊಟ್ಟೆಯವನ ಲಾರಿಗೆ ಜನ ಮುಗಿದು ಬಿದ್ದರು. ಹಲವು ಅಗತ್ಯ ತರಕಾರಿಗಳ ಪೂರೈಕೆಯೇ ಆಗಿರಲಿಲ್ಲ. ಇತ್ತ ಶತಮಾನ ಹಳೆಯ ಸೆಂಟ್ರಲ್ ಮಾರ್ಕೆಟ್ ರಣರಂಗವಾಗಿತ್ತು. ಕರೋನಾ ಎಂಬ ವೈರಸ್ ಸೋಂಕು ಎಂಬುದೊಂದು ಇದೆ ಎಂಬುದನ್ನೇ ಜನ ಮರೆತ್ತಿದ್ದರು. ಯಾವ ವೈಯಕ್ತಿಕ ಅಂತರದ ಪಾಲನೆಯೂ ಆಗಲಿಲ್ಲ. ತರಕಾರಿ ಮಾರುಕಟ್ಟೆಗಳಲ್ಲಿ ಜಾತ್ರೆಯ ದೃಶ್ಯಗಳಿತ್ತು.

ಮೂರು ದಿನಗಳ ಕಾಲ ಜನರನ್ನು ಆಹಾರ ಮತ್ತು ಆವಶ್ಯ ಸಾಮಾಗ್ರಿಗಳಿಂದ ದೂರ ಇರಿಸಿದರೆ ಇಂತಹದೇ ದೃಶ್ಯ ಸೃಷ್ಟಿ ಆಗುತ್ತದೆ. ಕರೋನಾ ಸೋಂಕಿನ ಭೀತಿಯ ಸಂದರ್ಭದಲ್ಲಿ ಜನಸಂದಣಿ ಸೇರುತ್ತದೆ ಎಂಬ ಕಾಮನ್ ಸೆನ್ಸ್ ಕೂಡ ಈ ಮುಖಂಡರಲ್ಲಿ ಇರಲಿಲ್ಲ. ಇಂತಹ ತಮ್ಮ ಮೂರ್ಖ ನಿರ್ಧಾರದಿಂದ ಜನರನ್ನು ಕರೋನಾ ಸೋಂಕಿಗೆ ಬಲಿ ಕೊಡುತ್ತಿದ್ದೇವೆ ಎಂಬ ಒಂದು ಚಿಕ್ಕ ಸುಳಿವು ಕೂಡ ಅವರಲ್ಲಿ ಇರಲಿಲ್ಲ.

ಅನುಭವ ಕೊರತೆ, ಸರಕಾರದ ಆದೇಶಗಳನ್ನು ಪಾಲಿಸುವ ಅಸಡ್ಡೆ, ಸರ್ವಾಧಿಕಾರಿ ಧೋರಣೆ, ಕಾರ್ಯಾಂಗದಲ್ಲಿ ಅತಿಯಾದ ಹಸ್ತಕ್ಷೇಪ, ಒಣ ಪ್ರತಿಷ್ಠೆಗಳು ಜನರನ್ನು ಎಂತಹ ಅಪಾಯಕ್ಕೆ ದೂಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಸಾಕಷ್ಚು ಮಂದಿ ಇವರ ಇಂತಹ ನಿರ್ಧಾರದ ಬಗ್ಗೆ ಆಕ್ಷೇಪ ಎತ್ತಿದ್ದಾಗ ಡೊಂಟ್ ಕೇರ್ ಮಾಡಲಾಯಿತು. ಮಾತ್ರವಲ್ಲದೆ, ಇವರ ಟ್ರೋಲ್ ಆರ್ಮಿ ತಮ್ಮ ಪಾಲಿನ ಸೇವೆಯನ್ನು ಕೂಡ ಸಲ್ಲಿಸಿದರು. ಅಂತಿಮವಾಗಿ ಜಯ ಜನರ ಪಾಲಿಗೆ ದೊರೆತಿದೆ.
ಇವರು ಮಾಡುತ್ತಿದ್ದುದು ಪ್ರಯೋಗವೇ ಆಗಿತ್ತು. ಅದು ಮೂರ್ಖರಷ್ಟೇ ಮಾಡಬಲ್ಲ ಮಕ್ಕಳಾಟಿಗೆಯ ಪ್ರಯೋಗ ಆಗಿತ್ತು ಎಂಬುದು ಗೊತ್ತಾಗಲು ತುಂಬಾ ಸಮಯ ಬೇಕಾಗಲಿಲ್ಲ. ಮತ ನೀಡಿ ಗೆಲ್ಲಿಸಿದ ತಪ್ಪಿಗೆ ಮಹಿಳೆಯರು, ವೃದ್ಧರು, ರೋಗಿಗಳು ಪಡಬಾರದ ಪಾಡು ಪಡಬೇಕಾಯಿತು.












