ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಲೇ ಇದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ಮಾತ್ರ ಏರುಹಾದಿಯಲ್ಲಿದೆ. ಅದಕ್ಕೆ ಕಾರಣ ಏನು ಎಂಬುದನ್ನು ಈಗಾಗಲೇ ವಿವರಿಸಿದ್ದೇವೆ. ಮಾರ್ಚ್ 14 ರಂದು ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತಲಾ 3 ರೂಪಾಯಿ ವಿಶೇಷ ಎಕ್ಸೈಜ್ ಸುಂಕ ಹೇರಿತ್ತು. ಅದು ಅಷ್ಟಕ್ಕೆ ಮುಗಿಯುತ್ತದೆ ಎಂದು ಯಾರಾದರೂ ಊಹಿಸಿದ್ದರೆ ಅದು ತಪ್ಪು..! ನರೇಂದ್ರ ಮೋದಿ ಸರ್ಕಾರ ಈಗ ಗ್ರಾಹಕರ ಜೇಬಿಗೆ ದೊಡ್ಡ ಪ್ರಮಾಣದಲ್ಲಿ ಕತ್ತರಿ ಹಾಕಲು ಮುಂದಾಗಿದೆ. ಆದರೆ, ಯಾವಾಗ ಎಂಬುದು ಗೊತ್ತಿಲ್ಲ. ಆದರೆ ಎಷ್ಟು ಎಂಬುದು ಗೊತ್ತಿದೆ. ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ತಲಾ 8 ರೂಪಾಯಿ ಏರಿಕೆ ಆಗಲಿದೆ.
ಸದ್ಯಕ್ಕೆ ಲಾಕ್ ಡೌನ್ ಆಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ತೈಲದ ಬೇಡಿಕೆ ಕುಗ್ಗಲಿದೆ. ಹೀಗಾಗಿ ಲಾಕ್ ಡೌನ್ ಅವಧಿಯಲ್ಲಿ ದರ ಏರಿಕೆ ಮಾಡದೇ ಇರಬಹುದು. ಆದರೆ, ಲಾಕ್ ಡೌನ್ ಅವಧಿ ಮುಗಿಯುತ್ತಿದ್ದಂತೆ ಗ್ರಾಹಕರು ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯನ್ನು ಭರಿಸಲು ಸಿದ್ದರಾಗಬೇಕಿದೆ.
ಏನಾಗಿದೆ ಎಂದರೆ- ಲಾಕ್ ಡೌನ್ ಹೇರುವ ಮುನ್ನಾ ದಿನ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಾನು ಬಯಸಿದ ಯಾವುದೇ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಜ್ ಸುಂಕವನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ಅನುವು ಮಾಡಿಕೊಡುವ ನಿಬಂಧನೆಗೆ ಅನುಮೋದನೆ ಪಡೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕದ ಮಿತಿಯನ್ನು ಕ್ರಮವಾಗಿ ಲೀಟರ್‌ಗೆ 18 ಮತ್ತು 12 ರೂಪಾಯಿ ಗೆ ಏರಿಸಲು ಹಣಕಾಸು ಕಾಯ್ದೆ ಎಂಟನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಲಾಗಿದೆ. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ 2020 ರ ಹಣಕಾಸು ಮಸೂದೆಗೆ ತಿದ್ದುಪಡಿ ಮಸೂದೆಯು ಯಾವುದೇ ಚರ್ಚೆಯಿಲ್ಲದೇ ಅಂಗೀಕಾರವಾಗಿದೆ. ಹಿಂದಿನ ಮಿತಿ ಪೆಟ್ರೋಲ್‌ಗೆ ಲೀಟರ್‌ಗೆ 10 ಮತ್ತು ಡೀಸೆಲ್‌ಗೆ 4 ರೂಪಾಯಿ ಇತ್ತು. ‘ಕೋವಿಡ್-19’ ನಿಂದ ಉದ್ಭವಿಸಿರುವ ಸಂಕಷ್ಟದಿಂದ ಏಕಾಏಕಿ ಬಂದ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಸುಂಕ ಹೇರುತ್ತಿರುವುದಾಗಿ ಮೋದಿ ಸರ್ಕಾರ ತನ್ನನ್ನು ತಾನು ಸಮರ್ಥಿಸಿಕೊಂಡಿದೆ. ಮಾರ್ಚ್ 14ರಂದು ಏರಿಸಿದ ಎಕ್ಸೈಜ್ ಸುಂಕ ತಲಾ 3 ರೂಪಾಯಿ ಗಳಿಂದ ವಾರ್ಷಿಕ 39,000 ಕೋಟಿ ಹೆಚ್ಚುವರಿ ಆದಾಯಗಳಿಸುವ ನಿರೀಕ್ಷೆ ಇದೆ. 3 ರೂಪಾಯಿ ಪೈಕಿ ವಿಶೇಷ ಹೆಚ್ಚುವರಿ ಎಕ್ಸೈಜ್ ಸುಂಕ 2 ರೂಪಾಯಿ ಮತ್ತು ರಸ್ತೆ ಮತ್ತು ಮೂಲಭೂತ ಸೌಕರ್ಯಗಳ ಮೇಲಿನ ಉಪಕರ (ಸೆಸ್) 1 ರೂಪಾಯಿ ಸೇರಿದೆ.
ಉದ್ದೇಶಿತ ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ಯಾವಾಗ ಬೇಕಾದರೂ 8 ರೂಪಾಯಿ ಏರಿಕೆ ಮಾಡುವ ಅಧಿಕಾರವನ್ನು ನೀಡುತ್ತದೆ. ಸದ್ಯಕ್ಕೆ ಏರಿಕೆ ಇಲ್ಲದಿದ್ದರೂ ಮುಂಬರುವ ದಿನಗಳಲ್ಲಿ ಏರಿಕೆ ಆಗುತ್ತದೆ. ಅಥವಾ ಲಾಕ್ ಡೌನ್ ದಿನಗಳಲ್ಲೇ ನಿತ್ಯವೂ 50 ಪೈಸೆಗಳಷ್ಟು ಏರಿಕೆ ಮಾಡಿ ಲಾಕ್ ಡೌನ್ ಮುಗಿಯುವ ವೇಳೆಗೆ ಗರಿಷ್ಠ ಎಂಟು ರುಪಾಯಿಗಳ ಏರಿಕೆಯನ್ನೂ ಮಾಡುವ ಸಾಧ್ಯತೆ ಇದೆ. ಈ ಹಿಂದೆಯೂ ನರೇಂದ್ರ ಮೋದಿ ಸರ್ಕಾರ ಚುನಾವಣಾ ಅವಧಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡದೇ, ಚುನಾವಣೆ ಮುಗಿದ ನಂತರದಲ್ಲಿ ತ್ವರಿತವಾಗಿ ಏರಿಕೆ ಮಾಡಿ, ಚುನಾವಣಾ ಅವಧಿಯಲ್ಲಿ ಏರಿಕೆ ಮಾಡದ್ದರಿಂದ ಆಗಿದ್ದ ನಷ್ಟವನ್ನೂ ಭರಿಸಿಕೊಂಡಿತ್ತು.
ಈಗ ‘ಕೋವಿಡ್-19’ ಹೆಸರಿನಲ್ಲಿ ದರ ಏರಿಕೆ ಮಾಡುವ ಅಧಿಕಾರವನ್ನು ನರೇಂದ್ರ ಮೋದಿ ಸರ್ಕಾರ ಪಡೆದುಕೊಂಡಿದೆ. ಈಗ ಮೂಲಭೂತ ಪ್ರಶ್ನೆ ಎಂದರೆ- ‘ಕೋವಿಡ್-19’ ಸಂಕಷ್ಟ ಎದುರಿಸಲು ಕೇಂದ್ರ ಸರ್ಕಾರದ ಬಳಿ ಹಣ ಇಲ್ಲವೇ? ಹೆಚ್ಚುವರಿ ತೆರಿಗೆ ಮೂಲಕವೇ ಹಣ ಸಂಗ್ರಹ ಮಾಡುವಂತಹ ಅನಿವಾರ್ಯ ಪರಿಸ್ಥಿತಿ ಇದೆಯೇ? ಅಂದರೆ ಕೇಂದ್ರ ಸರ್ಕಾರದ ಬೊಕ್ಕಸ ಬರಿದಾಗಿದೆಯೇ? ಕೇಂದ್ರ ಸರ್ಕಾರ ದಿವಾಳಿಯತ್ತ ದಾಪುಗಾಲು ಹಾಕಿದೆಯೇ?
ಈ ಎಲ್ಲಾ ಮೂಲಭೂತ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ. ಏಕೆಂದರೆ ಇಡೀ ಜಗತ್ತಿನಲ್ಲೇ ಕಚ್ಚಾ ತೈಲ ದರ ಇಳಿಕೆಯ ಲಾಭವನ್ನು ಗ್ರಾಹಕರು ಅನುಭವಿಸುತ್ತಿದ್ದಾರೆ. ಅದರೆ, ಭಾರತದ ದುರಾದೃಷ್ಟ ಗ್ರಾಹಕ ಮಾತ್ರ ಅದರ ಲಾಭದಿಂದ ವಂಚಿತನಾಗಿದ್ದಾನೆ. ಅಷ್ಟೇ ಅಲ್ಲ, ಸಾಮಾನ್ಯ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು ದರ ಪಾವತಿಸುತಿಸುತ್ತಿದ್ದಾನೆ.

ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರ 71.97 ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿಯುತ್ತಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಮಾರ್ಚ್ 16ರಿಂದಲೂ 71.97 ರೂಪಾಯಿ ಸ್ಥಿರವಾಗಿದೆ. ಹಣಕಾಸು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮೋದಿ ಸರ್ಕಾರವು ಪಡೆದಿರುವ ಅಧಿಕಾರವನ್ನು ಚಲಾಯಿಸಿ 8 ರುಪಾಯಿ ಏರಿಸಿದರೆ ಪೆಟ್ರೋಲ್ ದರವು ಹೆಚ್ಚುಕಮ್ಮಿ 80 ರೂಪಾಯಿಗೆ ಏರುತ್ತದೆ. ಅದಾದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ದರ ಏರಿಕೆ ಆಗುತ್ತದೆ ಎಂದಿಟ್ಟುಕೊಳ್ಳಿ, ಆಗ ತ್ವರಿತವಾಗಿ ದೇಶೀಯ ಮಾರುಕಟ್ಟೆ ದರವೂ ಏರುತ್ತದೆ. ನಾವು ಈ ಹಿಂದೆಯೇ ಹೇಳಿದಂತೆ ನರೇಂದ್ರ ಮೋದಿ ಸರ್ಕಾರವು ಯಾವುದೇ ಕಾರಣಕ್ಕೂ ಪೆಟ್ರೋಲ್ ದರವು 70 ರೂಪಾಯಿಗಿಂತ ಕೆಳಕ್ಕೆ ಇಳಿಯಲು ಬಿಡುವುದಿಲ್ಲ. ಕಚ್ಚಾ ತೈಲ 20 ಡಾಲರ್ ಗೆ ಕುಸಿದರೂ ಭಾರತದ ಗ್ರಾಹಕರು ಮಾತ್ರ ಪೆಟ್ರೋಲ್ ಗೆ ಗರಿಷ್ಠ ಪ್ರಮಾಣದ ದರ ತೆರಲೇಬೇಕು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತ್ವರಿತವಾಗಿ ಕುಸಿದಿದೆ. ರಷ್ಯಾ ದೇಶವನ್ನು ತೈಲ ಮಾರುಕಟ್ಟೆಯಿಂದ ಹೊರಹಾಕಲು ಮುಂದಾಗಿರುವ ಸೌದಿ ಅರೇಬಿಯಾವು ಭಾರಿ ಪ್ರಮಾಣದಲ್ಲಿ ದರ ಕಡಿತ ಮಾಡಿ ದರ ಸಮರ ಸಾರಿದೆ. ಜನವರಿ ಆರಂಭದಲ್ಲಿ ಪ್ರತಿ ಬ್ಯಾರೆಲ್ ಗೆ 66 ಡಾಲರ್ ಇದ್ದ ಕಚ್ಚಾ ತೈಲವು ಈಗ 30 ಡಾಲರ್ ಆಜುಬಾಜಿಗೆ ಇಳಿದಿದೆ. ಅಂದರೆ ಶೇ.52ರಷ್ಟು ಕುಸಿತವಾಗಿದೆ. ಬೆಂಗಳೂರಿನಲ್ಲಿ ಜನವರಿ 1ರಂದು ಪೆಟ್ರೋಲ್ ದರ ರೂ. 77.71 ಇದ್ದದ್ದು ಈಗ (ಮಾರ್ಚ್ 25ರಂದು) ರೂ. 71.97ಕ್ಕೆ ಇಳಿದಿದೆ. ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಶೇ.52ರಷ್ಟು ಕುಸಿದಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಇಳಿದಿರುವುದು ಶೇ.7ರಷ್ಟು ಮಾತ್ರ.
ಕೇಂದ್ರ ಸರ್ಕಾರ ಮಾರ್ಚ್ 14ರಂದು ಮತ್ತೆ ಎಕ್ಸೈಜ್ ಸುಂಕ ಹೇರಿರುವುದರಿಂದ ಕೇಂದ್ರ ಸರ್ಕಾರ ಸರ್ಕಾರ ಪೆಟ್ರೋಲ್ ಮೇಲಿನ ಹಾಲಿ ತೆರಿಗೆಯು ರೂ.17.98 ರಿಂದ ರೂ.98ಕ್ಕೆ ಮತ್ತು ಡಿಸೇಲ್ ತೆರಿಗೆಯು ರೂ.13.83 ರಿಂದ ರೂ.16.83ಕ್ಕೆ ಏರಿದೆ. ಸಾಮಾನ್ಯವಾಗಿ ಒಂದು ಅಥವಾ ಗರಿಷ್ಠ ಎರಡು ರೂಪಾಯಿ ಸುಂಕ ಹೇರುವ ವಾಡಿಕೆ ಇತ್ತು. ನರೇಂದ್ರ ಮೋದಿ ಸರ್ಕಾರವು ಕಚ್ಚಾ ತೈಲ ದರ ಮತ್ತಷ್ಟು ಕುಸಿಯುವ ನಿರೀಕ್ಷೆಯಿಂದಾಗಿ 3 ರೂಪಾಯಿ ಸುಂಕ ಹೇರಿದೆ. ಇದು ಕಳೆದ ಎಂಟು ವರ್ಷಗಳಲ್ಲೇ ಅತಿ ಗರಿಷ್ಠ ಪ್ರಮಾಣದ ಏರಿಕೆಯಾಗಿದೆ. ಒಂದು ವೇಳೆ 8 ರೂಪಾಯಿ ದರ ಏರಿಕೆ ಮಾಡಿದರೆ ಅದು ಸರ್ವಕಾಲಿಕ ಗರಿಷ್ಠ ದರ ಏರಿಕೆಯಾಗಿ ಜಾಗತಿಕ ದಾಖಲೆ ಆಗಲಿದೆ..!