ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಮಾಡಿ ಇನ್ನೇನು ಹೊಸದಾಗಿ ಮಂತ್ರಿಗಳಾದವರನ್ನೆಲ್ಲಾ ಸಮಾಧಾನಪಡಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾವಿಸುವಷ್ಟರಲ್ಲಿ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲಿ ಎ0ಬಂತಾಗಿದೆ ಅವರ ಪರಿಸ್ಥಿತಿ. ನೂತನ ಸಚಿವರು ತಮಗೆ ವಹಿಸಿದ ಖಾತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಿರಿಕಿರಿ ಆರಂಭಿಸಿದ್ದಾರೆ. ಆ ಮೂಲಕ ನೂತನ ಸಚಿವರ ನಾಯಕತ್ವ ವಹಿಸಿರುವ ರಮೇಶ್ ಜಾರಕಿಹೊಳಿ ಅವರಿಗೆ ಕೇಳಿದ ಖಾತೆ ಕೊಟ್ಟು ಖುಷಿಪಡಿಸಿದರೆ ಉಳಿದವರ ಕಾಟ ತಪ್ಪುತ್ತದೆ ಎಂಬ ಯಡಿಯೂರಪ್ಪ ಅವರ ನಿರೀಕ್ಷೆ ಹುಸಿಯಾಗಿದೆ. ಇದರ ಪರಿಣಾಮ ಖಾತೆ ಹಂಚಿಕೆಯಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಲೇ ಬೇಕಾದ ಪರಿಸ್ಥಿತಿ ಎದುರಾಗಿದ್ದು, ಅದರಂತೆ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.
ಹೊಸ ಸಚಿವರ ಖಾತೆ ಬದಲಾವಣೆ ಮಾಡಿದ್ದಷ್ಟೇ ಅಲ್ಲ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರ ಬಳಿ ಇದ್ದ ಹೆಚ್ಚುವರಿ ಖಾತೆಗಳನ್ನು ವಾಪಸ್ ಪಡೆದು ಹೊಸ ಸಚಿವರಿಗೆ ಹಂಚಿದ್ದಾರೆ. ನೂತನ ಸಚಿವರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿಗಳು ಅನುಸರಿಸಿದ ಈ ಕ್ರಮ ಹಿರಿಯ ಇಬ್ಬರು ಸಚಿವರಲ್ಲಿ ಬೇಸರ ತರಿಸಿದ್ದರೆ, ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದರು ಎಂಬ ಒಂದೇ ಕಾರಣಕ್ಕೆ ಹೊಸಬರಿಗೆ ಕೊಡುವ ಆದ್ಯತೆಯ ಸ್ವಲ್ಪ ಪ್ರಮಾಣವಾದರೂ ನಮಗೆ ಸಿಗುತ್ತಿಲ್ಲ ಎಂದು ಬಿಜೆಪಿಯನ್ನು ಕಟ್ಟಿ ಬೆಳೆಸಿ ಗೆದ್ದು ಬಂದಿರುವ ಶಾಸಕರು ಅಸಮಾಧಾನಗೊಳ್ಳುವಂತೆಯೂ ಮಾಡಿದೆ. ಹೌದು, ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಅಧಿಕಾರಕ್ಕೆ ಬರಲು 17 ಶಾಸಕರು ಕಾರಣ. ಅವರಿಗೆ ಆದ್ಯತೆ ಕೊಡಬೇಕು. ಹಾಗೆಂದು ಆ 17 ಮಂದಿಯಿಂದ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಪಕ್ಷವನ್ನು ಅಧಿಕಾರದ ಹತ್ತಿರಕ್ಕೆ ತಂದು ನಿಲ್ಲಿಸಿದ್ದು 2018ರ ಚುನಾವಣೆಯಲ್ಲಿ ಗೆದ್ದಿರುವ 104 ಮಂದಿ. ಹೊಸಬರಿಗೆ ಕೊಟ್ಟ ಅರ್ಧದಷ್ಟಾದರೂ ಪ್ರಾಮುಖ್ಯತೆಯನ್ನು ನಮಗೆ ಕೊಡಬೇಡವೇ ಎಂದು ಹಿರಿಯ ಶಾಸಕರು, ಅದರಲ್ಲೂ ನಾಲ್ಕೈದು ಬಾರಿ ಗೆದ್ದರೂ ಅಧಿಕಾರ ಕಾಣದವರು ಪ್ರಶ್ನಿಸುವಂತಾಗಿದೆ.

ಸೋಮವಾರ ನೂತನ 10 ಸಚಿವರಿಗೆ ಖಾತೆಗಳನ್ನು ಹಂಚಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಮೇಶ್ ಜಾರಕಿಹೊಳಿ ಅವರಿಗೆ ಕೇಳಿದ ಖಾತೆ ಕೊಟ್ಟು ಉಳಿದವರಿಗೆ ತಮ್ಮಿಚ್ಛೆಯಂತೆ ಖಾತೆಗಳನ್ನು ಹಂಚಿದ್ದರು. ಆರಂಭದಲ್ಲಿ ಎಲ್ಲವೂ ಸರಿ ಇರುವಂತೆ ಕಂಡಿತಾದರೂ ಬಳ್ಳಾರಿ ಜಿಲ್ಲೆ ವಿಭಜನೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂಬ ಹೇಳಿಕೆ ಆನಂದ್ ಸಿಂಗ್ ಅವರಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಅತ್ತ ವಿಜಯನಗರ ಪ್ರತ್ಯೇಕ ಜಿಲ್ಲೆಯೂ ಆಗುತ್ತಿಲ್ಲ, ಇತ್ತ ಕೇಳಿದ ಖಾತೆಯೂ ಸಿಕ್ಕಿಲ್ಲ. ನಂಬಿ ಬಂದವರಿಗೆ ಈ ರೀತಿ ಕೈಕೊಡುವುದು ಸರಿಯೇ ಎಂದು ನೇರವಾಗಿಯೇ ಮುಖ್ಯಮಂತ್ರಿಗಳನ್ನು ಕೇಳಿಬಿಟ್ಟರು. ಇದು ಗೊತ್ತಾಗುತ್ತಿದ್ದಂತೆ ಬಿ.ಸಿ.ಪಾಟೀಲ್, ಕೆ.ಗೋಪಾಲಯ್ಯ, ಶಿವರಾಮ ಹೆಬ್ಬಾರ್, ಬಿ.ಎ.ಬಸವರಾಜು (ಭೈರತಿ ಬಸವರಾಜು), ಶ್ರೀಮಂತ ಪಾಟೀಲ್, ಡಾ.ಸುಧಾಕರ್ ಕೂಡ ತಮ್ಮ ಖಾತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದರು.
ಹೀಗಾಗಿ ಮಾರನೇ ದಿನವೇ ನೂತನವಾಗಿ ಸಚಿವರಾದ 10 ಮಂದಿ ಪೈಕಿ ಕೆಲವರ ಖಾತೆಗಳು ಬದಲಾಗಿವೆ. ಬಿ.ಸಿ.ಪಾಟೀಲ್ ಅವರಿಗೆ ಅರಣ್ಯ ಬದಲು ಕೃಷಿ, ಆನಂದ್ ಸಿಂಗ್ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಬದಲು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಬಿ.ಎ.ಬಸವರಾಜು ಅವರಿಗೆ ನಗರಾಭಿವೃದ್ಧಿ ಜತೆಗೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಖಾತೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಅದೇ ರೀತಿ ಕೆ.ಗೋಪಾಲಯ್ಯ ಅವರಿಗೆ ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ಬದಲು- ಆಹಾರ, ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಖಾತೆ ವಹಿಸಲಾಗಿದ್ದು, ಶಿವರಾಮ ಹೆಬ್ಬಾರ್ ಅವರಿಗೆ ಕಾರ್ಮಿಕ ಖಾತೆ ಜತೆಗೆ ಸಕ್ಕರೆ ಖಾತೆ ವಹಿಸಲಾಗಿದೆ. ಸಣ್ಣ ಕೈಗಾರಿಕಾ ಖಾತೆಯನ್ನು ಮುಖ್ಯಮಂತ್ರಿಗಳೇ ಇಟ್ಟುಕೊಂಡಿದ್ದಾರೆ.

ಹೊಸಬರಿಗಾಗಿ ಮೂವರ ಹೆಚ್ಚುವರಿ ಖಾತೆಗಳಿಗೆ ಕತ್ತರಿ
ಹೊಸಬರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿಗಳು ಹಿರಿಯ ಮೂವರು ಸಚಿವರ ಬಳಿ ಇದ್ದ ಹೆಚ್ಚುವರಿ ಖಾತೆಗಳಿಗೆ ಕತ್ತರಿ ಹಾಕಿದ್ದಾರೆ. ಸೋಮವಾರ ಹೊಸ ಸಚಿವರ ಬೇಡಿಕೆಯನ್ನು ತಿರಸ್ಕರಿಸಿದ್ದ ಯಡಿಯೂರಪ್ಪ ಅವರು ಮಂಗಳವಾರ ಅಸಮಾಧಾನಿತರ ಸಂಖ್ಯೆ ಹೆಚ್ಚಾದಂತೆ ಒತ್ತಡಕ್ಕೆ ಮಣಿಯಲೇ ಬೇಕಾಯಿತು. ಸಚಿವ ಬಿ.ಸಿ.ಪಾಟೀಲ್ ಅವರು ಕಣ್ಣು ಹಾಕಿದ್ದುದು ಬಸವರಾಜ ಬೊಮ್ಮಾಯಿ ಅವರಲ್ಲಿದ್ದ ಗೃಹ ಮತ್ತು ಹೆಚ್ಚುವರಿಯಾಗಿದ್ದ ಕೃಷಿ ಖಾತೆ ಬಗ್ಗೆ. ಮೊದಲೇ ಈ ಎರಡು ಖಾತೆಗಳ ಪೈಕಿ ಒಂದು ನನಗೆ ಬೇಕೇ ಬೇಕು. ಅದು ಸಾಧ್ಯವಾಗದಿದ್ದರೆ ಮಹತ್ವದ ಖಾತೆಯೇ ಬೇಕು ಎಂದು ಕೇಳಿದ್ದರು. ಮುಖ್ಯಮಂತ್ರಿಗಳ ಬಳಿ ಇದ್ದ ಇಂಧನ ಖಾತೆ ಅವರ ಇನ್ನೊಂದು ಬಯಕೆಯಾಗಿತ್ತು. ಆದರೆ, ಇಂಧನ ಖಾತೆ ಬಿಟ್ಟುಕೊಡಲು ಒಪ್ಪದ ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರ ಬಳಿ ಹೆಚ್ಚುವರಿಯಾಗಿದ್ದ ಕೃಷಿ ಖಾತೆಯನ್ನು ಬಿ.ಸಿ.ಪಾಟೀಲರಿಗೆ ನೀಡಿದ್ದಾರೆ.
ಅದೇ ರೀತಿ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಅವರ ಬಳಿ ಹೆಚ್ಚುವರಿಯಾಗಿದ್ದ ಪರಿಸರ ಮತ್ತು ಜೀವಿಶಾಸ್ತ್ರ ಖಾತೆಯನ್ನು ಅರಣ್ಯದೊಂದಿಗೆ ಸೇರಿಸಿ ಆನಂದ್ ಸಿಂಗ್ ಅವರಿಗೆ ವಹಿಸಿದ್ದಾರೆ. ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಲ್ಲಿ ಹೆಚ್ಚುವರಿಯಾಗಿದ್ದ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಖಾತೆಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣವನ್ನು ತೆಗೆದು ಶ್ರೀಮಂತ ಪಾಟೀಲ್ ಅವರಿಗೆ ವಹಿಸಿದ್ದಾರೆ.
ಸುಧಾಕರ್ ಬೇಡಿಕೆಗೆ ಮಣಿಯದ ಸಿಎಂ
ಆದರೆ, ವೈದ್ಯಕೀಯ ಶಿಕ್ಷಣದ ಜತೆಗೆ ಇಂಧನ ಖಾತೆಯೂ ಬೇಕು. ಇಲ್ಲವಾದರೆ ವೈದ್ಯಕೀಯ ಶಿಕ್ಷಣ ವಾಪಸ್ ಪಡೆದು ಇಂಧನ ಖಾತೆ ನೀಡಿ ಸಾಕು ಎಂಬ ಸಚಿವ ಡಾ.ಸುಧಾಕರ್ ಅವರ ಕೋರಿಕೆಗೆ ಮುಖ್ಯಮಂತ್ರಿಗಳು ಸೊಪ್ಪು ಹಾಕಿಲ್ಲ. ಅದರ ಬದಲಾಗಿ, ನಿಮ್ಮ ಜಿಲ್ಲೆಗೆ (ಚಿಕ್ಕಬಳ್ಳಾಪುರಕ್ಕೆ) ಮಂಜೂರಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ಕೊಂಡೊಯ್ದಿದ್ದ ಡಿ.ಕೆ.ಶಿವಕುಮಾರ್ ಅವರಲ್ಲಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ನಿಮಗೆ ನೀಡಿದ್ದೇನೆ. ಹೇಗೂ ಸ್ಥಳಾಂತರವಾಗಿದ್ದ ವೈದ್ಯಕೀಯ ಕಾಲೇಜನ್ನು ಮತ್ತೆ ಚಿಕ್ಕಬಳ್ಳಾಪುರಕ್ಕೆ ಕೊಟ್ಟಿದ್ದೇನೆ. ನಿಮ್ಮ ಖಾತೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿ ವೈದ್ಯಕೀಯ ಕಾಲೇಜನ್ನು ಉಳಿಸಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ. ಅಷ್ಟೇ ಅಲ್ಲ, ನೀವಿನ್ನೂ ಯುವಕರಾಗಿದ್ದು, ಸಾಕಷ್ಟು ವರ್ಷ ರಾಜಕೀಯ ಮಾಡುವುದು ಇದೆ. ಆರಂಭದಲ್ಲೇ ಮಹತ್ವದ ಖಾತೆಗಳನ್ನು ಕೊಡುವುದರಿಂದ ಇತರರಿಗೆ ಅಸಮಾಧಾನವಾಗುತ್ತದೆ. ನಿಮ್ಮ ಪ್ರಮುಖ ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದು, ಮತ್ತೆ ಒತ್ತಡ ಹೇರಬೇಡಿ ಎಂದು ಸೂಚ್ಯವಾಗಿ ಹೇಳಿದ್ದಾರೆ. ಹೀಗಾಗಿ ಸುಧಾಕರ್ ಅವರು ಸುಮ್ಮನಾಗುವಂತಾಗಿದೆ. ಆದರೆ, ಪಟ್ಟು ಮುಂದುವರಿಸಿರುವ ಅವರು, ತಮ್ಮ ಬೆಂಬಲಿಗರ ಮೂಲಕ ಪ್ರಮುಖ ಖಾತೆಗಾಗಿ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತಿದ್ದಾರೆ.
ಮೂಲ ಬಿಜೆಪಿ ಶಾಸಕರಲ್ಲಿ ಹೆಚ್ಚುತ್ತಿದೆ ಅಸಮಾಧಾನ
ಸಚಿವ ಸಂಪುಟದಲ್ಲಿ 16 ಸ್ಥಾನ ಖಾಲಿ ಇದ್ದರೂ ಕೇವಲ 10 ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿರುವ ಬಗ್ಗೆ ಮೂಲ ಬಿಜೆಪಿ ಶಾಸಕರಲ್ಲಿ ಇರುವ ಅಸಮಾಧಾನವನ್ನು ನೂತನ ಸಚಿವರ ಖಾತೆಗಳ ಬದಲಾವಣೆ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಜಲಸಂಪನ್ಮೂಲ ಖಾತೆಯನ್ನು ರಮೇಶ್ ಜಾರಕಿಹೊಳಿ ಅವರಿಗೆ ನೀಡಿದ್ದ ಬಗ್ಗೆ ಕೆಲವರಿಗೆ ಅತೃಪ್ತಿ ಇತ್ತು. ಆದರೆ, ಇದೀಗ ಮತ್ತೊಂದು ಪ್ರಮುಖ ಖಾತೆಯಾದ ಕೃಷಿಯನ್ನು ಹೊಸ ಸಚಿವರಿಗೆ ನೀಡುವ ಮೂಲಕ ಇನ್ನು ಬರುವವರಿಗೆ ಕೇವಲ ಎರಡೇ ಪ್ರಮುಖ ಖಾತೆಗಳನ್ನು ಬಾಕಿ ಉಳಿಸಿಕೊಂಡಿರುವುದು ಅಸಮಾಧಾನ ಹೆಚ್ಚಲು ಕಾರಣ. ಸದ್ಯ ಬೂದಿ ಮುಚ್ಚಿದ ಕೆಂಡದಂತಿರುವ ಈ ಅಸಮಾಧಾನ ಮತ್ತೆ ಯಾವಾಗ ಹೋರಬರುತ್ತದೋ ಕಾದು ನೋಡಬೇಕು.