ನಿತ್ಯಾನಂದ, ಕರುನಾಡು ಮರೆಯದ ಹೆಸರುಗಳ ಪಟ್ಟಿಯಲ್ಲಿ ನಿತ್ಯಾನಂದ ಸ್ವಾಮೀಜಿಗೆ ಪ್ರತ್ಯೇಕವಾದ ಸ್ಥಾನವಿದೆ. ನಿತ್ಯಾನಂದ ಸ್ವಾಮೀಜಿ, ಸ್ವಯಂಘೋಷಿತ ದೇವಮಾನವನಾಗಿ ಬಿಡದಿಯಲ್ಲಿ ಬಿಡಾರ ಹೂಡಿದ ಬಳಿಕ ತನ್ನ ವಿಶೇಷ ಕೆಲಸಗಳಿಂದಲೇ ಗಮನ ಸೆಳೆದಿರುವುದು ಹೆಚ್ಚು. ಸ್ವಾಮೀಜಿಗಳು ಎಂದರೆ ಬಡ ಮಕ್ಕಳÀ ಸೇವೆ, ಸಮಾಜಸೇವೆ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವುದು. ನೊಂದವರ ಕಣ್ಣಿರು ಒರೆಸುವುದು ಎನ್ನುವ ಆಲೋಚನೆಯನ್ನೇ ದೂರ ಮಾಡಿದ ಕುಖ್ಯಾತಿ ಬಿಡದಿಯ ನಿತ್ಯಾನಂದ ಸ್ವಾಮೀಜಿಗೆ ಸಲ್ಲುತ್ತದೆ. ಈ ನಿತ್ಯಾನಂದ ಸ್ವಾಮೀಜಿ ಸದ್ಯಕ್ಕೆ ನಮ್ಮ ಭಾರತದಲ್ಲಿ ಇಲ್ಲ. ಈತ ಪ್ರತ್ಯೇಕ ದೇಶವನ್ನೇ ನಿರ್ಮಾಣ ಮಾಡಿಕೊಂಡು ಈಕ್ವೆಡಾರ್ ದೀಪರಾಷ್ಟçದಲ್ಲಿ ವಾಸವಾಗಿದ್ದಾನೆ. ಈತನನ್ನು ಬಂಧಿಸಲು ಗುಜರಾತ್ ಸರ್ಕಾರ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ. ಇದೀಗ ಕರ್ನಾಟಕ ಹೈಕೋರ್ಟ್ ಕೂಡ ಬಂಧನ ವಾರೆಂಟ್ ಕೊಟ್ಟಿದೆ.
ಬಿಡದಿಯ ಆಶ್ರಮದಲ್ಲಿ ಅತ್ಯಾಚಾರ ನಡೆಸಿದ ಆರೋಪ ನಿತ್ಯಾನಂದ ಸ್ವಾಮೀಜಿ ಮೇಲಿದ್ದು, ಆ ಪ್ರಕರಣದಲ್ಲಿ ಜಾಮೀನು ಕೂಡ ಪಡೆದುಕೊಂಡಿದ್ದ. ಆದರೆ ನಿತ್ಯಾನಂದ ಸ್ವಾಮೀಜಿಗೆ ಕೊಟ್ಟಿರುವ ಜಾಮೀನು ರದ್ದು ಮಾಡಬೇಕೆಂದು ನಿತ್ಯಾನಂದ ವಿರುದ್ಧ ದೂರು ಸಲ್ಲಿಸಿರುವ ಲೆನಿನ್ ಹೈಕೋರ್ಟ್ ಮೊರೆ ಹೋಗಿದ್ದರು. ಲೆನಿನ್ ಪರ ವಕೀಲರ ವಾದ ಆಲಿಸಿದ್ದ ಹೈಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ಆದೇಶ ಪ್ರಕಟಗೊಂಡಿದ್ದು, ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಪಡೆದುಕೊಂಡಿದ್ದ ಜಾಮೀನು ರದ್ದು ಮಾಡಲಾಗಿದೆ. ಜೊತೆಗೆ ನಿತ್ಯಾನಂದ ಜಾಮೀನು ಪಡೆದುಕೊಂಡಾಗ ಕೋರ್ಟ್ಗೆ ಸಲ್ಲಿಸಿದ್ದ ಬಾಂಡ್ ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್ ಸೂಚನೆ ಕೊಟ್ಟಿದೆ. ಫೆಬ್ರವರಿ 3ರಂದು ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ್ದ ಏಕಸದಸ್ಯ ಪೀಠ, ಇಂದು ತೀರ್ಪು ಪ್ರಕಟ ಮಾಡಿದ್ದು, ವಿಚಾರಣೆಗೆ ಹಾಜರಾಗದೆ ನ್ಯಾಯಾಲಯಕ್ಕೆ ಅಗೌರವ ಸೂಚಿಸಿದ್ದು, ಕೂಡಲೇ ಬಂಧನ ಮಾಡಿ ಎಂದು ಕೋರ್ಟ್ ಆದೇಶ ಮಾಡಿದೆ.
ಜೂನ್ 5, 2018ರ ಬಳಿಕ ನಿತ್ಯಾನಂದ ಕೋರ್ಟ್ ಎದುರು ಕೂಡ ಹಾಜರಾಗಿಲ್ಲ. ನಿತ್ಯಾನಂದ ಪಾಸ್‌ಪೋರ್ಟ್ ಅವಧಿ ಕೂಡ ಮುಕ್ತಾಯವಾಗಿದ್ದು, ಬೆಲ್ಲೀಸ್ ದೇಶದ ಪಾಸ್‌ಪೋರ್ಟ್ ಪಡೆದು ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಕೋರ್ಟ್ ನೋಟಿಸ್ ಕೂಡ ನಿತ್ಯಾನಂದ ಸ್ವೀಕಾರ ಮಾಡಿಲ್ಲ. ಬಿಡದಿ ಆಶ್ರಮದಲ್ಲಿ ಶಿಷ್ಯೆ ಅಚಲಾನಂದ ನೋಟಿಸ್ ಪಡೆದುಕೊಂಡಿದ್ದಾರೆ. ಬಿಡದಿಯಲ್ಲಿ ನಿತ್ಯಾನಂದ ಶ್ರೀಗಳು ಇಲ್ಲ ಎಂದು ಉತ್ತರಿಸಿದ್ದಾರೆ. ಈ ಎಲ್ಲಾ ಆಯಾಮಾಗಳಿಂದಲೂ ನಿತ್ಯಾನಂದನಿಗೆ ನೀಡಿರುವ ಜಾಮೀನು ಅರ್ಜಿಯನ್ನು ರದ್ದು ಮಾಡಬೇಕು ಎಂದು ಲೆನಿನ್ ಪರ ವಕೀಲರು ಕೋರಿದ್ದರು. ಲೆನಿನ್ ಪರ ವಕೀಲರ ವಾದ ಮನ್ನಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಜಾಮೀನು ರದ್ದು ಮಾಡಿ ಬಂಧನಕ್ಕೆ ಆದೇಶ ಮಾಡಿದೆ. ಇದೀಗ ಭಾರತ ಬಿಟ್ಟು ಪ್ರತ್ಯೇಕ ದೇಶವನ್ನೇ ಸ್ಥಾಪನೆ ಮಾಡಿ, ಭಾರತದಲ್ಲಿ ಎಲ್ಲವೂ ಸರಿಯಿಲ್ಲ ಎಂದು ವಿಶ್ವಸಂಸ್ಥೆಗೆ ದೂರು ಸಲ್ಲಿಸಿರುವ ಸ್ವಯಂಘೋಷಿತ ದೇವಮಾನವನಿಗೆ ಬಂಧನ ಭೀತಿ ಎದುರಾಗಿದೆ. ಕೋರ್ಟ್ ಎದುರು ಹಾಜರಾಗಿದ್ದ ಡಿಎಸ್‌ಪಿ ಬಾಲರಾಜ್, ನಾವು ನಿತ್ಯಾನಂದ ಸ್ವಾಮೀಜಿಗೆ ನೋಟಿಸ್ ಕೊಡಲು ಸಾಧ್ಯವಾಗ್ತಿಲ್ಲ. ಅವರು ಪ್ರಪಂಚ ರ‍್ಯಾಟನೆಯಲ್ಲಿದ್ದಾರೆ. ಈಕ್ವೇಡರ್ ರಾಷ್ಟçದ ಕೈಲಾಸ ಹೆಸರಿನ ದೀಪ ರಾಷ್ಟçದಲ್ಲಿದ್ದಾರೆ ಎನ್ನಲಾಗಿದೆ ಎಂದು ತಿಳಿಸಿದ್ದಾರೆ.
ನಿತ್ಯಾನಂದ ಸ್ವಾಮೀಜಿ, ಸೆಕ್ಷನ್‌ಗಳಾದ ಕ್ರಮಿನಲ್ ಅಪರಾಧ (114) ಅತ್ಯಾಚಾರ (376) ಸುಳ್ಳು ಮಾಹಿತಿ ನೀಡಿ ಕಣ್ಮರೆ (201), ವಂಚನೆ (420), ಕ್ರಿಮಿನಲ್ ಪಿತೂರಿ (120ಬಿ) ದೂರು ದಾಖಲಾಗಿದೆ. 2010ರಿಂದ 2 ಬಾರಿ ಬಂಧನಕ್ಕೆ ಒಳಪಟ್ಟಿದ್ದ ನಿತ್ಯಾನಂದ ಸ್ವಾಮೀಜಿ ಜಾಮೀನು ಪಡೆದು ಪಾರಾಗಿದ್ದ. ಇದೀಗ ಹೈಕೋರ್ಟ್ ಏಕಸದಸ್ಯ ಪೀಠ, ಮತ್ತೆ ಬಂಧನಕ್ಕೆ ಒಳಪಡಿಸಿವಂತೆ ಸೂಚನೆ ಕೊಟ್ಟಿದ್ದು, ಪೊಲೀಸರು ಯಾವ ವಿಧಾನ ಅನುಸರಿಸ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ. ಈಗಾಗಲೇ ಭಾರತದಲ್ಲಿ ಕಾನೂನಿಗೆ ಗೌರವವಿಲ್ಲ. ಸುಖಾಸುಮ್ಮನೆ ಬಂಧನ ಮಾಡ್ತಾರೆ, ದೌರ್ಜನ್ಯ ಮಾಡುವ ಕಾನೂನುಗಳಿವೆ ಎಂದು ವಿಶ್ವಸಂಸ್ಥೆ ಬಾಗಿ ತಟ್ಟಿರುವ ನಿತ್ಯಾನಂದ ವಿರುದ್ಧ ಗುಜರಾತ್ ಸರ್ಕಾರ ಸಿಬಿಐ ಮೊರೆ ಹೋಗುತ್ತಿದೆ. ನಿನ್ನೆಯಷ್ಟೇ ಆದೇಶ ಮಾಡಿರುವ ಗುಜರಾತ್ ಹೈಕೋರ್ಟ್ ಇಬ್ಬರು ಹೆಣ್ಣುಮಕ್ಕಳ ನಾಪತ್ತೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸೂಚನೆ ಕೊಟ್ಟಿದೆ. ಇದೀಗ ಕರ್ನಾಟಕ ಪೊಲೀಸರು ಕೂಡ ಸಿಬಿಐ, ಅಥವಾ ಕೇಂದ್ರ ಗೃಹ ಇಲಾಖೆ ಮೂಲಕ ಈಕ್ವೆಡರ್‌ನ ಕೈಲಾಸ ದೇಶದಲ್ಲಿರುವ ನಿತ್ಯಾನಂದನನ್ನು ಬಂಧಿಸುವ ಕೆಲಸ ಮಾಡುತ್ತಾ ಕಾದು ನೋಡ್ಬೇಕು. ಒಟ್ಟಾರೆ, ಪ್ರತ್ಯೇಕ ದೇಶ, ಪ್ರತ್ಯೇಕ ಹಣಕಾಸು, ಪ್ರತ್ಯೇಕ ಕಾನೂನು ರೂಪಿಸುತ್ತಿರುವ ತಮಿಳುನಾಡಿನ ನಿತ್ಯಾನಂದ ಪರಪ್ಪನ ಅಗ್ರಹಾರಕ್ಕೆ ಬರುವ ದಿನಗಳು ದೂರವಿಲ್ಲ ಎನಿಸುತ್ತದೆ.