ದೇಶಾದ್ಯಂತ ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದರೂ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರು ಮಾತ್ರ ಪ್ರತಿಭಟನಾಕಾರರ ಮನವಿಗೆ ಕಿವಿಗೊಡುವ ಗೋಜಿಗೆ ಹೋಗದೇ ಪ್ರತಿಭಟನೆಗಳನ್ನು ಹತ್ತಿಕ್ಕುವುದರಲ್ಲೇ ನಿರತರಾಗಿದ್ದಾರೆ.
ಪ್ರತಿಭಟನಾಕಾರರನ್ನು ದಮನ ಮಾಡಲು ಹೊರಟಿರುವ ಪೊಲೀಸರಿಗೆ ಸಾಥ್ ನೀಡುತ್ತಿರುವ ಈ ನಾಯಕರು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವಂತಹ ಪ್ರಕ್ರಿಯೆಗೆ ಧ್ವನಿಗೂಡಿಸುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಹೊಣೆಗೇಡಿ ಪೊಲೀಸ್ ಅಧಿಕಾರಿಯೊಬ್ಬರು ಸಿಎಎ ಮತ್ತು ಎನ್ಆರ್ ಸಿಗೆ ವಿರೋಧ ವ್ಯಕ್ತಪಡಿಸುವವರೆಲ್ಲಾ ಪಾಕಿಸ್ತಾನಕ್ಕೆ ಹೋಗಿ ಎಂದು ನೀಡಿರುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೆ ಉತ್ತರ ಪ್ರದೇಶ ಸರ್ಕಾರ ಮಾತ್ರ ಈ ಅಧಿಕಾರಿ ಬೆಂಬಲಕ್ಕೆ ನಿಂತಿದೆ.
ಅಧಿಕಾರಿ ನೀಡಿದ ಹೇಳಿಕೆಯಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಅಧಿಕಾರಿ ಸರಿಯಾಗಿಯೇ ಹೇಳಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಪೊಲೀಸ್ ಅಧಿಕಾರಿ ಬೆನ್ನಿಗೆ ನಿಂತಿದ್ದಾರೆ.
ಪೊಲೀಸ್ ಅಧಿಕಾರಿ ನೀಡಿರುವ ಹೇಳಿಕೆ ಸರಿಯಾಗಿದ್ದು, ಅವರು ನೀಡಿರುವುದು ಎಲ್ಲಾ ಮುಸ್ಲಿಂರಿಗಲ್ಲ. ಕೆಲವು ದೇಶದ್ರೋಹ ಮತ್ತು ದೇಶದ ಜನತೆಗೆ ಅನುಕೂಲವಾಗುವಂತಹ ಕಾನೂನುಗಳ ವಿರುದ್ಧ ಧ್ವನಿ ಎತ್ತಿರುವವರಿಗೆ ಮಾತ್ರ ಹೇಳಿರುವುದು ಎಂದು ಸಮರ್ಥಿಸಿಕೊಂಡಿದ್ದಾರೆ.

ಪೊಲೀಸ್ ಅಧಿಕಾರಿ ಪ್ರತಿಭಟನಾಕಾರರನ್ನು ಉದ್ದೇಶಿಸುತ್ತಾ ನೀವು CAA & NRCಗೆ ವಿರೋಧ ವ್ಯಕ್ತಪಡಿಸಿದರೆ ಮತ್ತು ಪಾಕಿಸ್ತಾನದ ಪರ ಘೋಷಣೆ ಕೂಗುವುದಾದರೆ, ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿಕೆ ನೀಡಿದ್ದರು. ಈ ವಿಡೀಯೋ ಬಹಿರಂಗಗೊಂಡು ತೀವ್ರ ಟೀಕೆಗೆ ಗುರಿಯಾಗಿತ್ತು.
ಇದನ್ನು ಸಮರ್ಥಿಸಿಕೊಂಡಿರುವ ಮೌರ್ಯ ಅವರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಪಾಕಿಸ್ತಾನದ ಪರವಾದ ಘೋಷಣೆ ಕೂಗಿದ್ದ ಪ್ರತಿಭಟನಾಕಾರರಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಪೊಲೀಸ್ ಅಧಿಕಾರಿ ಹೇಳಿದ್ದರು. ಭಾರತದಲ್ಲಿದ್ದುಕೊಂಡು ಪಾಕಿಸ್ತಾನ ಪರವಾದ ಘೋಷಣೆ ಕೂಗುವುದಾದರೆ ಆ ದೇಶಕ್ಕೆ ಹೋಗಿ ವಾಸ ಮಾಡಲಿ ಎಂಬರ್ಥದಲ್ಲಿ ಹೇಳಿದ್ದಾರೆ. ಇದರಲ್ಲಿ ತಪ್ಪು ಕಂಡುಹಿಡಿಯವುದೇ ಒಂದು ತಪ್ಪು ಎಂದು ಹೇಳಿದ್ದಾರೆ.
ಇಲ್ಲಿರುವ ಪ್ರಶ್ನೆಯೆಂದರೆ ಪ್ರತಿಭಟನಾಕಾರರಲ್ಲಿ ಕೆಲವರು ಹೊಣೆಗೇಡಿಗಳಿರುತ್ತಾರೆ. ಅವರು ಪ್ರತಿಭಟನೆ ಮಾಡುವ ಭರಾಟೆಯಲ್ಲಿ ಹಲವು ವಿಧದ ಘೋಷಣೆಗಳನ್ನು ಕೂಗುತ್ತಾರೆ. ಹಾಗಂತ, ಜವಾಬ್ದಾರಿಯುತ ಸ್ಥಾನದಲ್ಲಿರುವ ಅದರಲ್ಲೂ ಶಾಂತಿ ಸುವ್ಯವಸ್ಥೆ ಕಾಪಾಡುವ ಒಬ್ಬ ಪೊಲೀಸ್ ಅಧಿಕಾರಿ ಸಾರ್ವಜನಿಕರಿಗೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ? ಹೀಗೆ ಹೇಳಿಕೆ ಕೊಡುತ್ತಾ ಹೋದರೆ ಸರ್ಕಾರಿ ಅಧಿಕಾರಿಗಳಿಗೂ ರಾಜಕಾರಣಿಗಳೂ ವ್ಯತ್ಯಾಸ ಎಲ್ಲಿರುತ್ತದೆ? ಪ್ರತಿಭಟನೆಯನ್ನು ತಹಬದಿಗೆ ತರಬೇಕಾಗಿರುವ ಪೊಲೀಸರೇ ಪ್ರತಿಭಟನೆಯನ್ನು ಪ್ರಚೋದಿಸುವ ರೀತಿಯಲ್ಲಿ ಹೇಳಿಕೆಗಳನ್ನು ಕೊಟ್ಟರೆ ಪರಿಣಾಮ ಏನಾಗುತ್ತದೆ? ಎಂಬ ಅರಿವು ಇಟ್ಟುಕೊಳ್ಳಬೇಕಾಗುತ್ತದೆ.

ಒಂದು ವೇಳೆ ಕೆಲವು ಪ್ರತಿಭಟನಾಕಾರರು ಪಾಕಿಸ್ತಾನದ ಪರವಾದ ಘೋಷಣೆಗಳನ್ನು ಕೂಗಿದರೆ ಅಂತಹವರನ್ನು ದೇಶದ್ರೋಹದ ಆರೋಪದಲ್ಲಿ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲು ಕಾನೂನಿನಲ್ಲಿ ಅವಕಾಶವಿದೆ. ಅದನ್ನು ಬಿಟ್ಟು ನೀವು ಪಾಕಿಸ್ತಾನಕ್ಕೆ ಹೋಗಿ, ಮತ್ತೊಂದು ದೇಶಕ್ಕೆ ಹೋಗಿ ಎಂದು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿದರೆ ಪ್ರತಿಭಟನೆಯ ಕಿಚ್ಚಿಗೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ. ಇಂತಹ ಸಾಮಾನ್ಯ ಪ್ರಜ್ಞೆಯನ್ನೂ ಇಟ್ಟುಕೊಳ್ಳದಿರುವ ಪೊಲೀಸ್ ಅಧಿಕಾರಿಗಳಿಂದ ಸಾರ್ವಜನಿಕರು ಯಾವ ರೀತಿ ನ್ಯಾಯ ಪಡೆಯಲು ಸಾಧ್ಯ?
ಅದೇ ರೀತಿ ಇಂತಹ ಹೊಣೆಗೇಡಿ ಪೊಲೀಸ್ ಅಧಿಕಾರಿಗಳ ಬೆನ್ನಿಗೆ ನಿಲ್ಲುವ ಬದಲು ಆಡಳಿತ ನಡೆಸುವವರು ಅವರಿಗೆ ಎಚ್ಚರಿಕೆ ಕೊಟ್ಟು ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ತಾಕೀತು ಮಾಡಬೇಕಾಗುತ್ತದೆ. ಆದರೆ, ಮುಸ್ಲಿಂ ವಿರೋಧಿ ಮಂತ್ರವನ್ನೇ ಜಪಿಸುವ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ರಾಜಕಾರಣಿಗಳಿಂದ ಇದನ್ನು ಬಯಸುವುದಾದರೂ ಹೇಗೆ?
ಪ್ರತಿಭಟನಾಕಾರರು ಮುಸ್ಲಿಂರು ಎಂಬ ಕಾರಣಕ್ಕೆ ಈ ರಾಜಕಾರಣಿಗಳು ಪೊಲೀಸರ ಬೆನ್ನಿಗೆ ನಿಂತು ಅವರನ್ನು ಮತ್ತಷ್ಟು ಪ್ರಚೋದನೆಗೆ ಒಳಪಡಿಸುವುದು ದುರದೃಷ್ಠಕರ.
ಕೃಪೆ: ದಿ ವೈರ್