ಈ ಬಾರಿಯ ರಾಜ್ಯ ಬಜೆಟ್ ಮಂಡನೆಯ ವೇಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒಂದು ರೀತಿಯಲ್ಲಿ ಅಡಕತ್ತರಿಗೆ ಸಿಲುಕಿದ ಸ್ಥಿತಿಯಲ್ಲಿದ್ದರು.
ಅದಕ್ಕೆ ಕಾರಣ ಸ್ಪಷ್ಟ. ಒಂದು ಕಡೆ, ಕೇಂದ್ರದಿಂದ ಬರಬೇಕಾಗಿದ್ದ ತೆರಿಗೆ ಪಾಲಿನಲ್ಲಿ ಭಾರೀ ಮೊತ್ತ ಖೋತಾ ಆಗಿತ್ತು. ಮತ್ತೊಂದು ಕಡೆ, ಪ್ರಮುಖ ವಲಯಗಳ ಕುಂಠಿತ ಪ್ರಗತಿಯಿಂದಾಗಿ ರಾಜ್ಯದ ಆಂತರಿಕ ವರಮಾನ ಕೂಡ ಕೈಕೊಟ್ಟಿದೆ. ಹಾಗಾಗಿ, ಆ ಖೋತಾ ತುಂಬಿಕೊಳ್ಳಲು ಮತ್ತಷ್ಟು ಸಾಲದ ಮೊರೆಹೋಗಬೇಕಾಗಿದೆ. ಇಂತಹ ಇಕ್ಕಟ್ಟಿನ ಪರಿಸ್ಥಿತಿ ಸಹಜವಾಗೇ ಯಾವುದೇ ಪಕ್ಷದ ಸರ್ಕಾರವಿದ್ದರೂ ನಿಭಾಯಿಸುವುದು ದುಸ್ತರವೇ. ಆದರೆ, ತಮ್ಮದೇ ಕೇಂದ್ರ ಸರ್ಕಾರವಿರುವಾಗಲೂ ರಾಜ್ಯದ ಪಾಲಿನ ತೆರಿಗೆ ಮತ್ತು ಜಿಎಸ್ ಟಿ ಪಾಲಿನಲ್ಲಿ ಬರೋಬ್ಬರಿ 15 ಸಾವಿರ ಕೋಟಿ ರೂ. ಖೋತಾ ಆಗಿರುವುದು ಸಹಜವಾಗೇ ಯಡಿಯೂರಪ್ಪ ಅವರನ್ನು ಬಿಕ್ಕಟ್ಟಿಗೆ ನೂಕಿತ್ತು.
ಆರ್ಥಿಕ ಸಮೀಕ್ಷೆಯ ವರದಿ ಪ್ರಕಾರವೇ ರಾಜ್ಯದ ಆರ್ಥಿಕ ವೃದ್ಧಿ ದರ ಅಂದಾಜು ಮಾಡಿದ ಶೇ.7.8ಕ್ಕೆ ಬದಲಾಗಿ, ಶೇ.6.8ಕ್ಕೆ ಕುಸಿಯಲಿದೆ. ಜೊತೆಗೆ ಕೈಗಾರಿಕೆ, ಕೃಷಿ ಮತ್ತು ಸೇವಾ ವಲಯಗಳಲ್ಲಿ ಪ್ರಗತಿ ಆತಂಕಕಾರಿ ಪ್ರಮಾಣದಲ್ಲಿ ಕುಂಠಿತವಾಗಲಿದೆ. ಸಹಜವಾಗೇ ಈ ಬೆಳವಣಿಗೆಗಳು ರಾಜ್ಯದ ವರಮಾನಕ್ಕೆ ದೊಡ್ಡ ಪೆಟ್ಟು ಕೊಡಲಿವೆ ಎಂಬುದನ್ನು ಸೂಚಿಸಲಾಗಿತ್ತು. ಅಲ್ಲದೆ, ರಾಜ್ಯದ ಬಜೆಟ್ ಒಟ್ಟು ಗಾತ್ರ 2.37 ಲಕ್ಷ ಕೋಟಿ ರೂ. ಆಗಿದ್ದರೆ, ಒಟ್ಟು ಸಾಲದ ಹೊರೆ 3.68 ಲಕ್ಷ ಕೋಟಿಯಷ್ಟಿದೆ. ಜೊತೆಗೆ ಹಾಲಿ ವರ್ಷದ ಆದಾಯ ಮತ್ತು ವೆಚ್ಚದ ವಿಷಯದಲ್ಲಿಯೂ ಹೊಂದಾಣಿಕೆ ಇಲ್ಲದೆ, ಸುಮಾರು ನಾಲ್ಕು ಸಾವಿರ ಕೋಟಿ ರೂ. ಖೋತಾ ಬಜೆಟ್ ಮಂಡಿಸಬೇಕಾದ ಅನಿವಾರ್ಯತೆ ಸಿಎಂ ಮುಂದಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಆತಂಕ ಮತ್ತು ತಮ್ಮದೇ ಪಕ್ಷದ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನವನ್ನು ಅರ್ಥಮಾಡಿಕೊಳ್ಳಬಹುದು.
ಆದರೆ, ಇಷ್ಟೊಂದು ಆರ್ಥಿಕ ಹೊರೆ ಈಗಾಗಲೇ ಇರುವಾಗ, ಮತ್ತು ಮುಖ್ಯವಾಗಿ ಆರ್ಥಿಕ ಹಿಂಜರಿತ, ಮುಳುಗುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆಯ ಬಿಕ್ಕಟ್ಟು, ಕೃಷಿ ವಲಯದ ನಕಾರಾತ್ಮಕ ಪ್ರಗತಿ, ನಿರುದ್ಯೋಗ ಮತ್ತು ಉದ್ಯೋಗ ನಷ್ಟ, ಇದೀಗ ಕರೋನಾ ವೈರಸ್ ದಾಳಿ ಮುಂತಾದ ಕಾರಣಗಳಿಂದಾಗಿ ಭವಿಷ್ಯದ ಆರ್ಥಿಕತೆಯ ಮೇಲೂ ಆತಂಕ ಕವಿದಿರುವಾಗ, ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಸಂಕಷ್ಟದ ಹೊತ್ತಿನಲ್ಲಿ ಆರ್ಥಿಕ ಕುಸಿತ ತಡೆಯುವ, ಉದ್ಯೋಗ ನಷ್ಟಕ್ಕೆ ಬ್ರೇಕ್ ಹಾಕುವ ಪ್ರಯತ್ನಗಳು ಆಗಬೇಕಿತ್ತು. ಆದರೆ, ಯಡಿಯೂರಪ್ಪ ಅವರ ಬಜೆಟ್ ವಿವರಗಳನ್ನು ಗಮನಿಸಿದರೆ ಅಂತಹ ಪ್ರಯತ್ನಗಳ ಬದಲಿಗೆ, ಆರ್ಥಿಕ ತುರ್ತುಪರಿಸ್ಥಿತಿಯ ಹೊಸ್ತಿಲಲ್ಲಿರುವ ಒಂದು ಆರ್ಥಿಕ ವ್ಯವಸ್ಥೆಯಲ್ಲಿ ಇಡಬಾರದ ಅವಸರದ, ದುಂದುವೆಚ್ಚದ ಹೆಜ್ಜೆಗಳನ್ನು ಇಟ್ಟಿರುವುದೇ ಹೆಚ್ಚು ಎನಿಸದೇ ಇರದು.
ಹೌದು, ಅದರಲ್ಲೂ ಮುಖ್ಯವಾಗಿ ರಾಜ್ಯದ ಪ್ರಮುಖ ಆದಾಯ ಮೂಲಗಳಾದ ಸೇವಾ ಮತ್ತು ತಯಾರಿಕಾ ವಲಯದಲ್ಲಿ ಬೆಳವಣಿಗೆ ಕುಂಠಿತವಾಗಿರುವಾಗ, ಜೊತೆಗೆ ಆರ್ಥಿಕತೆಯ ಕನಿಷ್ಠ ಭದ್ರತೆಯ ವಲಯವಾದ ಕೃಷಿ ವಲಯ ಕೂಡ ಅಧೋಮುಖಿ ಪ್ರಗತಿ ಕಾಣುತ್ತಿರುವಾಗ, ಆ ವಲಯಗಳ ಪುನಃಶ್ಚೇತನಕ್ಕೆ, ಕುಸಿತ ತಡೆಗೆ ನವೀನ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಯುವ ಜನತೆಯ ಉದ್ಯೋಗಾವಕಾಶ ಹೆಚ್ಚಿಸುವ ಮತ್ತು ಉದ್ಯೋಗಸ್ಥ ಮಧ್ಯವಯಸ್ಕರ ಉದ್ಯೋಗ ಕಾಯುವ ಪ್ರಾಯೋಗಿಕ ಕ್ರಮಗಳ ಜರೂರು ಇತ್ತು.
ಆದರೆ, ಆರ್ಥಿಕ ಬಿಕ್ಕಟ್ಟಿನ ಹೊತ್ತಿನಲ್ಲಿ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ ಉಳ್ಳವರ ಮೋಜು ಮಸ್ತಿಯ ಉದ್ದೇಶಗಳಿಗೆ ಇಂಬು ನೀಡುವ ಪ್ರವಾಸೋದ್ಯಮ, ಫಿಲಂ ಸಿಟಿ, ಬೆಟ್ಟ, ಮಂಟಪ, ಪ್ರತಿಮೆಗಳ ಅಭಿವೃದ್ಧಿಗಳಿಗೆ ಕೋಟಿ ಕೋಟಿ ಸುರಿಯಲಾಗಿದೆ. ಅದರಲ್ಲೂ ಮತ್ತೆ ಮತ್ತೆ ಕೆಲವು ಕ್ಷೇತ್ರ ಮತ್ತು ಯೋಜನೆಗಳಿಗೆ ಜನರ ತೆರಿಗೆ ಹಣದ ಹೊಳೆ ಹರಿಸಲಾಗುತ್ತಿದೆ. ಪಕ್ಷಾತೀತವಾಗಿ ಇಂತಹ ಯಡವಟ್ಟುಗಳು ಪ್ರತಿ ಬಜೆಟಿನಲ್ಲೂ ನಡೆಯುತ್ತಿವೆ. ಇದೀಗ ಆ ಸಾಲಿಗೆ ಬಿಎಸ್ ವೈ ಅವರ ಈ ಅವಧಿಯ ಬಜೆಟ್ ಕೂಡ ಸೇರ್ಪಡೆಯಾಗಿದೆ.
ಕೇವಲ ಹತ್ತು ವರ್ಷಗಳ ಹಿಂದೆ ಇದೇ, ಬಿಜೆಪಿ ಸರ್ಕಾರವಿರುವಾಗ, ಸ್ವತಃ ಯಡಿಯೂರಪ್ಪ ಅವರೇ ಜೋಗ ಜಲಪಾತ ಅಭಿವೃದ್ಧಿಗೆ ಬರೋಬ್ಬರಿ 200 ಕೋಟಿ ರೂ. ಅನುದಾನ ಘೋಷಿಸಿದ್ದರು. ಆ ಇನ್ನೂರು ಕೋಟಿ ರೂ.ಗಳ ಪೈಕಿ ಜೋಗದ ಸೀತಾ ಕಟ್ಟೆ ಬಳಿ ಬೃಹತ್ ಶಿಲಾಫಲಕ, ಕಮಾನು, ಜಲಪಾತ ವೀಕ್ಷಣೆಯ ಸಮೀಪ ಚೆಕ್ ಪೋಸ್ಟ್ ಮತ್ತು ಕಮಾನು, ಮೆಟ್ಟಿಲು ನಿರ್ಮಾಣ ಮುಂತಾದ ಕೆಲವು ಕಾಮಗಾರಿಗಳನ್ನು ಹೊರತುಪಡಿಸಿ, ಉಳಿದಂತೆ ಜೋಗದ ಸೌಂದರ್ಯ ಕಾಯುವ, ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ಕೆಲಸಗಳು ನಡೆದಿರುವುದಕ್ಕೆ ಸಾಕ್ಷಿ ಇಲ್ಲ. ಕನಿಷ್ಠ ಪ್ರವಾಸಿಗರಿಗೆ ಸಾಕಷ್ಟು ಶೌಚಾಲಯಗಳಾಗಲೀ, ವಾಹನ ಪಾರ್ಕಿಂಗ್ ವ್ಯವಸ್ಥೆಯಾಗಲೀ ಅಲ್ಲಿ ಇಲ್ಲ ಎಂಬುದು 200 ಕೋಟಿ ಹರಿದು ಅರಬ್ಬೀ ಸಮುದ್ರ ಸೇರಿದ ಕಥೆ ಹೇಳದೇ ಇರದು.
ಹಾಗಿದ್ದರೂ ಈಗ ಮತ್ತೆ 200 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಅತ್ಯಂತ ಸೂಕ್ಷ್ಮ ಜೀವಪರಿಸರದ, ಸಂಪೂರ್ಣ ಅಭಯಾರಣ್ಯ ವ್ಯಾಪ್ತಿಗೆ ಒಳಪಡುವ ಆ ಪ್ರದೇಶದಲ್ಲಿ ಕನಿಷ್ಠ ನಾಗರಿಕ ಸೌಕರ್ಯ ಹೊರತು ಇನ್ನೇನೇ ಅಭಿವೃದ್ಧಿ ಮಾಡಿದರೂ ಅದು ಜೋಗ ಜಲಪಾತ, ಶರಾವತಿ ನದಿ ಮತ್ತು ನದಿ ಕಣಿವೆಯ ಜೀವಜಾಲಕ್ಕೇ ಸಂಚಕಾರ ತರಲಿದೆ. ಹಾಗಿದ್ದರೂ ಯಾರ ಜೇಬು ತುಂಬಿಸಲು ಹೀಗೆ ಸಾರ್ವಜನಿಕ ಹಣವನ್ನು ವ್ಯಯಮಾಡಲಾಗುತ್ತಿದೆ ಎಂಬುದು ಪ್ರಶ್ನಾರ್ಹ.
ಇನ್ನು ಪ್ರವಾಸಿ ತಾಣಗಳ ಕುರಿತ ಪ್ರಚಾರಕ್ಕೆ 100 ಕೋಟಿ, ವಿಜಯಪುರದ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ಘೋಷಣೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ 100 ಕೋಟಿ ನೀಡುವುದಾಗಿ ಹೇಳಿದ್ದಾರೆ. ಹಾಗೇ ಹಾವೇರಿ ಜಿಲ್ಲೆಯ ಸಂತ ಶಿಶುನಾಳ ಷರೀಫರ ಊರಿನ ಅಭಿವೃದ್ಧಿ ಮತ್ತು ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಹಾಸನದ ಹುಟ್ಟೂರು ಸಂತೆಶಿವರ ಅಭಿವೃದ್ಧಿಗೆ ತಲಾ 5 ಕೋಟಿ ರೂ. ಅನುದಾನ ಘೋಷಿಸಿದ್ಧಾರೆ. ಬದಾಮಿ ಅಭಿವೃದ್ಧಿಗೆ 25 ಕೋಟಿ, ಕೊಪ್ಪಳದ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 20 ಕೋಟಿ, ಚಿತ್ರದುರ್ಗ ಮುರುಘಾಮಠದಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪನೆಗೆ 20 ಕೋಟಿ ಅನುದಾನ ಘೋಷಿಸಿದ್ದಾರೆ. ಹಿರಿಯ ನಾಗರಿಕರ ತೀರ್ಥಕ್ಷೇತ್ರ ಯಾತ್ರೆಗೆ(ಜೀವನಚೈತ್ರ ಯಾತ್ರೆ) 20 ಕೋಟಿ ನಿಗದಿ ಮಾಡಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಬರೋಬ್ಬರಿ 500 ಕೋಟಿ ಅನುದಾನ ಘೋಷಿಸಿದ್ದಾರೆ!
ಖಂಡಿತವಾಗಿಯೂ, ಈ ಎಲ್ಲಾ ಯೋಜನೆ, ಕಾಮಗಾರಿಗಳೂ ಸಾರಾಸಗಟಾಗಿ ತಳ್ಳಿಹಾಕುವಂಥವಲ್ಲ. ಆದರೆ ರಾಜ್ಯದ ಆರ್ಥಿಕ ಸಂಕಷ್ಟದಲ್ಲಿರುವಾಗ ಇಂತವುಗಳನ್ನು ಘೋಷಿಸುವ ಅಗತ್ಯವಿತ್ತೇ? ತೀರಾ ಆದಾಯ ಕೊರತೆಯ ಹೊತ್ತಲ್ಲಿ ಈ ಯೋಜನೆಗಳನ್ನು ಬದಿಗಿಟ್ಟು, ಆರ್ಥಿಕ ಪರಿಸ್ಥಿತಿ ಸುಧಾರಣೆಯ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡುವ ಜಾಣ್ಮೆಯ ನಡೆ ಬೇಕಾಗಿತ್ತು ಅಲ್ಲವೆ? ಎಂಬುದು ಪ್ರಶ್ನೆ.
ಆರ್ಥಿಕ ಶಿಸ್ತು ಎಂಬುದು, ಅಂತಹ ಜಾಣ್ಮೆಯ ಆಯ್ಕೆಗಳಲ್ಲಿ ಕಾಣಬೇಕಿತ್ತು. ಸದ್ಯದ ಸ್ಥಿತಿಯಲ್ಲಿ ಯಾವುದು ತೀರಾ ಜರೂರು, ಯಾವುದನ್ನು ಎರಡು ವರ್ಷ ಮುಂದೆ ಹಾಕಿದರೂ ನಷ್ಟವೇನಿಲ್ಲ ಎಂಬ ವಿವೇಚನೆಯ ಆಯ್ಕೆ ಆಗಬೇಕಿತ್ತು ಅಲ್ಲವೆ? ಆದಾಯ ಕ್ರೋಡೀಕರಣ, ಉದ್ಯೋಗ ಸೃಷ್ಟಿಯನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು, ಈ ಯೋಜನೆಗಳಿಗೆ ನಿಗದಿ ಮಾಡಿರುವ ಅಪಾರ ಪ್ರಮಾಣದ ಹಣವನ್ನು ಆ ದಿಸೆಯಲ್ಲಿ ಬಳಸುವುದು ಸಾಧ್ಯವಿತ್ತು ಅಲ್ಲವೆ? ಆದರೆ, ಶಾಸಕರ ಒತ್ತಡ, ಜಾತಿ- ಜನಾಂಗಗಳ ಲಾಬಿ, ಪ್ರಭಾವಿಗಳ ನಿರೀಕ್ಷೆಗಳನ್ನು ಮೀರಿ ಅಂತಹ ನಿರ್ದಯ ಆರ್ಥಿಕ ನಿಲುವು ಕೈಗೊಳ್ಳಲು ಕೂಡ ಛಾತಿ ಬೇಕು ಎಂಬುದನ್ನು ತಳ್ಳಿಹಾಕಲಾಗದು. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಅಸಹಾಯಕರು!