ನೋಟು ರದ್ದು: ಬೀದಿಗೆ ಬಿದ್ದ ಗುಜರಾತಿನ ಚಿನ್ನಾಭರಣ ಕಾರ್ಮಿಕರು
ನೋಟು ರದ್ದು ಮತ್ತು ಜಿ. ಎಸ್. ಟಿ. ಹೊಡೆತಗಳಿಂದ ತತ್ತರಿಸಿ ಚೇತರಿಸಿಕೊಳ್ಳಲು ಹೆಣಗುತ್ತಿರುವ ಅರ್ಥ ವ್ಯವಸ್ಥೆಯ ಇನ್ನೊಂದು ಮುಖವಿದು. ಗುಜರಾತಿನ ಅಹ್ಮದಾಬಾದಿನ 30 ಸಾವಿರ ಮತ್ತು ರಾಜಕೋಟ್ ನ 60 ಸಾವಿರ ಚಿನ್ನಾಭರಣ ತಯಾರಿಸುವ ಕರಕುಶಲಿಗಳು ನಿರುದ್ಯೋಗಿಗಳಾಗಿದ್ದಾರೆ. ಇವರ ಪೈಕಿ ಬಹುತೇಕರು ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ, ರಾಜಸ್ತಾನಕ್ಕೆ ಸೇರಿದವರು. ತವರು ರಾಜ್ಯಗಳಿಗೆ ಮರಳುತ್ತಿದ್ದಾರೆ. ಮರಳಲಾರದವರು ಸಣ್ಣಪುಟ್ಟ ಕೂಲಿ ಕೆಲಸ, ತರಕಾರಿ ಮಾರಾಟ, ಕ್ಷೌರಿಕ ವೃತ್ತಿಗೆ ಶರಣಾಗಿದ್ದಾರೆ. ಹೆಂಡಿರು ಮಕ್ಕಳನ್ನು ಸಂಬಂಧಿಕರ ಮನೆಗೆ ಕಳಿಸಿ ಹೊಸ ಕೆಲಸದ ಹುಡುಕಾಟದಲ್ಲಿರುವವರ ಸಂಖ್ಯೆ ದೊಡ್ಡದು.
ಸಣ್ಣ ಮತ್ತು ಮಧ್ಯಮ ಗಾತ್ರದ ಚಿನ್ನಾಭರಣ ತಯಾರಕರಿಗೆ ದೊಡ್ಡ ಶೋ ರೂಂ ಗಳಿಂದ ಇಲ್ಲವೇ ಸಗಟು ಮಾರುಕಟ್ಟೆ ವರ್ತಕರಿಂದ ಚಿನ್ನಾಭರಣ ತಯಾರಿಸಿಕೊಡುವ ಬೇಡಿಕೆ ಬರಬೇಕು. ಆದರೆ ಈ ಬೇಡಿಕೆ ತೀವ್ರವಾಗಿ ತಗ್ಗಿದೆ. ಈ ಮಂದಗತಿಯ ಮೊದಲ ಬಲಿಪಶುಗಳು ಚಿನ್ನಾಭರಣ ಮಾಡುವ ಕರಕುಶಲಿಗಳು. ವಿಶೇಷವಾಗಿ ಕಳೆದ ನಾಲ್ಕು ತಿಂಗಳ ಬವಣೆ ಹೇಳತೀರದಾಗಿದೆ. ಚಿನ್ನಾಭರಣಗಳ ವ್ಯವಹಾರ ಶೇ. 40ರಷ್ಟು ಕುಸಿತ ಕಂಡಿದೆ. ಚಿನ್ನದ ಬೆಲೆ ಏರಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆಯೇ ವಿನಾ ಸುಧಾರಣೆ ಸಮೀಪದಲ್ಲೆಲ್ಲೂ ಕಾಣುತ್ತಿಲ್ಲ. ಜನ ಚಿನ್ನ ಖರೀದಿಸುವುದಕ್ಕಿಂತ ಹೆಚ್ಚಾಗಿ ಮಾರಲು ಶೋರೂಂ ಗಳಿಗೆ ಬರುತ್ತಿದ್ದಾರೆ ಎನ್ನುತ್ತಾರೆ ಜೆಮ್ ಜ್ಯೂವೆಲರಿ ಟ್ರೇಡ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಶಾಂತಿಭಾಯಿ ಪಟೇಲ್. ಸೆಪ್ಟಂಬರ್ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ. 32ರಷ್ಟು ಕುಸಿದಿದ್ದು, 123.9 ಟನ್ ಗಳಿಗೆ ಇಳಿದಿದೆ.
ಮಂದಿರ ಪ್ರವೇಶ- ದಲಿತ ವೃದ್ಧನನ್ನು ಸುಟ್ಟು ಕೊಂದರು
ಉತ್ತರಪ್ರದೇಶದ ಹಮೀರಪುರ ಸನಿಹದ ದೇವಾಲಯವೊಂದನ್ನು ಪ್ರವೇಶಿಸಲು ಪ್ರಯತ್ನಿಸಿದ 90 ವರ್ಷ ವಯಸ್ಸಿನ ದಲಿತ ವೃದ್ಧನನ್ನು ಇತ್ತೀಚೆಗೆ ಕೊಡಲಿಯಿಂದ ಕೊಚ್ಚಿ ಜೀವಂತ ಸುಡಲಾಯಿತು. ಪತ್ನಿ, ಮಗ ಹಾಗೂ ಸೋದರನೊಂದಿಗೆ ಮೈದಾನಿಬಾಬಾ ಮಂದಿರಕ್ಕೆ ತೆರಳಿದ್ದ ಈತನ ಹೆಸರು ಚಿಮ್ಮಾ. ಸಂಜಯ್ ತಿವಾರಿ ಎಂಬ ವ್ಯಕ್ತಿ ಮಂದಿರದ ದ್ವಾರದಲ್ಲೇ ಈ ಕುಟುಂಬವನ್ನು ತಡೆದ. ಆದರೆ ಚಿಮ್ಮಾ ಹಿಂದೆಗೆಯಲಿಲ್ಲ. ಕ್ರುದ್ಧನಾದ ತಿವಾರಿ ಚಿಮ್ಮಾನ ಮೇಲೆ ಕೊಡಲಿಯಿಂದ ಆಕ್ರಮಣ ಮಾಡಿದ ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟ.
ಕಾನ್ಬುರದಿಂದ 140 ಕಿ.ಮೀ.ದೂರದ ಹಮೀರಪುರ ಮತ್ತು ಜಾಲೌಂನ್ ಜಿಲ್ಲೆಗಳ ಗಡಿ ಭಾಗದ ಬಿಲ್ಗಾಂವ್ ಎಂಬ ಹಳ್ಳಿಯಲ್ಲಿ ನೆರೆದಿದ್ದ ಮೈದಾನಿ ಬಾಬಾನ ಇತರೆ ಭಕ್ತ ಸಮೂಹದ ಎದುರಿಗೆ ಈ ಘಟನೆ ಜರುಗಿತು. ಸ್ಥಳದಲ್ಲಿದ್ದ ಇತರೆ ಜನ ತಿವಾರಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು. ಚಿಮ್ಮಾನ ಮೇಲೆ ಅಕ್ರಮಣ ಮಾಡಿದ ಹೊತ್ತಿನಲ್ಲಿ ತಿವಾರಿ ಪಾನಮತ್ತನಾಗಿದ್ದ ಎಂದು ತಿಳಿಸಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮಹಿಷಾಸುರನ ಅವಹೇಳನ- ಆದಿವಾಸಿಯ ಆತ್ಮಹತ್ಯೆ
ಮಹಿಷಾಸುರನನ್ನು ದುಷ್ಟನೆಂದು ಚಿತ್ರಿಸುವ ದುರ್ಗಾಪೂಜೆಯನ್ನು ತನ್ನ ಮನೆಯಲ್ಲಿ ತನ್ನ ಇಚ್ಛೆಗೆ ವಿರುದ್ಧವಾಗಿ ಆಚರಿಸಿದ್ದಕ್ಕೆ ಜಿಗುಪ್ಸೆಗೊಂಡ ಆದಿವಾಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಛತ್ತೀಸಗಢದ ಸೂರಜಪುರ ಜಿಲ್ಲೆಯ ಕೇತಕ ಗ್ರಾಮದಲ್ಲಿ ಜರುಗಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ದುರ್ಗಾಪೂಜೆಯ ಆಚರಣೆಯನ್ನು ಟೀಕಿಸಿ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಹಾಕಿದ್ದ ಈತನನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ 55 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದ. ಈ ಪೋಸ್ಟ್ ನಲ್ಲಿ ರಾವಣ ಮತ್ತು ಮಹಿಷಾಸುರ ತನ್ನ ಪೂರ್ವಜರೆಂದು ಬಣ್ಣಿಸಿದ್ದ. ಜಿತೇಂದ್ರ ಮರಾವಿ ಎಂಬ ಈ ತರುಣ 22 ವರ್ಷ ವಯಸ್ಸಿನವನಾಗಿದ್ದ. ಗೊಂಡ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಮರ್ಥಿಸುವ ಆಂದೋಲನವನ್ನು 16ನೆಯ ವಯಸ್ಸಿನಲ್ಲೇ ಸೇರಿದ್ದ ಜಿತೇಂದ್ರ.
ಇತ್ತೀಚಿನ ಸೆಪ್ಟಂಬರ್ 26ರಂದು ತನ್ನ ಗೆಳೆಯರೊಡಗೂಡಿ ದುರ್ಗಾಪೂಜೆ ಆಚರಣೆಯನ್ನು ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದ. ಗೊಂಡರು ಮತ್ತು ಅಸುರರು ತಮ್ಮ ಅರಸನೆಂದು ಆದರಿಸಿಕೊಂಡು ಬಂದಿರುವ ಮಹಿಷಾಸುರನನ್ನು ದುರ್ಗೆ ಕೊಲ್ಲುವ ಪ್ರತಿಮೆಯು ಮಹಿಷಾಸುರ ಮತ್ತು ಆದಿವಾಸಿಗಳ ಪಾಲಿಗೆ ಅವಹೇಳನಕರ. ಮಹಿಷಾಸುರ ಮತ್ತು ರಾವಣನ ಆದಿವಾಸಿಗಳು ಅನಾದಿಕಾಲದಿಂದ ಪೂಜಿಸಿಕೊಂಡು ಬಂದಿದ್ದಾರೆ. ವಿಜಯದಶಮಿಯಂದು ರಾವಣನ ಪ್ರತಿಕೃತಿಯನ್ನು ಸುಡುವ ಆಚರಣೆಯನ್ನು ನಿಲ್ಲಿಸಬೇಕು. ಹಾಗೆ ಮಾಡುವವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ಆದಿವಾಸಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಪತ್ರದಲ್ಲಿ ಕೋರಲಾಗಿತ್ತು. ‘ನನ್ನ ಮಗ ಅತ್ಯಂತ ಯೋಗ್ಯನಿದ್ದ, ದುರ್ಗೆ ಅವನನ್ನು ಕೊಂದಳು’ ಎನ್ನುತ್ತಾನೆ ಜಿತೇಂದ್ರನ ತಂದೆ. ಜಿತೇಂದ್ರನ ಗೆಳೆಯರ ಪ್ರಕಾರ ಮನೆಯಲ್ಲಿ ದುರ್ಗಾಪೂಜೆ ಆಚರಿಸುವಂತೆ ಮತ್ತು ಮಗನಿಗೆ ಬುದ್ಧಿ ಹೇಳುವಂತೆ ಸ್ಥಳೀಯ ದುರ್ಗಾಪೂಜಾ ಸಮಿತಿಯ ಪದಾಧಿಕಾರಿಗಳು ಜಿತೇಂದ್ರನ ತಂದೆಯ ಮೇಲೆ ಒತ್ತಡ ಹೇರಿದ್ದರು.
ಛತ್ತೀಸಗಢ ಮಾತ್ರವಲ್ಲದೆ, ಮಧ್ಯಪ್ರದೇಶ, ಒಡಿಶಾ, ಬಿಹಾರ, ಝಾರ್ಖಂಡ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತಿನ ಹಲವು ಆದಿವಾಸಿ ಸಮುದಾಯಗಳು ಮಹಿಷಾಸುರ ಮತ್ತು ರಾವಣನನ್ನು ತಮ್ಮ ಪೂರ್ವಜರೆಂದು ಆದರಿಸುತ್ತ ಬಂದಿದ್ದಾರೆ. ಜೀತೇಂದ್ರ ಮಾರಾವಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದ ಅಂತಹುದೇ ಮನವಿ ಪತ್ರಗಳನ್ನು ಮಧ್ಯಪ್ರದೇಶದ ದಿಂಡೋರಿ, ಮಂಡ್ಲಾ ಹಾಗೂ ಶಾಹದೋಲ್ ಪ್ರದೇಶಗಳಲ್ಲೂ ಸಲ್ಲಿಸಲಾಗಿತ್ತು. ರಾವಣನ ಪ್ರತಿಕೃತಿಯನ್ನು ಸುಡುವವರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಮಧ್ಯಪ್ರದೇಶದ ಬೇಟುಲ್ ನ ಆದಿವಾಸಿಗಳು 2017ರಲ್ಲಿ ಎಚ್ಚರಿಕೆ ನೀಡಿದ್ದುಂಟು.
ನೂರಕ್ಕೆ ನೂರು ಹೆಣ್ಣು ನೋಟದ ‘ಖಬರ್ ಲೆಹರಿಯಾ’
ಪತ್ರಿಕೆಗಳು- ಟೆಲಿವಿಷನ್ ಸುದ್ದಿವಾಹಿನಿಗಳು- ಅಂತರ್ಜಾಲ ಸುದ್ದಿ ತಾಣಗಳ ಸುದ್ದಿಮನೆಗಳು ಇಂದಿಗೂ ಬಹುತೇಕ ಮೇಲ್ಜಾತಿಗಳು ಮತ್ತು ಗಂಡಸರ ಆಡುಂಬೊಲಗಳು. ಮಹಾನಗರಗಳಿಂದ ಹೊರಬರುವ ಸಮೂಹ ಮಾಧ್ಯಮಗಳಲ್ಲಿ ಕೂಡ ತಳಸಮುದಾಯಗಳು ಮತ್ತು ಹೆಣ್ಣುಮಕ್ಕಳಿಗೆ ಪ್ರಾತಿನಿಧ್ಯ ಅತ್ಯಲ್ಪ ಅಥವಾ ಇಲ್ಲವೇ ಇಲ್ಲ. ಒಂದು ವೇಳೆ ಇದ್ದರೆ ತಾರತಮ್ಯ, ಕಿರುಕುಳ ಕಾಯಂ.
ಇಂತಹ ಸನ್ನಿವೇಶದಲ್ಲಿ ಉತ್ತರಪ್ರದೇಶದ ಬುಂದೇಲಖಂಡದಿಂದ ಬರುವ ಅಂತರ್ಜಾಲ ಪತ್ರಿಕೆ ಅರಳಿ ಬೆಳೆದ ಬಗೆಯೇ ವಿಶಿಷ್ಟ. ಎಂಟು ಪುಟಗಳ ಆ ವಾರಪತ್ರಿಕೆ ಹೆಸರು”ಖಬರ್ ಲೆಹರಿಯಾ” (ಸುದ್ದಿಯ ಅಲೆಗಳು). ನೂರಕ್ಕೆ ನೂರರಷ್ಟು ಹೆಣ್ಣುಮಕ್ಕಳೇ ಹೊರತರುವ ಏಕೈಕ ಗ್ರಾಮೀಣ ಪತ್ರಿಕೆಯಾಗಿತ್ತು. ಈ ಎಲ್ಲ ಹೆಣ್ಣುಮಕ್ಕಳೂ ತಳಸಮುದಾಯಗಳವರು.
ವಿದ್ಯಮಾನಗಳನ್ನು ಹೆಣ್ಣುನೋಟದಿಂದ (ಫೆಮಿನಿಸ್ಟ್ ಪರ್ಸ್ಪೆಕ್ಟಿವ್) ಮತ್ತು ಜಾತ್ಯತೀತ ನೆಲೆಯಿಂದ ವರದಿ ಮಾಡುವುದು ಆ ಪತ್ರಿಕೆಯ ಅಸಲು ವಿಶೇಷವಾಗಿತ್ತು. ಬುಂದೇಲಿ, ಅವಧಿ, ಭೋಜ್ಪುರಿ ಹಾಗೂ ಬಜ್ಜಿಕಾ ಎಂಬ ಹಿಂದೀ ಭಾಷೆಯ ನಾಲ್ಕು ಪ್ರಾದೇಶಿಕ ನುಡಿಗಟ್ಟುಗಳಲ್ಲಿ ಹೊರಬರುತ್ತಿದ್ದ ಆ ಸಾಪ್ತಾಹಿಕ ಕುರಿತು ಅಂತಾರಾಷ್ಟ್ರೀಯ ಪತ್ರಿಕೆಗಳು ಬರೆದು ಬೆನ್ನುತಟ್ಟಿದ್ದವು. ಮಹಿಳಾ ಪತ್ರಕರ್ತೆಯರಿಗೆಂದು ಮೀಸಲಾದ ಪ್ರತಿಷ್ಠಿತ ಚಮೇಲಿ ದೇವಿ ಜೈನ್ ಪ್ರಶಸ್ತಿ, ಯುನೆಸ್ಕೋದ ಕಿಂಗ್ ಸೆಜೋಂಗ್ ಸಾಕ್ಷರತೆ ಬಹುಮಾನ, ಲಾಡ್ಲಿ ಮೀಡಿಯಾ ಪ್ರಶಸ್ತಿ, ಟೈಮ್ಸ್ ನೌ ಸುದ್ದಿವಾಹಿನಿಯ ಅಮೇಝಿಂಗ್ ಇಂಡಿಯನ್ ಪ್ರಶಸ್ತಿ, ಕೈಫಿ ಅಜ್ಮಿ ಪ್ರಶಸ್ತಿಗಳು ಲೆಹರಿಯಾ ಹುಮ್ಮಸ್ಸನ್ನು ಹೆಚ್ಚಿಸಿದ್ದವು.
ಆ ಪತ್ರಿಕೆಯನ್ನು ರೂಪಿಸಿ ಗ್ರಾಮೀಣ ದಲಿತ ಹೆಣ್ಣುಮಕ್ಕಳ ತಂಡ ಆಯ್ದು ತರಬೇತಿ ನೀಡಿ ಅವರ ಬೆನ್ನಿಗೆ ನಿಂತಿರುವುದು ಲಿಂಗತಾರತಮ್ಯ ನಿವಾರಣೆಗೆ ಶ್ರಮಿಸುವ ದಿಲ್ಲಿಯ ”ನಿರಂತರ” ಎಂಬ ಸ್ವಯಂಸೇವಾ ಸಂಸ್ಥೆ. ಬುಂದೇಲಖಂಡದ ಈ ಹಳ್ಳಿಗಾಡಿನ ಜನರ ಪಾಲಿಗೆ ಇಂಗ್ಲಿಷ್ ಮಾತ್ರವಲ್ಲ, ಹಿಂದಿ ಕೂಡ ಕುಲೀನ ಭಾಷೆ. ದಲಿತ ಮಹಿಳೆಯರು ದುಪ್ಪಟ್ಟು ಶೋಷಣೆ ಎದುರಿಸಿ ಅಂಚಿಗೆ ಬಿದ್ದವರು. ನಿಜವಾಗಿಯೂ ಬೇರುಮಟ್ಟದ ಅಪ್ಪಟ ಸ್ಥಳೀಯ ಸುದ್ದಿಯನ್ನು ಅವರು ಹೆಕ್ಕಿ ತೆಗೆಯಬಲ್ಲರು. ಹೀಗೆಂದು ಪ್ರಜ್ಞಾಪೂರ್ವಕವಾಗಿಯೇ ಅವರನ್ನು ಸಂಪಾದಕೀಯ ಬಳಗಕ್ಕೆ ಆರಿಸಿಕೊಂಡೆವು ಎನ್ನುತ್ತದೆ ‘ನಿರಂತರ”.
ಈ ಪತ್ರಿಕೆ ಕಣ್ಣು ಬಿಟ್ಟದ್ದು ಸುಮಾರು 18 ವರ್ಷಗಳ ಹಿಂದೆ. ಏರುತ್ತಿದ್ದ ವೆಚ್ಚಗಳನ್ನು ಭರಿಸಲಾಗದೆ ಪತ್ರಿಕೆಯನ್ನು ಮುಚ್ಚಬೇಕಾಯಿತು. ಆದರೆ ಪತ್ರಿಕೆ ನಿಲ್ಲಲಿಲ್ಲ. ಅಂತರ್ಜಾಲದಲ್ಲಿ ಹೊಸ ರೂಪ ಧರಿಸಿ ಬರಲಾರಂಭಿಸಿತು. ಹಳ್ಳಿ ಹಳ್ಳಿಗಳಲ್ಲಿ ಸ್ಮಾರ್ಟ್ ಫೋನುಗಳು ಮೊಳಗಿದ್ದು, ಈ ಪತ್ರಿಕೆಗೆ ವರವೇ ಆಯಿತು. ಅಂದ ಹಾಗೆ ಈ ಪತ್ರಿಕೆಯ ಸಂಪಾದಕಿ ಕವಿತಾದೇವಿ. ಚಿತ್ರಕೂಟ ಜಿಲ್ಲೆಯ ಹಳ್ಳಿಯೊಂದರ ದಲಿತ ಕುಟುಂಬದ ಹೆಣ್ಣುಮಗಳು. ಹನ್ನೆರಡನೆಯ ವಯಸ್ಸಿಗೇ ವಿವಾಹ. ಗಂಡನ ಆರೋಗ್ಯ ಸುಧಾರಣೆಗೆ ಮಾಡಿದ ಸಾಲ ತೀರಿಸಲು ಪಂಜಾಬಿನ ಇಟ್ಟಿಗೆ ಭಟ್ಟಿಯಲ್ಲಿ ದುಡಿದಾಕೆ. ನಡುವೆ ಕನಿಷ್ಠ ಓದು ಬರೆಹ ಕಲಿತಾಕೆಗೆ ಖಬರ್ ಲೆಹರಿಯಾ ಕೈ ಹಿಡಿದಿತ್ತು. ಪತ್ರಿಕೋದ್ಯಮದ ತರಬೇತಿ ನೀಡಿತು. ಕಾಲಕ್ರಮೇಣ ಸಂಪಾದಕಿಯಾದ ಕವಿತಾ ಇದೀಗ ಖಬರ್ ಲೆಹರಿಯಾ ಜಾಲತಾಣದ ಪತ್ರಿಕೆಯಲ್ಲಿ ‘ಕವಿತಾ ಶೋ’ನ ನಿರೂಪಕಿ.