ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಲು ಕಾಯುತ್ತಿದ್ದವರಿಗೆ ನಿರಾಶೆಯ ಸುದ್ದಿ. ಸಂಪುಟ ವಿಸ್ತರಣೆಗಾಗಿ ಅಂತಿಮ ನಿರ್ಧಾರ ಕೈಗೊಳ್ಳಲು ಗುರುವಾರ ದೆಹಲಿಗೆ ತೆರಳಲು ಸಿದ್ಧರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಿರುವ ಮೂರು ಉಪಮುಖ್ಯಮಂತ್ರಿ ಸ್ಥಾನಗಳಿಗೆ ಯಾವುದೇ ಧಕ್ಕೆಯಿಲ್ಲ. ಆದರೆ, ನಾಲ್ಕನೇ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳ ಈ ನಿರ್ಧಾರದಿಂದ ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಚಿವ ಬಿ.ಶ್ರೀರಾಮುಲು ಮತ್ತು ನೂತನ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ನಿರಾಶೆಯಾಗುವುದರ ಜತೆಗೆ ಈ ಇಬ್ಬರ ಪೈಕಿ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡಲೇ ಬೇಕು ಎಂದು ಪಟ್ಟು ಹಿಡಿದಿದ್ದ ವಾಲ್ಮೀಕಿ ಸಮುದಾಯದಲ್ಲಿ ಬಿಜೆಪಿ ಬಗ್ಗೆ ಅಸಮಾಧಾನವೂ ಕಾಣಿಸಿಕೊಳ್ಳುವಂತಾಗಿದೆ.
ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಚರ್ಚಿಸಲು ಮತ್ತೆ ದೆಹಲಿಗೆ ಹೋಗುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಾತಿನಿಂದ ಹಿಂದೆ ಸರಿಯುವಂತೆ ಮಾಡಿ ದೆಹಲಿಗೆ ಕರೆಸಿಕೊಳ್ಳುವಲ್ಲಿ ಬಿಜೆಪಿ ವರಿಷ್ಠರು ಯಶಸ್ವಿಯಾಗಿದ್ದಾರೆ. ಸರ್ಕಾರ ರಚನೆ ಮತ್ತು ಸಂಪುಟ ರಚನೆ ವಿಚಾರದಲ್ಲಿ ತಮಗೆ ಬೇಕಾದಂತೆ ಹೈಕಮಾಂಡ್ ನಾಯಕರನ್ನು ಬಗ್ಗಿಸಿದ್ದ ಯಡಿಯೂರಪ್ಪ ಅವರು ಈ ಬಾರಿ ಅಷ್ಟರ ಮಟ್ಟಿಗೆ ಮೆತ್ತಗಾಗಿದ್ದಾರೆ. ಅಷ್ಟೇ ಅಲ್ಲ, ಉಪಮುಖ್ಯಮಂತ್ರಿ ಹುದ್ದೆಗಳನ್ನೇ ರದ್ದುಗೊಳಿಸಬೇಕು ಎಂಬ ರಾಜ್ಯ ಬಿಜೆಪಿಯ ಬಹುತೇಕ ರಾಜ್ಯ ನಾಯಕರ ಬೇಡಿಕೆಯ ಹೊರತಾಗಿಯೂ ಹೈಕಮಾಂಡ್ ನಾಯಕರ ನಿರ್ಧಾರದಂತೆ ಈಗಿರುವ ಮೂರು ಸ್ಥಾನಗಳನ್ನು ಮುಂದುವರಿಸಲು ಒಪ್ಪಿದ್ದಾರಲ್ಲದೆ, ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿ ಮುನಿಸಿಕೊಂಡಿರುವ ವಾಲ್ಮೀಕಿ ಸಮುದಾಯವನ್ನು ಸಮಾಧಾನಗೊಳಿಸಬೇಕು ಎಂಬ ತಮ್ಮ ನಿಲುವಿನಲ್ಲೂ ಬದಲಾವಣೆ ಮಾಡಿಕೊಂಡಿದ್ದಾರೆ.
ಇದರೊಂದಿಗೆ ಸಂಪುಟ ವಿಸ್ತರಣೆ ಕುರಿತಂತೆ ಇದ್ದ ಬಹುತೇಕ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಶುಕ್ರವಾರ ಶಿವಮೊಗ್ಗದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮ ಮುಗಿದ ಬಳಿಕ ಬೆಂಗಳೂರಿಗೆ ಆಗಮಿಸಿ ನಂತರ ದೆಹಲಿಗೆ ತೆರಳುತ್ತಿದ್ದಾರೆ. ಅಲ್ಲಿ ಮೊದಲು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತಂತೆ ಸಮಾಲೋಚನೆ ನಡೆಸಲಿದ್ದಾರೆ. ನಡ್ಡಾ ಅವರು ಬಿಜೆಪಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿ ಯಡಿಯೂರಪ್ಪ ಅವರು ಭೇಟಿ ಮಾಡುತ್ತಿರುವುದರಿಂದ ಮಾತುಕತೆ ಜತೆಗೆ ಅಭಿನಂದನೆ ಸಲ್ಲಿಸುವ ಕೆಲಸವೂ ನಡೆಯುತ್ತದೆ. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಇದಾದ ಬಳಿಕ ಸಂಪುಟ ವಿಸ್ತರಣೆ ಕುರಿತಂತೆ ಅಂತಿಮ ಚಿತ್ರಣ ಹೊರಬೀಳುತ್ತದೆ.
ಬಹುಮತಕ್ಕೆ ಬೆಲೆ ಕೊಟ್ಟು ನಿಲುವು ಬದಲಿಸಿದ ಸಿಎಂ
ಈಗಿರುವ ಮೂರು ಉಪಮುಖ್ಯಮಂತ್ರಿ ಸ್ಥಾನ ಮುಂದುವರಿಸಲಾಗುವುದು. ನಾಲ್ಕನೇ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿರುವುದರಿಂದ ಕೊನೇ ಕ್ಷಣದಲ್ಲಾದರೂ ಈ ಹುದ್ದೆ ಸಿಗಬಹುದು ಎಂದು ನಿರೀಕ್ಷಿಸುತ್ತಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಅವರಿಗೆ ಭ್ರಮನಿರಸನವಾಗಿರುವುದಂತೂ ಸತ್ಯ. ಆದರೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಿಂದ ಆಗುವುದು ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವಂತಾದ ಕಾರಣ ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿರಬಹುದು.
ಸಂಪುಟ ರಚನೆ ವೇಳೆ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಅದನ್ನು ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ನೀಡಲಾಗಿತ್ತು. ಗೋವಿಂದ ಕಾರಜೋಳ ಹೊರತುಪಡಿಸಿ ಇನ್ನಿಬ್ಬರಿಗೆ ಆ ಹುದ್ದೆ ನೀಡಿರುವ ಕುರಿತು ತೀವ್ರ ಅಸಮಾಧಾನ ಉಂಟಾಗಿತ್ತು. ಅದರಲ್ಲೂ ತಮ್ಮನ್ನು ಕಡೆಗಣಿಸಿ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಮತ್ತು ಹೊಸದಾಗಿ ಮಂತ್ರಿಯಾಗುತ್ತಿರುವ ಅಶ್ವತ್ಥನಾರಾಯಣ ಅವರಿಗೆ ಕೊಟ್ಟಿರುವುದು ಹಿರಿಯ ಶಾಸಕರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಆದರೆ, ಯಡಿಯೂರಪ್ಪ ಅವರು ಹೈಕಮಾಂಡ್ ನಾಯಕರ ಕಡೆ ಕೈತೋರಿಸಿ ನನ್ನದೇನೂ ಇಲ್ಲ ಎನ್ನುವ ಮೂಲಕ ಎಲ್ಲರೂ ಸುಮ್ಮನಾಗುವಂತೆ ಮಾಡಿದ್ದರು.
ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದಿಂದ ತೀವ್ರ ಒತ್ತಡವಿದ್ದು, ಬಿ.ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಅವರು ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಇಬ್ಬರೂ ವಾಲ್ಮೀಕಿ ಸಮುದಾಯದವರಾಗಿದ್ದು, ಒಂದೇ ಸಮುದಾಯಕ್ಕೆ ಎರಡೂ ಸ್ಥಾನಗಳನ್ನು ನೀಡಿದರೆ ಇತರ ಸಮುದಾಯದವರು ಅಸಮಾಧಾನಗೊಳ್ಳುವ ಸಾಧ್ಯತೆ ಇತ್ತು. ಹೀಗಾಗಿ ಒಂದು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಅದನ್ನು ಶ್ರೀರಾಮುಲು ಅಥವಾ ರಮೇಶ್ ಜಾರಕಿಹೊಳಿ ಪೈಕಿ ಯಾರಾದರೂ ಒಬ್ಬರಿಗೆ ನೀಡಬೇಕು ಎಂದು ಯಡಿಯೂರಪ್ಪ ಯೋಚಿಸಿದ್ದರು.
ಈ ಮಧ್ಯೆ ವಾಲ್ಮೀಕಿ ಸಮುದಾಯದವರು ಶ್ರೀರಾಮುಲು ಅವರ ಬಗ್ಗೆ ಒಲವು ವ್ಯಕ್ತಪಡಿಸಿ ರಮೇಶ್ ಜಾರಕಿಹೊಳಿ ಅವರನ್ನು ಸಮಾಧಾನಪಡಿಸಲು ಮುಂದಾದರು. ಆದರೆ, ಇದಕ್ಕೆ ಒಪ್ಪದ ರಮೇಶ್ ಜಾರಕಿಹೊಳಿ, ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿರುವಾಗ ನಮ್ಮ ಸಮುದಾಯಕ್ಕೆ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಏಕೆ ಕೊಡಬಾರದು ಎಂದು ಪ್ರಶ್ನಿಸಿ ಪಟ್ಟು ಹಿಡಿದು ಕುಳಿತಿದ್ದರು.
ಇದರಿಂದಾಗಿ ಉಪಮುಖ್ಯಮಂತ್ರಿ ಹುದ್ದೆಯೇ ಬೇಡ ಎಂಬ ವಾದ ಬಿಜೆಪಿಯ ಒಂದು ವಲಯದಲ್ಲಿ (ಕೆಲವು ಶಾಸಕರು) ಕೇಳಿಬರಲಾರಂಭಿಸಿತ್ತು. ಆದರೂ ಇರುವ ಹುದ್ದೆಗಳನ್ನು ರದ್ದುಗೊಳಿಸಿದರೆ ಅವಮಾನ ಎಂಬ ಕಾರಣಕ್ಕೆ ಮೂರೂ ಉಪಮುಖ್ಯಮಂತ್ರಿ ಹುದ್ದೆಗಳನ್ನು ಮುಂದುವರಿಸಲು ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಹೈಕಮಾಂಡ್ ಬೆಂಬಲವೂ ಇದೆ. ಆದರೆ, ಇನ್ನೂ ಒಂದು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಅದನ್ನು ಶ್ರೀರಾಮುಲು ಅಥವಾ ರಮೇಶ್ ಜಾರಕಿಹೊಳಿಗೆ ನೀಡಬೇಕು ಎಂಬ ಯಡಿಯೂರಪ್ಪ ಅವರ ಚಿಂತನೆಗೆ ಹೈಕಮಾಂಡ್ ಬೆಂಬಲ ಸಿಗಲಿಲ್ಲ.
ಮೇಲಾಗಿ ಒಂದು ಅಥವಾ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಹಂಚಿಕೆ ಮಾಡಿದರೆ ಸಮಾದಾನಗೊಳ್ಳುವವರು ಇಬ್ಬರಾದರೆ ಅಸಮಾಧಾನಗೊಳ್ಳುವವರ ಸಂಖ್ಯೆ ಸಾಕಷ್ಟಿದೆ. ಅದರಲ್ಲೂ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ ಹಿರಿಯ ಶಾಸಕರಿಗೆ ಬೇಸರವಾಗುತ್ತದೆ. ಹೀಗಾಗಿ ಇಬ್ಬರು ಅಸಮಾಧಾನಗೊಂಡರೂ ಪರವಾಗಿಲ್ಲ, ಹೆಚ್ಚು ಮಂದಿಯಲ್ಲಿ ಅತೃಪ್ತಿ ಉಂಟುಮಾಡುವುದು ಸರಿಯಲ್ಲ ಎಂಬ ಕಾರಣದಿಂದ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ನಿರ್ಧಾರದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಶುಕ್ರವಾರವೋ, ಭಾನುವಾರವೋ?
ಉಪಮುಖ್ಯಮಂತ್ರಿ ವಿಚಾರಕ್ಕೆ ತೆರೆ ಬಿದ್ದಿರುವುದರಿಂದ ಸದ್ಯ ಉಳಿದಿರುವುದು ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸೇರಿ ಗೆದ್ದು ಬಂದ ಎಲ್ಲಾ 11 ಮಂದಿಗೂ ಸಚಿವ ಸ್ಥಾನ ಸಿಗುತ್ತದೆಯೇ ಬಿಜೆಪಿಯ ಇತರೆ ಶಾಸಕರ ಪೈಕಿ ಎಷ್ಟು ಮಂದಿಗೆ ಸಚಿವ ಸ್ಥಾನ ಸಿಗುತ್ತದೆ? ಎಂಬ ಪಶ್ನೆಗಳು. ಎಲ್ಲಾ 11 ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ಯಡಿಯೂರಪ್ಪ ಅವರ ಇಂಗಿತವಾದರೆ, 8 ಅಥವಾ 9 ಮಂದಿಗೆ ಸಚಿವ ಸ್ಥಾನ ಕೊಟ್ಟು ಇಬ್ಬರು ಅಥವಾ ಮೂವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದು ಹೈಕಮಾಂಡ್ ನಿಲುವು.
ಜತೆಗೆ ಮೂಲ ಬಿಜೆಪಿ ಶಾಸಕರ ಪೈಕಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಮತ್ತು ಎಸ್.ಅಂಗಾರ ಅಥವಾ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ತಮ್ಮ ಯೋಚನೆಗೆ ವರಿಷ್ಠರು ಸಹಮತ ವ್ಯಕ್ತಪಡಿಸುವ ವಿಶ್ವಾಸ ಯಡಿಯೂರಪ್ಪ ಅವರಿಗೆ ಇದೆ. ಗುರುವಾರ ವರಿಷ್ಠರೊಂದಿಗೆ ಈ ಕುರಿತು ಮಾತುಕತೆ ನಡೆಯಲಿದ್ದು, ಯಾವುದೇ ಗೊಂದಲವಿಲ್ಲದೆ ಅಂತಿಮ ನಿರ್ಧಾರವಾದರೆ ಶುಕ್ರವಾರವೇ ನೂತನ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ವ್ಯವಸ್ಥೆ ಮಾಡುವುದು, ಅದು ಸಾಧ್ಯವಾಗದೇ ಇದ್ದರೆ ಭಾನುವಾರ ಪ್ರಮಾಣವಚನ ಸಮಾರಂಭ ಕೈಗೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.