ಮುಖ್ಯಮಂತ್ರಿ ಬಿಎಸ್‍ವೈ-ಬಿಎಲ್ ಸಂತೋಷ್ ನಡುವಣ ಸಂಬಂಧ ಹಳಸಿದೆ, ಆರ್‍ಎಸ್‍ಎಸ್ ನಾಯಕರಿಗೂ-ಬಿವೈ ವಿಜಯೇಂದ್ರರರಿಗೂ ಸರಿಯಾಗುತ್ತಿಲ್ಲ. 2023ರ ಬಳಿಕ ಬಿಜೆಪಿ ವಿಳಾಸ ಪತ್ತೆ ಹಚ್ಚಲು ಸಾಧ್ಯವಿಲ್ಲ ಹೀಗೆ ಜೆಡಿಎಸ್-ಕಾಂಗ್ರೆಸ್ ನಾಯಕರು ಹಗಲು ಕನಸು ಕಾಣುತ್ತಿರುವ ಈ ಸಂದರ್ಭದಲ್ಲಿ, ಈ ಎರಡೂ ಪಕ್ಷಗಳ ಭದ್ರಕೋಟೆ ಹಳೆ ಮೈಸೂರಿನಲ್ಲಿ ಸಣ್ಣದೊಂದು ರಾಜಕೀಯ ಸಂಚಲನ ಆರಂಭವಾಗಿದೆ. ಜೆಡಿಎಸ್‍ನ ಹುತ್ತದಲ್ಲಿ ಬಿಜೆಪಿ ಸೇರಿಕೊಂಡಿದೆ. ಒಕ್ಕಲಿಗರ ಪಾಳಯದಲ್ಲಿ ಜೆಡಿಎಸ್‍ಗೆ ಪರ್ಯಾಯವಾಗಿ ಕೇಸರಿ ಪಕ್ಷ ಬೆಳೆಯುತ್ತಿದೆ. ಕಾಂಗ್ರೆಸ್ ಕೋಟೆಯ ಕಲ್ಲುಗಳು ಶಿಥಿಲವಾಗುವುದನ್ನೇ ಎದುರು ನೋಡುತ್ತಿದೆ. ಒಕ್ಕಲಿಗ ನಾಯಕರ ಮೂಲಕವೇ ಈ ಭಾಗದಲ್ಲಿ ಹೆಮ್ಮರವಾಗಲು ಯತ್ನಿಸುತ್ತಿದೆ. ಒಕ್ಕಲಿಗರ ಯುವ ನಾಯಕರಲ್ಲೊಬ್ಬರಾದ ಸಿಪಿ ಯೋಗೇಶ್ವರ್ ಮೂಲಕ ಅದು ಪಕ್ಷದ ಬೇರು ಮಟ್ಟದ ಸಂಘಟನೆಗೆ ಮುಂದಾಗಿದೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ ಗೊಂದಲದ ಬೆಂಕಿಗೆ ತುಪ್ಪ ಸುರಿಯಲಾರಂಭಿಸಿದೆ ಪುನಾರಚನೆಯ ಹೇಳಿಕೆ
ಶುಕ್ರವಾರ ಬೆಳ್ಳಂಬೆಳಗ್ಗೆ ಮೈಸೂರು, ಮಂಡ್ಯ, ರಾಮನಗರದ ಬಿಜೆಪಿ ಕಾರ್ಯಕರ್ತರ ವಾಟ್ಸಾಪ್ ಗ್ರೂಪ್‍ಗಳಿಗೆ ಸಂಘ ಪರಿವಾರದ ಕೆಲವು ಕಾಲಾಳುಗಳು ಒಂದು ವಿಶಿಷ್ಟ ಛಾಯಾಚಿತ್ರ ಕಳುಹಿಸಿದ್ದರು. ಜತೆಗೆ ಅದನ್ನು ಜನಸಾಮಾನ್ಯರಿಗೆ ತಲುಪಿಸಬೇಕೆಂಬ ಮೌಖಿಕ ಸೂಚನೆ ಕೆಲವು ಕಟ್ಟಾಳುಗಳಿಗೆ ರವಾನೆಯಾಗಿತ್ತು. “ಸೈನಿಕ” ಚನ್ನಪಟ್ಟಣದ ಪಕ್ಷದ ನಾಯಕ ಸಿಪಿ ಯೋಗೇಶ್ವರ್ ಹಾಗೂ ಅವರ ಇಬ್ಬರು ಪುತ್ರರು ಆರ್‍ಸ್‍ಎಸ್ ಸಮವಸ್ತ್ರಧಾರಿಗಳಾಗಿರುವ ಚಿತ್ರವದು.
ಕ್ಷಣ ಮಾತ್ರದಲ್ಲಿ ಈ ಚಿತ್ರ ವೈರಲ್ ಅನಿಸಿಕೊಂಡಿತು. ಅದನ್ನು ತೆಗೆದದ್ದು ಯಾರೋ, ಕಳುಹಿಸಿದ್ದು ಯಾರೋ, ಮಾಧ್ಯಮಗಳಿಗೆ ಮುಟ್ಟಿಸಿದ್ದು ಯಾರೋ? ಒಟ್ಟಾರೆ ಸೈನಿಕ ಆರ್‍ಎಸ್‍ಎಸ್ ಕಟ್ಟಾಳುವಿನಂತೆ ಫೋಸ್ ಕೊಟ್ಟ ಈ ಛಾಯಾ ಚಿತ್ರ ವೈರಲ್ ಆಗಿತ್ತು.
ಇದನ್ನೂ ಓದಿ: ಪುತ್ರನ ಕಾರಣಕ್ಕೆ ಮೆತ್ತಗಾದ ರಾಜಾಹುಲಿ
ಇದೊಂದು ಸಣ್ಣ ಝಲಕ್ ಅಷ್ಟೇ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮುಂಬಯಿ ಕರ್ನಾಟಕ, ಹಾಗೂ ಕರಾವಳಿ ಕರ್ನಾಟಕಗಳನ್ನು ಹೋಲಿಸಿದರೆ, ಬಿಜೆಪಿ ಅತ್ಯಂತ ದುರ್ಬಲವಾಗಿರುವುದು ಹಳೆ ಮೈಸೂರು ಪ್ರದೇಶದಲ್ಲಿ ಒಕ್ಕಲಿಗರ ಕೋಟೆಗೆ ಲಗ್ಗೆ ಇಡಲು ಪಕ್ಷಕ್ಕೆ ಈ ವರೆಗೆ ಸಾಧ್ಯವಾಗಿರಲಿಲ್ಲ. ಆದರೆ ಕೆಆರ್ ಪೇಟೆಯಲ್ಲಿ ನಾರಾಯಣ ಗೌಡರ ಗೆಲುವಿನೊಂದಿಗೆ ಬಿಜೆಪಿಯ ಆತ್ಮವಿಶ್ವಾಸ ಈಗ ದೊಡ್ಡಮಟ್ಟದಲ್ಲಿ ಹೆಚ್ಚಿದೆ. ಒಕ್ಕಲಿಗರ ಕೋಟೆಯಲ್ಲಿ ಕಮಲ ಅರಳಿಸಲು ಹಲವು ಕಾರ್ಯತಂತ್ರಗಳಿಗೆ ಕೈ ಹಾಕಿದೆ. ಇದರ ಭಾಗವೇ ಸಿಪಿ ಯೋಗೇಶ್ವರ್ ಸಮವಸ್ತ್ರಧಾರಣೆ.
ಬಿಎಸ್‍ವೈ ಸಂಪುಟದಲ್ಲಿ ಸಿಪಿ ಯೋಗೇಶ್ವರ್‍ಗೆ ಸಚಿವ ಸ್ಥಾನ ತಪ್ಪಲು ಮೂಲ ಬಿಜೆಪಿ ನಾಯಕರು ಕಾರಣ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ. ಆದರೆ ಹಳೆ ಮೈಸೂರು ಭಾಗದ ಬಿಜೆಪಿ ನಾಯಕರು ಈ ಮಾತುಗಳನ್ನು ನಂಬುತ್ತಿಲ್ಲ. ಏಕೆಂದರೆ, ಯೋಗೇಶ್ವರ್ ಸಂಪರ್ಕ ಈಗ ಯಡ್ಡಿಯಿಂದಿಡಿದು, ಬಿ ಎಲ್ ಸಂತೋಷ್, ಕಲ್ಲಡ್ಕ ಪ್ರಭಾಕರ್ ಭಟ್‍ವರೆಗೆ ಚೆನ್ನಾಗಿದೆ ಎಂಬ ಮಾತು ಈ ನಾಯಕದ್ದು. ಇವರ ಪ್ರಕಾರ ಕನಕಪುರ- ಹಾರೋಬೆಲೆಯ ಕಪಾಲ ಬೆಟ್ಟದ ಯೇಸು ಕ್ರಿಸ್ತ ವಿವಾದವನ್ನು ಯೋಗೇಶ್ವರ್ ಸಮರ್ಥವಾಗಿ ಬಳಸಿಕೊಂಡು ಆರ್‌ಎಸ್‍ಎಸ್‍ನ ಗರ್ಭಗುಡಿಯೊಳಕ್ಕೆ ಪ್ರವೇಶಿದ್ದಾರೆ.

“ಕಲ್ಲಡ್ಕ ಭಟ್ ನೇತೃತ್ವದ ಪ್ರತಿಭಟನೆಗೆ ಜನ ಸೇರಿಸಿದ್ದು ಇದೇ ಯೋಗೇಶ್ವರ್. ಈ ಪ್ರತಿಭಟನೆ ಬಳಿಕ ಯೋಗೇಶ್ವರ್ ಆರ್‍ಎಸ್‍ಎಸ್ ನಾಯಕರ ಪಾಲಿಗೆ ಬ್ಲೂ ಐ ಬಾಯ್ ಆಗಿದ್ದಾರೆ. ಅವರಿಗೆ ಇಂತಹ ಒಬ್ಬ ಸೇನಾನಿಯ ಅಗತ್ಯವಿತ್ತು. ಯೋಗೇಶ್ವರ್ ಅವರಿಗೆ ಹೊಂದಿಕೊಳ್ಳುವ ತಕ್ಕ ನಾಯಕ,” ಎನ್ನುತ್ತಾರೆ ಬಿಜೆಪಿಯ ಮಂಡ್ಯದ ನಾಯಕರೊಬ್ಬರು
“ಯೋಗೇಶ್ವರ್‍ಗೆ ಸೈದ್ದಂತಿಕ ಬದ್ಧತೆ ಇಲ್ಲ. ಅಧಿಕಾರ ಕೊಡುವ ಪಕ್ಷಕ್ಕೆ ಜೈ ಅನ್ನುವ ಅಸಾಮಿ. ಬಿಜೆಪಿಗೂ ಅಂತವರೇ ಬೇಕಿತ್ತು. ಏಕೆಂದರೆ, ಜೆಡಿಎಸ್-ಕಾಂಗ್ರೆಸ್ ಅನ್ನು ಈ ಭಾಗದಲ್ಲಿ ಸೋಲಿಸಲು ಒಬ್ಬ ಬಲಾಡ್ಯ ಬೇಕಿದೆ. ಹಣ ಬಲ-ಜಾತಿ ಬಲ ಇರುವ ನಾಯಕನ ಕೊರತೆ ಪಕ್ಷ ಈ ಭಾಗದಲ್ಲಿ ಬೆಳೆಯಲು ದೊಡ್ಡ ಅಡ್ಡಿಯಾಗಿತ್ತು. ಈಗ ಯೋಗೇಶ್ವರ್ ಪಕ್ಷದ ಪಾಲಿಗೆ ದಿ ಬೆಸ್ಟ್ ಬೆಟ್ ಅನಿಸಿದ್ದಾರೆ.
ಜೆಡಿಎಸ್ ಅಧ:ಪತನ: ಬಿಜೆಪಿ ತುಂಬಲು ಯತ್ನಿಸುತ್ತಿರುವುದು ಜೆಡಿಎಸ್ ಜಾಗವನ್ನು. ಏಕೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಕೋಟೆಯನ್ನು ಕಾಪಿಟ್ಟಿದ್ದಾರೆ. ಜುಲೈ 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಸರಕಾರ ಪತನದ ಬಳಿಕ ಜೆಡಿಎಸ್ ಸಂಘಟನೆ ತೀವ್ರವಾಗಿ ಸೊರಗಿದೆ. ಎಷ್ಟು ಸೊರಗಿದೆ ಎಂದರೆ, ಹುಣಸೂರು ನಗರಸಭಾ ಚುನಾವಣೆಯಲ್ಲಿ ಪಕ್ಷ 31 ವಾರ್ಡ್‍ಗಳ ಪೈಕಿ ಬರೀ 28ಕ್ಕೆ ಮಾತ್ರ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಜಿ ಟಿ ದೇವೇಗೌಡರ ಒಳೇಟಿನ ಹೆದರಿಕೆಯಿಂದ ಉಳಿದ 3 ವಾರ್ಡ್‍ಗಳಲ್ಲಿ ನಿಲ್ಲಲು ಅಭ್ಯರ್ಥಿಗಳೇ ಮುಂದೆ ಬಂದಿಲ್ಲ.

ಚಾಮರಾಜನಗರದಲ್ಲಿ ಪಕ್ಷದ ಸಂಘಟನೆ ಬಹುತೇಕ ನಿಂತಿದೆ. ಮೈಸೂರಿನಲ್ಲಿ ಸಾರಾ ಮಹೇಶ್ ಏಕಾಂಗಿ ಹೋರಾಟ. ಉಳಿದಂತೆ ಎಲ್ಲಾ ನಾಯಕರು ಕಾಂಗ್ರೆಸ್-ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮಂಡ್ಯದಲ್ಲಿ ನಾಗಮಂಗಲದ ಶಾಸಕ ಸುರೇಶ್ ಗೌಡ, ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀ ಕಂಠಯ್ಯ ಬಿಜೆಪಿ ಸೇರಿದರೆ ಆಶ್ಚರ್ಯವಿಲ್ಲ. ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರಗಳೊಂದೆ ಈಗ ಪಕ್ಷದ ಪಾಲಿನ ಸೇಫ್ ಬೆಟ್. ಹಾಸನದಲ್ಲಿ ಪ್ರೀತಂ ಗೌಡ ನೇತೃತ್ವದಲ್ಲಿ ಬಿಜೆಪಿ ಸಂಘಟನೆ ಜೋರಾಗಿದೆ. ಎರಡು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ.
ಒಟ್ಟಾರೆ ಮಾಜಿ ಪ್ರಧಾನಿ ಎಚ್ ಡಿ ದೇವೇ ಗೌಡರು ಮತ್ತೊಮ್ಮೆ ಫೀಲ್ಡ್‍ಗೆ ಇಳಿಯಲೇ ಬೇಕಾದ ಅನಿವಾರ್ಯತೆ ಜೆಡಿಎಸ್ ಪಾಳಯದಲ್ಲಿದೆ.