ದಿನ ಕಳೆಯುತ್ತಿದ್ದಂತೆ ದೇಶದಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸುತ್ತಿದೆ. ಸಾಕಷ್ಟು ಕಡೆ 2000 ಅಡಿಗೂ ಹೆಚ್ಚು ಬೋರ್ ಕೊರೆಸಿದರೂ ಹನಿ ನೀರು ಸಿಗುತ್ತಿಲ್ಲ. ಕೆಲವೊಮ್ಮೆ ಸಿಕ್ಕರೂ ತಿಂಗಳೊಳಗೆ ನೀರಿನ ಮಟ್ಟ ಕಡಿಮೆಯಾಗಿ ನಿಂತುಹೋಗುತ್ತದೆ. ಕಳೆದ ಎರಡು ಮೂರು ದಶಕಗಳಿಂದ ವಾಣಿಜ್ಯ ಉದ್ದೇಶಕ್ಕಾಗಿ ಸಾಕಷ್ಟು ಸಂಸ್ಥೆಗಳು ಬೋರ್ ಕೊರೆಸಿ ದೊಡ್ಡ ಪ್ರಮಾಣದಲ್ಲಿ ಅಂತರ್ಜಲದಿಂದ ನೀರನ್ನು ತೆಗೆದಿದ್ದಾರೆ. ಅಲ್ಲದೆ, ಅಭಿವೃದ್ಧಿ ಎಂಬ ಹೆಸರಿನಲ್ಲಿ ನಗರೀಕರಣದಿಂದ ಸಿಮೆಂಟ್ ರಸ್ತೆಯೇ ತಲೆ ಎತ್ತುತ್ತಿವೆ. ಭೂಮಿಯ ಒಳಗೆ ಹನಿ ನೀರು ಇಳಿಯದಂತೆ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೈಗಾರೀಕರಣದಿಂದ ಜಲಮಾಲಿನ್ಯವು ಸಹ ಹೆಚ್ಚಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇನ್ನು ಎರಡು ದಶಕಗಳಲ್ಲಿ ದೇಶದ ಅರ್ಧ ಭಾಗ ಕುಡಿಯುವ ನೀರಿನ ತೀವ್ರ ಸಂಕಷ್ಟ ಎದುರಿಸಲಿದೆ ಎಂದು ಅಂದಾಜಿಸಲಾಗಿದೆ.
ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳೇನು?
ದೇಶದಲ್ಲಿ ಕೇಂದ್ರ ಸರ್ಕಾರ (ಕೇಂದ್ರ ಅಂತರ್ಜಲ ಮಂಡಳಿ) ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅಂತರ್ಜಲ ಸಂಪನ್ಮೂಲವನ್ನು ಮೌಲ್ಯಮಾಪನ ಮಾಡುತ್ತದೆ. 2017ರ ಮೌಲ್ಯ ಮಾಪನದ ಪ್ರಕಾರ, ವರ್ಷಕ್ಕೆ 43,200 ಕೋಟಿ ಕ್ಯೂಬಿಕ್ ಮೀಟರ್ (ಬಿಸಿಎಂ) ಅಂತರ್ಜಲ ಪುನರ್ ಭರ್ತಿಯಾಗುತ್ತದೆ. ವರ್ಷದಲ್ಲಿ ಹೊರತೆಗೆಯಬಹುದಾದ ಜಲ ಸಂಪನ್ಮೂಲ 39,300 ಕೋಟಿ ಬಿಸಿಎಂ. ಆದರೆ ನೀರಾವರಿ, ಕೈಗಾರಿಕೆ ಮತ್ತು ಮನೆಗೆ ಬಳಕೆ ಸೇರಿದಂತೆ ಎಲ್ಲಾ ಬಳಕೆಗಳಿಗೆ ವರ್ಷಕ್ಕೆ 24,900 ಬಿಸಿಎಂ ನೀರು ಸಾಕಾಗುತ್ತದೆ. ವಾರ್ಷಿಕವಾಗಿ ಶೇಕಡ 63ರಷ್ಟು ಅಂತರ್ಜಲ ಸಂಪನ್ಮೂಲವನ್ನು ಹೊರತೆಗೆಯಬಹುದು ಎಂದು ಕೇಂದ್ರ ಅಂತರ್ಜಲ ಮಂಡಳಿ ತಿಳಿಸಿದೆ.
ದೇಶದಲ್ಲಿ ಬ್ಲಾಕ್ ಹಂತದಲ್ಲಿ, ತಾಲ್ಲೂಕು ಹಂತದಲ್ಲಿ, ಜಲಾಯನ ಪ್ರದೇಶಗಳು ಸೇರಿ 6881 ಘಟಕಗಳಲ್ಲಿ ಅಂತರ್ಜಲ ಸಂಪನ್ಮೂಲವನ್ನು ಮೌಲ್ಯಮಾಪನ ಮಾಡಲಾಗಿದೆ. ಅದರಲ್ಲಿ 17 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 1186 ಘಟಕಗಳಲ್ಲಿ ‘ಅತಿಯಾದ ಶೋಷಣೆ’ (‘Over-exploited’) ಎಂದು ವರ್ಗೀಕರಿಸಲಾಗಿದೆ. ಏಕೆಂದರೆ ಈ ಘಟಕಗಳಲ್ಲಿ ವರ್ಷಕ್ಕೆ ಅತಿಯಾಗಿ ಅಂತರ್ಜಲ ಸಂಪನ್ಮೂಲವನ್ನು ಹೊರತೆಗೆಯಲಾಗಿದೆ ಎಂದು ಹೇಳಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತಿಹೆಚ್ಚು ಅಂತರ್ಜಲ ಸಂಪನ್ಮೂಲವನ್ನು ಹೊರತೆಗೆದಿರುವ ಬ್ಲಾಕ್ ಮತ್ತು ತಾಲ್ಲೂಕು ಘಟಕಗಳ ವಿವರ
ಜಾಗೃತಿಗಾಗಿ ಕೇಂದ್ರ ಸರ್ಕಾರದಿಂದ ಸರಣಿ ಸಭೆ
ನೀರಿನ ಸಂರಕ್ಷಣೆಗೆ ಸಾಮೂಹಿಕ ಆಂದೋಲನ ಅವಶ್ಯಕತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 08.06.2019ರಂದು ದೇಶದ ಎಲ್ಲಾ ಗ್ರಾಮಪಂಚಾಯಿತಿಗಳಿಗೆ ‘ನೀರಿನ ಸಂರಕ್ಷಣೆ ಮಾಡುವುದಕ್ಕೆ, ಮಳೆ ನೀರು ಕೊಯ್ಲು ಮಾಡುವುದಕ್ಕೆ ಮತ್ತು ನೀರಿನ ಪ್ರಾಮುಖ್ಯತೆಗೆ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳಿ’ ಎಂದು ಪತ್ರ ಬರೆದಿದ್ದರು.
ನೀರಿನ ಸಮಸ್ಯೆ ಕುರಿತು ಮತ್ತು ಕಾಲಕಾಲಕ್ಕೆ ಆಗುವ ಮುಂಗಾರು ಮಳೆಯನ್ನು ಗರಿಷ್ಠ ಮಟ್ಟದಲ್ಲಿ ಹೇಗೆ ಶೇಖರಿಸಿ ಬಳಸಬೇಕು ಹಾಗೂ ಜಲ ಸಂರಕ್ಷಣೆ ಸಂಬಂಧಿತ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಕೇಂದ್ರ ಸರ್ಕಾರ, ದೇಶದ ವಿವಿಧ ರಾಜ್ಯಗಳ / ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳೊಡನೆ 01.05.2019ರಂದು ಒಂದು ಸಭೆಯನ್ನು ನಡೆಸಿತ್ತು. ಅಲ್ಲದೆ, ಅತಿಯಾದ ಅಂತರ್ಜಲ ಶೋಷಣೆ ಮತ್ತು ಸವಕಳಿಯನ್ನು ತಡೆಯುವ ಸಲುವಾಗಿ 11.06.2019ರಂದು ಎಲ್ಲಾ ರಾಜ್ಯಗಳ ಜಲಸಂಪನ್ಮೂಲ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದೆ. ಇದಲ್ಲದೆ, ಅಂತರ್ಜಲವನ್ನು ನಿಯಂತ್ರಿಸುವ ಸಲುವಾಗಿ ಪರಿಸರ (ಸಂರಕ್ಷಣೆ) ಕಾಯ್ದೆ 1986” ರ ಸೆಕ್ಷನ್ 3 (3) ರ ಅಡಿಯಲ್ಲಿ ಕೇಂದ್ರಿಯ ಅಂತರ್ಜಲ ಪ್ರಾಧಿಕಾರದಿಂದ ಜಲ ಶಕ್ತಿ ಅಭಿಯಾನ ರಚಿಸಲಾಗಿದೆ.
ಕೇಂದ್ರ ಸರ್ಕಾರದ ಜಲ ಶಕ್ತಿ ಅಭಿಯಾನ
ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳ ಪುನರುತ್ಥಾನ, ನೀರಿನ ಮರುಬಳಕೆ ಮತ್ತು ಬರಡಾದ ಜಲಮೂಲಗಳ ಪುನಶ್ಚೇತನ, ಕೊಳಗಳ ಪುನರ್ಭರ್ತಿ, ಜಲಕೋಶಗಳ ಅಭಿವೃದ್ಧಿ ಮತ್ತು ತೀವ್ರ ವೇಗದಲ್ಲಿ ಅರಣ್ಯ ಬೆಳೆಸುವ ಆಯಾಮಗಳನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಜಲ ಶಕ್ತಿ ಅಭಿಯಾನವನ್ನು ಜಾರಿಗೆ ತಂದಿದೆ. ಆರಂಭದಲ್ಲಿ 256 ಜಿಲ್ಲೆಗಳ 1592 ನೀರಿನ ಅಭಾವವಿರುವ ಬ್ಲಾಕ್ ಗಳ ಮೇಲೆ ಕೇಂದ್ರಿಕರಿಸಿ, ಜುಲೈ 1ರಂದು ಈ ಅಭಿಯಾನಕ್ಕೆ ಚಾಲನೆ ದೊರೆತಿತ್ತು.
ಜೂನ್ ನಿಂದ ಮಳೆಗಾಲ ಪ್ರಾರಂಭವಾಗುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಜುಲೈ 1ರಿಂದ ಸೆಪ್ಟೆಂಬರ್ 15ರ ತನಕ ಮಳೆಕೊಯ್ಲು ಮತ್ತಿತರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹಿಂಗಾರು ಮಳೆ ಹೆಚ್ಚು ಬೀಳುವ ರಾಜ್ಯಗಳಲ್ಲಿ ಅಕ್ಟೋಬರ್ 1ರಿಂದ ನವಂಬರ್ 30ರ ತನಕ ಅಭಿಯಾನ ಮುಂದುವರಿಯಲಿದೆ. ಜಲಶಕ್ತಿ ಅಭಿಯಾನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುತ್ತದೆ. ಜತೆಗೆ ಕೇಂದ್ರ ಸರಕಾರದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ ದರ್ಜೆಯ 256 ಅಧಿಕಾರಿಗಳಿಗೆ ಉಸ್ತುವಾರಿಯ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾಡಳಿತ ಈ ತಂಡಕ್ಕೆ ತಲಾ ಇಬ್ಬರನ್ನು ನಾಮ ನಿರ್ದೇಶನ ಮಾಡಲುಬಹುದು. ಬ್ಲಾಕ್, ತಾಲ್ಲೂಕು ಮತ್ತು ಜಿಲ್ಲಾ ಜಲ ಸಂರಕ್ಷಣಾ ಯೋಜನೆಗಳು ಮತ್ತು ಕೃಷಿ ಮೇಳದಂತಹ ಕಾರ್ಯಕ್ರಮಗಳ ಮೂಲಕ ತಳಮಟ್ಟದಲ್ಲಿ ನೀರನ್ನು ರಕ್ಷಿಸುವ ಜಾಗೃತಿಯನ್ನ ಜನರಲ್ಲಿ ಮೂಡಿಸಲಾಗುತ್ತದೆ. ಅಂತೆಯೇ ಕೃಷಿಗೆ ಸಮರ್ಪಕವಾಗಿ ನೀರನ್ನು ಬಳಸುವುದು ಮತ್ತು ಸರಿಯಾದ ಬೆಳೆಯನ್ನು ಆಯ್ಕೆ ಮಾಡುವ ಉಪಕ್ರಮಗಳು ಅಭಿಯಾನದಲ್ಲಿ ಸೇರಿವೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ನಿರ್ದೇಶನದಂತೆ, ‘ಅತಿಯಾದ ಶೋಷಿತ’ ಮತ್ತು ಜಲ ಮಾಲಿನ್ಯ ಸೃಷ್ಟಿಸುವ ಕೈಗಾರಿಕೆಗಳಿಗೆ ಮತ್ತು ಗಣಿಗಾರಿಕೆ ಯೋಜನೆಗಳಿಗೆ ಅಂತರ್ಜಲ ನೀರನ್ನು ಹೊರತೆಗೆಯಲು ಎನ್ ಒ ಸಿ (NOC – Non Objection Certificate) ನೀಡುವುದಿಲ್ಲ ಎಂದು ಕೇಂದ್ರ ಜಲಮಂಡಳಿ ಹೇಳಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಘಲ ಅನುಷ್ಟಾನ ಎಷ್ಟರ ಮಟ್ಟಿಗೆ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಸಹಾಯವಾಗಬಲ್ಲುದು ಎಂದು ಕಾದು ನೋಡಬೇಕಿದೆ.