ಹರ್ಯಾಣದಲ್ಲೊಬ್ಬ ಹೊಣೆಗೇಡಿ ಬಿಜೆಪಿ MLA ಸಿಎಎ ಮತ್ತು ಎನ್ಆರ್ ಸಿಯನ್ನು ವಿರೋಧಿಸುವವರನ್ನು ಒಂದೇ ಗಂಟೆಯಲ್ಲಿ ಹೊಡೆದೋಡಿಸುತ್ತಾನಂತೆ!
ಇಂತಹದ್ದೊಂದು ಪ್ರಚೋದನಾತ್ಮಕ ಹೇಳಿಕೆ ಕೊಟ್ಟು ಹೊಸ ವಿವಾದ ಸೃಷ್ಟಿಸಿದ್ದಾನೆ ಈ ಜನಪ್ರತಿನಿಧಿ.
ಇದಿಷ್ಟೇ ಅಲ್ಲ. ಭಾರತ ದೇಶ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರದ್ದಲ್ಲ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರದ್ದೂ ಅಲ್ಲ. ಈ ದೇಶ ಪ್ರಧಾನಮಂತ್ರಿ ನರೇಂದ್ರ ಮೋದಿಯವರದ್ದು ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾನೆ.
ಬಿಜೆಪಿ ಶಾಸಕ ಲೀಲಾರಾಮ್ ಗುಜ್ರಾರ್ ಪ್ರತಿನಿಧಿಸುವ ಹರ್ಯಾಣದ ತನ್ನ ವಿಧಾನಸಭಾ ಕ್ಷೇತ್ರ ಕೈಥಾಲ್ ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾನೂನನ್ನು ಬೆಂಬಲಿಸಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮಾತನಾಡಿದ ಲೀಲಾರಾಮ್ ಗುಜ್ರಾರ್, ನನಗೆ ಹಸಿರು ನಿಶಾನೆ ದೊರೆತ ಒಂದು ಗಂಟೆಯಲ್ಲೇ ಈ ಕಾಯ್ದೆಯನ್ನು ವಿರೋಧಿಸುವವರನ್ನು (ಮುಸ್ಲಿಮರನ್ನು ಗುರಿಯಾಗಿರಿಸಿ) ಹೊಡೆದೋಡಿಸುತ್ತೇನೆ ಎನ್ನುವ ಮೂಲಕ ತಿಳಿಯಾಗಿದ್ದ ಕೋಮುಭಾವನೆಯನ್ನು ಕೆರಳಿಸುವ ಹೇಳಿಕೆ ನೀಡಿದ್ದಾರೆ.
ಈ ತಿದ್ದುಪಡಿ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಇದನ್ನು ಜಾರಿಗೆ ತರಲು ಕ್ರಮವನ್ನೂ ಕೈಗೊಂಡಿದ್ದಾರೆ. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ. ಆದರೆ, ಇದರ ಹಿಂದೆ ಪಿತೂರಿ ಇದೆ ಎಂದು ಭಾವಿಸುವ ಮುಸ್ಲಿಂರು ಭಾರತವನ್ನು ಬಿಟ್ಟು ಹೋಗಬಹುದು. ಅಲ್ಲದೇ, ಅಕ್ರಮವಾಗಿ ದೇಶವನ್ನು ಪ್ರವೇಶಿಸಿರುವವರು ದೇಶವನ್ನು ತೊರೆಯಲೇಬೇಕು ಎಂದು ಹೇಳಿದ್ದಾರೆ.
ತಮ್ಮ ಇಡೀ ಭಾಷಣದುದ್ದಕ್ಕೂ ಮುಸ್ಲಿಂರನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ಲೀಲಾರಾಮ್, ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದ ನಂತರ ಒಂದೇ ಗಂಟೆಯಲ್ಲಿ ಅವರೆಲ್ಲರನ್ನೂ (ಕಾನೂನು ವಿರೋಧಿಸುವವರು) ದೇಶದಿಂದ ಹೊರ ಹಾಕುತ್ತೇವೆ ಎಂದಿದ್ದಾರೆ. ಅವರ ಈ ವಿವಾದಾತ್ಮಕ ಹೇಳಿಕೆಯ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಿಂದ ಭಾರೀ ಟೀಕೆಗೆ ಒಳಗಾಗಿದೆ.