ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಬಗ್ಗೆ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಕೆಂಡ ಕಾರಿದ್ರು. ಹೆಚ್.ಎಸ್ ದೊರೆಸ್ವಾಮಿ ಓರ್ವ ನಕಲಿ ಹೋರಾಟಗಾರ ಎಂದು ಟೀಕೆ ಮಾಡಿದ್ರು. ಆ ಬಳಿಕ ತನ್ನ ಮಾತನ್ನು ಸಮರ್ಥನೆ ಕೂಡ ಮಾಡ್ಕೊಂಡಿದ್ರು. ದೊರೆಸ್ವಾಮಿ ಅವರನ್ನು ಟೀಕೆ ಮಾಡಿದ್ರ ಬಗ್ಗೆ ಹಲಾವರು ಜನರು ಆಕ್ರೋಶ ವ್ಯಕ್ತಪಡಿಸಿದ್ರು. ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸ್ತು. ಮಾರ್ಚ್ 2ರಿಂದ ಶುರುವಾಗುವ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡುತ್ತೇವೆ. ಒಂದು ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇದ್ದರೆ ನಾವು ಅಧಿವೇಶನ ನಡೆಯುವುದಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದೆ. ಆದರೂ ಬಿಜೆಪಿ ನಾಯಕರಲ್ಲಿ ಕೆಲವರು ಬಸನಗೌಡ ಪಾಟೀಲ್ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಸಚಿವ ಈಶ್ವರಪ್ಪ ಒಂದು ಹೆಜ್ಜೆ ಮುಂದೆ ಹೋಗಿ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ಜೊತೆಗಿರುವ ಫೋಟೋ ಬಿಡುಗಡೆ ಮಾಡಿದ್ದು, ಅಮೂಲ್ಯಗೂ ದೊರೆಸ್ವಾಮಿಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ. ಅದೇ ರೀತಿ ಸಚಿವ ಸೋಮಣ್ಣ ಕೂಡ ದೊರೆಸ್ವಾಮಿ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಅವರು ಏನು ಮಾತನಾಡಿದ್ದಾರೋ ಅದಕ್ಕೆ ಯತ್ನಾಳ್ ಉತ್ತರ ಕೊಟ್ಟಿದ್ದಾರೆ ಎನ್ನುವ ಮೂಲಕ ಯತ್ನಾಳ್ ಬೆನ್ನಿಗೆ ನಿಂತಿದ್ದರು.
ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದ ಸಚಿವ ಈಶ್ವರಪ್ಪ, ವಿಧಾನಸಭಾ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ನಾವು ಸದನದಲ್ಲೇ ಇರುತ್ತೇವೆ. ಅದುನು ಮಾಡ್ತಾರೋ ಮಾಡಲಿ ಎಂದು ಸವಾಲು ಹಾಕಿದ್ರು. ಆ ಬಳಿಕ ಸಚಿವ ಸುರೇಶ್ ಕುಮಾರ್ ಮಾತನಾಡಿ, ಆಡಬಾರದು, ಆಡಿದ್ರೆ ಕೇಳಬಾರದು, ಕೇಳ್ಬೇಕಾಗುತ್ತೆ ಎನ್ನುವ ಮೂಲಕ ದೊರೆಸ್ವಾಮಿಯವರದ್ದೇ ತಪ್ಪು ಎನ್ನುವಂತೆ ಮಾತನಾಡಿದ್ರು. ದೊರೆಸ್ವಾಮಿ ತುಂಬಾ ಹಿರಿಯರಿದ್ದಾರೆ. ಅವರು ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡಿದ್ದು ಸರಿಯಲ್ಲ. ಅವರ ಹಿರಿತನವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕಾಗಿತ್ತು ಎನ್ನುವ ಮೂಲಕ ಯತ್ನಾಳ್ ಪರ ಸಚಿವ ಸುರೇಶ್ ಕುಮಾರ್ ಬ್ಯಾಟ್ ಬೀಸಿದ್ರು. ಕೊನೆಯಲ್ಲಿ ಶಾಸಕ ಯತ್ನಾಳ್ ಕೂಡ ಮಾತನಾಡುವ ಬರದಲ್ಲಿ ಹಾಗೆ ಮಾತನಾಡಬಾರದಿತ್ತು. ದೊರೆಸ್ವಾಮಿಯವರಿಗೆ ಅವರದೇ ಆದ ಫಾಲೋವರ್ಸ್ ಇದ್ದಾರೆ ಎನ್ನುವ ಮೂಲಕ ಹಾಗೆ ಮಾತನಾಡಬಾರದಿತ್ತು ಎಂದು ತೇಪೆ ಹಾಕುವ ಕೆಲಸ ಮಾಡಿದ್ದಾರೆ.
ಅದೇ ವಿಚಾರವಾಗಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ನಮ್ಮ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಅವರ ಬಗ್ಗೆ ನೀಡಿರುವ ಹೇಳಿಕೆ ವೈಯಕ್ತಿಕ. ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಎಲ್ಲ ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರು ದೇಶ ಮತ್ತು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿರುತ್ತಾರೆ. ಅವರಿಗೆ ಗೌರವ ಕೊಡುವುದು ನಮ್ಮ ಸಂಸ್ಕಾರ, ಅಂತಹವರಿಗೆ ಗೌರವ ಕೊಡಬೇಕು ಎಂದು ಹೇಳುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್.
ಕಟೀಲ್ ಮಾತಿನ ಬೆನ್ನಲ್ಲೇ ಮಾತನಾಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಹೆಚ್.ಎಸ್ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರರು. ಆ ಗೌರವ ನಮಗೂ ಇದೆ, ಎಲ್ಲರಿಗೂ ಇರಬೇಕು. ಉಳಿದಿದ್ದರ ಬಗ್ಗೆ ನಾನು ಏನೂ ಹೇಳುವುದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ಗೆ ಚಾಟಿ ಬೀಸಿದ್ದಾರೆ. ಇನ್ನು ವಿರೋಧ ಪಕ್ಷಗಳು ಸದನಕ್ಕೆ ಚರ್ಚೆ ಮಾಡಲು ಹೋದರೆ ಹೋಗಲಿ. ಅವರೆಲ್ಲರು ಅವರ ವಿಚಾರ ಮಂಡಿಸಲಿ. ನಾವು ನಮ್ಮ ವಿಚಾರ ನಾವು ಮಂಡಿಸುತ್ತೇವೆ. ದೊರೆಸ್ವಾಮಿ ಕೂಡ ಒನ್ ಸೈಡೆಡ್ ಟೀಕೆ ಮಾಡಬಾರ್ದು. ಸ್ವತಂತ್ರ್ಯ ಹೋರಾಟಗಾರರಾಗಿ ಹೀಗೆ ಮಾಡಬಾರದು ಎಂದು ಬ್ಯಾಲೆನ್ಸ್ ಮಾಡಿದ್ದಾರೆ. ಕೇಂದ್ರ ಸಚಿವ ವಾಗ್ದಾಳಿ ಬೆನ್ನಲ್ಲೇ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ತಮ್ಮದೇ ಪಕ್ಷದ ಶಾಸಕನ ವಿರುದ್ಧ ವಾಗ್ದಾಳಿ ನಡೆಸಿದ್ರು. ದೊರೆಸ್ವಾಮಿ ಬಗ್ಗೆ ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ ವಿಚಾರ ಆದರೂ ದೊರೆಸ್ವಾಮಿ ಹಿರಿಯರು. ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಹಿರಿಯರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಟಾಂಗ್ ಕೊಟ್ಟಿದ್ದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ನೀಡಿರುವ ಹೇಳಿಕೆ ಬಿಜೆಪಿಯಲ್ಲಿ ಎರಡು ಬಣಗಳನ್ನು ಸೃಷ್ಟಿ ಮಾಡಿಬಿಡ್ತಾ..? ಎನ್ನುವ ಅನುಮಾನ ಮೂಡುತ್ತದೆ. ಇನ್ನೊಂದು ಕಡೆ ಬಿಜೆಪಿ ಅಧ್ಯಕ್ಷರು ತಮ್ಮದೇ ಪಕ್ಷದ ಶಾಸಕನಿಗೆ ಈ ರೀತಿ ಮಾತನಾಡಬೇಡಿ ಎಂದು ಎಚ್ಚರಿಕೆ ಕೊಡುವುದು ಅಥವಾ ನೋಟಿಸ್ ಕೊಟ್ಟು ಸ್ಪಷ್ಟನೆ ಕೇಳಬೇಕಿತ್ತು. ಆದರೆ ನಮ್ಮ ಪಕ್ಷಕ್ಕೂ ಯತ್ನಾಳ್ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಮೂಲಕ ಕಣ್ನೋರೆಸುವ ತಂತ್ರವನ್ನು ಮಾಡಿದ್ದು ಯಾಕೆ ಎನ್ನುವ ಅನುಮಾನ ಮೂಡುತ್ತಿದೆ. ಜೊತೆಗೆ ಕೆಲವರು ಸಪೋರ್ಟ್ ಮಾಡಿದ್ರೆ, ಕೆಲವರು ವಿರೋಧ ಮಾಡುತ್ತಿದ್ದಾರೆ. ಇದರ ಅರ್ಥ ಏನು ಎನ್ನುವುದನ್ನು ಸ್ವಲ್ಪ ಚಿಂತನೆ ಮಾಡಿದ್ರೆ ಉತ್ತರ ಸುಲಭವಾಗಿ ಸಿಗುತ್ತದೆ. ಅದೇನೆಂದ್ರೆ, ಬಿಜೆಪಿ ಶಾಸಕರನ್ನು ಈ ರೀತಿ ಮಾತನಾಡಲು ಸೂಚನೆ ಕೊಡುತ್ತಿರುವುದು ಸಂಘ ಪರಿವಾರ. ಆರ್‌ಎಸ್‌ಎಸ್ ಸೂಚನೆಯಂತೆ ಈ ರೀತಿ ಮಾತನಾಡುತ್ತಿದ್ದಾರೆ ಅಷ್ಟೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಬಿಜೆಪಿ ಪಕ್ಷಕ್ಕೂ ಬಸನಗೌಡ ಪಾಟೀಲ್ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ಅಂತರ ಕಾಯ್ದುಕೊಂಡರೆ, ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡು ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ವಿವಾದದಿಂದ ಪಕ್ಷ ದೂರ ಉಳಿದಂತೂ ಆಗುತ್ತೆ. ಈ ಮೂಲಕ ಪಕ್ಷದ ಮಾತೃ ಸಂಸ್ಥೆ ಆರ್ಎಸ್ಎಸ್ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳನ್ನು ತಡೆಯಬಹುದು ಎನ್ನುವ ಆಲೋಚನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಯತ್ನಾಳ್ ಮಾತು ವೈಯಕ್ತಿಕ ಎಂದಿದ್ದಾರೆ ಎನ್ನಲಾಗ್ತಿದೆ. ಮಾರ್ಚ್ ಎರಡರಿಂದ ಪುನರಾರಂಭ ಆಗಲಿರುವ ವಿಧಾನಸಭಾ ಸದನದಲ್ಲಿ ಬೆಂಕಿಯ ಕೆಂಡಗಳು ಉಗುಳುವುದು ಖಂಡಿತ ಎನ್ನಬಹುದು.