ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಬಿ.ಎಸ್ ಯಡಿಯೂರಪ್ಪ ಎಲ್ಲಾ ಅಡೆತಡೆಗಳನ್ನೂ ದಾಟಿಕೊಂಡು, ಬಂದ ಎಲ್ಲಾ ನೋವುಗಳನ್ನು ನುಂಗಿಕೊಂಡು ಮುಖ್ಯಮಂತ್ರಿ ಚೇರ್ ಮೇಲೆ ಗಟ್ಟಿಯಾಗಿ ಕುಳಿತಿದ್ದಾರೆ. ಈಗಾಗಲೇ ಸಿಎಂ ಯಡಿಯೂರಪ್ಪ ಅವರು 77 ವರ್ಷದ ಹೊಸ್ತಿಲಲ್ಲಿ ನಿಂತಿದ್ದಾರೆ. 15 ವರ್ಷಗಳ ಹಿಂದಿನ ವೇಗ ಯಡಿಯೂರಪ್ಪ ಬಳಿ ಇಲ್ಲ ಎನ್ನುವುದು ಗೊತ್ತಿರುವ ಸಂಗತಿ. ಅದೇ ಕಾರಣಕ್ಕೆ ಯಡಿಯೂರಪ್ಪ, ತನ್ನ ಕೆಲಸ ಕಾರ್ಯಕ್ರಮಗಳ ಉಸ್ತುವಾರಿಯಾಗಿ ವಿಜಯೇಂದ್ರ ಅವರನ್ನು ಅವಲಂಭಿಸಿದ್ದಾರೆ. ಪ್ರಮುಖ ಕೆಲಸಗಳಲ್ಲಿ ಸಿಎಂ ಯಡಿಯೂರಪ್ಪ ಜೊತೆ ನಿಲ್ಲುತ್ತಾರೆ. ಇದೇ ಕಾರಣಕ್ಕೆ ಬಿ.ವೈ ವಿಜಯೇಂದ್ರ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ವಿಜಯೇಂದ್ರ ಹಾಗು ಸೋಮಣ್ಣ ನಡುವಿನ ವಾಕ್ಸಮರ ಮತ್ತೊಂದು ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳು ಎದುರಾಗಿವೆ.
ವಿಜಯೇಂದ್ರ ಹಾಗು ಸೋಮಣ್ಣ ಮಾತ್ಸಮರ ನಡೆದಿದ್ದು ಎಲ್ಲಿ?
ಎರಡು ದಿನಗಳ ಹಿಂದೆ, ಅಂದರೆ ಭಾನವಾರ ವಿಶ್ವಶಾಂತಿ ಹಾಗೂ ನೆಮ್ಮದಿಗಾಗಿ ಬಸವಮಂಟಪದ ಮರು ಕಲ್ಪನೆ ಸೃಷ್ಟಿಸಲಾಗಿತ್ತು. ಬೆಂಗಳೂರು ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ಪ್ರಮಥರ ಗಣಮೇಳ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಗಣಮೇಳದಲ್ಲಿ 21ನೇ ಶತಮಾನದಲ್ಲಿ 12ನೇ ಶತಮಾನದ ಬಸವಣ್ಣನ ನೆನಪು ಮಾಡಿಕೊಳ್ಳುವುದಕ್ಕಾಗಿ ಸಮಾವೇಶ ನಡೆಸಲಾಗಿತ್ತು. ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಿಜಯೇಂದ್ರ ವಹಿಸಿಕೊಂಡಿದ್ದರು. ಸ್ವಾಗತ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯಕ್ರಮ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸಿದ್ರು. ಈ ಕಾರ್ಯಕ್ರಮ ಪಕ್ಷಾತೀತವಾಗಿ ನಡೆದ್ದರಿಂದ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಸಿದ್ದರಾಮಯ್ಯ ಸಮಾವೇಶಕ್ಕೆ ಕರೆತರುವಲ್ಲಿ ವಿಜಯೇಂದ್ರ ವಿಶೇಷ ಆಸಕ್ತಿ ವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡುವ ಪ್ರಸಂಗ ಎದುರಾಯ್ತು.
ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷ ಡಾ. ಶಿವಮೂರ್ತಿ ಮುರುಘಾಶರಣರು ನೇತೃತ್ವದ ಈ ಗಣಮೇಳದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಕುಳಿತಿದ್ದ ವಿಜಯೇಂದ್ರ, ಮಾಜಿ ಸಿಎಂ ಜೊತೆ ಹಸನ್ಮುಖಿಯಾಗಿ ಉಭಯ ಕುಷಲೋಪರಿ ವಿಚಾರಿಸುತ್ತಿದ್ದರು. ಆದರೆ ಇದೇ ವೇಳೆ ಸಿದ್ದರಾಮಯ್ಯ ಅವರನ್ನು ಟೀಕಿಸುವ ಕೆಲಸವೂ ನಡೆದಿತ್ತು. ಗಣಮೇಳ ಉದ್ದೇಶಿಸಿ ಮಾತನಾಡಿದ್ದ ವಿಜಯೇಂದ್ರ, ಅಂದು ಅಣ್ಣ ಬಸವಣ್ಣನರವ ನೇತೃತ್ವದಲ್ಲಿ ಗಣಮೇಳ ನಡೆದಿತ್ತು. ಇಂದು ಮುರುಘಾ ಶರಣರ ನೇತೃತ್ವದಲ್ಲಿ ಗಣಮೇಳ ನಡೆಯುತ್ತಿದೆ. ಅಂದು ಬಿಜ್ಜಳರ ಆಡಳಿತವಿದ್ದಾಗ ಬಸವಣ್ಣಗಣ ಮೇಳ ನಡೆಸಿದ್ದರು. ಇಂದು ಯಡಿಯೂರಪ್ಪವರ ಅಡಳಿತದಲ್ಲಿ ಗಣಮೇಳ ನಡೆಯುತ್ತಿರೋದು ವಿಶೇಷ ಎಂದು ತಂದೆಯ ಆಡಳಿತದ ಬೆನ್ನು ತಟ್ಟಿಕೊಂಡಿದ್ರು. ಆದರೆ ಸಚಿವ ಸೋಮಣ್ಣ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೇರಾನೇರ ಟೀಕೆ ವ್ಯಕ್ತಪಡಿಸಿದರು.
ಸೋಮಣ್ಣ ಟೀಕೆಗೆ ಜನಾಕ್ರೋಶ, ವಿಜಯೇಂದ್ರ ಕಕ್ಕಾಬಿಕ್ಕಿ!
ಗಣಮೇಳದಲ್ಲಿ ಮಾತನಾಡಿದ ಸಚಿವ ವಿ. ಸೋಮಣ್ಣ, ಮುರುಘಾ ಶರಣರು ಮತ್ತೊಮ್ಮೆ ಬಸವಣ್ಣನವರ ತತ್ವ ಸಾರುವಂತ ಕೆಲಸ ಮಾಡುತ್ತಿದ್ದಾರೆ. ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಬಸವಾದಿ ಶರಣರು. ಸಿದ್ದರಾಮಯ್ಯನವರ ಜೊತೆ ಇದ್ದು ಕೆಲಸ ಮಾಡಿದವನು ನಾನು. ಸಿದ್ದರಾಮಯ್ಯನವ ಕೊಡುಗೆ ರಾಜ್ಯದಲ್ಲಿ ಮಹತ್ವದ್ದು ಎಂದು ಹೊಗಳುವ ಮೂಲಕ ಶುರುವಾದ ಮಾತು ಟೀಕಿಸಲು ಶುರು ಮಾಡಿತು. ಸಿದ್ದರಾಮಯ್ಯ ಎಲ್ಲವನ್ನೂ ಮಾಡಿದರು ಆದರೆ ಸಮಾಜವನ್ನ ಸ್ವಲ್ಪ ಕೆಣಿಕಿದರು. ಕೆಣಕಿದ ಕಾರಣಕ್ಕೆ ಯಡಿಯೂರಪ್ಪನವರಿಗೆ ಅಧಿಕಾರ ಸಿಕ್ತು ಎನ್ನುತ್ತಿದ್ದ ಹಾಗೆ ನೆರದಿದ್ದ ಜನಸಮುದಾಯ ಲೇ ಸೋಮಣ್ಣ ಇದು ರಾಜಕೀಯ ಸಭೆಯಲ್ಲ ಎಂದು ಕೂಗಿದರು. ಇದ್ಯಾವುದನ್ನೂ ಕೇಳಿಸಿಕೊಳ್ಳದಂತೆ ನಟಿಸಿದ ಸಚಿವ ಸೋಮಣ್ಣ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದ ಸಿದ್ದರಾಮಯ್ಯ ಅವರನ್ನು ಕೆಣಕಿದ್ರು. ಇದೇ ಸಮಯದಲ್ಲಿ ಸಿದ್ದರಾಮಯ್ಯ ಜೊತೆ ವೇದಿಕೆಯಲ್ಲಿ ಕುಳಿತಿದ್ದ ವಿಜಯೇಂದ್ರ ಆಕ್ರೋಶಗೊಂಡಿದ್ದರು.
ಸಿದ್ದರಾಮಯ್ಯ ಬಗ್ಗೆ ಸೋಮಣ್ಣ ಟೀಕಿಸಿದ್ದನ್ನು ಖಂಡಿಸಿದ ವಿಜಯೇಂದ್ರ, ಈ ಸಭೆಯಲ್ಲಿ ಆ ವಿಚಾರ ಪ್ರಸ್ತಾಪದ ಅವಶ್ಯಕತೆ ಏನಿತ್ತು ಎಂದು ಸೋಮಣ್ಣರನ್ನು ಪ್ರಶ್ನಿಸಿದರು ಎನ್ನಲಾಗಿದೆ. ಇದರಿಂದ ಕುಪಿತರಾದ ಸೋಮಣ್ಣ, ನಿನ್ನಿಂದ ನಾನು ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ನೇರವಾಗಿಯೇ ಮುಖಕ್ಕೆ ಹೊಡೆದಂತೆ ಹೇಳಿ ಸಮಾವೇಶದ ವೇದಿಕೆ ಬಿಟ್ಟು ತೆರಳಿದರು ಎನ್ನುವ ಮಾಹಿತಿ ಸಿಕ್ಕಿದೆ. ಆದರೆ ಈ ಗಲಾಟೆ ಬಗ್ಗೆ ಯಾರೊಬ್ಬರೂ ಬಹಿರಂಗವಾಗಿ ಹಂಚಿಕೊಂಡಿಲ್ಲ. ಎಲ್ಲವೂ ಗುಪ್ತ್ ಗುಪ್ತ್. ಅನಂತ ಕುಮಾರ್ ಬಣದಲ್ಲಿದ್ದ ಸಚಿವ ವಿ. ಸೋಮಣ್ಣ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವುದು ಅನುಮಾನ ಎಂದಾಗ, ನನ್ನ ಟಿಕೆಟ್ ಫೈನಲ್ ಮಾಡುವುದು ನೀನಲ್ಲ, ಅನಂತ ಕುಮಾರ್ ಎಂದು ಬಿ.ಎಸ್ ಯಡಿಯೂರಪ್ಪಗೆ ಬಿಸಿ ಮುಟ್ಟಿಸಿ ಹೊರಬಂದಿದ್ದರು. ಇದೀಗ ಭಾಷಣ ಖಂಡಿಸಿದ ವಿಜಯೇಂದ್ರ ನಡುವೆ ಮಾತ್ಸಮರ ನಡೆಸಿದ್ದಾರೆ. ಈ ಅಸಮಾಧಾನ ಯಾವಾಗ ಸ್ಫೋಟವಾಗುತ್ತೆ ಕಾದು ನೋಡ್ಬೇಕು.