ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಮೈತ್ರಿ ಸರ್ಕಾರದ ಮಾತುಕತೆ ನಡೆದಿದ್ದ ಸೂಕ್ಷ್ಮ ಸನ್ನಿವೇಶದಲ್ಲಿ ಈ ಭೇಟಿ ನಡೆಯಿತು. ಅದು ತಪ್ಪು ಸಂದೇಶಗಳನ್ನು ಕಳಿಸುವುದೆಂದು ನಿಮಗೆ ಅನಿಸಲಿಲ್ಲವೇ?
ಯಾರಾದರೂ ಹಾಗೆ ಯೋಚಿಸಿದರೆ ಅದು ಅವರ ತಲೆನೋವೇ ವಿನಾ ನನ್ನದಲ್ಲ. ಪ್ರಧಾನಿಯವರೊಂದಿಗೆ ನನ್ನ ವ್ಯಕ್ತಿಗತ ಸಂಬಂಧ ಚೆನ್ನಾಗಿದೆ. ನಾನು ಕೇಂದ್ರ ಸರ್ಕಾರದಲ್ಲಿದ್ದಾಗ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಆಗ ಅವರ ಕುರಿತು ಕೇಂದ್ರ ಸರ್ಕಾರಕ್ಕೆ ಅಸಂತೋಷವಿತ್ತು. ಕೇಂದ್ರ ಕೃಷಿ ಮಂತ್ರಿಯಾಗಿ ನಾನು ಹಲವಾರು ಬಾರಿ ಗುಜರಾತಿಗೆ ಭೇಟಿ ನೀಡಿದ್ದು ಕಾಂಗ್ರೆಸ್ಸಿನ ಎಲ್ಲ ಸಚಿವರಿಗೂ ಅಸಮಾಧಾನ ಉಂಟು ಮಾಡಿತ್ತು. ಆದರೆ ಸಚಿವನಾಗಿ ನನ್ನ ಕರ್ತವ್ಯವನ್ನು ನಿಭಾಯಿಸಿದೆ ಅಷ್ಟೇ. ತಾವು ಪ್ರಧಾನಿಯಾದ ನಂತರ ಮೋದಿಯವರು ನನ್ನ ಕ್ಷೇತ್ರದಲ್ಲಿ ಮಾಡಿರುವ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ನೋಡಲು ಬರುವುದಾಗಿ ಹೇಳಿ ಬಂದರು. ಒಳ್ಳೆಯ ಮಾತಾಡಿದರು. ಆದರೆ ಚುನಾವಣೆ ಸಂದರ್ಭದಲ್ಲಿ ಬಂದು ನನ್ನ ಮೇಲೆ ದಾಳಿ ನಡೆಸಿದರು. ತಮ್ಮ ಪಕ್ಷದ ನಾಯಕರಾಗಿ ಅವರು ದಾಳಿ ಮಾಡಿದ್ದನ್ನು ನಾನು ತಪ್ಪು ತಿಳಿದುಕೊಳ್ಳಲಿಲ್ಲ. ಪ್ರಧಾನಿಯಾಗಿ ಮತ್ತು ಆಡಳಿತಗಾರನಾಗಿ ಒಳ್ಳೆಯದನ್ನು ಗುರುತಿಸಿ ಮೆಚ್ಚಲು ಅವರು ಹಿಂಜರಿಯುವುದಿಲ್ಲ. ಈ ಎರಡರ ನಡುವಣ ವ್ಯತ್ಯಾಸವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.
ನೀವು ಪ್ರಧಾನಿಯವರನ್ನು ಭೇಟಿ ಮಾಡಿದ ಕುರಿತು ಚರ್ಚೆಯಾಗಿದೆ?
ಭೇಟಿ ಮಾಡಿದೆ ಹೌದು. ಅದರಲ್ಲೇನು ತಪ್ಪಿದೆ? ನಾನು ಪ್ರಧಾನಿಯನ್ನು ಭೇಟಿಯಾಗಿದ್ದ ಉದ್ದೇಶ, ಅವರನ್ನು ಅಂತಾರಾಷ್ಟ್ರೀಯ ಸಕ್ಕರೆ ಸಮ್ಮೇಳನಕ್ಕೆ ಆಹ್ವಾನಿಸುವುದಷ್ಟೇ ಆಗಿತ್ತು. ಆದರೆ ಭೇಟಿಯಲ್ಲಿ ಇತರೆ ಮಾತುಕತೆಗಳೂ ತೂರಿ ಬರುತ್ತವೆ. ಕಾಂಗ್ರೆಸ್-ಶಿವಸೇನೆಯ ಜೊತೆ ಸರ್ಕಾರ ರಚಿಸುವ ಕುರಿತು ಇನ್ನೊಮ್ಮೆ ಆಲೋಚಿಸುವುದು ಸಾಧ್ಯವೇ ಎಂದು ಅವರು ಕೇಳಿದ್ದು ಹೌದು. ಆದರೆ ಕಾಂಗ್ರೆಸ್-ಸೇನೆಯ ಜೊತೆ ಸರ್ಕಾರ ರಚಿಸುವುದು ನನ್ನ ಸಹೋದ್ಯೋಗಿಗಳು ಕೈಗೊಂಡ ಪ್ರಜ್ಞಾಪೂರ್ವಕ ನಿರ್ಧಾರ ಎಂದು ಅವರಿಗೆ ತಿಳಿಸಿದೆ. ಅವರ ಆಹ್ವಾನವನ್ನು ತಿರಸ್ಕರಿಸಿದೆ ಎಂಬುದು ದುರಹಂಕಾರದ ಮಾತಾಗುತ್ತದೆ. ಅದು ನನ್ನ ಚಾಳಿಯಲ್ಲ. ಭಾರತದ ಪ್ರಧಾನಿಯನ್ನು ನಾನ್ಯಾಕೆ ತಿರಸ್ಕರಿಸಲಿ? ಅಂತಿಮವಾಗಿ ಪ್ರಧಾನಿ ಎಂಬ ಪದವಿಗೆ ಗೌರವ ನೀಡಬೇಕಾಗುತ್ತದೆ.
ಅವರೇನಂದರು?
ಬಿಜೆಪಿ ಜೊತೆ ಸೇರಿ ಕೆಲಸ ಮಾಡಬೇಕೆಂಬುದು ಅವರ ಸಲಹೆಯಾಗಿತ್ತು… ಸಾಧ್ಯವಿಲ್ಲ ಎಂದಾಗ ಮತ್ತೊಮ್ಮೆ ಆಲೋಚಿಸಿ ಎಂದರು. ನಾನು ಮತ್ತು ನನ್ನ ಸಹೋದ್ಯೋಗಿಗಳು ನಿರ್ಧಾರ ಮಾಡಿಯಾಗಿದೆ ಎಂದೆ.
ನಿಮ್ಮ ಮಗಳು ಸುಪ್ರಿಯಾ ಸುಳೆಯವರಿಗೆ ಕೇಂದ್ರ ಸಚಿವ ಸ್ಥಾನ ಕೊಡುತ್ತೇನೆ ಎಂದರೇ?
ಇಲ್ಲ, ಇಲ್ಲ. ಆಕೆ ಒಳ್ಳೆಯ ಸಂಸದೀಯ ಪಟುವೆಂದೂ, ನಿಮ್ಮೊಂದಿಗೆ ಆಕೆಯ ಪ್ರತಿಭೆ ವ್ಯರ್ಥವಾಗಬಾರದೆಂದೂ ಅವರು ಕಳೆದ ಐದು ವರ್ಷಗಳಿಂದ ಲಘು ಹಾಸ್ಯದ ಧಾಟಿಯಲ್ಲಿ ಹೇಳುತ್ತ ಬಂದಿದ್ದಾರೆ. ಆ ದಿನವೂ ಅದನ್ನೇ ಹೇಳಿದರು. ಆಕೆ ಯಾಕೆ ಕಾಲಹರಣ ಮಾಡುತ್ತಿದ್ದಾಳೆ, ಆಕೆಯ ಸೇವೆಯನ್ನು ರಾಷ್ಟ್ರಮಟ್ಟದಲ್ಲಿ ಉಪಯೋಗಿಸಿಕೊಳ್ಳಬಹುದು ಎಂದರು.
ಆರ್ಥಿಕ ವಲಯದಲ್ಲಿ ತಪ್ಪುಗಳಾಗಿದ್ದರೂ ಮೋದಿ ವರ್ಚಸ್ಸು ಮುಂದುವರೆದಿರುವ ಕಾರಣ ಏನಿದ್ದೀತು?
ಅವರು ತಮ್ಮ ಪಕ್ಷದ ಸರ್ವೋಚ್ಚ ನಾಯಕ. ಸರ್ಕಾರದ ಮುಖ್ಯಸ್ಥ. ಅವರ ಕೆಲವು ವಿಚಾರಗಳನ್ನು ನಾವು ಒಪ್ಪುವುದಿಲ್ಲ. ಟೀಕಿಸುತ್ತೇವೆ ಕೂಡ. ಆದರೆ ಹಲವಾರು ಅಪ್ರಿಯ ನಿರ್ಧಾರಗಳ ನಂತರವೂ ಜನ ಯಾಕೆ ಅವರ ವಿರುದ್ಧ ತಿರುಗಿಲ್ಲ? ಯಾಕೆಂದರೆ ಜನ ಪರ್ಯಾಯವನ್ನು ನಿರೀಕ್ಷಿಸುತ್ತಿದ್ದಾರೆ. ಪರ್ಯಾಯವೊಂದನ್ನು ಕೊಡುತ್ತೇವೆ ಎಂದು ಜನರಿಗೆ ಭರವಸೆ ನೀಡುವಲ್ಲಿ ಯಾರಾದರೂ ಯಶಸ್ಸು ಕಂಡಿದ್ದಾರೆಯೇ?
ಹಾಗಾದರೆ ತಪ್ಪು ಯಾರದು?
ಪ್ರತಿಪಕ್ಷಗಳಲ್ಲಿರುವ ನಮ್ಮೆಲ್ಲರದೂ ತಪ್ಪೇ. ಎ ಎಂಬ ಮನುಷ್ಯ ತಪ್ಪಿತಸ್ಥನೆಂದು ಜನರಿಗೆ ಮನವರಿಕೆ ಮಾಡಿಸಿ, ಬಿ ಎಂಬುವನಾದ ನಾನು ಯಶಸ್ವೀ ಬದಲಿ ವ್ಯವಸ್ಥೆಯನ್ನು ನೀಡಬಲ್ಲೆ, ನನಗೆ ಜನ ಸಮೂಹಗಳ ಬೆಂಬಲ ಇದೆ ಎಂಬ ವಿಶ್ವಾಸವನ್ನು ಯಾರಾದರೂ ಜನರಲ್ಲಿ ಮೂಡಿಸಿದ್ದಾರೆಯೇ? ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು, ಹೋರಾಡಬೇಕು. ಆ ದಿಸೆಯಲ್ಲಿ ಪ್ರಯತ್ನ ಜರುಗಿದ್ದಲ್ಲಿ, ಅದರೊಂದಿಗೆ ಸೇರಿಕೊಳ್ಳುವುದು ನನ್ನ ಕರ್ತವ್ಯ.
ಪಕ್ಷ ಮತ್ತು ಸರ್ಕಾರದಲ್ಲಿ ಅಜಿತ್ ಪವಾರ್ ಪಾತ್ರವೇನು? ನಿಮ್ಮ ನಂತರ ಪಕ್ಷದ ನಾಯಕತ್ವ ಅವರದು ಎನ್ನುವ ಮಾತುಗಳಿದ್ದವು. ಇದೀಗ ನಿಮ್ಮ ಮಗಳು ಸುಪ್ರಿಯಾ ನಾಯಕತ್ವಕ್ಕೆ ಅಜಿತ್ ಪ್ರತಿಸ್ಫರ್ಧಿ ಎನ್ನಲಾಗುತ್ತಿದೆ?
ಸರ್ಕಾರದಲ್ಲಿ ಅಜಿತ್ ಪಾತ್ರ ಏನೆಂದು ಹೇಳಲಾರೆ. ಪಕ್ಷದಲ್ಲಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಾಯಕತ್ವ ಯಾರದೆಂದು ಅಂತಿಮವಾಗಿ ನಿರ್ಧರಿಸುವವರು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು. ಅಂದ ಹಾಗೆ ನನ್ನ ಆರೋಗ್ಯ ಇನ್ನೂ ಚೆನ್ನಾಗಿಯೇ ಇದೆ (ನಗು). ಸುಪ್ರಿಯಾ ಆಲೋಚನೆ ಬೇರೆಯೇ ಇದೆ, ಒಳ್ಳೆಯ ಸಂಸದೀಯ ಪಟುವಾಗಬೇಕು, ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಬೇಕು ಎಂದು.