
ಮಂಡ್ಯ ಗೌಡ್ತಿ ಸುಮಲತಾ ಅಂಬರೀಶ್ ಬಿಜೆಪಿ ಸೇರಿದ್ದಾರೆ.
ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಕಮಲ ಪಕ್ಷದ ಕೈ ಹಿಡಿದಿದ್ದು , ಕಳೆದ 1 ವರ್ಷದಿಂದ ಸುಮಲತಾ ರಾಜಕೀಯ ನಡೆ ಮೇಲೆ ಇದ್ದ ಎಲ್ಲಾ ಕುತೂಹಲಕ್ಕೂ ತೆರೆಬಿದ್ದಿದೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ನಾಯಕರು ಸುಮಲತಾ ಅವರನ್ನು ಸ್ವಾಗತಿಸಿದರು.
ಬಿಜೆಪಿ ಸೇರಿದ ಬಳಿಕ ಮಾತನಾಡಿದ ಸುಮಲತಾ ಅಂಬರೀಶ್, ಇಂದಿನ ದಿನವು ನನ್ನ ರಾಜಕೀಯ ಜೀವನದಲ್ಲಿ ಮಹತ್ವ ಪಡೆದಿರುವ ಸುದಿನವಾಗಿದೆ. ಐದು ವರ್ಷಗಳ ಹಿಂದೆ ಮಂಡ್ಯ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಿಕ್ಕಿತ್ತು. ಆ ಚುನಾವಣೆ, ಆ ಸಂದರ್ಭವನ್ನು ಎಂದಿಗೂ ಮರೆಯುವುದಿಲ್ಲ. ಮಂಡ್ಯದ ಜನತೆ, ಅಂಬರೀಶ್ ಅಭಿಮಾನಿಗಳ ಬಳಗವು ನನಗೆ ಬೆನ್ನೆಲುಬಾಗಿ ನಿಂತಿದೆ. 5 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ನನಗೆ ಬೆಂಬಲ ನೀಡಿದ್ದರು. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ. ಈಗ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂಬ ದೃಷ್ಟಿಯಿಂದ ಬಿಜೆಪಿ ಸೇರಿದ್ದೇನೆ. ಮುಂದಿನ ದಿನಗಳಲ್ಲೂ ಜನರ ಬೆಂಬಲ ಹೀಗೆಯೇ ಇರಲಿ ಎಂದು ಹೇಳಿದರು.






