ರಾಷ್ಟ್ರೀಯ ಕಾಂಗ್ರೆಸ್. ಒಂದು ಕಾಲದಲ್ಲಿ ನಿರಂಕುಶಮತಿಯಾಗಿದ್ದು ನಂತರ ಅದೇ ಕಾರಣಕ್ಕೆ ಕಳೆಗುಂದುತ್ತಾ ಬಂದ ಪಕ್ಷ. ಯುಪಿಎ ಸರ್ಕಾರದ ಅವಧಿಯಲ್ಲಿ (2004-2014), ಅದರಲ್ಲೂ ಯುಪಿಎ-2ರ ಅವಧಿಯಲ್ಲಿ (2009-2014) ಕಾಂಗ್ರೆಸ್ ಪೆಟ್ಟು ತಿಂದಷ್ಟು ಯಾವ ಪಕ್ಷವೂ ಪೆಟ್ಟು ತಿಂದಿರಲಿಲ್ಲ. ರಾಷ್ಟವ್ಯಾಪಿ ಕಾಂಗ್ರೆಸ್ ಭವಿಷ್ಯವೇ ಅಂಧಾಕಾರದಲ್ಲಿದ್ದಾಗ ಆ ಪಕ್ಷದಲ್ಲಿ ಬೆಳಕಿನ ಸೆಳೆ ಮೂಡಿಸಿದ್ದು 2013ರ ಕರ್ನಾಟಕದ ವಿಧಾನಸಭೆ ಚುನಾವಣೆ. 2008-13ರ ಮಧ್ಯೆ ಬಿಜೆಪಿ ಸರ್ಕಾರದಲ್ಲಿ ನಡೆದ ಗಣಿ ಹಗರಣ, ಭ್ರಷ್ಟಾಚಾರ, ಬಿಜೆಪಿ ಒಡೆದು ಎರಡು ಪಕ್ಷವಾಗಿ ವಿಭಜನೆಯಾಗಿದ್ದರ ಜತೆಗೆ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ನ ನಾಯಕರಾಗಿ ಸಿದ್ದರಾಮಯ್ಯ ಅವರು ನಡೆಸಿದ ಅವಿರತ ಹೋರಾಟ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವಂತಾಯಿತು. ಸಹಜವಾಗಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. ಆಗ ಇಡೀ ಕಾಂಗ್ರೆಸ್ ಅವರ ಜತೆಗೆ ನಿಂತಿತ್ತು.
ಆದರೆ, ಈಗ ಅದೇ ಕಾಂಗ್ರೆಸ್ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ ನಿಂತಿದೆ. ಸಿದ್ದರಾಮಯ್ಯ ಅವರೊಂದಿಗೆ ಮೂಲ ಕಾಂಗ್ರೆಸ್ ನ ಕೆಲವರು ಇದ್ದಾರಾದರೂ ಹಿರಿಯ ನಾಯಕರಾದಿಯಾಗಿ ಬಹುತೇಕರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ನೀಡಬಾರದು ಎಂದು ಹೈಕಮಾಂಡ್ ಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ಮೂಲ ಕಾಂಗ್ರೆಸ್ ವರ್ಸಸ್ ಸಿದ್ದರಾಮಯ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಇಷ್ಟೇ ಅಲ್ಲ, ಕಾಂಗ್ರೆಸ್ ರಾಜ್ಯ ಉಸ್ತುವಾರಿಯಾಗಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಬಗ್ಗೆಯೂ ಕಾಂಗ್ರೆಸ್ ನಲ್ಲಿ ಅಪಸ್ವರ ಉಂಟಾಗಿದೆ. ವೇಣುಗೋಪಾಲ್ ಅವರು ಸಿದ್ದರಾಮಯ್ಯ ಪರ ಒಲವು ಹೊಂದಿದ್ದಾರೆ ಎಂಬ ಆರೋಪ ಬಂದಿದೆ. ಸಮಸ್ಯೆ ಬಗೆಹರಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಸಮರ್ಥರಲ್ಲ ಎಂಬ ಸಂದೇಶವನ್ನು ಎಐಸಿಸಿಗೆ ಮುಟ್ಟಿಸಿದ್ದಾರೆ. ಇದರ ಪರಿಣಾಮ ದೆಹಲಿಯಲ್ಲೇ ಕುಳಿತು ರಾಜ್ಯಗಳಲ್ಲಿ ನಾಯಕರನ್ನು ಆಯ್ಕೆ ಮಾಡುತ್ತಿದ್ದ ಕಾಂಗ್ರೆಸ್ ವರಿಷ್ಠರು, ಎಲ್ಲರನ್ನೂ ಸಮಾಧಾನಪಡಿಸಿ ಪಕ್ಷ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ವೇಣುಗೋಪಾಲ್ ಅವರನ್ನು ಬಿಟ್ಟು ಹಿಂದೆ ರಾಜ್ಯ ಉಸ್ತುವಾರಿಯಾಗಿದ್ದ ಮಧುಸೂಧನ್ ಮಿಸ್ತ್ರಿ ಅವರಿಗೆ ಈ ಜವಾಬ್ದಾರಿ ವಹಿಸಿದೆ. ಈಗಾಗಲೇ ಅವರು ರಾಜ್ಯಕ್ಕೆ ಬಂದು ಶಾಸಕಾಂಗ ಪಕ್ಷದ ನಾಯಕ, ಪ್ರತಿಪಕ್ಷ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಶಾಸಕರು ಮತ್ತು ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಸ್ವಯಂಕೃತಾಪರಾಧಕ್ಕೆ ಬೆಲೆ ತೆರುವರೇ ಸಿದ್ದರಾಮಯ್ಯ
ಜೆಡಿಎಸ್ ಪಕ್ಷ ತಮ್ಮನ್ನು ಮುಖ್ಯಮಂತ್ರಿ ಮಾಡಲಿಲ್ಲ (2004-2006) ಎಂಬ ಕಾರಣಕ್ಕೆ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಸಂಘಟನೆ ರಚಿಸಿ ಆ ಮೂಲಕ ಮಾಸ್ ಲೀಡರ್, ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯ ಅದೇ ಶಕ್ತಿಯೊಂದಿಗೆ ಕಾಂಗ್ರೆಸ್ ಸೇರಿದರು. ಅಲ್ಲಿ ಪ್ರತಿಪಕ್ಷ ನಾಯಕರಾಗಿ ಹೋರಾಟದ ಮೂಲಕ ಕಳೆಗುಂದುತ್ತಿದ್ದ ಕಾಂಗ್ರೆಸ್ಸಿಗೂ ಹೆಚ್ಚಿನ ಶಕ್ತಿ ನೀಡಿ ಮುಖ್ಯಮಂತ್ರಿಯಾದರು. ಐದು ವರ್ಷ ಪೂರ್ತಿ ಅಧಿಕಾರ ಅನುಭವಿಸಿದರು. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಅಲ್ಪಸಂಖ್ಯಾತರ ಓಲೈಕೆ ಮತ್ತು ವೀರಶೈವ ಲಿಂಗಾಯತ ಧರ್ಮವನ್ನು ವಿಭಜಿಸುವ ಕೆಲಸಕ್ಕೆ ಕೈಹಾಕದೇ ಇದ್ದಿದ್ದರೆ ಎರಡನೇ ಬಾರಿಯೂ ಮುಖ್ಯಮಂತ್ರಿಯಾಗಿ ಮುಂದುವರಿಯುವ ಅವಕಾಶವಿತ್ತು. ಆದರೆ, ಅಧಿಕಾರದಲ್ಲಿದ್ದಾಗ ಹಿತ್ತಾಳೆ ಕಿವಿ ಮಾಡಿಕೊಂಡು ಬೇರೆಯವರು ಹೇಳಿದ್ದಕ್ಕೆಲ್ಲಾ ಅಸ್ತು ಎನ್ನುತ್ತಿದ್ದ ಸಿದ್ದರಾಮಯ್ಯ ಆ ಕಾರಣಕ್ಕಾಗಿಯೇ ತಪ್ಪು ಹೆಜ್ಜೆಗಳನ್ನಿಟ್ಟು ಅಧಿಕಾರ ಕಳೆದುಕೊಳ್ಳುವಂತಾಯಿತು.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಹೋಗಿ ಬಿಜೆಪಿ ಮೊದಲ ಸ್ಥಾನಕ್ಕೆ ಬಂತು. ಈ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ಮೈತ್ರಿ ಸರ್ಕಾರ ರಚಿಸಬೇಕಾಗಿ ಬಂತು. ಇದಕ್ಕೆ ಸಹಮತ ಇಲ್ಲದೇ ಇದ್ದರೂ ಸಿದ್ದರಾಮಯ್ಯ ವರಿಷ್ಠರ ಮಾತಿಗೆ ಕಟ್ಟುಬಿದ್ದು ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲು ಒಪ್ಪಿಕೊಂಡರು. ಮೈತ್ರಿ ಸರ್ಕಾರ ರಚನೆಯಾದ ಬಳಿಕ ಎಲ್ಲವೂ ಸರಿಹೋಗುತ್ತಿದೆ ಎಂಬ ಲಕ್ಷಣ ಕಾಣಿಸಿತಾದರೂ ಅಷ್ಟರಲ್ಲೇ ಸರ್ಕಾರದ ಬಗ್ಗೆ ಕಾಂಗ್ರೆಸ್ ನಲ್ಲಿ ಅಪಸ್ವರ ಉಂಟಾಯಿತು. ಕಾಕತಾಳೀಯವೆಂದರೆ ಈ ಅಪಸ್ವರಕ್ಕೆ ಕಾರಣರಾದವರೆಲ್ಲರೂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದವರು. ಸುಮಾರು 14 ತಿಂಗಳು ಅಲುಗಾಡುತ್ತಾ ಬಂದ ಮೈತ್ರಿ ಸರ್ಕಾರ ಕಾಂಗ್ರೆಸ್ ನ 14 ಸೇರಿದಂತೆ 17 ಶಾಸಕರ ರಾಜೀನಾಮೆಯೊಂದಿಗೆ ಬಿದ್ದುಹೋಯಿತು. ಮೈತ್ರಿ ಸರ್ಕಾರ ಉರುಳಲು ಕಾರಣರಾದ ಕಾಂಗ್ರೆಸ್ ನ 14 ಶಾಸಕರು ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದವರು. ಇಲ್ಲಿ ಪರಿಸ್ಥಿತಿ ಕೈಮೀರುವ ಹಂತಕ್ಕೆ ಬಂದರೆ ತಮ್ಮ ಮಾತನ್ನು ಆಪ್ತರು ಕೇಳಬಹುದು ಎಂಬ ಸಿದ್ದರಾಮಯ್ಯ ಅವರ ಉದಾಸೀನವೇ ಅವರಿಗೆ ಮುಳುವಾಯಿತು. ಆರಂಭದಲ್ಲಿ ಸರ್ಕಾರದ ವಿರುದ್ಧ ತಾವು ಯಾರನ್ನು ಎತ್ತಿಕಟ್ಟಿದ್ದರೋ ಅವರೆಲ್ಲರೂ ಅಧಿಕಾರದ ಆಸೆಗೆ ಬಿದ್ದು ಸಿದ್ದರಾಮಯ್ಯ ಅವರ ಮಾತನ್ನು ಕೇಳಲಾರದ ಮಟ್ಟಕ್ಕೆ ದೂರ ಹೋಗಿದ್ದರು. ಸಿದ್ದರಾಮಯ್ಯ ಅವರ ಈ ಸ್ವಯಂಕೃತಾಪರಾಧಗಳೇ ಈಗ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪು ಮಾಡುವ ಪರಿಸ್ಥಿತಿ ತಂದೊಡ್ಡಿದೆ.
ಅವಕಾಶಕ್ಕಾಗಿ ಕಾಯುತ್ತಿದ್ದವರಿಗೆ ತಾವೇ ಅನುಕೂಲ ಮಾಡಿಕೊಟ್ಟರು
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಿದಾಗಿನಿಂದಲೂ ಮೂಲ ಕಾಂಗ್ರೆಸ್ ನ ಒಂದು ಗುಂಪು ಅವರ ವಿರುದ್ಧ ಕತ್ತಿ ಮಸೆಯುತ್ತಲೇ ಇತ್ತು. ಆದರೆ, ಸಿಕ್ಕಿದ ಅಧಿಕಾರ ಮತ್ತು ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಸಿದ್ದರಾಮಯ್ಯ ಮಸೆಯುತ್ತಿರುವ ಈ ಕತ್ತಿಯನ್ನು ಝಳಪಿಸಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಹೈಕಮಾಂಡ್ ಮಟ್ಟದಲ್ಲೂ ತಮ್ಮ ವಿರುದ್ಧ ಇರುವವರ ಮಾತು ನಡೆಯದಂತೆ ನೋಡಿಕೊಂಡರು.
ಆದರೆ, 2018ರ ವಿಧಾನಸಭೆ ಸೋಲಿನ ಬಳಿಕ ಸೋಲಿನ ಹೊಣೆಯನ್ನು ಸಿದ್ದರಾಮಯ್ಯ ಮೇಲೆ ಹಾಕಿದರು. ಸಿದ್ದರಾಮಯ್ಯ ಅವರ ಓಲೈಕೆ ರಾಜಕಾರಣ ಮತ್ತು ವೀರಶೈವ-ಲಿಂಗಾಯತ ಧರ್ಮ ಒಡೆಯಲು ಮುಂದಾದ ಕಾರಣದಿಂದಲೇ ಪಕ್ಷಕ್ಕೆ ಸೋಲುಂಟಾಯಿತು ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟರು. ಹೀಗಾಗಿ ಜೆಡಿಎಸ್ ಜತೆ ಮೈತ್ರಿ ಬೇಡ ಎಂದು ಸಿದ್ದರಾಮಯ್ಯ ಹೇಳಿದರೂ ಅದನ್ನು ಕೇಳದ ಕಾಂಗ್ರೆಸ್ ವರಿಷ್ಠರು ಬಲವಂತವಾಗಿ ಮೈತ್ರಿಗೆ ಅವರನ್ನು ಒಪ್ಪಿಸಿದ್ದರು. ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರ ಆಕ್ಷೇಪ ಲೆಕ್ಕಿಸದೆ ಲೋಕಸಬೆ ಚುನಾವಣೆಯಲ್ಲೂ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ವರಿಷ್ಠರು ತೀರ್ಮಾನಿಸಿದರು. ಅಲ್ಲಿಗೆ ಸಿದ್ದರಾಮಯ್ಯ ಅವರ ಏಕಚಕ್ರಾಧಿಪತ್ಯಕ್ಕೆ ಪೆಟ್ಟು ಬೀಳುವ ಲಕ್ಷಣ ಕಾಣಿಸಿಕೊಳ್ಳತೊಡಗಿತು.
ಆದರೆ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಹೀನಾಯ ಪ್ರದರ್ಶನ ನೀಡಿದ್ದಲ್ಲದೆ, ಜೆಡಿಎಸ್ ಜತೆ ಮೈತ್ರಿ ಕಾರಣದಿಂದ ಕಾಂಗ್ರೆಸ್ ಕೇವಲ ಒಂದು ಸ್ಥಾನ ಪಡೆದುಕೊಳ್ಳುವಂತಾಯಿತು. ಇನ್ನು ಮುಂದೆ ಜೆಡಿಎಸ್ ಜತೆ ಚುನಾವಣಾ ಮೈತ್ರಿ ಇಲ್ಲ ಎಂದು ಕಾಂಗ್ರೆಸ್ ಘೋಷಣೆ ಮಾಡಿತು. ಆಗ ಮತ್ತೆ ಸಿದ್ದರಾಮಯ್ಯ ಕೈ ಮೇಲಾಗುವ ಸೂಚನೆ ಸಿಕ್ಕಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಉರುಳಿತು. ಸರ್ಕಾರ ಉರುಳಲು ಕಾರಣವಾಗಿದ್ದು ಸಿದ್ದರಾಮಯ್ಯ ಬೆಂಬಲಿಗರು. ಇದರ ಜತೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ಹೊಂದಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರತೊಡಗಿದರು. ಸರ್ಕಾರ ಉರುಳಿದ್ದೇ ಸಿದ್ದರಾಮಯ್ಯ ಅವರಿಂದಾಗಿ ಎಂದು ಆರೋಪಿಸಿದ್ದರು.
ಸಿದ್ದರಾಮಯ್ಯ ವಿರುದ್ಧ ಅವಕಾಶಕ್ಕಾಗಿ ಕಾಯುತ್ತಿದ್ದ ಮೂಲ ಕಾಂಗ್ರೆಸ್ಸಿಗರಿಗೆ ಇದರಿಂದ ಮತ್ತೊಂದು ಅಸ್ತ್ರ ಸಿಕ್ಕಂತಾಯಿತು. ಲೋಕಸಭೆ ಚುನಾವಣೆಯಲ್ಲಿ ಸೋತ ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಅವರು ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಲಾರಂಭಿಸಿದರು. ಸಿದ್ದರಾಮಯ್ಯ ಜತೆಗೆ ಓಡಾಡುವವರೇ ನಮ್ಮನ್ನು ಸೋಲಿಸಿದರು ಎಂದು ಆರೋಪಿಸಿದರು. ಇದರಿಂದ ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರೆಲ್ಲರೂ ತಿರುಗಿ ಬೀಳಲು ಶಕ್ತಿ ಸಿಕ್ಕಿದಂತಾಯಿತು.
ಹಾಗೆಂದು ಸಿದ್ದರಾಮಯ್ಯ ಅವರನ್ನು ನಿರ್ಲಕ್ಷಿಸಿದರೆ ಕಾಂಗ್ರೆಸ್ಸಿಗೂ ಕಷ್ಟ. ಜೆಡಿಎಸ್ ನಲ್ಲಿ ನಿರ್ಲಕ್ಷಕ್ಕೊಳಗಾದಾಗ ಹೊರಬಂದ ಅವರು ಕೊಟ್ಟ ಪೆಟ್ಟಿನಿಂದ ಜೆಡಿಎಸ್ ಇನ್ನೂ ಚೇತರಿಸಿಕೊಳ್ಳಲು ಆಗಲಿಲ್ಲ. ಆಗ ಅವರಿನ್ನೂ ಅಹಿಂದ ನಾಯಕರಾಗಿರಲಿಲ್ಲ. ಈಗ ಅಹಿಂದ ನಾಯಕರಾಗಿ ಬೆಳೆದಿದ್ದಾರೆ. ಕಾಂಗ್ರೆಸ್ ನಲ್ಲೇ ಒಂದು ಗುಂಪು ಅವರನ್ನು ಬೆಂಬಲಿಸುತ್ತಿದೆ. ತಮ್ಮನ್ನು ಕಾಂಗ್ರೆಸ್ ಮೂಲೆಗುಂಪು ಮಾಡಿತು ಎಂದು ಸಿದ್ದರಾಮಯ್ಯ ಏನಾದರೂ ಸುಮ್ಮನೆ ಕುಳಿತರೆ ಅಥವಾ ತಿರುಗಿ ಬಿದ್ದರೆ ಅದರಿಂದ ಕಾಂಗ್ರೆಸ್ ಗೆ ದೊಡ್ಡ ನಷ್ಟವೇ ಆಗಲಿದೆ.