ನಿರೀಕ್ಷೆ ನಿಜವಾಗುತ್ತಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಏಕಸ್ವಾಮ್ಯಕ್ಕೆ ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಡಿ.ಕೆ.ಶಿವಕುಮಾರ್ ಅಡ್ಡಿಯಾಗುತ್ತಾರೆ ಎಂಬ ಮಾತುಗಳು ನಿಜವಾಗುವ ಲಕ್ಷಣ ಕಾಣಿಸಿಕೊಳ್ಳುತ್ತಿವೆ. ಇನ್ನು ಮುಂದೆ ಜೆಡಿಎಸ್ ಸಹವಾಸವೇ ಬೇಡ ಎಂದು ಮೈತ್ರಿ ಸರ್ಕಾರ ಉರುಳಿದ ದಿನದಿಂದ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದರೂ ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬರುತ್ತಿದ್ದಂತೆ ವಿಮಾನ ನಿಲ್ದಾಣದಲ್ಲೇ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾಗಿರುವುದು, ಶಿವಕುಮಾರ್ ಸ್ವಾಗತ ಮೆರವಣಿಗೆಯಲ್ಲಿ ಜೆಡಿಎಸ್ ಬಾವುಟ ಕಾಣಿಸಿಕೊಂಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಹೆಚ್ಚುವ ಮುನ್ಸೂಚನೆ ನೀಡಿದೆ.
ಅದರ ಬೆನ್ನಲ್ಲೇ ಶಿವಕುಮಾರ್ ಸ್ವಾಗತ ಮೆರವಣಿಗೆಯಲ್ಲಿ ಜೆಡಿಎಸ್ ಬಾವುಟ ಕಾಣಿಸಿಕೊಂಡ ಬಗ್ಗೆ ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ ವೈರಲ್ ಆಗಿದ್ದು, ಸಿದ್ದರಾಮಯ್ಯ ಹೇಳಿಕೆಗೆ ಮೂಲ ಕಾಂಗ್ರೆಸ್ಸಿಗರಿಂದ ವಿರೋಧ ವ್ಯಕ್ತವಾಗಿದೆ. ಈ ಗೊಂದಲ ತೀವ್ರಗೊಳ್ಳುವ ಲಕ್ಷಣ ಕಾಣಿಸಿಕೊಳ್ಳುತ್ತಿದ್ದಂತೆ ಮಧ್ಯಪ್ರವೇಶಿಸಿರುವ ಡಿ.ಕೆ.ಶಿವಕುಮಾರ್, ನನ್ನ ಮೇಲಿನ ಪ್ರೀತಿಯಿಂದ ಸಿದ್ದರಾಮಯ್ಯ ಹಾಗೆ ಹೇಳಿದ್ದಾರೆ. ಅದಕ್ಕೆ ಪಾರ್ಥ ಕಲ್ಪಿಸುವುದು ಬೇಡ ಎಂದು ತಿಪ್ಪೆ ಸಾರಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಕಾಂಗ್ರೆಸ್ ನಾಯಕರ ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎಂಬ ಸಂದೇಶವನ್ನಂತೂ ನೀಡಿದೆ ಎಂಬುದರಲ್ಲಿ ಸಂಶಯವಿಲ್ಲ.
ಇಲ್ಲಿ ಸಿದ್ದರಾಮಯ್ಯ ಅವರ ತಪ್ಪೂ ಇಲ್ಲ, ಡಿ.ಕೆ.ಶಿವಕುಮಾರ್ ಹೇಳಿಕೆಯಲ್ಲಿ ಅಪಾರ್ಥವೂ ಇಲ್ಲ. ಎಲ್ಲವೂ ಸಹಜವಾಗಿಯೇ ನಡೆದಿದೆಯಾದರೂ ಇವರಿಬ್ಬರ ಮಧ್ಯೆ ಹುಳಿ ಹಿಂಡಲು ಸಿದ್ಧವಾಗಿ ಕುಳಿತಿರುವ ಮೂಲ ಕಾಂಗ್ರೆಸ್ಸಿಗರು ಮಾತ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನೇ ದೊಡ್ಡದು ಮಾಡಿ ಇಬ್ಬರ ಮಧ್ಯೆ ದೊಡ್ಡ ಕಂದರವನ್ನೇ ಸೃಷ್ಟಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಸದ್ಯ ಇದು ತಣ್ಣಗಾಗುವ ಲಕ್ಷಣ ಕಾಣಿಸುತ್ತಿದ್ದರೂ ಶಿವಕುಮಾರ್ ಬಲ ಹೆಚ್ಚಿದಂತೆ ಇಬ್ಬರ ಮಧ್ಯೆ ಅಸಮಾಧಾನ ಹೆಚ್ಚಾಗುವುದು ನಿಶ್ಚಿತ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಡಿ.ಕೆ.ಶಿವಕುಮಾರ್ ಬಿಡುಗಡೆಯಾಗಿ ಬೆಂಗಳೂರಿಗೆ ಆಗಮಿಸುವಾಗ ಬೆಂಬಲಿಗರು ಭರ್ಜರಿ ಸ್ವಾಗತ ಕೋರಿದ್ದರು. ಮೆರವಣಿಗೆ ಮೂಲಕ ಅವರನ್ನು ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿಗೆ ಕರೆತರಲಾಗಿತ್ತು. ಈ ವೇಳೆ ಮೆರವಣಿಗೆಯಲ್ಲಿ ಜೆಡಿಎಸ್ ಬಾವುಟ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲ, ಶಿವಕುಮಾರ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಲ್ಲೇ ಕಾದುನಿಂತು ಸ್ವಾಗತ ಮಾಡಿದ್ದರು.
ಎತ್ತಿಕಟ್ಟುವವರ ಕೈಗೆ ಸಿಕ್ಕಿದ ನಾಯಕ
ಸಿದ್ದರಾಮಯ್ಯ ಅವರನ್ನು ಎತ್ತಿಕಟ್ಟಲು ಅವರ ಬೆಂಬಲಿಗರಿಗೆ ಅಷ್ಟು ಸಾಕಾಗಿತ್ತು. ಮೈಸೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರ ಜತೆ (ಎಲ್ಲರೂ ಸಿದ್ದರಾಮಯ್ಯ ಆಪ್ತರು) ಚರ್ಚಿಸುತ್ತಿದ್ದ ಸಿದ್ದರಾಮಯ್ಯ ಸಾಮಾನ್ಯ ಎಂಬಂತೆ ರಾಜಕೀಯ ಪ್ರಸ್ತಾಪಿಸಿದ್ದರು. ಎಲ್ಲಾ ಲಿಂಗಾಯತರೂ ಯಡಿಯೂರಪ್ಪ ಜತೆಗಿರುವುದಿಲ್ಲ. ಹಾಗೆಯೇ ಎಲ್ಲಾ ಒಕ್ಕಲಿಗರೂ ದೇವೇಗೌಡ, ಕುಮಾರಸ್ವಾಮಿ ಜತೆಗಿಲ್ಲ ಎಂದರು. ಆಗ ಅಲ್ಲೇ ಇದ್ದ ಪಿರಿಯಾಪಟ್ಟಣದ ಮಾಜಿ ಶಾಸಕ ವೆಂಕಟೇಶ್, ಅದು ಹೌದು. ಆದರೆ, ಕಾಂಗ್ರೆಸ್ ನವರು ಅದನ್ನು ಎನ್ ಕ್ಯಾಷ್ ಮಾಡಿಕೊಳ್ಳುತ್ತಿಲ್ಲ. ಶಿವಕುಮಾರ್ ಜೆಡಿಎಸ್ ಬಾವುಟ ಹಿಡಿಯುತ್ತಾರೆ ಎಂದರೆ ಅದರ ಅರ್ಥವೇನು ಎಂದು ಪ್ರಶ್ನಿಸಿದರು. ಅದಕ್ಕೆ ಸಿದ್ದರಾಮಯ್ಯ, ನೀನು ಹೇಳಿದ್ದು ಸರಿ. ಜೆಡಿಎಸ್ ಬಾವುಟ ಹಿಡಿಯುವುದು ಸರಿಯಲ್ಲ. ನಾನು ಈಗಾಗಲೇ ಜೆಡಿಎಸ್ ನವರ ಸಹವಾಸವೇ ಬೇಡ ಎಂದಿದ್ದೆ ಎಂದು ಪ್ರತಿಕ್ರಿಯಿಸಿದ್ದರು. ಇಷ್ಟಕ್ಕೇ ಸುಮ್ಮನಾಗದ ವೆಂಕಟೇಶ್, ಏನೇ ಆಗಲಿ, ನೀವು ನಿಮ್ಮ ನಿಲುವಿಗೆ ಬದ್ಧರಾಗಿರಿ ಎಂದು ಸಿದ್ದರಾಮಯ್ಯ ಅವರಲ್ಲಿ ಹೇಳಿದಾಗ, ಅವರು, ಆಗೇ ಆಗುತ್ತೇನೆ. ನಾನಂತೂ ಜೆಡಿಎಸ್ ಸಹವಾಸಕ್ಕೆ ಸಿದ್ಧನಿಲ್ಲ. ಏನಾಗುತ್ತದೋ, ಆಗಲಿ ಎಂದು ಸುಮ್ಮನಾದರು.
ಒಬ್ಬ ಕಾಂಗ್ರೆಸಿಗನಾಗಿ ಸಿದ್ದರಾಮಯ್ಯ ಹೇಳಿದ್ದರಲ್ಲಿ ಯಾವುದೇ ತಪ್ಪು ಇಲ್ಲ. ಪಕ್ಷದ ನಾಯಕನೊಬ್ಬ ಬರುವಾಗ ಆತನಿಗೆ ಸ್ವಾಗತ ಕೋರುವ ಮೆರವಣಿಗೆಯಲ್ಲಿ ಜೆಡಿಎಸ್ ಬಾವುಟ ಕಾಣಿಸಿಕೊಳ್ಳುವುದು, ಕಾಂಗ್ರೆಸ್ಸಿಗನಾಗಿ ಶಿವಕುಮಾರ್ ಅವರು ಅದನ್ನು ಹಿಡಿದುಕೊಳ್ಳುವುದು ಸರಿಯಲ್ಲ. ಹೀಗಾಗಿ ಸಿದ್ದರಾಮಯ್ಯ ಸಹಜವಾಗಿಯೇ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದರೆ, ಆ ಮಾತುಕತೆಯ ವೀಡಿಯೋ ತೆಗೆಯುವುದು, ಅದನ್ನು ಬಹಿರಂಗವಾಗಿ ಹರಿಯಬಿಡುವುದರ ಹಿಂದೆ ಹುನ್ನಾರ ಅಡಗಿದೆ. ಇಂತಹ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಮೂಲ ಕಾಂಗ್ರೆಸ್ಸಿಗರಿಗೆ ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಸ್ತ್ರವೇ ಸಿಕ್ಕಿದಂತಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ದೊಡ್ಡ ವಿವಾದ ಎಬ್ಬಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಅದರಲ್ಲಿ ಆರಂಭಿಕ ಯಶಸ್ಸೂ ಗಳಿಸಿದ್ದಾರೆ.
ಸದ್ಯಕ್ಕೆ ವಿವಾದದಲ್ಲಿ ಸಿಲುಕಿಕೊಳ್ಳಲು ಇಷ್ಟವಿಲ್ಲದ ಶಿವಕುಮಾರ್
ಆದರೆ, ಈಗ ತಾನೇ ಜೈಲಿನಿಂದ ಹೊರಬಂದಿರುವ ಶಿವಕುಮಾರ್ ಅವರಿಗೆ ಇಂತಹ ವಿವಾದಗಳು ಈಗ ಬೇಡವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಕೆಲಸದ ಜತೆಗೆ ಕಾನೂನು ಹೋರಾಟವನ್ನೂ ನಡೆಸಬೇಕಾಗಿದ್ದು, ಅದಕ್ಕೆ ಎಲ್ಲರ ಸಹಕಾರ ಬೇಕು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಹೇಳಿಕೆಯನ್ನು ವಿವಾದ ಮಾಡಲು ಹೊರಟವರಿಗೆ ಆ ರೀತಿ ಮಾಡಬೇಡಿ ಎಂಬ ಕಿವಿಮಾತು ಹೇಳಿದ್ದಾರೆ. ಅಷ್ಟೇ ಅಲ್ಲ, ಸಿದ್ದರಾಮಯ್ಯನವರಿಗೆ ನನ್ನ ಮೇಲೆ ವಿಶೇಷ ಕಾಳಜಿ ಹಾಗೂ ಪ್ರೀತಿ ಇದೆ. ನನ್ನ ಬಗ್ಗೆ ಅವರು ಪ್ರೀತಿಯಿಂದ ಮಾತನಾಡಿರಬಹುದು. ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಅಪಾರ್ಥ ಕಲ್ಪಿಸಬೇಡಿ ಎಂದಿದ್ದಾರೆ. ಜತೆಗೆ ನನ್ನ ಅಭಿಮಾನಿಗಳು ಪಕ್ಷಾತೀತವಾಗಿ ಸ್ವಾಗತ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರು, ಕನ್ನಡ ಸಂಘಟನೆ ನಾಯಕರು ಬಂದಿದ್ದರು. ಯಾರನ್ನೂ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಮೇಲ್ನೋಟಕ್ಕೆ ಶಿವಕುಮಾರ್ ಆಡಿದ ಈ ಮಾತುಗಳು ಸರಿ ಎನ್ನಿಸಬಹುದು. ನಾನು ಒಬ್ಬ ಕಾಂಗ್ರೆಸಿಗನಾಗಿರುವುದರಿಂದ ಬೇರೆ ಪಕ್ಷದವರು ಆ ಪಕ್ಷದ ಬಾವುಟ ಹಿಡಿದು ಬರುವುದು ಸರಿಯಲ್ಲ ಎಂಬರ್ಥದಲ್ಲಿ ಸಿದ್ದರಾಮಯ್ಯ ಮಾತನಾಡಿರಬಹುದು ಎಂದು ಹೇಳಿದಂತೆ ಭಾಸವಾಗುತ್ತಿದೆ. ಆದರೆ, ಸದಾ ವ್ಯಂಗ್ಯದ ಮಾತುಗಳಿಂದ ರಾಜಕೀಯ ವಿರೋಧಿಗಳನ್ನು ತಿವಿಯುವುದರಲ್ಲಿ ಎತ್ತಿದ ಕೈ ಆಗಿರುವ ಶಿವಕುಮಾರ್ ಕೇವಲ ಈ ಒಂದು ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಭಾವಿಸುವಂತಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ವ್ಯಂಗ್ಯವಾಗಿ ಈ ಮಾತನ್ನು ಹೇಳಿರಬಹುದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನೇರವಾಗಿ ಸಿದ್ದರಾಮಯ್ಯ ಅವರೊಂದಿಗೆ ಹಣಾಹಣಿಗೆ ಇಳಿಯುವ ಮನಸ್ಥಿತಿಯಾಗಲಿ, ಪುರುಸೋತ್ತಾಗಲಿ ಶಿವಕುಮಾರ್ ಅವರಿಗೆ ಇಲ್ಲ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಮಾತುಗಳಿಗೆ ಅವರು ತಮ್ಮದೇ ದಾಟಿಯಲ್ಲಿ ತಿರುಗೇಟು ನೀಡಬಹುದು. ಮೂಲ ಕಾಂಗ್ರೆಸ್ಸಿಗರು ಕಾಯುತ್ತಿರುವುದು ಕೂಡ ಅದಕ್ಕೆ.
ಆದರೆ, ದೇಶದಲ್ಲಿ ಮತ್ತೆ ಎದ್ದೇಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ಸಿಗೆ ಈ ರೀತಿಯ ಗೊಂದಲಗಳನ್ನು ಸೃಷ್ಟಿಸಿ ನಾಯಕರ ಮಧ್ಯೆಯೇ ವಿವಾದ ಎಬ್ಬಿಸುವುದು ಉತ್ತಮ ಬೆಳವಣಿಗೆಯಲ್ಲ. ಈ ರೀತಿಯ ವಿವಾದಗಳು ಸೃಷ್ಟಿಯಾದಾಗಲೆಲ್ಲಾ ಅದರ ಲಾಭವನ್ನು ಪಡೆದು ಕಾಂಗ್ರೆಸ್ಸಿಗೆ ತಿರುಗೇಟು ನೀಡಲು ಬಿಜೆಪಿ ಸಿದ್ಧವಾಗಿರುತ್ತದೆ. ಹೀಗಾಗಿ ಹಿಂಬಾಲಕರು ರೊಚ್ಚಿಗೆಬ್ಬಿಸಿದರೂ ನಾಯಕತ್ವದಲ್ಲಿರುವವರು ಎಚ್ಚರಿಕೆಯಿಂದ ಮುಂದುವರಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಲಾಭ.