ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯ (CAA) ವಿರುದ್ಧದ ಹೋರಾಟ ವ್ಯಾಪಕಗೊಳ್ಳುತ್ತಿರುವ ನಡುವೆಯೇ ಜಗತ್ಪ್ರಸಿದ್ದ ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಸತ್ಯ ನಾದೆಲ್ಲಾ ಅವರು ಸಿಎಎ ನಂತರ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಸಿಎಎ ಕುರಿತ ಚರ್ಚೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನ ಭೂಮಿಕೆಗೆ ಬಂದಂತಾಗಿದೆ.
“ನನ್ನ ಪ್ರಕಾರ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆ ಬೇಸರ ತರುವಂಥದ್ದು. ಖಂಡಿತವಾಗಿಯೂ ಅದು ಕೆಟ್ಟದು. ಬಾಂಗ್ಲಾದೇಶದ ನಿರಾಶ್ರಿತ ಭಾರತಕ್ಕೆ ವಲಸೆ ಬಂದು ಅಲ್ಲಿ ಯುನಿಕಾರ್ನ್ ನಂಥ ಮತ್ತೊಂದು ಸಂಸ್ಥೆ ಕಟ್ಟುವುದು ಅಥವಾ ಇನ್ಫೋಸಿಸ್ ನ ಮುಂದಿನ ಕಾರ್ಯನಿರ್ವಹಣಾಧಿಕಾರಿಯಾಗುವುದನ್ನು ನೋಡಲು ನಾನು ಬಯಸುತ್ತೇನೆ” ಎನ್ನುವ ಮೂಲಕ ನರೇಂದ್ರ ಮೋದಿ ಸರ್ಕಾರವು ಆರು ಧರ್ಮೀಯರಿಗೆ ಪೌರತ್ವ ಕಲ್ಪಿಸಿ ಮುಸ್ಲಿಮರನ್ನು ಹೊರಗಿಟ್ಟಿರುವ ಸಿಎಎ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
52 ವರ್ಷದ ನಾದೆಲ್ಲಾ ಅವರು ಹೈದರಾಬಾದ್ ಮೂಲದವರಾಗಿದ್ದು, ಕರ್ನಾಟಕದ ಮಣಿಪಾಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯೂ ಹೌದು. ಜಗತ್ತಿನ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಮೈಕ್ರೋಸಾಫ್ಟ್ ಸಿಇಒದಂಥ ಮಹತ್ವದ ಹುದ್ದೆಗೇರುವ ಮೂಲಕ ಭಾರತದ ಘನತೆಯನ್ನು ವಿಶ್ವಮಟ್ಟಕ್ಕೇರಿಸಿದ ತಂತ್ರಜ್ಞ ನಾದೆಲ್ಲಾ. ಕಳೆದ ಮೂರು ದಶಕಗಳಲ್ಲಿ ವಿಶ್ವದ ಕೋಟ್ಯಂತರ ಜನರ ಬದುಕಿನ ಗತಿಯನ್ನೇ ಬದಲಿಸಿದ ಮೈಕ್ರೋಸಾಫ್ಟ್ ಆರಂಭದಿಂದ ಇದುವರೆಗೂ ಜಗತ್ತಿನ ಅಗ್ರ 10 ಬ್ರ್ಯಾಂಡ್ ಗಳ ಪೈಕಿ ಒಂದು ಎಂಬ ಗರಿಮೆಯನ್ನು ಉಳಿಸಿಕೊಂಡಿದೆ. ವಿಶ್ವದ ಇಂಥ ಮಹತ್ವದ ಸಂಸ್ಥೆಯ ನೇತೃತ್ವವಹಿಸಿರುವ ನಾದೆಲ್ಲಾ ಅವರು ಸಿಎಎ ವಿರುದ್ಧವಾಗಿ ಮಾತನಾಡಿರುವುದು ಜಗತ್ತಿನ ಇತರ ಪ್ರತಿಷ್ಠಿತ ಸಂಸ್ಥೆಗಳ ನೇತೃತ್ವವಹಿಸಿರುವ ಭಾರತೀಯ ಸಂಜಾತರು ಹಾಗೂ ದೇಶದ ಒಳಗೆ ಇರುವ ಗಣ್ಯ ವ್ಯಕ್ತಿಗಳು ವಿಭಜನಕಾರಿಯಾದ ಸಿಎಎ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಪ್ರೇರೇಪಣೆಯಾಗಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಸಿಎಎ ಕುರಿತು ನಾದೆಲ್ಲಾ ಅವರ ಅಭಿಪ್ರಾಯ ದುಬಾರಿಯಾಗಿ ಪರಿಣಮಿಸಿದೆ. ಈ ನೆಲೆಯಲ್ಲಿ ನಾದೆಲ್ಲಾ ಅಭಿಪ್ರಾಯಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ.
ಇತ್ತೀಚೆಗೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನ್ (UNHCR) ಸಿಎಎ “ಮೂಲತತ್ವವೇ ತಾರತಮ್ಯ”ದಿಂದ ಕೂಡಿದೆ ಎಂದು ಹೇಳಿತ್ತು. ಅಂತಾರಾಷ್ಟ್ರೀಯ ಮಾಧ್ಯಮಗಳು ಸಿಎಎ ಕುರಿತ ವರದಿ ಹಾಗೂ ಲೇಖನಗಳನ್ನು ನಿರಂತರವಾಗಿ ಪ್ರಕಟಿಸುತ್ತಿವೆ. ಮಲೇಷ್ಯಾ, ಟರ್ಕಿ ಹಾಗೂ ಪಾಕಿಸ್ತಾನದಂಥ ಮುಸ್ಲಿಂ ರಾಷ್ಟ್ರಗಳು ಸಿಎಎ ಬಗ್ಗೆ ಬೇಸರ ವ್ಯಕ್ತಪಡಿಸಿವೆ. ನೆರೆಯ ಬಾಂಗ್ಲಾದೇಶವು ಸಿಎಎ ಹಿನ್ನೆಲೆಯಲ್ಲಿ ಭಾರತದ ಜೊತೆ ಅಂತರ ಕಾಯ್ದುಕೊಳ್ಳುತ್ತಿದೆ.
ಭಾರತದಲ್ಲಿ ಸಿಎಎ ವಿರೋಧಿಸುತ್ತಿರುವ ವಿದ್ಯಾರ್ಥಿಗಳು, ನಾಗರಿಕರು, ಗಣ್ಯರನ್ನು ದೇಶ ವಿರೋಧಿಗಳು ಎಂದು ಆಡಳಿತ ಪಕ್ಷದ ನಾಯಕರು ಜರಿಯುತ್ತಿದ್ದಾರೆ. ಹಲವು ಕಡೆ ಪೊಲೀಸ್ ದಬ್ಬಾಳಿಕೆಯ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ.
ಕಳೆದ ವರ್ಷದ ಡಿಸೆಂಬರ್ ನಲ್ಲಿ ಸಿಎಎ ಜಾರಿಗೆ ಬರುತ್ತಿದ್ದಂತೆ ಅಸ್ಸಾಂನಲ್ಲಿ ತೀವ್ರ ಪ್ರತಿಭಟನೆ ಮುಂದುವರಿದೆ. ತ್ರಿಪುರ ಒಳಗೊಂಡು ಬಹುತೇಕ ಈಶಾನ್ಯ ರಾಜ್ಯಗಳು ಸಿಎಎಗೆ ವ್ಯಾಪಕ ವಿರೋಧ ದಾಖಲಿಸಿವೆ. ಬಿಜೆಪಿ ಆಡಳಿತದ ತ್ರಿಪುರದಲ್ಲಿ ಸರ್ಕಾರದ ಭಾಗವಾಗಿರುವ ಸ್ಥಳೀಯ ಪಕ್ಷವು ಸಿಎಎ ವಿರೋಧಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದೆ. ಅಸ್ಸಾಂನಲ್ಲಿ ಪ್ರತಿಭಟನೆ ವ್ಯಾಪಕವಾಗಿರುವುದರಿಂದ ಈಚೆಗೆ ನರೇಂದ್ರ ಮೋದಿಯವರು ಅಲ್ಲಿನ ಪ್ರವಾಸ ರದ್ದುಗೊಳಿಸಿದ್ದನ್ನು ನೆನೆಯಬಹುದಾಗಿದೆ.
ಸಿಎಎ ವಿರೋಧಿಸಿ ಕರ್ನಾಟಕ, ಉತ್ತರ ಪ್ರದೇಶ ಹಾಗೂ ಅಸ್ಸಾಂನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ಅಟ್ಟಹಾಸಕ್ಕೆ ಕನಿಷ್ಠ 30 ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗಿದೆ. ಸಿಎಎ ವಿರೋಧಿ ಹೋರಾಟ ನಿಂತ ಬಳಿಕ ಕಾಯ್ದೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಹೇಳಿದೆ. ಇದು ಕೋರ್ಟ್ ಬಗ್ಗೆ ಹಲವರು ನಿರಾಸೆ ವ್ಯಕ್ತಪಡಿಸುವಂತೆ ಮಾಡಿದೆ. ಬಿಜೆಪಿಯೇತರ 11 ರಾಜ್ಯ ಸರ್ಕಾರಗಳು ಸಿಎಎಗೆ ವಿರೋಧ ವ್ಯಕ್ತ ದಾಖಲಿಸಿದ್ದು, ಕೇರಳ ವಿಧಾನಸಭೆಯಲ್ಲಿ ಸಿಎಎ ಜಾರಿಗೊಳಿಸಿದಿರಲು ಮಸೂದೆ ಜಾರಿಗೊಳಿಸುವ ಮೂಲಕ ಇಂಥ ಮಹತ್ವದ ನಿಲುವು ಕೈಗೊಂಡ ಮೊದಲ ರಾಜ್ಯ ಎಂಬ ಶ್ರೇಯಕ್ಕೆ ಪಾತ್ರವಾಗಿದೆ.
ಇದುವರೆಗೆ ದೇಶಾದ್ಯಾಂತ 250ಕ್ಕೂ ಹೆಚ್ಚು ಸಿಎಎ ವಿರೋಧಿ ಪ್ರತಿಭಟನೆಗಳು ನಡೆದಿವೆ. ಆದರೆ, ಇದ್ಯಾವುದಕ್ಕೂ ಜಗ್ಗದ ಮೋದಿ ಹಾಗೂ ಅಮಿತ್ ಶಾ ಜೋಡಿಯು ಸಿಎಎ ಜಾರಿಗೆ ಅಧಿಸೂಚನೆಯನ್ನೂ ಹೊರಡಿಸಿದೆ. “ವಿರೋಧ ಪಕ್ಷಗಳು ಸಿಎಎ ವಿರೋಧಿಸಿದಷ್ಟೂ ಬಿಜೆಪಿಗೆ ಲಾಭ” ಎನ್ನುವ ಮಾತನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ. ಇದರರ್ಥ ಧರ್ಮದ ಆಧಾರದಲ್ಲಿ ದೇಶ ಮತ್ತಷ್ಟು ವಿಭಜನೆಯಾಗಲಿದೆ. ವಿರೋಧ ಪಕ್ಷಗಳ ವಿರುದ್ಧ ಹಿಂದೂ ವಿರೋಧಿ ಎಂಬ ಸಂಕಥನವನ್ನು ಮತ್ತಷ್ಟು ವ್ಯಾಪಕವಾಗಿ ಪ್ರಚಾರ ಮಾಡಿ ಬಹುಸಂಖ್ಯಾತ ಹಿಂದೂಗಳ ಮತ ಸಂಗ್ರಹಿಸಿ ಗೆಲುವು ಸಾಧಿಸುವುದು ಬಿಜೆಪಿಯ ತಂತ್ರ ಎಂಬುದು ಸ್ವಾಮಿ ಅವರ ಮಾತಿನ ತಿರುಳು. ಇದಕ್ಕೆ ಪೂರಕವಾಗಿ ಬಿಜೆಪಿಯ ನಾಯಕರು ನೀಡುತ್ತಿರುವ ಸಂವಿಧಾನ ವಿರೋಧಿ ಹೇಳಿಕೆಗಳು ಸಾಕ್ಷ್ಯ ನುಡಿಯುತ್ತಿವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಎಎ ಕುರಿತು ಸಕಾರಾತ್ಮಕ ಅಭಿಪ್ರಾಯ ಮೂಡಿಸಲು ಬಿಜೆಪಿ ಆರಂಭಿಸಿದೆ ಎನ್ನುವ ಮಾತುಗಳ ನಡುವೆ ನಾದೆಲ್ಲಾ ನೀಡಿರುವ ಹೇಳಿಕೆಯು ಬಿಜೆಪಿ ನಾಯಕತ್ವಕ್ಕೆ ನೀಡಿರುವ ಹೊಡೆತ ಸಾಮಾನ್ಯವಾದುದಲ್ಲ. ಭಾರತದ ವರ್ಚಸ್ಸಿಗೆ ಮೋದಿ ಸರ್ಕಾರವು ತನ್ನ ವಿವಾದಾತ್ಮಕ ನೀತಿ-ನಿರ್ಧಾರಗಳಿಂದ ಸಾಕಷ್ಟು ಸಮಸ್ಯೆ ಉಂಟು ಮಾಡಿದೆ ಎಂಬುದು ವಾಸ್ತವ. ಮುಂದಿನ ದಿನಗಳಲ್ಲಿ ಇದೆಲ್ಲವನ್ನೂ ಹೇಗೆ ಕೇಂದ್ರದ ಬಿಜೆಪಿ ಸರ್ಕಾರ ಎದುರುಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಅಂತಿಮವಾಗಿ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಸ್ವಚ್ಛ ಭಾರತ ಅಭಿಯಾನಕ್ಕಾಗಿ ಬಿಲ್ ಮತ್ತು ಮಿಲಿಂದಾ ಗೇಟ್ಸ್ ವತಿಯಿಂದ ಜಾಗತಿಕ ಗೋಲ್ ಕೀಪರ್ ಪ್ರಶಸ್ತಿಯನ್ನು ನರೇಂದ್ರ ಮೋದಿಗೆ ನೀಡಿದ್ದರು. ಈಗ ಅದೇ ಸಂಸ್ಥೆಯ ಸಿಇಒ ಸತ್ಯ ನಾದೆಲ್ಲಾ ಅವರು ಸಿಎಎ ಬಗೆಗಿನ ಅಭಿಪ್ರಾಯವು ಹಲವು ಕೋನಗಳಿಂದ ಮಹತ್ವ ಪಡೆದಿದೆ.