ಜಗತ್ತನ್ನೇ ಬೆಚ್ಚಿ ಬೀಳಿಸಿದ ಕರೋನಾ ವೈರಸ್ ಭಾರತದಲ್ಲೂ ವ್ಯಾಪಕವಾಗಿ ಹಬ್ಬುತ್ತಿದೆ. ದೇಶದಲ್ಲಿ ಕರೋನಾ ಸೋಂಕು ಪೀಡಿತರ ಸಂಖ್ಯೆ 900ರ ಗಡಿ ದಾಟಿದೆ. ಸೋಂಕು ಪೀಡಿತರ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, ದಿನಕಳೆದಂತೆ ಸಂಖ್ಯೆ ಏರುತ್ತಲೇ ಇದೆ. ಇದರ ಮಧ್ಯೆಯೇ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ರಾಜಕೀಯ ಟೀಕೆಗಳು ಕೇಳಿಬರಲಾರಂಭಿಸಿದೆ. ಸರ್ಕಾರ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್, ಪ್ರತ್ಯೇಕವಾಗಿ ತನ್ನದೇ ಆದ ಕಾರ್ಯಪಡೆಯೊಂದನ್ನು ಸಿದ್ಧಪಡಿಸಿದೆ. ಇನ್ನೊಂದೆಡೆ ಜೆಡಿಎಸ್ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವಿಟರ್ ಮೂಲಕವೇ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳು ಈ ರೀತಿ ಟೀಕೆಗಳನ್ನು ಮಾಡುವುದು ಸಹಜ ಪ್ರಕ್ರಿಯೆ. ಆದರೆ, ಇದೆಲ್ಲಕ್ಕಿಂತ ಮುಖ್ಯವಾಗಿ ಆಡಳಿತಾರೂಢ ಬಿಜೆಪಿಯಲ್ಲೇ ಈಗ ಒಳಪೆಟ್ಟಿನ ಚಟುವಟಿಕೆಗಳು ಆರಂಭವಾಗಿವೆ. ಕರೋನಾ ಸೋಂಕು ವಿಚಾರದಲ್ಲಿ ಕಳೆದ ಒಂದು ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಡೆದುಕೊಳ್ಳುತ್ತಿರುವ ರೀತಿ ಅವರ ಸಂಪುಟ ಸಹೋದ್ಯೋಗಿಗಳು ಮಾತ್ರವಲ್ಲ, ಬಿಜೆಪಿಯ ಕೆಲವು ನಾಯಕರಲ್ಲೇ ಅಸಮಾಧಾನ ತಂದಿದೆ. ಅಷ್ಟೇ ಅಲ್ಲ, ಈ ಕುರಿತು ಬಿಜೆಪಿ ವರಿಷ್ಠರವರೆಗೂ ದೂರು ಹೋಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದವರೇ ಆಗಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಕೋರಿಕೆಯಂತೆ ಸರ್ಕಾರ ಮತ್ತು ಪಕ್ಷದ ಮಧ್ಯೆ ಸಮನ್ವಯತೆ ಸಾಧಿಸುವುದರ ಜತೆಗೆ ಸಚಿವ ಸಂಪುಟ ಸದಸ್ಯರಲ್ಲಿರುವ ಭಿನ್ನಾಭಿಪ್ರಾಯ, ಗೊಂದಲಗಳನ್ನು ಬಗೆಹರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಮಧ್ಯಪ್ರವೇಶಿಸಿದ್ದಾರೆ.
ಶನಿವಾರ ಮಧ್ಯಾಹ್ನ ಜೆ.ಪಿ.ನಡ್ಡಾ ಅವರು ಕರೋನಾ ನಿಯಂತ್ರಣ ಕುರಿತು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲು ಸ್ಕೈಪ್ ಮೂಲಕ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಬಿ.ಎಲ್.ಸಂತೋಷ್ ಅವರೇ ಈ ಕಾನ್ಫರೆನ್ಸ್ ವ್ಯವಸ್ಥೆ ಮಾಡಿದ್ದರು. ವೀಡಿಯೋ ಕಾನ್ಫರೆನ್ಸ್ ನಲ್ಲಿ ಸರ್ಕಾರದ ಪರವಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವರಾದ ಡಾ.ಕೆ.ಸುಧಾಕರ್, ಆರ್.ಅಶೋಕ್, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ ಅವರಿದ್ದರು. ಇವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಮತ್ತು ಶಾಸಕ ಅರವಿಂದ ಲಿಂಬಾವಳಿ ಕೂಡ ಇದ್ದರು. ರಾಜ್ಯ ಸರ್ಕಾರ ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇವರೆಲ್ಲರಿಂದ ಮಾಹಿತಿ ಪಡೆದ ಜೆ.ಪಿ.ನಡ್ಡಾ ಅವರು, ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ನೆರವು ಕೊಡಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಜತೆಗೆ ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು ವಲಸೆ ಹೋಗದಂತೆ ತಡೆಯಬೇಕು. ಇರುವಲ್ಲೇ ಅವರಿಗೆ ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ವಿಶೇಷವೆಂದರೆ, ಈ ಸಭೆಯಲ್ಲಿ ನಡ್ಡಾ ಅವರು ಪರಸ್ಪರ ಉತ್ತಮ ಸಂವಹನ ಮತ್ತು ಸಹಕಾರ ಕುರಿತಂತೆ ಒತ್ತಿ ಒತ್ತಿ ಹೇಳಿದ್ದು. ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಜೆ.ಪಿ.ನಡ್ಡಾ ಪ್ರಶಂಸೆ ವ್ಯಕ್ತಪಡಿಸಿದರಾದರೂ ಸಂವಹನ ಮತ್ತು ಸಹಕಾರ ಕುರಿತಂತೆ ಹೆಚ್ಚಿನ ಒತ್ತು ನೀಡುವ ಮೂಲಕ ನಿಮ್ಮೊಳಗೆ (ಸಚಿವ ಸಂಪುಟ ಸದಸ್ಯರು ಮತ್ತು ಪಕ್ಷ) ಎಲ್ಲವೂ ಸರಿಯಿಲ್ಲ. ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿ ಎಂಬ ಸಂದೇಶವನ್ನು ರವಾನಿಸಿದರು. ಜತೆಗೆ ಸಣ್ಣ ಸಣ್ಣ ಸಮಸ್ಯೆಗಳು ಕೂಡ ನಿಮಗೇ ಗೊತ್ತಿರುವುದು. ಆದ್ದರಿಂದ ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ಅಲ್ಲದೆ, ಪಕ್ಷ ಮತ್ತು ಸರ್ಕಾರ ಜತೆಯಾಗಿ ಕೆಲಸ ಮಾಡಬೇಕು ಎನ್ನುವ ಮೂಲಕ ಸರ್ಕಾರ ಏನೇ ಒಳ್ಳೆಯ ಕೆಲಸ ಮಾಡಿದರೂ ಅದರ ಪ್ರಭಾವ ಪಕ್ಷದ ಮೇಲೆ ಬೀರುವಂತಾಗಬೇಕು ಎಂಬ ಸಂದೇಶವನ್ನೂ ನಡ್ಡಾ ಅವರು ಸಾರಿದರು.

ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಸಂಗತಿ ಎಂದರೆ, ಕರೋನಾ ಸೋಂಕಿಗೆ ಸಂಬಂಧಿಸಿದಂತೆ ನಡ್ಡಾ ಅವರು ಇದುವರೆಗೂ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿಲ್ಲ. ಅಷ್ಟೇ ಅಲ್ಲ, ಸಚಿವರೊಂದಿಗೆ ಸಭೆ ಏರ್ಪಾಟು ಮಾಡಿದ್ದ ಬಿ.ಎಲ್.ಸಂತೋಷ್ ಕೂಡ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿಲ್ಲ. ಶನಿವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳ ಪರವಾಗಿ ಅವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಅವರಿದ್ದರೇ ಹೊರತು ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಿಲ್ಲ. ಹೀಗಾಗಿ ಸದ್ಯ ರಾಜ್ಯದಲ್ಲಿ ವ್ಯಾಪಕವಾಗಿರುವ ಕರೋನಾ ಸೋಂಕು ಸಾಮಾಜಿಕ ಅಂತರ ಮಾತ್ರವಲ್ಲ, ಸರ್ಕಾರದಲ್ಲಿ ಸಂಪುಟ ಸದಸ್ಯರ ಮಧ್ಯೆಯೂ ಅಂತರ ಸೃಷ್ಟಿಸಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಬಿ.ಎಲ್.ಸಂತೋಷ್ ಅಖಾಡಾಕ್ಕಿಳಿಯಲು ಕಾರಣವೇನು?
ಬಿ.ಎಲ್. ಸಂತೋಷ್ ಅವರು ಬಿಜೆಪಿಯ ರಾಷ್ಟ್ರೀಯ ಸಂಘಟನೆಯಲ್ಲಿ ತೊಡಗಿಸಿಕೊಂಡ ಬಳಿಕವೂ ರಾಜ್ಯದಲ್ಲಿ ಗೊಂದಲ ಸೃಷ್ಟಿಯಾದಾಗೆಲ್ಲಾ ಮಧ್ಯೆ ಪ್ರವೇಶಿಸುತ್ತಿದ್ದಾರೆ. ಅದರಲ್ಲೂ ಯಡಿಯೂರಪ್ಪ ಅವರ ಕಾರಣದಿಂದ ಏನಾದರೂ ಸಮಸ್ಯೆ ಉದ್ಭವವಾದರೆ ಮತ್ತೊಂದು ಗುಂಪಿನಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಈ ಕಾರಣದಿಂದಲೇ ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳು ಸಕ್ರಿಯವಾಗಿರುವುದು. ಆದರೆ, ಇತ್ತೀಚಿನ ಕೆಲವು ತಿಂಗಳುಗಳಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿದ್ಯಮಾನಗಳಿಂದ ದೂರವೇ ಉಳಿದಿದ್ದ ಸಂತೋಷ್ ಇದೀಗ ಏಕಾಏಕಿ ಅಖಾಡಾಕ್ಕಿಳಿದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕರೋನಾ ಸೋಂಕು ಕುರಿತಂತೆ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಗೆ ಅಧಿಕಾರ ಹಂಚುವಲ್ಲಿ ಯಡಿಯೂರಪ್ಪ ಮಾಡಿರುವ ಯಡವಟ್ಟುಗಳೇ ಸಂತೋಷ್ ಮಧ್ಯಪ್ರವೇಶಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದ ಕಾರಣ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿದ ಕೆಲವೊಂದು ಯಡವಟ್ಟುಗಳು, ಲಾಕ್ ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪದೇ ಪದೇ ನಿಲುವುದು ಬದಲಿಸಿ ಗೊಂದಲ ಮೂಡಿಸಿದ್ದು ರಾಜ್ಯ ಬಿಜೆಪಿ ನಾಯಕರಿಗೆ ಅಸಮಾಧಾನ ಉಂಟುಮಾಡಿತ್ತು. ಈ ಮಧ್ಯೆ ಬಿ. ಶ್ರೀರಾಮುಲು ಅವರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯಿಂದ ಕರೋನಾ ಕುರಿತ ಜವಾಬ್ದಾರಿಯನ್ನು ಕಿತ್ತುಕೊಂಡು ಅದನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ವಹಿಸಿ ಯಡಿಯೂರಪ್ಪ ಅವರು ತೀರ್ಮಾನ ಕೈಗೊಂಡಿದ್ದರು. ಈ ಬಗ್ಗೆ ಶ್ರೀರಾಮುಲು ಅವರಿಂದ ತೀವ್ರ ಅಸಮಾಧಾನ ವ್ಯಕ್ತವಾದ ಬಳಿಕ ಕರೋನಾ ಕುರಿತಂತೆ ಬೆಂಗಳೂರಿನ ಜವಾಬ್ದಾರಿಯನ್ನು ಸುಧಾಕರ್ ಅವರಲ್ಲೇ ಮುಂದುವರಿಸಿದರೆ, ಇತರೆ ಜಿಲ್ಲೆಗಳ ಜವಾಬ್ದಾರಿಯನ್ನು ಶ್ರೀರಾಮುಲು ಅವರಿಗೆ ನೀಡಲಾಯಿತು. ಇದು ಉಭಯ ಸಚಿವರಲ್ಲೂ ಅಸಮಾಧಾನಕ್ಕೆ ಕಾರಣವಾಯಿತು. ತಾವಿಬ್ಬರೂ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದರೂ ಅನಗತ್ಯವಾಗಿ ಮುಖ್ಯಮಂತ್ರಿಗಳು ಮಧ್ಯೆಪ್ರವೇಶಿಸಿ ಗೊಂದಲ ಮೂಡಿಸಿದ್ದಾರೆ ಎಂಬುದನ್ನು ಇಬ್ಬರು ಸಚಿವರೂ ವರಿಷ್ಠರ ಗಮನಕ್ಕೆ ತಂದಿದ್ದರು. ಈ ಮಧ್ಯೆ, ಮುಖ್ಯಮಂತ್ರಿಗಳು ಮಧ್ಯೆಪ್ರವೇಶಿಸಿದ ಬಳಿಕ ಇಬ್ಬರು ಸಚಿವರ ಮಧ್ಯೆ ಸಮನ್ವಯತೆ ದೂರವಾಗಿದೆ ಎಂಬ ಬಗ್ಗೆ ಪಕ್ಷದಿಂದಲೂ ವರಿಷ್ಠರಿಗೆ ದೂರು ಹೋಗಿತ್ತು.
ಈ ಕಾರಣಕ್ಕಾಗಿಯೇ ಸಂತೋಷ್ ಅವರು ಅಖಾಡಾಕ್ಕಿಳಿದಿದ್ದಾರೆ. ಕರೋನಾ ಕುರಿತಂತೆ ಗೊಂದಲದ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗೊಂದಲ ತೀವ್ರಗೊಂಡು ಅದು ಸರ್ಕಾರ ಮತ್ತು ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಸಮಸ್ಯೆ ಸರಿಪಡಿಸಿ ಯಾವ ರೀತಿ ಕೆಲಸ ಮಾಡಬೇಕು ಎಂಬ ಬಗ್ಗೆ ಅವರು ಮಾರ್ಗಸೂಚಿಯೊಂದನ್ನು ವರಿಷ್ಠರ ಮುಂದೆ ಇಟ್ಟಿದ್ದಾರೆ. ಈ ಮಾರ್ಗಸೂಚಿಯಲ್ಲಿರುವ ಅಂಶಗಳನ್ನು ಸರ್ಕಾರದ ಮೂಲಕ ಯಾವುದೇ ಗೊಂದಲವಿಲ್ಲದೆ ಕಾರ್ಯಗತಗೊಳಿಸುವ ಉದ್ದೇಶದಿಂದ ಜೆ.ಪಿ.ನಡ್ಡಾ ಅವರು ಶನಿವಾರ ಸ್ಕೈಪ್ ಮೂಲಕ ಸಚಿವರು ಮತ್ತು ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೆ, ಸಂತೋಷ್ ಅವರು ಪ್ರಸ್ತಾಪಿಸಿರುವ ಅಂಶಗಳನ್ನು ಪರಿಗಣಿಸುವಂತೆಯೂ ಸಚಿವರಿಗೆ ಸೂಚನೆ ನೀಡಿದ್ದಾರೆ.