ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಶಾಸಕರು ರಾಜೀನಾಮೆ ನೀಡಿದ್ದರಿಂದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇವರ ರಾಜೀನಾಮೆಯಿಂದ ಅಧಿಕಾರ ಕಳೆದುಕೊಂಡಿದ್ದರೂ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಈ ಫಲಿತಾಂಶದ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಆದರೆ, ಚುನಾವಣೆಗೆ ಸ್ಪರ್ಧಿಸಿರುವ ಅನರ್ಹ ಶಾಸಕರ ಎದೆಯಲ್ಲಿ ಢವ ಢವ ಎನ್ನುತ್ತಿರುವುದಂತೂ ಸತ್ಯ. ಜನರು ತಮಗೆ ಮಣೆ ಹಾಕಿದ್ದಾರೋ ಇಲ್ಲವೋ ಎಂಬ ಆತಂಕ ಚುನಾವಣೆ ನಡೆದ ದಿನದಿಂದಲೂ ಇದೆ. ಮತ್ತೊಂದೆಡೆ, ಈ ಶಾಸಕರ ರಾಜೀನಾಮೆ ಕೊಡಿಸಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೇರಿರುವ ಬಿಜೆಪಿ 15 ಕ್ಷೇತ್ರಗಳ ಪೈಕಿ ಕನಿಷ್ಠ 7 ಸ್ಥಾನದಲ್ಲಿ ಗೆದ್ದರೆ ಸಾಕು ಎಂಬ ಆಲೋಚನೆಯಲ್ಲಿದೆ. ಏಕೆಂದರೆ, ಇಷ್ಟು ಸ್ಥಾನಗಳಲ್ಲಿ ಗೆದ್ದರೆ ಸರ್ಕಾರವನ್ನು ಗಟ್ಟಿಯಾಗಿಟ್ಟುಕೊಳ್ಳಬಹುದೆಂಬುದು ಕಮಲ ಪಾಳಯದ ಲೆಕ್ಕಾಚಾರ.
ಇದೇನೇ ಇದ್ದರೂ ಹಲವಾರು ಸಮೀಕ್ಷೆಗಳು ನಿರೀಕ್ಷೆಯಂತೆ ಆಡಳಿತಾರೂಢ ಪಕ್ಷಕ್ಕೆ ಅಂದರೆ ಬಿಜೆಪಿಗೆ 8-10 ಸ್ಥಾನಗಳು ಲಭಿಸಲಿವೆ ಎಂದು ಹೇಳಿರುವುದು ಬಿಜೆಪಿಗೆ ಕೊಂಚ ಸಮಾಧಾನ ತಂದಿರುವ ವಿಚಾರವಾಗಿದೆ.
ಇನ್ನೇನು ಕೆಲವೇ ಕ್ಷಣಗಳಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಮತ ಎಣಿಕೆ ಆರಂಭವಾಗಲಿದ್ದು, ಬೆಳಗ್ಗೆ 10 ಗಂಟೆಯ ವೇಳೆಗೆ ಫಲಿತಾಂಶದ ಬಹುತೇಕ ಚಿತ್ರಣ ಗೋಚರಿಸಲಿದ್ದು, 11.30 ರ ವೇಳೆಗೆ ಯಾರು ಗೆದ್ದು ಬೀಗುತ್ತಾರೆ, ಯಾರು ಸೋತು ಮುಖವನ್ನು ಸಪ್ಪೆ ಮಾಡಿಕೊಂಡು ಮುಂದಿನ ಚುನಾವಣೆಗೆ ಅಣಿಯಾಗಲು ವೇದಿಕೆ ಸಜ್ಜು ಮಾಡಿಕೊಳ್ಳಲು ಆರಂಭಿಸುತ್ತಾರೆ ಎಂಬುದು ತಿಳಿಯಲಿದೆ.
ಈ 15 ಕ್ಷೇತ್ರಗಳಿಗೆ ನಡೆದಿರುವ ಉಪಚುನಾವಣೆಯ ಫಲಿತಾಂಶ ಬಂದರೆ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 222 ಕ್ಕೆ ಏರಲಿದೆ. ಬಿಜೆಪಿ 105 ಸ್ಥಾನಗಳನ್ನು ಹೊಂದಿದ್ದು, ಬಹುಮತ ಬರಲು ಕನಿಷ್ಠ 7 ಸ್ಥಾನಗಳಲ್ಲಿ ಗೆಲುವು ಸಾಧಿಸಲೇಬೇಕಾದ ಅನಿವಾರ್ಯವಿದೆ. ಈ ಉಪಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಗೆದ್ದರೂ ಅದು ಬಿಜೆಪಿಗೇ ಲಾಭವಾಗಲಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ನಷ್ಟವಾಗಲಿದೆ. ಹೀಗಾಗಿ ಫಲಿತಾಂಶ ಭಾರೀ ಕುತೂಹಲ ಉಂಟು ಮಾಡಿದೆ.
ಈ ಎಲ್ಲಾ ಲೆಕ್ಕಾಚಾರಗಳಿಗಿಂತಲೂ ಮುಖ್ಯವಾಗಿ ರಾಜೀನಾಮೆ ಮತ್ತೆ ಚುನಾವಣೆ ಎದುರಿಸುತ್ತಿರುವ 14 (ಶಿವಾಜಿನಗರ ಕ್ಷೇತ್ರದಲ್ಲಿ ಅನರ್ಹ ಶಾಸಕ ರೋಷನ್ ಬೇಗ್ ಸ್ಪರ್ಧಿಸುತ್ತಿಲ್ಲ) ಅನರ್ಹ ಶಾಸಕರಿಗೂ ಚುನಾವಣೆ ಪ್ರತಿಷ್ಠೆಯಾಗಿದೆ. ಏಕೆಂದರೆ ಸಮ್ಮಿಶ್ರ ಸರ್ಕಾರ ಮತ್ತು ತಾವು ಪ್ರತಿನಿಧಿಸುತ್ತಿದ್ದ ಪಕ್ಷಗಳ ವಿರುದ್ಧ ಸೆಡ್ಡ ಹೊಡೆದು ರಾಜೀನಾಮೆ ನೀಡಿ ಸರ್ಕಾರವನ್ನೇ ಬಲಿ ತೆಗೆದುಕೊಂಡಿದ್ದರು.
ಹೀಗಾಗಿ ಅವರೆಲ್ಲರಿಗೂ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಒಂದು ವೇಳೆ ಗೆದ್ದರೆ ಬಿಜೆಪಿ ನೀಡಿರುವ ಭರವಸೆಯಂತೆ ಬಹುತೇಕ ಎಲ್ಲರಿಗೂ ಮಂತ್ರಿಗಳಾಗುವ ಅವಕಾಶ ದೊರೆಯಲಿದೆ. ಗೆಲ್ಲದೇ ಹೋದವರಿಗೆ ವಿಧಾನಪರಿಷತ್ತಿಗೆ ಆಯ್ಕೆ ಮಾಡಿ ಮಂತ್ರಿಗಳನ್ನಾಗಿ ಮಾಡುವುದು ಅಥವಾ ಅದು ಸಾಧ್ಯವಾಗದಿದ್ದರೆ `ಹುಲ್ಲುಗಾವಲಿ’’ನಂತಿರುವ ನಿಗಮ ಮಂಡಳಿಗಳು ಸಿಗುವ ಸಾಧ್ಯತೆಗಳಿವೆ. ಹೀಗಾಗಿಯೇ ಈ ಎಲ್ಲರೂ ಚುನಾವಣೆಯನ್ನು ಶಾತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದರು.
ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರೂ 15 ಕ್ಷೇತ್ರಗಳಲ್ಲಿಯೂ ಗೆಲುವನ್ನು ಸಾಧಿಸಲಿದ್ದೇವೆ ಎಂದು ಬೀಗುತ್ತಿದ್ದಾರೆ. ಒಂದು ಆಡಳಿತ ಪಕ್ಷವಾಗಿ ಈ ನಿರೀಕ್ಷೆಯನ್ನು ಇಟ್ಟುಕೊಳ್ಳಲೇಬೇಕಾಗುತ್ತದೆ. ಆದರೆ, ಫಲಿತಾಂಶದ ಒಳಮರ್ಮ ಅವರಿಗೂ ಗೊತ್ತಿರುತ್ತದೆ. ಆದರೂ ಈ ರೀತಿಯಾದ ಅತಿಯಾದ ವಿಶ್ವಾಸವನ್ನು ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ಆಂತರ್ಯದಲ್ಲಿ ಈ ನಾಯಕರು ತಮ್ಮ ಪಕ್ಷದ ಕನಿಷ್ಠ 8-10 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಲೆಕ್ಕಾಚಾರ ಹಾಕಿದ್ದಾರೆ.
ಇಷ್ಟು ಸ್ಥಾನಗಳಲ್ಲಿ ಗೆದ್ದರೆ ಇನ್ನೂ ಮೂರೂವರೆ ವರ್ಷ ನಿರುಮ್ಮಳವಾಗಿ ಆಡಳಿತ ನಡೆಸಬಹುದು ಎಂಬ ವಿಶ್ವಾಸದಲ್ಲಿ ಅವರಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಮೂರ್ನಾಲ್ಕು ಸೀಟುಗಳನ್ನು ಗೆದ್ದರೆ ಅದೇ ಹೆಚ್ಚು ಎಂಬುದು ಗೊತ್ತಾಗಿದ್ದರೂ, ನಾವು ಬಹುತೇಕ ಎಲ್ಲಾ ಸ್ಥಾನಗಳಲ್ಲಿಯೂ ಗೆಲುವು ಸಾಧಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಇವರ ಲೆಕ್ಕಾಚಾರ ಕೈಗೂಡುವ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ.
ಮತ್ತೊಂದೆಡೆ ಜೆಡಿಎಸ್ ಪಕ್ಷದ ನಾಯಕರು ಎಷ್ಟು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂಬ ನಿಖರವಾದ ಲೆಕ್ಕಾಚಾರ ಹೇಳದಿದ್ದರೂ, ನಮಗೆ ಉತ್ತಮ ಫಲಿತಾಂಶವನ್ನು ಮತದಾರರು ನೀಡಲಿದ್ದಾರೆಂದು ಹೇಳಿ ಕೈತೊಳೆದುಕೊಂಡಿದ್ದಾರೆ.
ಬಿಜೆಪಿ ಹಿರಿಯ ಶಾಸಕರಲ್ಲಿ ಶುರುವಾಗಿದೆ ಆತಂಕ
ಫಲಿತಾಂಶ ಯಡಿಯೂರಪ್ಪ ಮತ್ತು ಚುನಾವಣೆಯಲ್ಲಿ ಗೆಲ್ಲುವವರಿಗೆ ಖುಷಿ ತಂದಿದ್ದರೆ, ಮಂತ್ರಿಗಳಾಗಬೇಕೆಂದು ಚಾತಕ ಪಕ್ಷಿಗಳಂತೆ ಕಾದು ಕುಳಿತಿರುವ ಬಿಜೆಪಿಯ ಹಿರಿಯ ಶಾಸಕರಿಗೆ ಮಾತ್ರ ಆತಂಕವನ್ನು ತಂದೊಡ್ಡಿದೆ. ಏಕೆಂದರೆ, ಅನರ್ಹರಾದವರು ಚುನಾವಣೆಯಲ್ಲಿ ಗೆದ್ದು ಅರ್ಹ ಶಾಸಕರಾಗುವ ಮೂಲಕ ಮಂತ್ರಿಗಿರಿಯನ್ನು ಪಡೆಯುತ್ತಾರೆ. ಹೀಗಾಗಿ ತಮಗೆ ಸಿಗಬೇಕಿದ್ದ ಮಂತ್ರಿ ಸ್ಥಾನ ಅವರಿಗೆ ಸಿಗುತ್ತದಲ್ಲಾ ಎಂಬ ಆತಂಕ ಈ ಹಿರಿಯ ಶಾಸಕರದ್ದಾಗಿದೆ.
ಇದೇ ವೇಳೆ, ವಿಧಾನಪರಿಷತ್ತಿನ ಕೆಲವು ಸದಸ್ಯರಿಗೂ ಎದೆಯಲ್ಲಿ ಢವಢವ ಎನ್ನುತ್ತಿದೆ. ಏಕೆಂದರೆ, ಉಪಚುನಾವಣೆಯಲ್ಲಿ ಸೋಲನ್ನು ಅನುಭವಿಸುವವರಿಗೆ ನೀಡಿದ ಭರವಸೆಯಂತೆ ಮಂತ್ರಿ ಸ್ಥಾನವನ್ನು ನೀಡಲೇಬೇಕಿದೆ. ಇದಕ್ಕಾಗಿ ಅವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಬೇಕು. ಈ ನಾಮಕರಣ ಮಾಡಬೇಕಾದರೆ ಹಾಲಿ ಇರುವ ಬಿಜೆಪಿಯ ಕೆಲವು ವಿಧಾನಪರಿಷತ್ತಿನ ಸದಸ್ಯರು ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡಬೇಕಿದೆ. ಇದು ಈ ಹಿರಿಯ ಶಾಸಕರಿಗೆಲ್ಲಾ ನುಂಗಲಾರದ ತುತ್ತಾಗಿದೆ.
ಈ ಆತಂಕ ದುಗುಡಗಳಿಗೆ ಇಂದು ಬೆಳಗ್ಗೆ 11.30 ರ ವೇಳೆಗೆ ಸ್ಪಷ್ಟ ಉತ್ತರ ಸಿಗಲಿದೆ.