ಉಪಮುಖ್ಯಮಂತ್ರಿ ಸ್ಥಾನ. ಪ್ರಸ್ತುತ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದಿಯಾಗಿ ಎಲ್ಲರಿಗೂ ತಲೆ ತಿನ್ನುತ್ತಿರುವ ಹುದ್ದೆಯಾಗಿ ಪರಿಣಮಿಸಿದೆ. ಯಡಿಯೂರಪ್ಪ ಅವರು ಸರ್ಕಾರ ರಚಿಸಿದಾಗ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿದಾಗ ಆರಂಭವಾದ ವಿವಾದ ಇದುವರೆಗೆ ಬಗೆಹರಿದಿಲ್ಲ, ಸದ್ಯ ಬಗೆಹರಿಯುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಮಂತ್ರಿಯಾದರೆ ಸಾಲದು, ಉಪಮುಖ್ಯಮಂತ್ರಿಯಾಗಬೇಕು ಎಂದು ಹಾತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕಾಗಿ ಪ್ರಬಲ ಲಾಬಿ ನಡೆಯುತ್ತಿದೆ.
ಆದರೆ, ಸಾಂವಿಧಾನಾತ್ಮಕವಾಗಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅರ್ಥವೇ ಇಲ್ಲ. ಏಕೆಂದರೆ, ಸಾಂವಿಧಾನಿಕವಾಗಿ ಉಪಮುಖ್ಯಮಂತ್ರಿ ಎಂಬ ಹುದ್ದೆಯೇ ಇಲ್ಲ. ಅದೇನಿದ್ದರೂ ಮುಖ್ಯಮಂತ್ರಿಗೆ ಪರ್ಯಾಯವಾಗಿ ಒಬ್ಬ ನಾಯಕ ಸರ್ಕಾರದ ಮಟ್ಟದಲ್ಲಿರಬೇಕು. ಆತನ ಮೂಲಕ ಮುಖ್ಯಮಂತ್ರಿಯನ್ನು ಸ್ವಲ್ಪ ಮಟ್ಟಿಗೆ ಹದ್ದುಬಸ್ತಿನಲ್ಲಿಡಬೇಕು ಎಂದು ರಾಜಕೀಯವಾಗಿ ಸೃಷ್ಟಿಸಿದ ಹುದ್ದೆ. ಅದಕ್ಕಾಗಿಯೇ ಆ ಹುದ್ದೆಯನ್ನು ಮುಖ್ಯಮಂತ್ರಿ ನಂತರದ ಸ್ಥಾನ ಎಂದು ಸಚಿವ ಸಂಪುಟದಲ್ಲಿ ಪರಿಗಣಿಸಲಾಯಿತು. ಅದನ್ನು ಹೊರತುಪಡಿಸಿ ಮಂತ್ರಿಗಿಂತ ಯಾವುದೇ ಹೆಚ್ಚಿನ ಅಧಿಕಾರ ಆ ಹುದ್ದೆಗೆ ಇಲ್ಲ.
ಇದು ಕೇವಲ ಉಪಮುಖ್ಯಮಂತ್ರಿ ಹುದ್ದೆ ಮಾತ್ರವಲ್ಲ, ಉಪ ಪ್ರಧಾನಿ ಹುದ್ದೆಗೂ ಅನ್ವಯವಾಗುತ್ತದೆ. ಸಂವಿಧಾನದಲ್ಲಿ ಎಲ್ಲೂ ಉಪಮುಖ್ಯಮಂತ್ರಿ ಹುದ್ದೆ ಇಲ್ಲ. ಸಂವಿಧಾನದ 163ನೇ ವಿಧಿ ಪ್ರಕಾರ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಮತ್ತು ಅವರ ನೇತೃತ್ವದಲ್ಲಿ ಸಚಿವ ಸಂಪುಟಯ ಇರುತ್ತದೆ. ಚುನಾವಣೆ ಮುಗಿದು ಬಹುಮತ ಪಡೆದ ಪಕ್ಷದ ಶಾಸಕಾಂಗ ಪಕ್ಷದ ನಾಯಕನನ್ನು ರಾಜ್ಯಪಾಲರು ಮುಖ್ಯಮಂತ್ರಿಯಾಗಿ ನೇಮಕ ಮಾಡುತ್ತಾರೆ. ಅದಾದ ಬಳಿಕ ಮುಖ್ಯಮಂತ್ರಿಗಳ ಶಿಫಾರಸು ಆಧರಿಸಿ ರಾಜ್ಯಪಾಲರು ಸಚಿವರನ್ನು ನೇಮಕ ಮಾಡಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸುತ್ತಾರೆ. ಅಂದರೆ, ಸಂವಿಧಾನದ ಪ್ರಕಾರ ಸರ್ಚಿವ ಸಂಪುಟದಲ್ಲಿ ಇರುವುದು ಮುಖ್ಯಮಂತ್ರಿ ಮತ್ತು ಸಚಿವರು ಮಾತ್ರ. ಆದರೆ, ರಾಜಕೀಯ ಕಾರಣಗಳಿಗಾಗಿ ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಇದು ಕೇವಲ ಮಾಧ್ಯಮ ಪ್ರಕಟಣೆ ಮೂಲಕ ಸಿಗುವ ಹುದ್ದೆಯಷ್ಟೇ ಹೊರತು ಸರ್ಕಾರಿ ಆದೇಶ ಅಥವಾ ಸಂವಿಧಾನಬದ್ಧವಾಗಿ ಲಭ್ಯವಾಗುವ ಹುದ್ದೆ ಅಲ್ಲ.
ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಿದ್ದು 1992ರಲ್ಲಿ. ಆಗ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ಸಿನ ಎಂ.ವೀರಪ್ಪ ಮೊಯ್ಲಿ. ಹೈಕಮಾಂಡ್ ತೀರ್ಮಾನದಂತೆ ಮೊಯ್ಲಿ ಅವರು ಮುಖ್ಯಮಂತ್ರಿಯಾದಾಗ ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯದಲ್ಲಿ ಅಸಮಾಧಾನ ಕಾಣಿಸಿಕೊಂಡಿತ್ತು. ಇವರನ್ನು ಸಮಾಧಾನಪಡಿಸಬೇಕು ಎಂಬ ಉದ್ದೇಶದಿಂದ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಿ ಅದಕ್ಕೆ ಎಸ್.ಎಂ.ಕೃಷ್ಣ ಅವರನ್ನು ನೇಮಿಸಲಾಯಿತು. ನಂತರದ ಸರ್ಕಾರಗಳು ಈ ಹುದ್ದೆಯನ್ನು ಮುಂದುವರಿಸಿಕೊಂಡು ಬಂದವು. ಮುಖ್ಯಮಂತ್ರಿಗೆ ಪರ್ಯಾಯವಾಗಿ ಒಬ್ಬ ಉಪಮುಖ್ಯಮಂತ್ರಿಯನ್ನು ನೇಮಿಸಿಕೊಳ್ಳುವ ಸಂಪ್ರದಾಯ ಪಾಲಿಸಲಾಗುತ್ತಿತ್ತು. ಆದರೆ, 2012ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿ.ವಿ.ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಯಿತು. ನಂತರ ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಹುದ್ದೆ ಇರಲಿಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮತ್ತೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಯಿತು. ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಯಿತು. ಇದರೊಂದಿಗೆ ಐವರು ಉಪಮುಖ್ಯಮಂತ್ರಿಗಳಿರುವ ಆಂಧ್ರಪ್ರದೇಶದ ಬಳಿಕ ಅತಿ ಹೆಚ್ಚು ಉಪಮುಖ್ಯಮಂತ್ರಿಗಳಿರುವ ರಾಜ್ಯ ಕರ್ನಾಟಕವಾಯಿತು.
ಉಪಮುಖ್ಯಮಂತ್ರಿಗಳ ನೇಮಕ ಏಕೆ?
ಮುಖ್ಯಮಂತ್ರಿ ಹುದ್ದೆಯಲ್ಲಿರುವವರು ಸಮರ್ಥರಲ್ಲದೇ ಇದ್ದರೆ ಅಥವಾ ವಯಸ್ಸಾದರೆ ಸರ್ಕಾರದ ಆಗುಹೋಗುಗಳ ಬಗ್ಗೆ ಗಮನಹರಿಸಲು ಇಲ್ಲವೇ ರಾಜಕೀಯ ಕಾರಣಕ್ಕೆ ಮುಖ್ಯಮಂತ್ರಿಯನ್ನು ನಿಯಂತ್ರಿಸಲು ಉಪಮುಖ್ಯಮಂತ್ರಿಯನ್ನು ನೇಮಕ ಮಾಡುವ ಪ್ರಕ್ರಿಯೆ ಶುರುವಾಯಿತು. ಈ ಮಧ್ಯೆ ಸಮ್ಮಿಶ್ರ ಸರ್ಕಾರಗಳು ಆರಂಭವಾದಾಗ ಮಿತ್ರ ಪಕ್ಷಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಈ ಹುದ್ದೆಗೆ ಮುಖ್ಯಮಂತ್ರಿ ಹುದ್ದೆ ಸಿಗದ ಪಕ್ಷದ ವ್ಯಕ್ತಿಯನ್ನು ನೇಮಕ ಮಾಡಲಾಗುತ್ತದೆ. ನಂತರದಲ್ಲಿ ಆಯಾ ಸಮುದಾಯ, ಪ್ರಾಂತ್ಯಗಳನ್ನು ಸಂತುಷ್ಟಗೊಳಿಸಲು, ನಾಯಕರ ಮಧ್ಯೆ ಸಂಘರ್ಷ ಕಮ್ಮಿ ಮಾಡಲು ರಾಜಕೀಯ ಸಂದರ್ಭಕ್ಕೆ ತಕ್ಕಂತೆ ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲು ಕಾರಣ ಆಯಾ ಸಮುದಾಯ, ಪ್ರಾಂತ್ಯಗಳನ್ನು ಸಂತುಷ್ಟಗೊಳಿಸಲಷ್ಟೇ ಹೊರತು ಮುಖ್ಯಮಂತ್ರಿಗಳನ್ನು ನಿಯಂತ್ರಿಸಲು ಅಥವಾ ಮುಖ್ಯಮಂತ್ರಿ ಅಸಮರ್ಥ ಎಂಬ ಕಾರಣಕ್ಕೆ ಅಲ್ಲ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಲಕ್ಷ್ಮಣ ಸವದಿ, ಗೋವಿಂದ ಎಂ.ಕಾರಜೋಳ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಕ ಮಾಡಲಾಯಿತು. ಈ ಪೈಕಿ ಗೋವಿಂದ ಕಾರಜೋಳ ಅವರ ನೇಮಕಕ್ಕೆ ಯಾವುದೇ ಅಪಸ್ವರ ಕೇಳದೇ ಇದ್ದರೂ ವಿಧಾನಸಭೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಮತ್ತು ಇದೇ ಮೊದಲ ಬಾರಿ ಸಚಿವರಾದ ಅಶ್ವತ್ಥನಾರಾಯಣ ಅವರನ್ನು ಉಪಮುಖ್ಯಮಂತ್ರಿಗಳಾಗಿ ನೇಮಕ ಮಾಡಿದ್ದು ಹಿರಿಯ ಶಾಸಕರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಆದರೆ, ಈ ನೇಮಕಗಳ ಹಿಂದೆ ಇದ್ದದ್ದು ಹೈಕಮಾಂಡ್ ನಾಯಕರಾಗಿದ್ದರಿಂದ ಹೆಚ್ಚು ವಿರೋಧಿಸುವ ಧೈರ್ಯವನ್ನು ಯಾರೂ ತೋರಿಸಲಿಲ್ಲ.
ಲಕ್ಷ್ಮಣ ಸವದಿ ಅವರು ಉತ್ತರ ಕರ್ನಾಟಕ ಭಾಗ ಮತ್ತು ಮಹಾರಾಷ್ಟ್ರದ ಕೆಲವು ಕಡೆ ಪ್ರಬಲರಾಗಿರುವ ಗಾಣಿಗ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಅಷ್ಟೇ ಅಲ್ಲ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದರಲ್ಲದೆ, ಪಕ್ಷದ ಬಗ್ಗೆ ನಿಷ್ಠೆಯನ್ನೂ ಹೊಂದಿದ್ದರು. ಹೀಗಾಗಿ ಯಡಿಯೂರಪ್ಪ ಅವರ ನಂತರ ಬಿಜೆಪಿಯಲ್ಲಿ ವೀರಶೈವ-ಲಿಂಗಾಯತ ನಾಯಕರೊಬ್ಬರನ್ನು ಬೆಳೆಸಬೇಕು. ಇದರಿಂದ ಉತ್ತರ ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರದಲ್ಲೂ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಅದೇ ರೀತಿ ದಲಿತ ಸಮುದಾಯಕ್ಕೆ ಸೇರಿದವರು ಮತ್ತು ಹಿರಿಯರು ಎಂಬ ಕಾರಣಕ್ಕೆ ಗೋವಿಂದ ಕಾರಜೋಳ ಅವರಿಗೂ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿತು.
ಇವರಿಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಲಿಂಗಾಯತರು, ದಲಿತರನ್ನು ಓಲೈಸಿಕೊಳ್ಳುವ ಪ್ರಯತ್ನವಾದರೆ, ಹಳೇ ಮೈಸೂರು ಭಾಗದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದವರನ್ನು ಓಲೈಸಿಕೊಳ್ಳಲು ಆ ಸಮುದಾಯದವರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡಲೇ ಬೇಕಾದ ಅನಿವಾರ್ಯತೆ ಸೃಷ್ಚಿಯಾಯಿತು. ಈ ಸಂದರ್ಭದಲ್ಲಿ ಆರ್.ಅಶೋಕ್ ಅವರ ಹೆಸರು ಮುಂಚೂಣಿಗೆ ಬಂತಾದರೂ ಹಿಂದೆ ಅಧಿಕಾರವಿದ್ದರೂ ಅವರು ಬೆಂಗಳೂರು ಬಿಟ್ಟು ಹೊರಗೆ ಒಕ್ಕಲಿಗ ಸಮುದಾಯವನ್ನು ಸಂಘಟಿಸುವ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ಅಶ್ವತ್ಥನಾರಾಯಣ ಅವರನ್ನು ಆಯ್ಕೆ ಮಾಡಲಾಯಿತು.
ಮತ್ತಷ್ಟು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಗೆ ಒತ್ತಡ
ಈ ರೀತಿಯ ಉಪಮುಖ್ಯಮಂತ್ರಿ ನೇಮಕವೇ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುತ್ತಿಗೆಗೆ ಬಂದಿರುವುದು. ಲಿಂಗಾಯತ, ಒಕ್ಕಲಿಗ, ದಲಿತರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಅದೇ ರೀತಿ ಸಾಕಷ್ಟು ಸಂಖ್ಯೆಯಲ್ಲಿರುವ ಪರಿಶಿಷ್ಟ ಪಂಗಡಕ್ಕೂ (ವಾಲ್ಮೀಕಿ ಸಮುದಾಯ) ಉಪಮುಖ್ಯಮಂತ್ರಿ ಸ್ಥಾನ ನೀಡಿ. ಅದನ್ನು ಶ್ರೀರಾಮುಲು ಅವರಿಗೆ ಕೊಡಬೇಕು ಎಂಬ ಒತ್ತಡ ಬಂದಿದೆ. ಆದರೆ, ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವುದಿದ್ದರೆ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ವಾಲ್ಮೀಕಿ ಸಮುದಾಯದ ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾದ ಅನಿವಾರ್ಯತೆ ಯಡಿಯೂರಪ್ಪ ಅವರದ್ದು. ಎರಡು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿ ಅದನ್ನು ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿಗೆ ನೀಡಿದರೆ ಒಂದೇ ಸಮುದಾಯಕ್ಕೆ ಎರಡು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತದೆ. ಅದಕ್ಕೆ ಇತರೆ ಸಮುದಾಯಗಳಿಂದ ಆಕ್ಷೇಪ ಕೇಳಿಬರಬಹುದು ಎಂಬ ಆತಂಕ ಕಾಡುತ್ತಿದೆ. ಆದರೆ, ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿರುವವರು, ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನ ನೀಡಿರುವಾಗ ವಾಲ್ಮೀಕಿ ಸಮುದಾಯಕ್ಕೆ ಎರಡು ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ತಪ್ಪೇನು ಎಂದು ಪ್ರಶ್ನಿಸುತ್ತಿದ್ದಾರೆ.
ಹೀಗಾಗಿ ಸಾಂವಿಧಾನಿಕ ಹುದ್ದೆ ಅಲ್ಲದೇ ಇದ್ದರೂ, ಹೆಚ್ಚಿನ ಅಧಿಕಾರ ಇಲ್ಲದಿದ್ದರೂ ರಾಜಕೀಯ ಕಾರಣಗಳಿಗಾಗಿ ಸೃಷ್ಟಿಯಾದ ಉಪಮುಖ್ಯಮಂತ್ರಿ ಸ್ಥಾನ ಈಗ ಬೇಡವೇ ಬೇಡ ಎನ್ನುವ ಮಟ್ಟಕ್ಕೆ ತಲುಪಿದೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳು ಮತ್ತು ಲಾಬಿ ಹೆಚ್ಚಾಗುತ್ತಿರುವುದರಿಂದ ಆ ಹುದ್ದೆಯನ್ನೇ ತೆಗೆದುಹಾಕಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಒಟ್ಟಾರೆ ಹೆಸರಿಗೆ ಮಾತ್ರ ಎನ್ನುವಂತಿರುವ ಉಪಮುಖ್ಯಮಂತ್ರಿ ಸ್ಥಾನಕ್ಕೆ ಈ ರೀತಿಯ ಬೇಡಿಕೆ ಇರಬೇಕಾದರೆ ಇನ್ನು ಅದಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದರೆ ಅದೆಷ್ಟು ಸಮಸ್ಯೆಯಾಗಲಿಕ್ಕಿಲ್ಲ?